AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಿಕ್ಷಾಟನೆ ಬಿಟ್ಟು ಸ್ವಾವಲಂಬಿ ಬದುಕು ಕಟ್ಟಿಕೊಂಡ ತೃತೀಯ ಲಿಂಗಿ: ನಾಲ್ಕು ಆಟೋಗಳ ಓನರ್​ ಇವರು

ಮಂಗಳೂರಿನ ಓರ್ವ ಮಂಗಳಮುಖಿ ಇತರರಂತೆ ಬೇರೆ ಮಾರ್ಗ ಹಿಡಿಯದೇ ಸ್ವಾವಲಂಬಿಯಾಗಿ ಜೀವನವನ್ನು ನಡೆಸುವ ಮೂಲಕ ಇತರರಿಗೆ ಮಾದರಿ ಆಗಿದ್ದಾರೆ. ಸಿನಿಮಾ, ಸಾಮಾಜಿ ಕಾರ್ಯ, ಆಟೋ ವ್ಯವಹಾರನ್ನು ಪ್ರಾರಂಭಿಸಿದ್ದಾರೆ. ಅಷ್ಟಕ್ಕೂ ಆ ಮಂಗಳಮುಖಿ ಯಾರು, ಅವರು ಮಾಡಿದ ಸಾಧನೆಯಾದರೂ ಏನು ಎಂಬುವುದಕ್ಕೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಿಕ್ಷಾಟನೆ ಬಿಟ್ಟು ಸ್ವಾವಲಂಬಿ ಬದುಕು ಕಟ್ಟಿಕೊಂಡ ತೃತೀಯ ಲಿಂಗಿ: ನಾಲ್ಕು ಆಟೋಗಳ ಓನರ್​ ಇವರು
ಅನಿ ಮಂಗಳೂರು
ಅಶೋಕ್​ ಪೂಜಾರಿ, ಮಂಗಳೂರು
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 03, 2025 | 10:14 AM

Share

ಮಂಗಳೂರು, ಜುಲೈ 03: ಸಮಾಜದಲ್ಲಿ (Society) ಮಂಗಳಮುಖಿಯರ (transgender) ಬಗ್ಗೆ ತಪ್ಪು ಕಲ್ಪನೆಗಳಿವೆ. ಸಮಾಜವು ಇವರನ್ನು ಬೇರೆಯದೇ ರೀತಿಯಲ್ಲಿ ಸ್ವೀಕರಿಸುತ್ತಿದೆ. ಅಲ್ಲದೇ ತೃತೀಯ ಲಿಂಗಿಗಳನ್ನು ತೀರಾ ಹೀನಾಯವಾಗಿ ನಡೆಸಿಕೊಳ್ಳುವ ಕಾಲವೊಂದಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಮಂಗಳಮುಖಿಯರು ಸ್ವಾವಲಂಬಿ ಜೀವನವನ್ನು ನಡೆಸಲು ಮುಂದಾಗುತ್ತಿದ್ದಾರೆ. ಇಲ್ಲೊಬ್ಬರು ಮಂಗಳಮುಖಿ ಇತರರಿಗೆ ಮಾದರಿ ಎಂಬಂತೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.

ಮಂಗಳಮುಖಿಯರನ್ನು ಸಮಾಜ ಬೇರೆಯೇ ರೀತಿಯಲ್ಲಿ ನೋಡುತ್ತೆ. ಆದರೆ ಅಂತಹ ಮಂಗಳಮುಖಿಯರ ನಡುವೆ ಸಾಧನೆ ಮಾಡಿದವರು ಇದ್ದಾರೆ. ಅಂತವರ ಸಾಲಿನಲ್ಲಿ ಅನಿ ಮಂಗಳೂರು ಒಬ್ಬರು. ಮೂಲತಃ ರಾಯಚೂರು ಜಿಲ್ಲೆಯವರಾದ ಅನಿ, ಶಿಕ್ಷಣಕ್ಕೆಂದು ಮಂಗಳೂರಿಗೆ ಬಂದವರು ಸಾಕಷ್ಟು ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದಾರೆ. ಬಿಎ ಪದವಿ ಪಡೆದಿರುವ ಇವರು ಬಿಎಡ್ 2ನೇ ಸೆಮಿಸ್ಟರ್ ವೇಳೆಗೆ ಮಂಗಳಮುಖಿಯಾಗಿ ಶಿಕ್ಷಣ ಮುಂದುವರಿಸಲು ಸಾಧ್ಯವಾಗದೆ ಅರ್ಧಕ್ಕೆ ಮೊಟಕುಗೊಳಿಸಿದರು. ಆದರೆ ಸಾಧನೆಯಲ್ಲಿ ಮಾತ್ರ ಇವರು ಹಿಂದೆ ಉಳಿದಿಲ್ಲ.

ಸಿನಿಮಾ, ಸಾಮಾಜಿ ಕಾರ್ಯದಲ್ಲಿ ಭಾಗಿ

ಎಲ್ಲಾ ತೃತೀಯ ಲಿಂಗಿಗಳಂತೆ ನಾನು ಆಗಬಾರದೆಂದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಇದಕ್ಕಾಗಿ ನಾಲ್ಕು ಆಟೋ ರಿಕ್ಷಾಗಳನ್ನು ಖರೀದಿಸಿ ಬಾಡಿಗೆ ನೀಡಿದ್ದಾರೆ. ಈಗಾಗಲೇ ಶಿವಲೀಲಾ ಎಂಬ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದು ಮಾತ್ರವಲ್ಲದೇ, ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ತಮ್ಮದೇ ಆದ ಆಟೋರಿಕ್ಷಾದಲ್ಲಿ ಬರುವ ಆದಾಯದಲ್ಲಿ ಅನಾಥರ, ಬಡ ಮಕ್ಕಳ ಹಸಿವೆ ನೀಗಿಸುವ ಕಾರ್ಯ ಮಾಡುತ್ತಿದ್ದಾರೆ.

ಇದನ್ನೂ ಓದಿ
Image
ಮತ್ತೊಂದು ಭ್ರಷ್ಟಾಚಾರ ಆರೋಪ: ಹಣ ಪಡೆದು ಮನೆ ಇದ್ದವರಿಗೇ ಮನೆ ಹಂಚಿಕೆ!
Image
ಮಂಗಳೂರು ಪಾಲಿಕೆಯಲ್ಲಿ ನಕಲಿ ತೆರಿಗೆ ನೋಂದಣಿ ಜಾಲ: ಲಕ್ಷಾಂತರ ರೂ ದೋಖಾ
Image
ಮನೆಗಳಿಗೆ ಸ್ಟಿಕ್ಕರ್‌ ಅಂಟಿಸುವುದು ಸಮೀಕ್ಷಾ ಪ್ರಕ್ರಿಯೆಯ ಭಾಗ: ಬಿಬಿಎಂಪಿ
Image
ಮೆಟ್ರೋ ದರ ಏರಿಕೆ ಪರಿಣಾಮ, ಬಿಎಂಟಿಸಿಗೆ ಹೆಚ್ಚುವರಿ 25 ಲಕ್ಷ ರೂ. ಆದಾಯ!

ಇದನ್ನೂ ಓದಿ: ಮನೆಗಳಿಗೆ ಸ್ಟಿಕ್ಕರ್‌ ಅಂಟಿಸುವುದು ಸಮೀಕ್ಷಾ ಪ್ರಕ್ರಿಯೆಯ ಭಾಗ: ಬಿಬಿಎಂಪಿ ಸ್ಪಷ್ಟನೆ

ಅದೊಂದು ದಿನ ಕೆಲಸ ಮುಗಿಸಿ ಸಂಜೆ ಮನೆಯತ್ತ ಮರಳುತ್ತಿದ್ದ ಅನಿ ಅವರಿಗೆ ಯಾವ ಆಟೋರಿಕ್ಷಾಗಳು ನಿಲ್ಲಿಸಿರಲಿಲ್ಲ. ರಾತ್ರಿಯಾದರೂ ಒಂದೇ ಒಂದು ಆಟೋ ಸಿಗದ ಕಾರಣ ಅವರು ಮನೆಗೆ ನಡೆದುಕೊಂಡೆ ಹೋಗಬೇಕಾಯಿತು. ಅಂದೇ ಅವರು ಆಟೋ ಖರೀದಿಸಿ ಬಾಡಿಗೆಗೆ ಬಿಡುವ ನಿರ್ಧಾರವನ್ನು ಕೈಗೊಂಡರು. ಅದಕ್ಕಾಗಿ ಬ್ಯಾಂಕ್‌ಗೆ ಓಡಾಟ ಶುರುಮಾಡಿ ಸಾಲ ಸಿಕ್ಕ ತಕ್ಷಣ ನಾಲ್ಕು ಆಟೋಗಳನ್ನು ಖರೀದಿಸಿದರು. ಈ ನಾಲ್ಕೂ ಆಟೋಗಳನ್ನು ಮಂಗಳೂರು ಗ್ರಾಮಾಂತರ ಪ್ರದೇಶ ದೇರಳಕಟ್ಟೆಯಲ್ಲಿ ಬಾಡಿಗೆಗೆ ಬಿಟ್ಟಿದ್ದಾರೆ. ಇದೀಗ ಪ್ರತೀ ಆಟೋದಿಂದ ದಿನವೂ ಅವರಿಗೆ ನಿಶ್ಚಿತ ಮೌಲ್ಯದ ಆದಾಯ ಬರುತ್ತದೆ.

ಇದನ್ನೂ ಓದಿ: ವಸತಿ ಯೋಜನೆಯಲ್ಲಿ ಮತ್ತೊಂದು ಭ್ರಷ್ಟಾಚಾರ ಆರೋಪ: ಹಣ ಪಡೆದು ಮನೆ ಇದ್ದವರಿಗೇ ಮನೆ ಹಂಚಿಕೆ!

ವಿಶೇಷವೆಂದರೆ ಇವರ ನಾಲ್ಕು ಆಟೋಗಳಲ್ಲಿ ಗರ್ಭಿಣಿಯರಿಗೆ ಹಾಗೂ ಹಿರಿಯ ಮಂಗಳಮುಖಿಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ತನಗಾದ ಸಂಕಷ್ಟ, ಅವಮಾನ, ತೊಂದರೆ ಬೇರೆ ಮಂಗಳಮುಖಿಯರಿಗೆ, ಹೆಣ್ಣಿಗೆ ಆಗಬಾರದೆಂದು ಈ ಉಚಿತ ಸೇವೆಯ ಅವಕಾಶ ಕಲ್ಪಿಸಿದ್ದಾರೆ. ಒಟ್ಟಿನಲ್ಲಿ ಅನಿ ಮಂಗಳೂರು ಮಾಡಿರುವ ಸಾಧನೆ ಎಲ್ಲಾ ಮಂಗಳಮುಖಿಯರಿಗೂ ಸ್ಪೂರ್ತಿಯಾಗಿದ್ದು, ಇವರ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.