ಆಟದ ವಿಚಾರವಾಗಿ ಗಲಾಟೆ: ವಿದ್ಯಾರ್ಥಿಗಳನ್ನು ಅಪಹರಿಸಿ ಅರೆಬೆತ್ತಲೆಗೊಳಿಸಿ ಹಲ್ಲೆ
ಫುಟ್ ಬಾಲ್ ಆಟದ ವಿಚಾರವಾಗಿ ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದ್ದು, ಒಂದು ಕಾಲೇಜಿನ ವಿದ್ಯಾರ್ಥಿಗಳು ಮತ್ತೊಂದು ಕಾಲೇಜಿನ ವಿದ್ಯಾರ್ಥಿಗಳನ್ನು ಅಪಹರಿಸಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಗಳೂರು, ಆಗಸ್ಟ್ 20: ವಿದ್ಯಾರ್ಥಿಗಳನ್ನು (Students) ಅಪಹರಿಸಿ ಅರೆಬೆತ್ತಲೆಗೊಳಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಮಂಗಳೂರು (Mangaluru) ನಗರದ ಮಹಾಕಾಳಿ ಪಡ್ಪು ಬಳಿ ನಡೆದಿದೆ. ಮಹಮ್ಮದ್ ಶುರೈ, ಮಹಮ್ಮದ್ ಅಫ್ರಾನ್, ಇಬ್ರಾಹಿಂ ಖಲೀಲ್ ಮತ್ತು ಮಹಮ್ಮದ್ ಜನ್ಮದ್ ಹಲ್ಲೆಗೊಳಗಾದ ವಿದ್ಯಾರ್ಥಿಗಳು. ಬಂಧಿತ ದಿಯಾನ್ ಮತ್ತು ಸಲ್ಮಾನ್ ಸೇರಿದಂತೆ ಅನ್ನೈ, ತಸ್ಮಿನ್, ಅನಾಸ್ ಹಲ್ಲೆ ಮಾಡಿದ ಆರೋಪಿಗಳು. ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಫುಟ್ಬಾಲ್ ಆಟದ ವಿಚಾರವಾಗಿ ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಒಂದು ಕಾಲೇಜಿನ ವಿದ್ಯಾರ್ಥಿಗಳು ಮತ್ತೊಂದು ಕಾಲೇಜಿನ ವಿದ್ಯಾರ್ಥಿಗಳನ್ನು ಅಪಹರಿಸಿದ್ದಾರೆ. ಬಳಿಕ ವಿದ್ಯಾರ್ಥಿಗಳನ್ನು ಮಂಗಳೂರು ನಗರದ ಮೂರು ಕಡೆ ಕರೆದುಕೊಂಡು ಹೋಗಿದ್ದಾರೆ. ಕ್ಷಮೆ ಕೇಳುವಂತೆ ಅರಬೆತ್ತಲೆಗೊಳಿಸಿ ಬಸ್ಕಿ ಹೊಡೆಸಿದ್ದಾರೆ. ಇಷ್ಟು ಮಾತ್ರವಲ್ಲದೆ ಹಲ್ಲೆ ಮಾಡಿ ಸಿಗರೇಟ್ನಿಂದ ಸುಟ್ಟಿದ್ದಾರೆ.
ವಿದ್ಯಾರ್ಥಿಗಳ ಅಮಾನವೀಯ ಕೃತ್ಯ ಸಾಮಾಜಿಕ ಜಲಾತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮಂಗಳೂರಿನ ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಪ್ರತಿಭಟನೆ ವೇಳೆ ಪೊಲೀಸರ ಎದುರೇ ಬಸ್ಗೆ ಕಲ್ಲು ತೂರಿದ್ದ ಮೂವರ ಬಂಧನ
ಘಟನೆ ಕುರಿತು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಮಾತನಾಡಿ, ಆಗಸ್ಟ್ 14 ರಂದು ನಗರದ ನೆಹರು ಮೈದಾನದಲ್ಲಿ ಫುಟ್ಬಾಲ್ ಪಂದ್ಯ ನಡೆದಿತ್ತು. ಯೆನೆಪೋಯ ಪುಟ್ಬಾಲ್ ತಂಡ ಹಾಗೂ ಅಲೋಶಿಯಸ್ ತಂಡದ ಮಧ್ಯೆ ಪಂದ್ಯ ನಡೆದಿತ್ತು. ಪಂದ್ಯದಲ್ಲಿ ಯೆನೆಪೋಯ ತಂಡ ಜಯಗಳಿಸಿತ್ತು.
ಈ ವಿಚಾರದಲ್ಲಿ ಆಗಸ್ಟ್ 14ರಂದೇ ಎರಡು ತಂಡದ ನಡುವೆ ಗಲಾಟೆ ಪ್ರಾರಂಭವಾಗಿತ್ತು. ಸೋಮವಾರ (ಆ.19)ರ ಸಂಜೆ ಯೆನೆಪೋಯ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳನ್ನು, ಮಾತಾ ಸಂಸ್ಥೆಯ ಓರ್ವ ವಿದ್ಯಾರ್ಥಿಯನ್ನು ದಿಯಾನ್, ತಸ್ಲಿಮ್, ಸಲ್ಮಾನ್ ಹಾಗೂ ಇತರ ಇಬ್ಬರು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳ ಗುಂಪು ಅಪಹರಿಸಿತ್ತು.
ನಂತರ ಮಹಾಕಾಳಿ ಪಡ್ಪು ಭಾಗಕ್ಕೆ ಕರೆದೊಯ್ದು ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸುವ ಸಂದರ್ಭದಲ್ಲಿ ಮೊಬೈಲ್ನಲ್ಲಿ ಚಿತ್ರೀಕರಣವನ್ನು ಮಾಡಲಾಗಿದೆ. ಸದ್ಯ ಅಪ್ರಾಪ್ತ ವಿದ್ಯಾರ್ಥಿ ನೀಡಿದ ದೂರಿನಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:52 am, Tue, 20 August 24