ದಕ್ಷಿಣ ಕನ್ನಡ: ತುಳುನಾಡಿನ ಜಾನಪದೀಯ ಕ್ರೀಡೆ ಕಂಬಳಕ್ಕೆ ಮತ್ತೆ ನಿಷೇಧದ ತೂಗುಕತ್ತಿ, ಜಿಲ್ಲಾ ಪಶುಸಂಗೋಪನಾ ಇಲಾಖೆಯಿಂದ ನೋಟಿಸ್
ತುಳುನಾಡಿನ ಜಾನಪದೀಯ ಕ್ರೀಡೆ ಕಂಬಳ ನಿಷೇಧದ ಭೀತಿಯ ನಡುವೆಯೇ ನಡೆಯುತ್ತಿದೆ. ಇದೀಗ ಕಂಬಳದಲ್ಲಿ ಸುಪ್ರೀಂ ಆದೇಶವನ್ನು ಉಲ್ಲಂಘನೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಕಂಬಳದಲ್ಲಿ ಕೋಣಗಳಿಗೆ ರಕ್ತಬರುವಂತೆ ಬಾರುಕೋಲಿನಲ್ಲಿ ಹೊಡೆಯಲಾಗಿದೆ ಎಂದು ಫೋಟೋ, ವಿಡಿಯೋವನ್ನು ದಾಖಲಿರಿಸಿ ಪಸುಸಂಗೋಪನಾ ಇಲಾಖೆ ಜಿಲ್ಲಾ ಕಂಬಳ ಸಮಿತಿಗೆ ನೊಟೀಸ್ ಕಳುಹಿಸಿದೆ.
ಮಂಗಳೂರು: ಹಲವು ಆತಂಕ, ನಿಷೇಧದ ಭೀತಿ ನಡುವೆಯು ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯಲ್ಲಿ ಕಂಬಳ ಕ್ರೀಡೆ ಆಯೋಜನೆಯಾಗುತ್ತಿದೆ. ಹೀಗೆ ಪ್ರತಿಯೊಂದು ಕಡೆಯು ನಡೆಯುತ್ತಿರುವ ಈ ಕಂಬಳದ ಮೇಲೆ ಪ್ರಾಣಿದಯಾ ಸಂಘ ಪೇಟಾ ಕಣ್ಣಿಟ್ಟಿದ್ದು, ಇದೀಗ ಮತ್ತೆ ಕಂಬಳದಲ್ಲಿ ಹಿಂಸಾಚಾರ ನಡೆಯುತ್ತಿರುವ ಬಗ್ಗೆ ದೂರು ನೀಡಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡುತ್ತಿರುವುದಾಗಿ ಆರೋಪಿಸಿದೆ. ಹೀಗಾಗಿ ದಕ್ಷಿಣಕನ್ನಡ ಜಿಲ್ಲಾ ಪಶುಸಂಗೋಪನಾ ಇಲಾಖೆ ಜಿಲ್ಲಾ ಕಂಬಳ ಸಮಿತಿಗೆ ನೊಟೀಸ್ ಜಾರಿ ಮಾಡಿದ್ದು, ಡಿ.31ರಂದು ಮುಲ್ಕಿಯಲ್ಲಿ ನಡೆದ ಕಂಬಳದಲ್ಲಿ ಕೋಣಗಳಿಗೆ ರಕ್ತಬರುವಂತೆ ಬಾರುಕೋಲಿನಲ್ಲಿ ಹೊಡೆಯಲಾಗಿದೆ. ಈ ಬಗ್ಗೆ ಫೋಟೋ, ವಿಡಿಯೋವನ್ನು ದಾಖಲಿರಿಸಿ ನ್ಯಾಯಾಲಯದ ಆದೇಶ ಮತ್ತು ಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿರುವುದಾಗಿ ಎಚ್ಚರಿಸಿದೆ.
ಕೋಣಗಳನ್ನು ಓಟಕ್ಕೆ ಸಿದ್ಧಪಡಿಸುವಾಗ, ಕೆರೆ ಬಿಟ್ಟು ದಡ ಸೇರಿದ ಬಳಿಕ ಕೋಣಗಳಿಗೆ ಹೊಡೆಯುವ ದೃಶ್ಯ ಪೇಟಾ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಂಬಳದಲ್ಲಿ ನಡೆಯುವ ಪ್ರಮಾದಗಳೇ ಪೇಟಾಗೆ ಆಹಾರವಾಗುವ ಆತಂಕವಿದೆ. ಸದ್ಯ ಸುಪ್ರೀಂ ಕೋರ್ಟ್‌ನ ಪಂಚ ಸದಸ್ಯರ ಪೀಠದಲ್ಲಿ ಕಂಬಳ ನಿಷೇಧದ ವಾದ-ಪ್ರತಿವಾದ ನಡೆಯುತಿದ್ದು ಕಂಬಳದ ಋಣಾತ್ಮಕ ವಿಚಾರವನ್ನು ಪೇಟಾ ಪೀಠದ ಮುಂದೆ ಇಡುತ್ತಿದೆ. ಇನ್ನು ಕಂಬಳ ಸಮಿತಿಯ ನಿರ್ಣಯದ ಪ್ರಕಾರ ಕನಿಷ್ಠ 24-30 ಗಂಟೆಯೊಳಗೆ ಕಂಬಳ ಮುಗಿಯಬೇಕು ಆದರೆ ಕೆಲವಡೆ ಕಂಬಳ 35 ಗಂಟೆ ಮೀರಿ ನಡೆಯುತ್ತಿದೆ. ಹೀಗಾಗಿ ಕಂಬಳದಲ್ಲಿ ಕಾನೂನು ಉಲ್ಲಂಘನೆ ತಪ್ಪು ಎಂದು ಕಂಬಳ ಸಮಿತಿ ಹೇಳಿದೆ. ಕಂಬಳ ನಡೆಯುವ ಸಂಧರ್ಭದಲ್ಲಿ ಮೈಕ್ ಮೂಲಕ ಸೂಚನೆ ಕೊಡಲಾಗುತ್ತಿದೆ. ಆದರು ಕೆಲವರು ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಮುಂದೆ ಈ ರೀತಿಯ ಘಟನೆಗಳು ನಡೆದರೆ ಕಂಬಳ ಕೋಣಗಳ ಮಾಲಕರು, ಓಡಿಸುವವರೇ ಜವಾಬ್ದಾರಿ ಎಂದು ಕಂಬಳ ಸಮಿತಿ ಹೇಳಿದೆ.
ಇದನ್ನೂ ಓದಿ:ಮಂಗಳೂರು: ಮುಳುಗಿದ ಹಡಗಿನ ಒಡೆಯುವ ಕಾರ್ಯ ಆರಂಭ, ಗುಜರಿ ಸೇರಲಿದೆ ಡ್ರೆಜ್ಜರ್ ನೌಕೆ ‘ಭಗವತಿ ಪ್ರೇಮ್’
ರಾಜ್ಯ ಸರ್ಕಾರ ಮಂಡಿಸಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದರಿಂದ ಸದ್ಯ ಕಂಬಳ ಕ್ರೀಡೆ ನಡೆಯುತ್ತಿದೆ. ಆದರೆ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಕಂಬಳ ನಡೆಸಿದ್ರೆ ಮುಂದೆ ಕಂಬಳ ನಿಷೇಧವಾಗುವ ಸಾಧ್ಯತೆಯಿದೆ. ಹೀಗಾಗಿ ಕಂಬಳ ಕೋಣಗಳ ಮಾಲೀಕರು, ಕೋಣ ಓಡಿಸುವವರು ಮುನ್ನೆಚ್ಚರಿಕೆ ವಹಿಸುವುದು ಒಳಿತು.
ವರದಿ: ಅಶೋಕ್ ಟಿವಿ9 ಮಂಗಳೂರು
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ