
ಮಂಗಳೂರು/ ಮಂಡ್ಯ, ಜುಲೈ 10: ಕರ್ನಾಟಕಕ್ಕೆ ಬಾಂಗ್ಲಾದಿಂದ ಅಕ್ರಮ ವಲಸಿಗರ ಆಗಮನ ಮುಂದುವರಿದಿದ್ದು, ಕೂಲಿ ಕಾರ್ಮಿಕರಾಗಿ ಬಂದಿದ್ದ ಆರು ಮಂದಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಸುರತ್ಕಲ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುರತ್ಕಲ್ ಮುಕ್ಕದ ಖಾಸಗಿ ಆಸ್ಪತ್ರೆಯೊಂದರ ಕಟ್ಟಡದ ಕಾಮಗಾರಿಗೆಂದು ಇವರು ಜಿಲ್ಲೆಗೆ ಆಗಮಿಸಿದ್ದರು ಎನ್ನಲಾಗಿದೆ. ಗುತ್ತಿಗೆದಾರನ ಮೂಲಕ ಆಗಮಿಸಿದ್ದ ಬಾಂಗ್ಲಾದೇಶ ಪ್ರಜೆಗಳು ಕಟ್ಟಡ ಕಾಮಗಾರಿಯಲ್ಲಿ ಭಾಗಿಯಾಗಿರುವ ಮಾಹಿತಿ ಸಿಕ್ಕ ಹಿನ್ನೆಲೆ ಸುರತ್ಕಲ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಸದ್ಯ ಈ ಸಂಬಂಧ ವರದಿಯನ್ನು ಎಫ್‌ಆರ್‌ಆರ್‌ಒ (FRRO)ಗೆ ಪೊಲೀಸರು ಕಳುಹಿಸಿದ್ದು, ಬಂಧನ ಕುರಿತು ಆದೇಶ ಹೊರಡಿಸಿ ಭಾರತದಿಂದ ಗಡೀಪಾರು ಮಾಡಲು ಕ್ರಮಕ್ಕಾಗಿ ವಿದೇಶೀಯರ ಪ್ರಾದೇಶಿಕ ನೋಂದಣಿ ಕಚೇರಿಗೆ ಮಾಹಿತಿ ಕಳುಹಿಸಿದ್ದಾರೆ.
ಗಂಟು ಮೂಟೆ ಸಮೇತ ಬಂದ 50ಕ್ಕೂ ಹೆಚ್ಚು ಜನರ ಮೇಲೆ ಅನುಮಾನ ಬಂದ ಹಿನ್ನೆಲೆ ಮಂಡ್ಯ ರೈಲ್ವೆ ನಿಲ್ದಾಣ ಬಳಿ ಅವರನ್ನುತಡೆದು ಬಿಜೆಪಿ ಕಾರ್ಯಕರ್ತರು ಪ್ರಶ್ನಿಸಿರುವ ಘಟನೆ ನಡೆದಿದೆ. ಐಡಿ ಕಾರ್ಡ್, ಆಧಾರ್ ಕಾರ್ಡ್ ಪರಿಶೀಲನೆ ನಡೆಸಲಾಗಿದ್ದು, ಈ ವೇಳೆ ಹಲವರು ಪಶ್ಚಿಮ ಬಂಗಾಳ ಮೂಲದ ಆಧಾರ್ ಕಾರ್ಡ್ ಹೊಂದಿರೋದು ಕಂಡುಬಂದಿದೆ. ಬಿಜೆಪಿಗರು ವಿಚಾರಣೆ ನಡೆಸುತ್ತಿದ್ದಂತೆ ಕೆಲವು ವಲಸಿಗರು ರೈಲ್ವೆ ನಿಲ್ದಾಣದಿಂದ ಕಾಲ್ಕಿತ್ತಿದ್ದಾರೆ. ಹೀಗಾಗಿ ನಗರಕ್ಕೆ ಅಕ್ರಮ ವಲಸಿಗರು ಬಂದಿರುವ ಬಗ್ಗೆ ಅನುಮಾನ ಹೆಚ್ಚಿದೆ.
ಇದನ್ನೂ ಓದಿ: ‘ಅಕ್ರಮ ವಲಸಿಗರಿಗೆ ಮಣೆ, ಭದ್ರತೆಗೆ ಧಕ್ಕೆ’; ಕರ್ನಾಟಕ ಶಾಶ್ವತ ನಿವಾಸಿ ಪ್ರಮಾಣ ಪತ್ರಕ್ಕೆ ತಡೆನೀಡಲು ಅಮಿತ್ ಶಾಗೆ ಶೋಭಾ ಪತ್ರ
ಮತ್ತೊಂದೆಡೆ ಶಾಶ್ವತ ನಿವಾಸ ಪ್ರಮಾಣಪತ್ರ ವಿತರಣೆ ಸಂಬಂಧ ರಾಜ್ಯ ಸರ್ಕಾರದ ನಿರ್ಧಾರ ವಿವಾದವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಬಿಜೆಪಿಗರು ಕಿಡಿ ಕಾರಿದ್ದು, ಪೌರತ್ವ ನೀಡಲು ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಆಂತರಿಕ ಭದ್ರತೆ ಆಧಾರದಲ್ಲಿ ಇದನ್ನು ಕೇಂದ್ರ ನಿರ್ಧಾರ ಮಾಡುತ್ತೆ. ಕರ್ನಾಟಕದಲ್ಲಿ ಪ್ರಮಾಣ ಪತ್ರ ನೀಡುವ ಸರ್ಕಾರದ ಷಡ್ಯಂತ್ರ ಏನು? ರಾಜ್ಯದಲ್ಲಿ ಎಸ್ಐಆರ್ ಹಳ್ಳ ಹಿಡಿಸುವ ಪ್ರಯತ್ನ ನಡೆಸಿದ್ದಾರೆ. ಇದು ದೇಶದ ಆಂತರಿಕ ಭದ್ರತೆಗೆ ಸವಾಲು ಎಂದವರು ಆರೋಪಿಸಿದ್ದಾರೆ. ಅಕ್ರಮ ವಲಸಿಗರು ಶಾಶ್ವತವಾಗಿ ನೆಲೆಸಲು ರಾಜ್ಯ ಸರ್ಕಾರ ಕುತಂತ್ರ ಮಾಡುತ್ತಿದ್ದು, ದೇಶದ ಹಿತದೃಷ್ಟಿಗೆ ಧಕ್ಕೆ ತರುವ ನಿರ್ಧಾರ ಕೈಗೊಳ್ಳಬೇಡಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:03 pm, Fri, 10 July 26