ಧರ್ಮ ಯುದ್ಧಕ್ಕೂ ಮುನ್ನ ಮಂಜುನಾಥನ ದರ್ಶನ ಪಡೆದೆ: ಧರ್ಮಸ್ಥಳದಲ್ಲಿ ಡಿಕೆ ಶಿವಕುಮಾರ್ ಮಾರ್ಮಿಕ ಮಾತು
ಲೋಕಸಭೆ ಚುನಾವಣೆ ಅಖಾಡ ರಂಗೇರುತ್ತಿರುವುದರ ಮಧ್ಯೆಯೇ ಡಿಸಿಎಂ ಡಿಕೆ ಶಿವಕುಮಾರ್ ಟೆಂಪಲ್ ರನ್ ಆರಂಭಿಸಿದ್ದಾರೆ. ಮಂಗಳವಾರ ಬೆಳಗ್ಗೆ ಧರ್ಮಸ್ಥಳ ದೇಗುಲಕ್ಕೆ ಭೇಟಿ ನೀಡಿದ ಅವರು ಮಂಜುನಾಥಸ್ವಾಮಿಯ ದರ್ಶನ ಪಡೆದರು. ಇನ್ನೀಗ ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ ಶಾರದಾ ಪೀಠ ಹಾಗೂ ಕೊಲ್ಲೂರಿಗೂ ಅವರು ಭೇಟಿ ನೀಡಲಿದ್ದಾರೆ. ಧರ್ಮಸ್ಥಳದಲ್ಲಿ ಡಿಕೆ ಶಿವಕುಮಾರ್ ಹೇಳಿದ್ದೇನು? ಮುಂದೆ ಓದಿ.
ಮಂಗಳೂರು, ಮಾರ್ಚ್ 26: ಯಾವಾಗಲೂ ಧರ್ಮ ಯುದ್ಧದಲ್ಲಿ ಮಂಜುನಾಥನ ದರ್ಶನ ಪಡೆಯುತ್ತೇನೆ. ಅದೇ ರೀತಿ ಈ ಬಾರಿಯೂ ಇಲ್ಲಿಗೆ ಬಂದಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ಧರ್ಮಸ್ಥಳ (Dharmasthala Temple) ದೇಗುಲಕ್ಕೆ ಮಂಗಳವಾರ ಭೇಟಿ ನೀಡಿ ಮಂಜುನಾಥ ಸ್ವಾಮಿಯ (Dharmasthala Manjunatheshwara) ದರ್ಶನ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾತು ಬಿಡದ ಮಂಜುನಾಥ, ಕಾಸು ಬಿಡದ ತಿಮ್ಮಪ್ಪ ಎಂಬ ಮಾತಿದೆ. ನನ್ನ ಜೀವನದಲ್ಲಿ ಮಂಜುನಾಥ, ಈಶ್ವರ, ಗಂಗಾಧರ ಅಜ್ಜ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಹಾಗಾಗಿ ಈ ಯುದ್ಧ ಆರಂಭಿಸುವ ಮುನ್ನ ಮಂಜುನಾಥ ಸ್ವಾಮಿ, ಅಣ್ಣಪ್ಪಸ್ವಾಮಿ ದರ್ಶನ ಮಾಡಿ ಆಶೀರ್ವಾದ ಪಡೆದು ಹೋಗುವ ಪದ್ಧತಿ, ಪರಂಪರೆ ಇಟ್ಟುಕೊಂಡಿದ್ದೇನೆ ಎಂದರು.
ನಾನು ರೂಢಿ ಮಾಡಿಕೊಂಡಿರುವ ಪದ್ಧತಿಯಂತೆ ಇವತ್ತು ಇಲ್ಲಿಗೆ ಬಂದು ಮಂಜುನಾಥನ ದರ್ಶನ ಪಡೆದು ಹೊರಡುತ್ತಿದ್ದೇನೆ. ಮಂಜುನಾಥ ಸ್ವಾಮಿ ಧರ್ಮಸ್ಥಳದ ಶಕ್ತಿ. ಆತ ಮಾತು ಬಿಡದ ಮಂಜುನಾಥ. ನಾವು ಪಂಚ ಗ್ಯಾರೆಂಟಿಗಳನ್ನು ನೀಡಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಇನ್ನೂ ಹೆಚ್ಚಿಗೆ ಶಕ್ತಿ ಕೊಡಿ ಎಂದು ಆ ಭಗವಂತನಲ್ಲಿ ಪ್ರಾರ್ಥನೆ ಮಾಡಲು ಬಂದಿದ್ದೇನೆ. ನುಡಿದಂತೆ ನಡೆಯಲು ಆ ದೇವರು ಶಕ್ತಿ ಕೊಟ್ಟಿದ್ದಾನೆ, ಇದು ನಮ್ಮ ಭಾಗ್ಯ. ಇನ್ನು ಜನ ತೀರ್ಮಾನ ಮಾಡುತ್ತಾರೆ ಎಂದರು.
ಇಲ್ಲಿಗೆ ಎಲ್ಲ ಹೆಣ್ಣು ಮಕ್ಕಳು ಉಚಿತವಾಗಿ ಬಂದಿದ್ದಾರೆ. ಎಲ್ಲಾ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟುಗಳು ಆಗುತ್ತಿವೆ. ಎಲ್ಲರೂ ತೀರ್ಥಯಾತ್ರೆ, ಧರ್ಮ ಯಾತ್ರೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಆ ಜನ ಕೊಟ್ಟ ಶಕ್ತಿ. ಅವರಿಗೆ ಋಣವನ್ನು ತೀರಿಸಿದ್ದೇವೆ. ಆ ಉಪಕಾರ ಸ್ಮರಣೆಯನ್ನು ಇಟ್ಟುಕೊಳ್ಳುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಇದನ್ನೂ ಓದಿ: ಮೈಸೂರು ರೆಸಾರ್ಟ್ನಲ್ಲಿ ಕುಳಿತು ಸಿಎಂ ಸಿದ್ದರಾಮಯ್ಯ ಆಪರೇಷನ್ ಹಸ್ತ: ಯಡಿಯೂರಪ್ಪ ಆಪ್ತರಿಗೆ ಗಾಳ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿಕೆ ಶಿವಕುಮಾರ್
ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದ ನಂತರ ಡಿಕೆ ಶಿವಕುಮಾರ್ ಕುಕ್ಕೆಗೆ ಆಗಮಿಸಿ ಸುಬ್ರಹ್ಮಣ್ಯ ದೇವರ ದರ್ಶನ ಪಡೆದರು. ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ, ಸ್ಥಳೀಯ ಕಾಂಗ್ರೆಸ್ ನಾಯಕರು ಅವರಿಗೆ ಸಾಥ್ ನೀಡಿದರು.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಡಿಕೆ ಶಿವಕುಮಾರ್ ಇಂದು ಇಡೀ ದಿನ ದೇವಾಲಯ ಸುತ್ತಾಟ ಮಾಡುತ್ತಿದ್ದಾರೆ. ಧರ್ಮಸ್ಥಳ, ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಅವರು, ಶೃಂಗೇರಿ ಶಾರದಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆಲ್ಲ ಶೃಂಗೇರಿ ತಲುಪಲಿರುವ ಅವರು, ಶೃಂಗೇರಿ ಜಗದ್ಗುರುಗಳ ಆಶೀರ್ವಾದ ಪಡೆಯಲಿದ್ದಾರೆ. ಮಧ್ಯಾಹ್ನ 1 ಗಂಟೆಯಿಂದ 2.30ರವರೆಗೆ ಶೃಂಗೇರಿಯಲ್ಲೇ ಇರಲಿರುವ ಡಿಸಿಎಂ, ನಂತರ ಹೆಲಿಕಾಪ್ಟರ್ ಮೂಲಕ ಕೊಲ್ಲೂರಿಗೆ ತೆರಳಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:28 am, Tue, 26 March 24