Mangaluru Landslide: ಮಂಗಳೂರು ಏರ್​ಪೋರ್ಟ್​ ನಿರ್ಲಕ್ಷ್ಯದಿಂದ ಅದ್ಯಪಾಡಿಯಲ್ಲಿ ಭೂಕುಸಿತ; ಸ್ಥಳೀಯರ ಆರೋಪ

| Updated By: ಸುಷ್ಮಾ ಚಕ್ರೆ

Updated on: Dec 03, 2024 | 3:26 PM

ಫೆಂಗಲ್ ಚಂಡಮಾರುತದ ಪ್ರಭಾವದಿಂದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಅದ್ಯಪಾಡಿಯಲ್ಲಿ ಗುಡ್ಡ ಕುಸಿದಿದೆ. ಇದರಿಂದ ಅದ್ಯಪಾಡಿ ಜನರಿಗೆ ಸಂಚಾರಕ್ಕೆ ಸಮಸ್ಯೆ ಎದುರಾಯಿತು. ಈ ಭೂಕುಸಿತಕ್ಕೆ ಮಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Mangaluru Landslide: ಮಂಗಳೂರು ಏರ್​ಪೋರ್ಟ್​ ನಿರ್ಲಕ್ಷ್ಯದಿಂದ ಅದ್ಯಪಾಡಿಯಲ್ಲಿ ಭೂಕುಸಿತ; ಸ್ಥಳೀಯರ ಆರೋಪ
ಅದ್ಯಪಾಡಿಯಲ್ಲಿ ಭೂಕುಸಿತ
Follow us on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಅಬ್ಬರ ಹೆಚ್ಚಾಗಿದೆ. ಭಾರೀ ಮಳೆಯಿಂದಾಗಿ ಬಜ್ಪೆ ಸಮೀಪದ ಅದ್ಯಪಾಡಿಯಲ್ಲಿ ಭೂಕುಸಿತ ಉಂಟಾಗಿದೆ. ಬಜ್ಪೆ -ಅದ್ಯಪಾಡಿಯ ಸಂಪರ್ಕ ಕಡಿತವಾಗಿದೆ. ಅದ್ಯಪಾಡಿಯಲ್ಲಿ ಉಂಟಾಗಿರುವ ಭೂಕುಸಿತಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣ ಕೆಳಭಾಗದ ಅದ್ಯಪಾಡಿ ಪ್ರದೇಶದಲ್ಲಿ ವಿಮಾನ ನಿಲ್ದಾಣ ಭಾಗದಿಂದ ಮಣ್ಣಿನ ನೀರು ಹರಿದುಬಂದಿದೆ. ಇದರಿಂದ ಗುಡ್ಡದ ಕೆಳಭಾಗದ ಉಮಾನಾಥ ಸಾಲಿಯಾನ್ ಎಂಬುವವರ ಮನೆಗೆ ಹಾನಿಯಾಗಿದೆ. ಅದ್ಯಪಾಡಿಯ ಉಮಾನಾಥ ಸಾಲಿಯಾನ್ ಅವರ ಮನೆಯ ಮುಂಭಾಗದ ಅಂಗಳದಲ್ಲಿ ಕೆಸರು ತುಂಬಿದ ನೀರು ತುಂಬಿಕೊಂಡಿದೆ.

ಇದನ್ನೂ ಓದಿ: Mangaluru Rains: ಫೆಂಗಲ್ ಚಂಡಮಾರುತದ ಆರ್ಭಟ; ದಕ್ಷಿಣ ಕನ್ನಡ, ಉಡುಪಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ

ಮಂಗಳೂರು ಏರ್ಪೋರ್ಟ್ ನಿರ್ಲಕ್ಷದಿಂದ ಭೂಕುಸಿತವಾಗಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ತಹಶಿಲ್ದಾರ್​ಗೆ ದೂರು ನೀಡಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತವಾಗಿದ್ದು, ಚಂಡಮಾರುತದಿಂದ ವಿಮಾನ ನಿಲ್ದಾಣದ ರನ್ ವೇಯಲ್ಲಿ ನೀರು ತುಂಬಿಕೊಂಡಿತ್ತು. ಅವೈಜ್ಞಾನಿಕವಾಗಿ ನೀರನ್ನು ಏರ್​ಪೋರ್ಟ್ ಪ್ರಾಧಿಕಾರ ಹೊರಗೆ ಬಿಟ್ಟಿದೆ. ಏಕಾಏಕಿ ಒಂದೇ ಕಡೆ ನೀರು ಬಿಟ್ಟಿದ್ದರಿಂದ ಅವಘಡ ಉಂಟಾಗಿದೆ. ಇದರಿಂದಾಗಿಯೇ ಭೂಕುಸಿತ ಉಂಟಾಗಿ ಪ್ರವಾಹದ ನೀರು ನುಗ್ಗಿದೆ ಎಂದು ಆರೋಪಿಸಿದ್ದಾರೆ.

ಇದರಿಂದಾಗಿ ಬಜ್ಪೆ-ಅದ್ಯಪಾಡಿಯ ಸಂಪರ್ಕ ಕಡಿತವಾಗಿದೆ. ಮಂಗಳೂರು ವಿಮಾನನಿಲ್ದಾಣ ರನ್ ವೇ ಕಳಗಿನ ಅದ್ಯಪಾಡಿ ಪ್ರದೇಶದಲ್ಲಿ ವಿಮಾನ ನಿಲ್ದಾಣ ಭಾಗದಿಂದ ಹರಿದುಬಂದ ಮಣ್ಣು ನೀರಿನಿಂದ ಭಾರೀ ಸಮಸ್ಯೆ ಎದುರಾಗಿದೆ. ಮನೆಯ ಮುಂಭಾಗದ ಅಂಗಳದಲ್ಲಿ ಮಣ್ಣು, ಕೆಸರು ತುಂಬಿಕೊಂಡಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಫೆಂಗಲ್ ಚಂಡಮಾರುತ ಮಳೆಯ ಅಬ್ಬರ: 10 ಜಿಲ್ಲೆಗಳಲ್ಲಿ ಶಾಲೆ, ಕಾಲೇಜುಗಳಿಗೆ ರಜೆ

ತಹಶೀಲ್ದಾರ್ ಹೇಳಿದ್ದೇನು?:

ಬಜ್ಪೆ ಸಮೀಪದ ಅದ್ಯಪಾಡಿಯಲ್ಲಿ ಭೂಕುಸಿತ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರು ತಹಶಿಲ್ದಾರ್ ಪ್ರಶಾಂತ್ ಪಾಟೀಲ್ ಹೇಳಿಕೆ ನೀಡಿದ್ದು, ಭೂ ಕುಸಿತ ವಿಚಾರದಲ್ಲಿ ಏರ್ಪೋರ್ಟ್ ಮೇಲೆ ಆರೋಪ‌ ಮಾಡಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ಸದ್ಯಕ್ಕೆ ರಸ್ತೆ ಸಂಪರ್ಕ ಸರಿಪಡಿಸುವ ಮತ್ತು ವಿದ್ಯುತ್ ಕಂಬ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಏರ್ಪೋರ್ಟ್ ಆಡಳಿತವನ್ನು ಸಂಪರ್ಕಿಸಿ ಘಟನೆ ಬಗ್ಗೆ ವಿವರಣೆ ಪಡೆಯಲಾಗುವುದು ಎಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ