ಚುನಾವಣೆ ಸ್ಪರ್ಧೆ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಚಕ್ರವರ್ತಿ ಸೂಲಿಬೆಲೆ: ಹೆಚ್ಚಾಯ್ತು ಅನುಮಾನ
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧೆ ಮಾಡುವ ವಿಚಾರವಾಗಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇಷ್ಟು ವರ್ಷ ಕಾಯ್ದುಕೊಂಡು ಬಂದಿರುವ ನಿಲುವಿನಲ್ಲಿ ಸಣ್ಣಮಟ್ಟಿನ ಬದಲಾವಣೆ ಮಾಡಲು ಸಿದ್ಧ ಎಂದು ಅವರು ಹೇಳಿದ್ದಾರೆ.
ಮಂಗಳೂರು, ಮಾರ್ಚ್ 15: ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಅವರಿಗೆ ಬಿಜೆಪಿಯಿಂದ (BJP) ಲೋಕಸಭೆ ಚುನಾವಣೆ ಟಿಕೆಟ್ ದೊರೆಯುವ ಸಾಧ್ಯತೆ ಇದೆ ಎಂದು ಇತ್ತೀಚೆಗೆ ವರದಿಗಳಾಗಿದ್ದವು. ಆದರೆ, ಅಧಿಕೃತವಾಗಿ ಯಾರೂ ಆ ಕುರಿತು ದೃಢಪಡಿಸಿರಲಿಲ್ಲ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇದೀಗ ಚಕ್ರವರ್ತಿ ಸೂಲಿಬೆಲೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ (Puttur) ಮಾತನಾಡಿದ ಅವರು, ಚುನಾವಣೆ ಸ್ಪರ್ಧೆಗೆ ಅವಕಾಶ ಸಿಕ್ಕರೆ ವಿರೋಧ ಇಲ್ಲ. ಹಾಗೆಂದು ಚುನಾವಣೆ ಟಿಕೆಟ್ ಕೇಳಿಕೊಂಡು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ದೊರೆಯುವ ಸಾಧ್ಯತೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ವೇಳೆ ಅಂಥ ಅವಕಾಶ ಬಂದರೆ ಸ್ಪರ್ಧಿಸಲು ವಿರೋಧ ಇಲ್ಲ. ಲೋಕಸಭಾ ಚುನಾವಣೆಗೆ ನಾನು ಸ್ಪರ್ಧಿಸುವ ವಿಚಾರ ಸದ್ಯದ ಮಟ್ಟಿಗಂತೂ ವದಂತಿಯಷ್ಟೆ ಎಂದು ಹೇಳಿದ್ದಾರೆ.
2014, 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲೂ ಇಂತಹ ವದಂತಿ ಹರಡಿತ್ತು. ಈಗ 2024ರಲ್ಲೂ ಅಂಥದ್ದೊಂದು ವದಂತಿ ಹರಡಿದೆ. ರಾಜಕೀಯ ಆಸಕ್ತಿಯ ಪ್ರಶ್ನೆ ಬೇರೆ, ಅದಕ್ಕೆ ನನ್ನ ವಿರೋಧವಿಲ್ಲ. ಆದರೆ ಸೀಟ್ ಕೇಳಿಕೊಂಡು ಹೋಗುವುದಿಲ್ಲ. ಅಂಥ ಅವಕಾಶ ಬಂದರೆ ಯಾವುದೇ ವಿರೋಧ ಇಲ್ಲ. ಹತ್ತು ವರ್ಷಗಳಿಂದ ಕಾಪಾಡಿಕೊಂಡು ಬಂದಿರೋದನ್ನು ಸ್ವಲ್ಪ ಸಡಿಲ ಮಾಡುತ್ತೇನೆ. ಹಾಗೆ ಆಗಬೇಕು ಎಂದು ಏನಾದರೂ ಭಗವಂತನ ಇಚ್ಛೆ ಇದ್ದರೆ ಅದು ಆಗಿಯೇ ಆಗುತ್ತದೆ. ಆದರೆ ಇದುವರೆಗೆ ನನ್ನನ್ನ ಯಾರೂ ಸಂಪರ್ಕಿಸಿಲ್ಲ. ನಾನೂ ಸಂಪರ್ಕ ಮಾಡಿಲ್ಲ ಎಂದು ಸೂಲಿಬೆಲೆ ಹೇಳಿದ್ದಾರೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ 2024: ಉತ್ತರ ಕನ್ನಡದಲ್ಲಿ ತೇಲಿ ಬಂತು ಮತ್ತೊಂದು ಹೆಸರು, ಚಕ್ರವರ್ತಿ ಸೂಲಿಬೆಲೆಗೆ ಟಿಕೆಟ್ ಸಾಧ್ಯತೆ
ಮೈಸೂರಿನಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಲಿದೆ ಎಂಬ ವಿಚಾರ ಸುದ್ದಿಯಾಗಿದ್ದಾಗಲೇ ಚಕ್ರವರ್ತಿಸೂಲಿಬೆಲೆ ಹೆಸರು ಕೂಡ ಆ ಕ್ಷೇತ್ರಕ್ಕೆ ಕೇಳಿಬಂದಿತ್ತು. ಸೂಲಿಬೆಲೆಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆಗಳಿವೆ ಎಂದು ಕೆಲವು ಮಾಧ್ಯಮಗಳು ಅಂದಾಜಿಸಿದ್ದವು. ಆದರೆ, ನಂತರ ಯದುವೀರ್ ಒಡೆಯರ್ಗೆ ಟಿಕೆಟ್ ಘೋಷಣೆಯಾಯಿತು.
ಆ ನಂತರದಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಸೂಲಿಬೆಲೆಗೆ ದೊರೆಯುವ ಸಾಧ್ಯತೆ ಇದೆ. ಹಾಲಿ ಸಂಸದ ಅನಂತಕುಮಾರ್ ಹೆಗಡೆಗೆ ಟಿಕೆಟ್ ದೊರೆಯುವುದು ಅನುಮಾನ ಎಂಬ ವದಂತಿ ಹಬ್ಬಿತ್ತು. ಸದ್ಯದ ಮಟ್ಟಿಗೆ ಇದು ವದಮತಿಯಷ್ಟೇ ಎಂದು ಚಕ್ರವರ್ತಿ ಸೂಲಿಬೆಲೆ ಇದೀಗ ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ