ಕರ್ನಾಟಕ ಕರಾವಳಿಯಲ್ಲಿ SIR ಎಫೆಕ್ಟ್: ಬಂಗಾಳ ಚುನಾವಣೆಗೆಂದು ಹೋದ ಕಾರ್ಮಿಕರು ಬರಲೇ ಇಲ್ಲ!

Mangalore News: ದೇಶಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಕರ್ನಾಟಕದ ಕರಾವಳಿ ಭಾಗದಲ್ಲಿ ತೀವ್ರ ಕಾರ್ಮಿಕರ ಕೊರತೆ ಎದುರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣದಲ್ಲಿ ತೊಡಗಿಕೊಂಡಿದ್ದ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ಚುನಾವಣೆ ನೆಪವೊಡ್ಡಿ ಊರಿಗೆ ತೆರಳಿದವರು ವಾಪಸ್ ಬಂದಿಲ್ಲ. ಹೀಗಾಗಿ, ಇವರೆಲ್ಲನಕಲಿ ದಾಖಲೆ ಸೃಷ್ಟಿಸಿ ವಾಸಿಸುತ್ತಿದ್ದ ಬಾಂಗ್ಲಾದೇಶದ ಅಕ್ರಮ ವಲಸಿಗರೇ ಎಂಬ ಸಂಶಯ ವ್ಯಕ್ತವಾಗಿದೆ.

ಕರ್ನಾಟಕ ಕರಾವಳಿಯಲ್ಲಿ SIR ಎಫೆಕ್ಟ್: ಬಂಗಾಳ ಚುನಾವಣೆಗೆಂದು ಹೋದ ಕಾರ್ಮಿಕರು ಬರಲೇ ಇಲ್ಲ!
ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿರುವುದು
Image Credit source: tv9
Edited By:

Updated on: Jun 26, 2026 | 9:54 AM

ಮುಖ್ಯಾಂಶಗಳು

  • ಪಶ್ಚಿಮ ಬಂಗಾಳ ಚುನಾವಣೆ ಬಳಿಕ ಬಾರದ ಕಾರ್ಮಿಕರು
  • ಸಿಕ್ಕಿಬೀಳುವ ಭೀತಿಯಲ್ಲಿ ದೇಶ ಬಿಟ್ಟು ತೆರಳಿರುವ ಸಂಶಯ
  • ಕರಾವಳಿಯಲ್ಲಿ ಸ್ಥಗಿತಗೊಂಡ ಕಟ್ಟಡ ನಿರ್ಮಾಣ ಕಾಮಗಾರಿ

ಮಂಗಳೂರು, ಜೂನ್ 26: ದೇಶಾದ್ಯಂತ ಚುನಾವಣಾ ಆಯೋಗ ಹಮ್ಮಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಕರ್ನಾಟಕ (Karnataka) ಕರಾವಳಿ ಜಿಲ್ಲೆಗಳಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಮಾಣ ವಲಯದಲ್ಲಿ ದಿಢೀರ್ ಕಾರ್ಮಿಕರ ಕೊರತೆ ಸೃಷ್ಟಿಯಾಗಿದೆ. ಕಳೆದ ಎರಡು ತಿಂಗಳ ಹಿಂದೆ ಪಶ್ಚಿಮ ಬಂಗಾಳದ ಚುನಾವಣೆ ನೆಪವೊಡ್ಡಿ ಸ್ವಗ್ರಾಮಗಳಿಗೆ ತೆರಳಿದ್ದ ಉತ್ತರ ಭಾರತದ ಕಾರ್ಮಿಕರಲ್ಲಿ ಶೇಕಡಾ 25 ರಷ್ಟು ಮಂದಿ ಮಾತ್ರ ಮರಳಿ ಬಂದಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಹಲವು ಗಂಭೀರ ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.

ನಕಲಿ ದಾಖಲೆ ಸೃಷ್ಟಿಸಿದ್ದ ಬಾಂಗ್ಲಾದೇಶೀಯರೇ? ತೀವ್ರ ಅನುಮಾನ

ಕರಾವಳಿ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ, ಕಾಫಿ ತೋಟ ಹಾಗೂ ಮೀನುಗಾರಿಕೆ ಕ್ಷೇತ್ರಗಳ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರ ಮೇಲೆ ಈ ಹಿಂದಿನಿಂದಲೂ ಸ್ಥಳೀಯವಾಗಿ ಅನುಮಾನಗಳಿದ್ದವು. ಇವರಲ್ಲಿ ಬಹುತೇಕರು ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ತಾವು ಪಶ್ಚಿಮ ಬಂಗಾಳದವರೆಂದು ಬಿಂಬಿಸಿಕೊಂಡಿದ್ದರು ಎನ್ನಲಾಗಿದೆ. ಆದರೆ, ಈಗ ಪಶ್ಚಿಮ ಬಂಗಾಳ ಚುನಾವಣೆ ಮತ್ತು ದೇಶಾದ್ಯಂತ ಜಾರಿಯಾಗುತ್ತಿರುವ ಎಸ್‌ಐಆರ್ (SIR) ತೀವ್ರ ಪರಿಷ್ಕರಣೆಯಿಂದಾಗಿ ತಮ್ಮ ಬೋಗಸ್ ಆಧಾರ್ ಹಾಗೂ ವೋಟರ್ ಐಡಿಗಳು ಸಿಕ್ಕಿಬೀಳಬಹುದು ಎಂಬ ಭಯದಿಂದ ಇವರೆಲ್ಲರೂ ವಾಪಸ್ ಬಾಂಗ್ಲಾದೇಶ ಸೇರಿಕೊಂಡಿದ್ದಾರೆ ಎನ್ನುವ ಗುಮಾನಿ ದಟ್ಟವಾಗಿದೆ.

ಕಟ್ಟಡ ನಿರ್ಮಾಣ ಉದ್ಯಮಿಗಳು ಹೇಳುವುದೇನು?

ಕಾರ್ಮಿಕರು ವಾಪಸ್ ಬಾರದೇ ಇರುವ ಬಗ್ಗೆ ‘ಟಿವಿ9’ ಗೆ ಪ್ರತಿಕ್ರಿಯಿಸಿರುವ ಕಟ್ಟಡ ನಿರ್ಮಾಣ ಉದ್ಯಮಿ ಚಂದ್ರಹಾಸ್ ಪಂಡಿತ್ ಹೌಸ್, ‘ನಮ್ಮ ಸೈಟ್‌ನಲ್ಲಿ ಕಳೆದ ಒಂದು ವರ್ಷದಿಂದ ಸುಮಾರು 60 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೆ ಚುನಾವಣೆಗೆಂದು ಹೋದವರಲ್ಲಿ ಶೇ 70 ರಷ್ಟು ಕಾರ್ಮಿಕರು ವಾಪಸ್ ಬಂದಿಲ್ಲ. ಎಸ್‌ಐಆರ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಅವರಲ್ಲಿ ಭಯ ಮತ್ತು ಗೊಂದಲ ಮೂಡಿತ್ತು. ದಾಖಲೆಗಳು ಸರಿಯಾಗಿದ್ದರೆ ಅವರು ಖಂಡಿತ ಮರಳಿ ಬರುತ್ತಿದ್ದರು. ಈ ದಿಢೀರ್ ಕಾರ್ಮಿಕರ ಅಭಾವದಿಂದಾಗಿ ಜಿಲ್ಲೆಯ ಹಲವೆಡೆ ಕಟ್ಟಡ ನಿರ್ಮಾಣ ಕಾಮಗಾರಿಗಳು ಅರ್ಧಕ್ಕೆ ಸ್ಥಗಿತಗೊಂಡಿವೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲೂ ಎಸ್‌ಐಆರ್ (SIR) ಬೃಹತ್ ಅಭಿಯಾನಕ್ಕೆ ಸಿದ್ಧತೆ

ಇದೇ ವೇಳೆ ಕರ್ನಾಟಕ ರಾಜ್ಯದಾದ್ಯಂತ ಇರುವ ಸುಮಾರು 5.55 ಕೋಟಿಗೂ ಅಧಿಕ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಖ್ಯ ಚುನಾವಣಾಧಿಕಾರಿಗಳು (CEO) ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಹೀಗಿರಲಿದೆ;

  • ಜೂನ್ 20 ರಿಂದ ಜೂನ್ 29: ಅಧಿಕಾರಿಗಳಿಗೆ ತರಬೇತಿ ಮತ್ತು ನಮೂನೆಗಳ ಮುದ್ರಣ ಕಾರ್ಯ.
  • ಜೂನ್ 30 ರಿಂದ ಜುಲೈ 29: ಬಿಎಲ್‌ಒ (BLO) ಅಧಿಕಾರಿಗಳಿಂದ ಮನೆ-ಮನೆಗೆ ತೆರಳಿ ಮತದಾರರ ಪರಿಶೀಲನೆ.
  • ಆಗಸ್ಟ್ 5: ಮತದಾರರ ಪ್ರಾಥಮಿಕ ಪರಿಷ್ಕೃತ ಕರಡು ಪಟ್ಟಿ ಅಧಿಕೃತವಾಗಿ ಪ್ರಕಟಣೆ.
  • ಆಗಸ್ಟ್ 5 ರಿಂದ ಸೆಪ್ಟೆಂಬರ್ 4: ಸಾರ್ವಜನಿಕರಿಗೆ ಹಕ್ಕು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ.
  • ಅಕ್ಟೋಬರ್ 7: ರಾಜ್ಯದ ಅಧಿಕೃತ ಅಂತಿಮ ಮತದಾರರ ಪಟ್ಟಿ ಬಿಡುಗಡೆ.

ಈಗಾಗಲೇ ದೇಶದ ಮೊದಲ ಎರಡು ಹಂತಗಳಲ್ಲಿ 13 ರಾಜ್ಯಗಳ 59 ಕೋಟಿ ಮತದಾರರನ್ನು ತಲುಪಿರುವ ಆಯೋಗ, ಇದೀಗ ಮೂರನೇ ಹಂತದ ಈ ಬೃಹತ್ ಅಭಿಯಾನಕ್ಕಾಗಿ ಒಟ್ಟು 3.94 ಲಕ್ಷ ಬಿಎಲ್‌ಒಗಳನ್ನು ನಿಯೋಜಿಸಿದೆ. ಸಾರ್ವಜನಿಕರು ವೋಟರ್ಸ್ ಸರ್ವಿಸ್ ಪೋರ್ಟಲ್‌ನಲ್ಲಿ ತಮ್ಮ ಹೆಸರುಗಳನ್ನು ಪರಿಶೀಲಿಸಿಕೊಳ್ಳುವಂತೆ ಆಯೋಗ ಮನವಿ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
Loading...
Unable to load recommendations.
Follow Us