ಮಂಗಳೂರು: ರಾತ್ರಿ ವೇಳೆ ಅಪರಾಧ ಕೃತ್ಯಗಳನ್ನು ತಡೆಗಟ್ಟುವುದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಪೊಲೀಸರು (Mangalore Police) ‘ಮೊಬೈಲ್ ಕ್ರೈಂ ಆ್ಯಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ಸಿಸ್ಟಂ (MCCTNS) ಪೋರ್ಟಬಲ್ ಸ್ಕ್ಯಾನರ್’ ಮೊರೆ ಹೋಗಿದ್ದಾರೆ. ಈ ತಂತ್ರಜ್ಞಾನದ ಬಳಕೆಯಿಂದ ರಾತ್ರಿ ವೇಳೆಯಲ್ಲಿ ಸಂಭಾವ್ಯ ಅಪರಾಧ ಕೃತ್ಯಗಳನ್ನು ತಡೆಗಟ್ಟುವುದು ಸಾಧ್ಯವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ರಾತ್ರಿ ಗಸ್ತು ಕಾರ್ಯಾಚರಣೆ ವೇಳೆ, ಅನುಮಾನಾಸ್ಪದವಾಗಿ ತಿರುಗಾಡುತ್ತಿರುವವರು ಕಂಡುಬಂದಲ್ಲಿ ಅವರ ತಪಾಸಣೆಗೆ ಎಂಸಿಸಿಟಿಎನ್ಎಸ್ ಬಳಸಲಾಗುತ್ತದೆ. ಜತೆಗೆ ಅವರ ವಿವರ ಸಂಗ್ರಹಿಸಲಾಗುತ್ತದೆ. ಇದರಿಂದ ಅಪರಾಧ ಹಿನ್ನೆಲೆಯುಳ್ಳವರಾದರೆ ಕ್ರಮ ಕೈಗೊಳ್ಳಲು ಮತ್ತು ಸಂಭಾವ್ಯ ಅಪರಾಧ ಕೃತ್ಯಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಎಂಸಿಸಿಟಿಎನ್ಎಸ್ ಅಥವಾ ಮೊಬೈಲ್ ಕ್ರೈಂ ಆ್ಯಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ಸಿಸ್ಟಂ ಎಂಬುದು ಒಂದು ಪೋರ್ಟಬಲ್ ಸ್ಕ್ಯಾನರ್ ಆಗಿದೆ. ಇದರ ಮೂಲಕ ಪೊಲೀಸರು ಶಂಕಿತರ ಅಪರಾಧ ಹಿನ್ನೆಲೆಗೆ ಸಂಬಂಧಿಸಿದ ದತ್ತಾಂಶಗಳು, ವಿವರಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ರಾತ್ರಿ ಗಸ್ತು ಕಾರ್ಯಾಚರಣೆ ವೇಳೆ ಇದನ್ನು ಕೊಂಡೊಯ್ಯುವುದೂ ಪೊಲೀಸರಿಗೆ ಸುಲಭವಾಗಿದೆ.
ಗಸ್ತು ಕಾರ್ಯಾಚರಣೆಗೆ ತೆರಳುವ ಪೊಲೀಸರು ಎಂಸಿಸಿಟಿಎನ್ಎಸ್ ಪೋರ್ಟಬಲ್ ಸ್ಕ್ಯಾನರ್ ಅನ್ನು ಜತೆಗೆ ಕೊಂಡೊಯ್ಯುತ್ತಾರೆ. ಯಾರಾದರೂ ಅನುಮಾನಾಸ್ಪದವಾಗಿ ಕಂಡುಬಂದಲ್ಲಿ ಅವರ ಬೆರಳಚ್ಚನ್ನು ಪರಿಶೀಲಿಸುತ್ತಾರೆ. ಬೆರಳಚ್ಚು ಸ್ಕ್ಯಾನ್ ಮಾಡಿದ ಕೂಡಲೇ ಅವರ ಅಪರಾಧ ಹಿನ್ನೆಲೆಗೆ (ಅಪರಾಧ ಹಿನ್ನೆಲೆ ಹೊಂದಿದ್ದರೆ) ಸಂಬಂಧಿಸಿದ ದತ್ತಾಂಶಗಳು ಪೊಲೀಸರಿಗೆ ದೊರೆಯುತ್ತವೆ. ಎಫ್ಐಆರ್ ಮಾಹಿತಿ, ಬಾಕಿ ಇರುವ ಪ್ರಕರಣಗಳು ಹಾಗೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣಗಳ ಮಾಹಿತಿ ದೊರೆಯುತ್ತದೆ.
ಈ ವ್ಯವಸ್ಥೆಯಿಂದ ಪೊಲೀಸ್ ಆಡಳಿತದಲ್ಲಿ ಹೆಚ್ಚು ದಕ್ಷತೆ ಸಾಧಿಸಲು ಮತ್ತು ಅಪರಾಧ ಕೃತ್ಯಗಳನ್ನು ತಡೆಗಟ್ಟುವಲ್ಲಿ ಹೆಚ್ಚಿನ ನೆರವು ದೊರೆಯುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ