ಮಂಗಳೂರು: ಹೈ ಬೀಮ್ ಲೈಟ್ ವಿರುದ್ಧ ಭರ್ಜರಿ ಕಾರ್ಯಾಚರಣೆ, 5.86 ಲಕ್ಷ ರೂ. ದಂಡ ಸಂಗ್ರಹ
ವಾಹನಗಳ ಹೈಬೀಮ್ ಹಾಗೂ ತೀಕ್ಷ್ಣ ಬೆಳಕು ಸೂಸುವ ಹೆಡ್ಲೈಟ್ ಅಳವಡಿಸಿದ ವಾಹನ ಮಾಲೀಕರ ವಿರುದ್ಧ ಮಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಕೆಲವೇ ದಿನಗಳಲ್ಲಿ 5.86 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಆ ಕುರಿತ ಮಾಹಿತಿ ಇಲ್ಲಿದೆ.
ಮಂಗಳೂರು, ಜುಲೈ 25: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹೈ ಬೀಮ್ ಹಾಗೂ ಅತಿ ಹೆಚ್ಚು ಪ್ರಖರವಾಗಿ ಬೆಳಗುವ ಅಥವಾ ಕಣ್ಣುಕುಕ್ಕುವ ಎಲ್ಇಡಿ ಲೈಟ್ ಹೊಂದಿರುವ ವಾಹನಗಳ ವಿರುದ್ಧ ಸಂಚಾರ ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಜುಲೈ 15 ರಿಂದ 23 ರವರೆಗೆ 1170 ಪ್ರಕರಣಗಳು ದಾಖಲಾಗಿದ್ದು, 5.86 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
1989 ರ ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ನಿರ್ದಿಷ್ಟಪಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಾರ್ವಜನಿಕರು ವಾನಹಗಳಲ್ಲಿ ಹೆಡ್‌ಲೈಟ್‌ಗಳನ್ನು ಅಳವಡಿಸಬೇಕು. ಎದುರಿನ ವಾಹನಗಳ ಮೇಲೆ ಪರಿಣಾಮ ಬೀರುವ ಹೆಚ್ಚುವರಿ ಅಲಂಕಾರಿಕ ಮತ್ತು ಹೆಚ್ಚಿನ-ಫೋಕಸ್ ಲೈಟ್ಗಳನ್ನು ಬಳಸಬಾರದು. ಹೆದ್ದಾರಿಗಳಲ್ಲಿ ಮತ್ತು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಬೀದಿ ದೀಪಗಳಿರುವಲ್ಲಿ ಹೈ ಬೀಮ್‌ಗಳನ್ನು ಬಳಸಬಾರದು ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಹೇಳಿದ್ದಾರೆ.
ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಒಂದು ಅಥವಾ ಎರಡು ಹೆಡ್‌ಲೈಟ್‌ಗಳನ್ನು ಮಾತ್ರ ಹೊಂದಿರಬೇಕು. ನಾಲ್ಕು ಚಕ್ರ ಮತ್ತು ದೊಡ್ಡ ವಾಹನಗಳು ಎರಡು ಅಥವಾ ನಾಲ್ಕು ಹೆಡ್‌ಲೈಟ್‌ಗಳನ್ನು ಹೊಂದಿರಬಹುದು. ವಾಹನಗಳ ಹೆಡ್ಲೈಟ್ನಿಂದ ಹೊರಸೂಸುವ ಬೆಳಕನ್ನು ಯಾವಾಗಲೂ ಕೆಳಮುಖವಾಗಿ ಕೇಂದ್ರೀಕರಿಸಬೇಕು ಮತ್ತು ಎಂಟು ಮೀಟರ್ ದೂರದಲ್ಲಿ ವಾಹನದಲ್ಲಿ ಕುಳಿತುಕೊಳ್ಳುವ ವ್ಯಕ್ತಿಯ ಕಣ್ಣಿಗೆ ತೊಂದರೆಯಾಗಬಾರದು ಎಂದು ಅವರು ಹೇಳಿದ್ದಾರೆ.
ತೀಕ್ಷ್ಣ ಬೆಳಕಿನ ಎಲ್ಇಡಿ ಲೈಟ್ಗಳನ್ನು, ಅದರಲ್ಲಿಯೂ ಕೇಂದ್ರ ಮೋಟಾರು ವಾಹನ ಕಾಯ್ದೆಯ ನಿಯಮ ಉಲ್ಲಂಘಿಸಿ ಲೈಟ್ ಅಳವಡಿಸುವ ವಾಹನ ಮಾಲೀಕರ ವಿರುದ್ಧ ರಾಜ್ಯ ಸಂಚಾರ ಪೊಲೀಸರು ಈ ತಿಂಗಳ ಆರಂಭದಲ್ಲಿಯೇ ಕಾರ್ಯಾಚರಣೆ ಶುರು ಮಾಡಿದ್ದಾರೆ. ಜೂನ್ ತಿಂಗಳಲ್ಲಿಯೇ ಪೊಲೀಸರು ಎಚ್ಚರಿಕೆಯನ್ನು ನೀಡಿದ್ದರು. ಅದರಂತೆ ರಾಜ್ಯದಾದ್ಯಂತ ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ: ಬೆಳ್ಳಂ ಬೆಳಗ್ಗೆ 150 ಪೊಲೀಸರಿಂದ ಮಂಗಳೂರು ಜೈಲ್ ಮೇಲೆ ದಾಳಿ; ಗಾಂಜಾ, ಡ್ರಗ್ಸ್, ಮೊಬೈಲ್ಸ್ ಪತ್ತೆ
ಸಾಮಾಜಿಕ ಮಾಧ್ಯಮ ಮೂಲಕ ಸೈಬರ್ ವಂಚನೆ ಜಾಗೃತಿ
ನಗರದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಲು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ. ಅದರಂತೆ, ಬ್ಯಾಂಕ್ ಕೆವೈಸಿ ಅಪ್ಡೇಟ್ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಜಾಗೃತಿ ಸಂದೇಶ ಪ್ರಕಟಿಸಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಎಕ್ಸ್ ಸಂದೇಶ
ಆನ್ ಲೈನ್ ಮೂಲಕ ನಡೆಯುವ ಸೈಬರ್ ವಂಚನೆಗಳ ಬಗ್ಗೆ ಜಾಗೃತಿ ವಿಡಿಯೋ-5 #dkdistrictpolice pic.twitter.com/1i3aZWqgxv
— Dakshina Kannada District Police (@spdkpolice) July 25, 2024
ಆರ್ಬಿಐ ಮಾರ್ಗಸೂಚಿಯ ಪ್ರಕಾರ ಯಾವುದೇ ಬ್ಯಾಂಕುಗಳು ಆನ್ಲೈನ್ ಮೂಲಕವೇ ಕೆವೈಸಿ ಅಪ್ಡೇಟ್ ಮಾಡಲು ಮಾಹಿತಿ ಕೇಳುವಂತಿಲ್ಲ. ಯಾರಾದರೂ ಕರೆ ಮಾಡಿ ಆ ನೆಪದಲ್ಲಿ ವೈಯಕ್ತಿಕ ಮಾಹಿತಿ, ಬ್ಯಾಂಕ್ ದಾಖಲೆಗಳನ್ನು ಕೇಳಿದರೆ ನೀಡಬೇಡಿ. ಒಂದು ವೇಳೆ ಬ್ಯಾಂಕ್ ವಿವರ ನೀಡಿ ಹಣ ಕಳೆದುಕೊಂಡಿದ್ದಲ್ಲಿ ಸೈಬ್ ಕ್ರೈಂ ಸಹಾಯವಾಣಿ ಸಂಖ್ಯೆ 1930 ಕ್ಕೆ ಕರೆ ಮಾಡುವಂತೆ ಸಲಹೆ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ