ಮಂಗಳೂರು: ಭಾರೀ ಮಳೆಯಿಂದ ಏರ್ಪೋರ್ಟ್ ರನ್ವೇ ಸಮೀಪ ರಸ್ತೆ ಕುಸಿತ
ಏರ್ಪೋರ್ಟ್ ಸುತ್ತಾಮುತ್ತಾ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಧಿಕ ಮಳೆ, ನೀರಿನ ಹೊರಹೊಮ್ಮುವಿಕೆಯಿಂದ ಕುಸಿತ ಉಂಟಾಗಿದೆ ಎನ್ನಲಾಗುತ್ತಿದೆ.
ಮಂಗಳೂರು: ಏರ್ಪೋರ್ಟ್ ರನ್ವೇ (Runway) ಬದಿಯಲ್ಲೇ ರಸ್ತೆ ಕುಸಿದಿರುವಂತ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಅದ್ಯಪಾಡಿ ಬಳಿ ಇರುವ ರನ್ ವೇ ಸಮೀಪ ಕುಸಿತವಾಗಿದ್ದು, ಅದ್ಯಪಾಡಿಯಿಂದ ಕೈ ಕಂಬ ಹೋಗುವ ರಸ್ತೆ ಬಂದ್ ಮಾಡಲಾಗಿದೆ. ಏರ್ರ್ಪೋರ್ಟ್ ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಧಿಕ ಮಳೆ, ನೀರಿನ ಹೊರಹೊಮ್ಮುವಿಕೆಯಿಂದ ಕುಸಿತ ಉಂಟಾಗಿದೆ ಎನ್ನಲಾಗುತ್ತಿದೆ. ನಗರದಲ್ಲಿ ಭಾರೀ ಮಳೆ ಮುಂದುವರೆದಿದ್ದು, ಇಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮಂಗಳೂರು ವಿಮಾನ ನಿಲ್ದಾಣವು ಸೂಕ್ಷ್ಮ ಟೇಬಲ್ ಟಾಪ್ ರನ್ವೇ (Table Top Runway) ಹೊಂದಿರುವುದರಿಂದ ಈ ವಿದ್ಯಮಾನ ದೇಶದ ಗಮನ ಸೆಳೆದಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಅದ್ಯಪಾಡಿ ಪದವು ಬಳಿ ಗುಡ್ಡ ಕುಸಿದಿದೆ. ತಡೆಗೋಡೆ ಒಡೆದ ಕಾರಣ ರಸ್ತೆಗೆ ಹೊಂದಿಕೊಂಡಂತೆ ಇರುವ ಗುಡ್ಡದ ಭಾಗವು ಕುಸಿದಿದೆ. ಏರ್ಪೋರ್ಟ್ ರನ್ವೇಯಿಂದ ಹೊರಗೆ ಬಿಡುತ್ತಿರುವ ನೀರಿನಿಂದಾಗಿ ಗುಡ್ಡಕುಸಿದಿದೆ ಎಂದು ಸ್ಥಳೀಯರು ದೂರಿದ್ದಾರೆ. ಕಲ್ಲು ಗಣಿಗಾರಿಕೆ ನಡೆಸಿದ್ದ ಸ್ಥಳದಲ್ಲಿ ನೀರು ತುಂಬಿದ್ದು ಸಹ ಗುಡ್ಡ ಕುಸಿತಕ್ಕೆ ಮತ್ತೊಂದು ಕಾರಣ ಎಂದು ಆರೋಪ ಮಾಡಲಾಗಿದೆ.
ಭಾರೀ ಮಳೆಗೆ ಮನೆ ಮೇಲೆ ರಾತ್ರಿ ಗುಡ್ಡ ಜರಿದು ಬಿದ್ದ ಪ್ರಕರಣ: ಮತ್ತಿಬ್ಬರು ಸಾವು
ಭಾರೀ ಮಳೆಗೆ ಮನೆ ಮೇಲೆ ರಾತ್ರಿ ಗುಡ್ಡ ಜರಿದು ಬಿದ್ದ ಪ್ರಕರಣಕ್ಕೆ ಸಂಬಂಧ ಘಟನೆಯಲ್ಲಿ ಕೇರಳ ಮೂಲದ ಮತ್ತಿಬ್ಬರು ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ಘಟನೆ ನಡೆದಿದೆ. ಕೊಟ್ಟಾಂ ನಿವಾಸಿ ಬಾಬು (46) ಮತ್ತು ಸಂತೋಷ್ ಅಲ್ಫೊನ್ಸಾ(46) ಮೃತಪಟ್ಟ ದುರ್ದೈವಿಗಳು. ನಿನ್ನೆ ರಾತ್ರಿ ರಕ್ಷಣೆ ಮಾಡಿ ಮೂವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದವರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಕಣ್ಣೂರು ನಿವಾಸಿ ಜಾನ್ (44) ಗೆ ಚಿಕಿತ್ಸೆ ನೀಡಲಾಗಿದೆ. ಕೇರಳದ ಪಾಲಕ್ಕಾಡ್ ನಿವಾಸಿ ಬಿಜು(45) ನಿನ್ನೆಯೇ ಮೃತಪಟ್ಟಿದ್ದ. ಹೆನ್ರಿ ಕಾರ್ಲೊ ಎಂಬವರಿಗೆ ಸೇರಿದ ಕೊಠಡಿಗೆ ಜರಿದು ಗುಡ್ಡ ಬಿದ್ದಿದೆ. ಕಾರ್ಲೋ ಅವರ ಮನೆಯ ತೋಟದ ಕೆಲಸಕ್ಕೆ ಕೇರಳ ಮೂಲದ ಕಾರ್ಮಿಕರು ಬಂದಿದ್ದರು. ನಾಲ್ವರು ಅನೇಕ ವರ್ಷಗಳಿಂದ ಇವರ ತೋಟದ ಕೆಲಸ ಮಾಡುತ್ತಿದ್ದರು. ಕಾರ್ಲೋ ಅವರ ಮನೆಯ ಹತ್ತಿರದಲ್ಲಿ ಪ್ರತ್ಯೇಕ ಕೊಠಡಿ ಅವರಿಗೆ ನೀಡಲಾಗಿತ್ತು. ಜೆಸಿಬಿ ಬಳಸಿ ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಮಣ್ಣು ತೆರವು ಮಾಡಿದ್ದು, ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಎಸ್ಪಿ ಹೃಷಿಕೇಶ್ ಸೋನಾವಣೆ ಭೇಟಿ ನೀಡಿದ್ದರು.
ಇದನ್ನೂ ಓದಿ: Skin Care: ಕೇವಲ ನೀರಿನಿಂದ ಮುಖವನ್ನು ತೊಳೆಯುವುದರಿಂದ ಚರ್ಮಕ್ಕಾಗುವ ಪ್ರಯೋಜನಗಳೇನು?
ನಿರಂತರ ಮಳೆಗೆ ಜನ ಜೀವನ ಅಸ್ತವ್ಯಸ್ತ:
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಮಳೆ ಮುಂದುವರೆದಿದ್ದು, ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲ, ಕಾರವಾರ, ಶಿರಸಿ, ಜೋಯಿಡಾ, ಕಾರವಾರದಲ್ಲಿ ರಾತ್ರಿಯಿಂದ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ನಿನ್ನೆ ಕೊಂಚ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಪ್ರಾರಂಭವಾಗಿದೆ. ನಿರಂತರ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಮಳೆ ಮುಂದುವರೆದ ಹಿನ್ನಲೆ, ಮಕ್ಕಳ ಹಿತದೃಷ್ಟಿಯಿಂದ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ರೆಡ್ ಅಲಟ್೯ ಘೋಷಿಸಿದ್ದು, ನದಿ ಪಾತ್ರದ ಮತ್ತು ತಗ್ಗು ಪ್ರದೇಶಗಳಲ್ಲಿರುವ ಜನ ಸುರಕ್ಷಿತವಾಗಿರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಇದನ್ನೂ ಓದಿ: Rain Updates: ಭಾರೀ ಮಳೆಯಿಂದ ಮಹಾರಾಷ್ಟ್ರ, ಗೋವಾದ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
Published On - 8:47 am, Thu, 7 July 22