ಸಾವಿನ ದಾರಿಯಾದ ಮಂಗಳೂರಿನ ನಂತೂರು-ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ

ಮಂಗಳೂರಿನ ನಂತೂರು-ಸುರತ್ಕಲ್ ರಾಷ್ಟ್ರೀಯ ಹೆದ್ದಾರಿಯಲ್ಲಿನ ಅವ್ಯವಸ್ಥೆ ಹಾಗೂ ಅಪಘಾತಗಳಿಂದಾಗಿ ಜನರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಕೂಳೂರು ಸೇತುವೆಯ ಕಾಮಗಾರಿ ವಿಳಂಬ ಹಾಗೂ ನಂತೂರು ಸಿಗ್ನಲ್‌ನಲ್ಲಿನ ಅಪಾಯಕಾರಿ ಸ್ಥಿತಿಯನ್ನು ಖಂಡಿಸಿ ಹೆದ್ದಾರಿ ದುರಸ್ತಿ, ಸೇತುವೆ ಕಾಮಗಾರಿ ಪೂರ್ಣಗೊಳಿಸುವಂತೆ ಬೇಡಿಕೆ ಇಡಲಾಗಿದ್ದು, ಬೇಡಿಕೆ ಈಡೇರದಿದ್ದರೆ ಉಗ್ರ ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.

ಸಾವಿನ ದಾರಿಯಾದ ಮಂಗಳೂರಿನ ನಂತೂರು-ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ
ಸಾವಿನ ದಾರಿಯಾದ ಮಂಗಳೂರಿನ ನಂತೂರು-ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ
Follow us
ಅಶೋಕ್​ ಪೂಜಾರಿ, ಮಂಗಳೂರು
| Updated By: ಗಂಗಾಧರ​ ಬ. ಸಾಬೋಜಿ

Updated on: Nov 26, 2024 | 7:59 PM

ಮಂಗಳೂರು, ನವೆಂಬರ್​ 26: ನಂತೂರು-ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ (nantur suratkal national highway) ಮಂಗಳೂರು ಮೂಲಕ ಹಾದು ಹೋಗುವ ಭಾರತದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಂದು. ಆದರೆ ಆ ಹೆದ್ದಾರಿಯಲ್ಲಿನ ಅವ್ಯವಸ್ಥೆಯಿಂದ ಅದೆಷ್ಟೋ ವಾಹನ ಸವಾರರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಹೀಗಾಗಿ ರಸ್ತೆ ಅವ್ಯವಸ್ಥೆಯಿಂದ ರೋಸಿ ಹೋಗಿದ್ದ ಜನ ಇಂದು ಬೀದಿಗಿಳಿದು ಹೋರಾಟ ಮಾಡಿದ್ದು, ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕಿದ್ದಾರೆ.

ಇಪ್ಪತ್ತಕ್ಕೂ ಹೆಚ್ಚು ವಾಹನ ಸವಾರರು ಮೃತ

ಮಂಗಳೂರಿನ ನಂತೂರು – ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯಿಂದ ಕೂಡಿದೆ. ಕೊಚ್ಚಿಯಿಂದ ಪನ್ವೇಲ್‌ಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬರುವ ನಂತೂರು-ಸುರತ್ಕಲ್ ರಸ್ತೆ ಹಲವು ವರ್ಷಗಳಿಂದ ಹದಗೆಟ್ಟಿದೆ. ಅದರಲ್ಲೂ ಅವೈಜ್ಞಾನಿಕ ನಂತೂರು ಸಿಗ್ನಲ್‌ನಲ್ಲೇ ಕಳೆದ ಎರಡು ವರ್ಷದಲ್ಲಿ ಇಪ್ಪತ್ತಕ್ಕೂ ಹೆಚ್ಚು ವಾಹನ ಸವಾರರು, ಪಾದಚಾರಿಗಳ ಪ್ರಾಣ ಹಾರಿ ಹೋಗಿದೆ.

ಇದನ್ನೂ ಓದಿ: ಕಂಬಳಕ್ಕೆ ಮತ್ತೆ ಅಡ್ಡಿ, ಪಿಲಿಕುಳದಲ್ಲಿ ಕಂಬಳ ನಡೆಸುವುದಕ್ಕೆ ಪ್ರಾಣಿಪ್ರಿಯರ ವಿರೋಧ: ಕೋರ್ಟ್‌ಗೆ ದೂರು

ಇನ್ನು ಹೊಂಡ-ಗುಂಡಿ ತಪ್ಪಿಸಲು ಹೋಗಿ ಪ್ರಾಣ ಕಳೆದುಕೊಳ್ಳುವುದರ ಜೊತೆ ಅದೆಷ್ಟೋ ಮಂದಿ ಕೈಕಾಲು ಮುರಿದುಕೊಂಡಿದ್ದಾರೆ. ಹೀಗಾಗಿ ಈ ನಂತೂರಿನಿಂದ ಸುರತ್ಕಲ್ ಹೆದ್ದಾರಿ ರಸ್ತೆ ಅವ್ಯವಸ್ಥೆಯನ್ನು ಖಂಡಿಸಿ ನಾಗರಿಕರು ರಸ್ತೆಗಿಳಿದು ಧರಣಿ ನಡೆಸಿದರು. ಮಂಗಳೂರಿನ ಕೂಳೂರು ಸೇತುವೆ ಬಳಿ ಸುಡುಬಿಸಿಲಿಗೂ ಲೆಕ್ಕಿಸದೆ ಸಾಮೂಹಿಕ ಧರಣಿ ಕೈಗೊಂಡಿದ್ದರು. ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದರು ಸಹ ವ್ಯವಸ್ಥೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಸುರತ್ಕಲ್ ನಂತೂರು ರಾಷ್ಟ್ರೀಯ ಹೆದ್ದಾರಿ ಮಧ್ಯೆ ಕೂಳೂರಿನಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಹೊಸದಾಗಿ ಸೇತುವೆ ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಷಟ್ಪದ ಸೇತುವೆ ಕಾಮಗಾರಿ ಆರಂಭವಾಗಿ ನಾಲ್ಕು ವರ್ಷವಾದರು ಇನ್ನು ಸಹ ಪಿಲ್ಲರ್ ಮೇಲೇರಿಲ್ಲ. ಹೀಗಾಗಿ 70 ವರ್ಷಗಳ ಹಳೆಯದಾದ ಘನ ವಾಹನಗಳ ಸಂಚಾರಕ್ಕೆ ಆಯೋಗ್ಯವಾದ ಶಿಥಿಲಗೊಂಡ ಸೇತುವೆ ಮೇಲೆಯೇ ಸಂಚಾರ ಮಾಡಬೇಕಾದ ಅನಿವಾರ್ಯತೆಯಿದೆ.

ಅರ್ಧಕ್ಕೆ ನಿಂತ ಕಾಮಗಾರಿ 

ಇನ್ನು ನಂತೂರು ಸಿಗ್ನಲ್ ಬಳಿ ಮೇಲ್ಸೆತುವೆ ಕಾಮಗಾರಿ ಪ್ರಾರಂಭವಾಗಿದೆ. ಈಗಾಗಲೇ ಮಣ್ಣು ಸಮತಟ್ಟು ಕಾರ್ಯ ನಡೆದಿದೆ. ಆದರೆ ಮೇಲ್ಸೆತುವೆ ಕಾಮಗಾರಿ ತಮ್ಮ ಜೀವಿತಾವದಿಯಲ್ಲೇ ಪೂರ್ಣವಾಗುತ್ತೋ ಎಂಬ ಸಂಶಯ ಇಲ್ಲಿನ ನಾಗರಿಕರಿಲ್ಲಿದೆ. ಹೀಗಾಗಿ ಸುರತ್ಕಲ್‌ನ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಹೆದ್ದಾರಿಯನ್ನು ಪೂರ್ಣ ಪ್ರಮಾಣದಲ್ಲಿ ದುರಸ್ತಿಗೊಳಿಸಬೇಕು, ಅರ್ಧಕ್ಕೆ ನಿಂತಿರುವ ಕೂಳೂರು ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು, ನಂತೂರು ಮೇಲ್ಸೇತುವೆ ಕಾಮಗಾರಿ ಕಾಲಮಿತಿಯಲ್ಲಿ ಮಾಡಿ ಮುಗಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಹೋರಾಟ ನಡೆಸಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಬೇಡಿಕೆ ಶೀಘ್ರ ಈಡೇರದೆ ಇದ್ದಲ್ಲಿ ಮುಂದೆ ಹೆದ್ದಾರಿ ಮಧ್ಯೆಯೇ ಮಲಗಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಹೋರಾಟಗಾರರು ನೀಡಿದ್ದಾರೆ. ಒಟ್ಟಿನಲ್ಲಿ ರಸ್ತೆ ಅವ್ಯವಸ್ಥೆಯಿಂದಾಗಿ ಅದೆಷ್ಟೋ ಮಂದಿ ತಮ್ಮ ಗಂಡ, ಮಕ್ಕಳು, ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಜನಪ್ರತಿನಿಧಿಗಳು ಸಹ ಈ ಬಗ್ಗೆ ಗಮನಹರಿಸಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕಾದ ಅವಶ್ಯಕತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.