KMC Mangalore: ಮಂಗಳೂರು ಗಾಂಜಾ ಪ್ರಕರಣ, ಮತ್ತೊಬ್ಬ ಕೆಎಂಸಿ ವೈದ್ಯಕೀಯ ವಿದ್ಯಾರ್ಥಿ ಅರೆಸ್ಟ್
KMC Mangalore Drug Case: ಕಡಲತಡಿ ಮಂಗಳೂರಿನಲ್ಲಿ ಗಾಂಜಾ ಘಾಟು ಎದ್ದಿದ್ದು, ಈ ಗಾಂಜಾ ಲೋಕದಲ್ಲಿ ಕೆಎಂಸಿ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಪ್ರಕರಣದ ಬೆನ್ನತ್ತಿರುವ ಪೊಲೀಸರು ಮತ್ತೋರ್ವ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.
ಮಂಗಳೂರು: ವೈದ್ಯಕೀಯ ಕಾಲೇಜಿನಲ್ಲಿ ನಡೆಯುತ್ತಿದ್ದ ಗಾಂಜಾ ದಂಧೆ ಪ್ರಕರಣ (Ganja racket case) ಸಂಬಂಧ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಇದೀಗ ಮತ್ತೋರ್ವ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಕೆಎಂಸಿ (KMC) ಅಂತಿಮ ವರ್ಷದ ವಿದ್ಯಾರ್ಥಿ ತುಮಕೂರಿನ ಡಾ.ವಿ.ಎಸ್. ಹರ್ಷಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾಗಿ ಟಿವಿ9ಗೆ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಸದ್ಯ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಗಾಂಜಾ ಕೇಸ್ನಲ್ಲಿ 4 ವೈದ್ಯಕೀಯ ವಿದ್ಯಾರ್ಥಿನಿಯರು, 2 ವೈದ್ಯರು, 2 ವಿದ್ಯಾರ್ಥಿಗಳು ಹಾಗೂ ಗಾಂಜಾ ಪೆಡ್ಲರ್ಗಳು ಸೇರಿ ಒಟ್ಟು 10 ಜನರನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ವೈದ್ಯರು, ವಿದ್ಯಾರ್ಥಿಗಳು KMC ಅತ್ತಾವರ, KMC ಮಣಿಪಾಲ ಯೆನಪೋಯಾ ದೇರಳಕಟ್ಟೆ ಮೆಡಿಕಲ್ ಕಾಲೇಜ್ನವರಾಗಿದ್ದಾರೆ. ಬಂಧಿತರಿಂದ 2 ಕೆಜಿ ಗಾಂಜಾ, ನಕಲಿ ಪಿಸ್ತೂಲ್, ಡ್ರ್ಯಾಗರ್ ವಶಕ್ಕೆ ಪಡೆದುಕೊಂಡಿದ್ದಾರೆ.
ಗಾಂಜಾ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಮಂಗಳೂರಿನ ಬಂಟ್ಸ್ ಹಾಸ್ಟೆಲ್ ವೃತ್ತದ ಸಮೀಪ ಇರುವ ಮೆಂಡಿಸ್ ಪ್ಲಾಜಾ ಎಂಬಾ ಈ ಆಪಾರ್ಟ್ಮೆಂಟ್ನಲ್ಲಿ ಸಾಗರೋತ್ತರ ಭಾರತೀಯ ಪ್ರಜೆಯಾದ ನೀಲ್ ಕಿಶೋರಿಲಾಲ್ ರಾಮ್ ಜಿ ಶಾ ಎಂಬಾತ ವಾಸವಿದ್ದ. ಈತ ತನ್ನ ಪ್ಲಾಟ್ ನಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಗಾಂಜಾ ಮಾರುತ್ತಿದ್ದ ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಬಳಿಕ ಆತನ ಪ್ಲಾಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಈ ವೇಳೆ 2 ಕೆ,ಜಿ ಗಾಂಜಾ ಮತ್ತು ಒಂದು ನಕಲಿ ಪಿಸ್ತೂಲ್ ಹಾಗೂ ಒಂದು ಡ್ಯಾಗರ್ ಸಿಕ್ಕಿತ್ತು. ಈತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಡಾಕ್ಟರ್ಗಳ ಮುಖವಾಡ ಕಳಚಿಬಿದ್ದಿದೆ.
ಇದನ್ನೂ ಓದಿ: ಸ್ಯಾಂಟ್ರೋ ರವಿ ಲೀಲೆಗಳು ಬಗೆದಷ್ಟು ಬೆಚ್ಚಿ ಬೀಳಿಸುವ ಕಥೆ: ಸ್ಯಾಂಟ್ರೋ ‘ಸರ್ವೀಸ್’ ಜಾಲದಲ್ಲಿ ನಟಿ, ಮಾಡೆಲ್ಗಳು..!
ಓವರ್ ಸೀಸ್ ಸಿಟಿಜನ್ ಆಫ್ ಇಂಡಿಯಾ ಕೋಟಾ ಆಡಿಯಲ್ಲಿ ಡೆಂಟಲ್ ಕಾಲೇಜಿನಲ್ಲಿ ವಿದ್ಯಬ್ಯಾಸ ಮಾಡುತ್ತಿರುವ ಮೆಂಡಿಸ್ ಪ್ಲಾಜಾ, ವೈದ್ಯರಿಗೂ ಗಾಂಜಾ ನೀಡುತ್ತಿದ್ದ ಬಗ್ಗೆ ಬಾಯ್ಬಿಟ್ಟಿದ್ದ. ಆತ ನೀಡಿದ ಮಾಹಿತಿ ಆಧಾರದ ಮೇಲೆ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಾದ ಕೆ.ಎಂ.ಸಿ ಆಸ್ಪತ್ರೆ ವೈದ್ಯರಾದ ಡಾ.ಸಮೀರ್(32) ಮತ್ತು ಡಾ.ಮಣಿಮಾರನ್ ಮುತ್ತು (28) ಎನ್ನುವವರನ್ನು ಬಂಧಿಸಿದ್ದಾರೆ. ಬಳಿಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರಕರಣದಲ್ಲಿ ತಗಲಾಕ್ಕೊಂಡಿದ್ದರು.
ಈ ಘಟನೆ ನಂತರ ಮಂಗಳೂರಿಗೆ ಮೆಡಿಕಲ್ ವಿದ್ಯಬ್ಯಾಸಕ್ಕೆ ತಮ್ಮ ಮಕ್ಕಳನ್ನು ಕಳುಹಿಸಿದ ಪೋಷಕರಿಗೆ ಚಿಂತೆ ಆರಂಭವಾಗಿದೆ. ಮತ್ತಿನಲ್ಲಿ ಅದೆಂಥಾ ಚಿಕಿತ್ಸೆ ಕೊಡುತ್ತಾರೆ ಎನ್ನುವ ಆತಂಕದಲ್ಲಿ ರೋಗಿಗಳಿದ್ದಾರೆ. ತನಿಖೆ ಬಳಿಕ ಇನ್ನೂ ಯಾವೆಲ್ಲ ವಿಚಾರ ಹೊರಬರುತ್ತವೆ ಎಂದು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:37 am, Thu, 12 January 23