ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಅಮೆರಿಕಾದಿಂದ LPG ಸರಕು; ಮಂಗಳೂರು ಬಂದರಿಗೆ ಬಂತು‘ಪೈಕ್ಸಿಸ್ ಪಯನಿಯರ್’!

ಪಶ್ಚಿಮ ಏಷ್ಯಾದ ಯುದ್ಧದಿಂದ ಇಂಧನ ಸರಬರಾಜಿನ ಆತಂಕದ ನಡುವೆ, ಅಮೆರಿಕದಿಂದ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಸಾಗಣೆ ನವ ಮಂಗಳೂರು ಬಂದರಿಗೆ ತಲುಪಿದೆ. 'ಪೈಕ್ಸಿಸ್ ಪಯನಿಯರ್' ಹಡಗು 16,714 ಟನ್ LPG ಇಳಿಸಲಿದೆ. ಇದು ಭಾರತದ ಇಂಧನ ಭದ್ರತೆಗೆ ಮಹತ್ವದ ಹೆಜ್ಜೆಯಾಗಿದ್ದು, ಪಶ್ಚಿಮ ಏಷ್ಯಾ ಅವಲಂಬನೆ ಕಡಿಮೆ ಮಾಡಲಿದೆ. ಜೊತೆಗೆ ಭಾರತದ ಇಂಧನ ಕೊರತೆಯನ್ನು ನೀಗಿಸುವ ನಿರೀಕ್ಷೆ ಮೂಡಿಸಿದೆ.

ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಅಮೆರಿಕಾದಿಂದ LPG ಸರಕು; ಮಂಗಳೂರು ಬಂದರಿಗೆ ಬಂತು‘ಪೈಕ್ಸಿಸ್ ಪಯನಿಯರ್’!
ನವ ಮಂಗಳೂರು ಬಂದರು

Updated on: Mar 22, 2026 | 9:27 AM

ಬೆಂಗಳೂರು, ಮಾರ್ಚ್​ 22: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದ ಇಂಧನ ಸರಬರಾಜಿನ ಬಗ್ಗೆ ಉಂಟಾದ ಆತಂಕದ ನಡುವೆಯೇ ಅಮೆರಿಕಾದಿಂದ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಸಾಗಣೆ ಭಾರತಕ್ಕೆ ತಲುಪಿದೆ. ಸಿಂಗಾಪುರ್ ಧ್ವಜದಡಿಯಲ್ಲಿ ಸಾಗುವ ‘ಪೈಕ್ಸಿಸ್ ಪಯನಿಯರ್’ ಹಡಗು ಭಾನುವಾರ ಬೆಳಗ್ಗೆ ನವ ಮಂಗಳೂರು ಬಂದರಿಗೆ ಆಗಮಿಸಿದೆ.

ಬಂದರಿಗೆ ಬಂದಿರುವ ಹಡಗಿನಲ್ಲಿರುವ LPG ಪ್ರಮಾಣ ಎಷ್ಟು?

ನವ ಮಂಗಳೂರು ಬಂದರು ಪ್ರಾಧಿಕಾರದ ಮಾಹಿತಿ ಪ್ರಕಾರ 47,236 ಟನ್ ಸಾಮರ್ಥ್ಯದ ಈ ಹಡಗು ಬೆಳಗ್ಗೆ ಸುಮಾರು 6 ಗಂಟೆಗೆ ಬರ್ತ್ ಸಂಖ್ಯೆ 13ಕ್ಕೆ ತಲುಪಿತು. ಫೆಬ್ರವರಿ 14ರಂದು ಟೆಕ್ಸಾಸ್‌ನ ನೆದರ್‌ಲ್ಯಾಂಡ್ ಬಂದರಿನಿಂದ ಹೊರಟಿದ್ದ ಈ ಹಡಗು, ಈಗ ಏಜಿಸ್ ಲಾಜಿಸ್ಟಿಕ್ಸ್ ಲಿಮಿಟೆಡ್‌ಗಾಗಿ ಸುಮಾರು 16,714 ಟನ್ LPG ಇಳಿಸಲು ಯೋಜಿಸಲಾಗಿದೆ. ಹಡಗು ಸೋಮವಾರ ಬೆಳಿಗ್ಗೆ ಹೊರಡಲಿದೆ ಎಂದು ನಿರೀಕ್ಷಿಸಲಾಗಿದೆ.

ಪಶ್ಚಿಮ ಏಷ್ಯಾದಲ್ಲಿ ಸುಮಾರು ಮೂರು ವಾರಗಳಿಂದ ನಡೆಯುತ್ತಿರುವ ಸಂಘರ್ಷದಿಂದ ಭಾರತದ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮವಾಗಿ ಹೋಟೆಲ್‌ಗಳಂತಹ ವಾಣಿಜ್ಯ ಉದ್ಯಮಗಳಿಗೆ LPG ಪೂರೈಕೆಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಿ, ಗೃಹ ಬಳಕೆಗಾಗಿ ಆದ್ಯತೆ ನೀಡಲಾಗಿತ್ತು. ಇದರ ಮಧ್ಯೆ ಮಾರ್ಚ್ 18ರಂದು ‘ಜಾಗ್ ಲಾಡ್ಕಿ’ ಎಂಬ ಕಚ್ಚಾ ತೈಲ ಟ್ಯಾಂಕರ್ ಸುಮಾರು 80,800 ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಮುಂದ್ರಾ ಬಂದರಿಗೆ ತಂದು ತಲುಪಿಸಿತ್ತು. ಜೊತೆಗೆ ‘ನಂದಾ ದೇವಿ’ ಮತ್ತು ‘ಶಿವಾಲಿಕ್’ ಎಂಬ LPG ಸಾಗಣೆ ಹಡಗುಗಳು ಕ್ರಮವಾಗಿ ವಾಡಿನಾರ್ ಮತ್ತು ಮುಂದ್ರಾ ಬಂದರುಗಳಿಗೆ ತಲುಪಿವೆ.

ಇದನ್ನೂ ಓದಿ ಹೋಟೆಲ್, ರೆಸ್ಟೋರೆಂಟ್​​ಗಳಿಗೆ ಗುಡ್​​ ನ್ಯೂಸ್​​ ನೀಡಿದ ಕೇಂದ್ರ: ಸೋಮವಾರದಿಂದ ರಾಜ್ಯಗಳಿಗೆ ಹೆಚ್ಚುವರಿ ಸಿಲಿಂಡರ್ ಪೂರೈಕೆ

ಬಂದರಿನ ಮೇಲೆ ದಾಳಿ ಸಾಧ್ಯತೆ

ಇರಾನ್, ಹೋರ್ಮುಜ್ ಕಣಿವೆಯ ಮೂಲಕ ಭಾರತೀಯ ಹಡಗುಗಳಿಗೆ ಸುರಕ್ಷಿತ ಸಂಚಾರ ಭರವಸೆ ನೀಡಿದರೂ, ಯುಎಇ ಬಂದರು ಪ್ರದೇಶಗಳ ಮೇಲೆ ದಾಳಿ ಸಾಧ್ಯತೆಗಳ ಬಗ್ಗೆ ಎಚ್ಚರಿಕೆ ನೀಡಿದೆ. ಭಾರತ ತನ್ನ ಇಂಧನ ಅವಶ್ಯಕತೆಗಳಿಗೆ ಬಹಳ ಮಟ್ಟಿಗೆ ಆಮದುಗಳ ಮೇಲೆ ಅವಲಂಬಿತವಾಗಿದೆ. ದೇಶದ ಒಟ್ಟು ಕಚ್ಚಾ ತೈಲದ ಶೇ 88, ನೈಸರ್ಗಿಕ ಅನಿಲದ ಶೇ 50 ಮತ್ತು LPGಯ ಸುಮಾರು ಶೇ60 ವಿದೇಶಗಳಿಂದ ಬರುತ್ತವೆ. ಫೆಬ್ರವರಿ 28ರಂದು ಅಮೆರಿಕಾ-ಇಸ್ರೇಲ್ ದಾಳಿಗಳ ನಂತರ ಉದ್ಭವಿಸಿದ ಪರಿಸ್ಥಿತಿಗೂ ಮೊದಲು ಈ ಆಮದುಗಳ ಬಹುಪಾಲು ಸೌದಿ ಅರೇಬಿಯಾ ಮತ್ತು ಯುಎಇ ಮುಂತಾದ ಪಶ್ಚಿಮ ಏಷ್ಯಾ ದೇಶಗಳಿಂದ ಆಗುತ್ತಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us