AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ಐಶ್ವರ್ಯಾ ರೈ ಬಗ್ಗೆ ರಾಹುಲ್ ಗಾಂಧಿ ಅವಹೇಳನ ಆರೋಪ: ಬಿಜೆಪಿ ಮಹಿಳಾ ಮೋರ್ಚಾ ಕಿಡಿ

ನಟಿ ಐಶ್ವರ್ಯಾ ರೈ ಬಗ್ಗೆಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದಾರೆ ಎನ್ನಲಾದ ಆಕ್ಷೇಪಾರ್ಹ ಹೇಳಿಕೆಗೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ರಾಹುಲ್ ಗಾಂಧಿ ವಿರುದ್ಧ ಟಿಕಾ ಪ್ರಹಾರ ಮಾಡಿರುವ ಮೋರ್ಚಾ, ಈ ವಿಚಾರದಲ್ಲಿ ಮೌನವಾಗಿರುವುದಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದೆ.

ನಟಿ ಐಶ್ವರ್ಯಾ ರೈ ಬಗ್ಗೆ ರಾಹುಲ್ ಗಾಂಧಿ ಅವಹೇಳನ ಆರೋಪ: ಬಿಜೆಪಿ ಮಹಿಳಾ ಮೋರ್ಚಾ ಕಿಡಿ
ಐಶ್ವರ್ಯಾ ರೈ & ರಾಹುಲ್ ಗಾಂಧಿ
ಅಶೋಕ್​ ಪೂಜಾರಿ, ಮಂಗಳೂರು
| Edited By: |

Updated on: Feb 27, 2024 | 10:56 AM

Share

ಮಂಗಳೂರು: ನಟಿ ಐಶ್ವರ್ಯಾ ರೈ (Aishwarya Rai) ಬಗ್ಗೆ ರಾಹುಲ್ ಗಾಂಧಿ (Rahul Gandhi) ಅವಹೇಳನ ಮಾಡಿರುವ ಆರೋಪದ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ದಕ್ಷಿಣಕನ್ನಡ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ, ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದೆ. ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್ ಮಾತನಾಡಿ, ರಾಹುಲ್ ಗಾಂಧಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದು ಇದೇ ಮೊದಲಲ್ಲ. ಕಾಂಗ್ರೆಸ್​ನ‌ ಹಲವು ನಾಯಕರು ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ದೇಶಕ್ಕೇ ಕೀರ್ತಿ ತಂದು ಕೊಟ್ಟ ಮಹಿಳೆ ಮಂಗಳೂರಿನ ಐಶ್ವರ್ಯಾ ರೈ ಎಂದರು.

ಡ್ಯಾನ್ಸಿಂಗ್, ಮಾಡೆಲಿಂಗ್, ಸಿನಿಮಾ ಕ್ಷೇತ್ರದಲ್ಲಿ ಮಹಿಳೆ ಇರಬಾರದೇ? ಐಶ್ವರ್ಯಾ ರೈಯನ್ನು ರಾಹುಲ್ ಗಾಂಧಿ ‘ನಾಚ್ ನೇ ವಾಲಿ’‌ ಎಂದಿದ್ದಾರೆ. ನಾಚ್‌ನೇ ವಾಲಿ ಎಂದು ಬ್ರ್ಯಾಡಿಂಗ್ ಮಾಡೋದಾ? ಇಂತಹ ವ್ಯಕ್ತಿಯನ್ನು ಕಾಂಗ್ರೆಸ್ ನಾಯಕರು ಭಾವಿ ಪ್ರಧಾನಿ ಎನ್ನುತ್ತಿದ್ದಾರೆ. ಮಿಸ್ ವರ್ಲ್ಡ್ ಆಗಿ ಗೆದ್ದವರು ಐಶ್ವರ್ಯಾ ರೈ. ಇಡೀ‌ ಜಗತ್ತಿಗೆ ಐಶ್ವರ್ಯ ರೈ ಯಾರೆಂದು‌ ಗೊತ್ತಿದೆ ಎಂದು ಮಂಜುಳಾ ರಾವ್ ಹೇಳಿದರು.

ಕರ್ನಾಟಕದ ಹೆಣ್ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ಸಿಎಂ ಸಿದ್ದರಾಮಯ್ಯ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದ ಅವರು, ನ್ಯಾಯ ಜೋಡೋ ಯಾತ್ರೆ ಮಹಿಳೆಯರಿಗೆ ಅವಮಾನ ಮಾಡಿಕೊಂಡು ನ್ಯಾಯ ಕೊಡುವುದೇ ಎಂದು ವ್ಯಂಗ್ಯವಾಡಿದರು.

ಇಂಥವರಿಗೆ ಏನಾದರೂ ಅಧಿಕಾರ‌ ಕೊಟ್ಟರೆ ಇಡೀ‌ ದೇಶದ ಮಹಿಳೆಯರು‌ ಮನೆಯೊಳಗೆ ಕೂತುಕೊಳ್ಳಬೇಕಾಗಬಹುದು. ಮಹಿಳಾ ಮೋರ್ಚಾದ ಎಲ್ಲಾ‌ ಸದಸ್ಯರು ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸುತ್ತಿದ್ದೇವೆ ಎಂದು ಮಂಜುಳಾ ರಾವ್ ಹೇಳಿದ್ದಾರೆ.

ಐಶ್ವರ್ಯಾ ರೈ ಬಗ್ಗೆ ಏನು ಹೇಳಿದ್ದರು ರಾಹುಲ್ ಗಾಂಧಿ?

ಟಿವಿ ಕಾರ್ಯಕ್ರಮಗಳಲ್ಲಿ ಏನೇ ಆದರೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೋರಿಸುತ್ತಾರೆ. ಅದು ಬಿಟ್ಟರೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಕುಣಿಯುವುದನ್ನು ತೋರಿಸುತ್ತಾರೆ. ಎಷ್ಟೆಂದರೂ ಆಕೆ ಕುಣಿಯುವವಳು (ನಾಚ್ ನೇ ವಾಲಿ) ಅಲ್ಲವೇ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಗಿ ಹೇಳಿದ್ದರು.

ಇದನ್ನೂ ಓದಿ: ತಂದೆ ಶಾರುಖ್ ಜೊತೆ ಸುಹಾನಾ ಸಿನಿಮಾ; ಇರಲಿದೆ ಭರ್ಜರಿ ಆ್ಯಕ್ಷನ್

ರಾಹುಲ್ ಗಾಂಧಿ ಹೇಳಿಕೆ ವೈರಲ್ ಆಗುತ್ತಿದ್ದಂತೆಯೇ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಈ ವಿಚಾರವಾಗಿ ಟ್ವೀಟ್ ಮಾಡಿದ್ದ ಕರ್ನಾಟಕ ಬಿಜೆಪಿ, ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ವಿರುದ್ಧ ಟೀಕಾ ಪ್ರಹಾರ ನಡೆಸಿತ್ತು. ಐಶ್ವರ್ಯಾ ಅವರನ್ನು ಅವಹೇಳನ ಮಾಡುವ ಮೂಲಕ ರಾಹುಲ್ ಗಾಂಧಿ ಇನ್ನಷ್ಟು ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ವಾಗ್ದಾಳಿ ನಡೆಸಿತ್ತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ