ಮಸಾಜ್ ಪಾರ್ಲರ್ ಮೇಲೆ ದಾಳಿ ಕೇಸ್: 14 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ
ಮಂಗಳೂರಿನ ಬಿಜೈನಲ್ಲಿರುವ ಕಲರ್ಸ್ ಮಸಾಜ್ ಪಾರ್ಲರ್ ಮೇಲೆ ರಾಮಸೇನೆ ನಡೆಸಿದ ದಾಳಿ ಪ್ರಕರಣದಲ್ಲಿ ರಾಮಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ ಸೇರಿದಂತೆ 14 ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ. ಬರ್ಕೆ ಠಾಣೆ ಪೊಲೀಸರು ಆರೋಪಿಗಳನ್ನು ಮಂಗಳೂರಿನ 6ನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಮಂಗಳೂರು, ಜನವರಿ 24: ಮಂಗಳೂರಿನಲ್ಲಿ ಮಸಾಜ್ ಪಾರ್ಲರ್ (Massage Parlor) ಮೇಲೆ ರಾಮಸೇನೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸಾದ್ ಅತ್ತಾವರ ಸೇರಿದಂತೆ 14 ಆರೋಪಿಗಳಿಗೆ 14 ದಿನ ನ್ಯಾಯಾಂಗ (ಫೆಬ್ರವರಿ 7ರವರೆಗೆ) ಬಂಧನ ವಿಧಿಸಿದ ಮಂಗಳೂರಿನ 6ನೇ ಜೆಎಂಎಫ್ಸಿ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ. ಬರ್ಕೆ ಠಾಣೆ ಪೊಲೀಸರು ಇಂದು ಆರೋಪಿಗಳನ್ನು ಕೋರ್ಟ್ಗೆ ಹಾಜರುಪಡಿಸಿದ್ದರು.
ಮಂಗಳೂರಿನ ಬಿಜೈ ಬಳಿಯ ಕಲರ್ಸ್ ಯುನಿಸೆಕ್ಸ್ ಸೆಲೂನ್ಗೆ ರಾಮ ಸೇನಾ ಕಾರ್ಯಕರ್ತರು ನಿನ್ನೆ ಏಕಾಏಕಿ ನುಗ್ಗಿ ದಾಳಿ ಮಾಡಿದ್ದರು. ಪಾರ್ಲರ್ನಲ್ಲಿ ಅನೈತಿಕ ಚಟುವಟಿಕೆಯ ಆರೋಪಿಸಿ ದಾಳಿ ಮಾಡಿದ್ದರು. ಪಾರ್ಲರ್ನ ಪೀಠೋಪಕರಣ, ಕನ್ನಡಿ ಸಹಿತ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಪುಡಿ ಗೈದು ದಾಂಧಲೆ ಎಸಗಿದ್ದರು.
ಇದನ್ನೂ ಓದಿ: ಮಂಗಳೂರು ಮಸಾಜ್ ಪಾರ್ಲರ್ ಮೇಲೆ ದಾಳಿ: ರಾಮಸೇನೆಯ ಸಂಸ್ಥಾಪಕ ಅರೆಸ್ಟ್
ಈ ವೇಳೆ ಯಾವುದೇ ಗ್ರಾಹಕರು ಇಲ್ಲವಾಗಿದ್ದು, ಸೆಲೂನ್ನಲ್ಲಿದ್ದ ಮಹಿಳಾ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗಿ ಬೆದರಿಕೆ ಹಾಕಿದ್ದಾರೆ. ಈ ದಾಳಿಯ ವಿಡಿಯೋಗಳು ಲಭ್ಯವಾಗಿದ್ದು, 9 ರಿಂದ 10 ಕಾರ್ಯಕರ್ತರು ದಾಳಿ ನಡೆಸಿರುವುದು ಗೊತ್ತಾಗಿದೆ. ಘಟನೆ ಬೆನ್ನಲ್ಲೇ ಮಾಲೀಕರು ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬಳಿಕ ಘಟನಾ ಸ್ಥಳಕ್ಕೆ ಡಿಸಿಪಿ ಸಿದ್ದಾರ್ಥ್ ಗೋಯಲ್ ಆಗಮಿಸಿ ಮಾಹಿತಿ ಪಡೆದಿದ್ದು, ಮಹಿಳಾ ಸಿಬ್ಬಂದಿ ಹೇಳಿಕೆ ದಾಖಲಿಸಿದ್ದಾರೆ. ಇನ್ನು ಈ ದಾಳಿಯನ್ನು ತಾವೇ ಮಾಡಿದ್ದಾಗಿ ರಾಮ ಸೇನಾ ಸಂಸ್ಥಾಪಕ ಪ್ರಸಾದ್ ಅತ್ತಾವರ ಒಪ್ಪಿಕೊಂಡಿದ್ದು, ಅನೈತಿಕ ಚಟುವಟಿಕೆಗಳು ಮಂಗಳೂರಿನ ಎಲ್ಲಾ ಪಾರ್ಲರ್ಗಳಲ್ಲಿ ನಡುತ್ತಿದೆ. ಇದರ ವಿರುದ್ದ ನಮ್ಮ ಕಾರ್ಯಕರ್ತರು ದಾಳಿ ನಡೆಸಿದ್ದು, ಮುಂದೆಯೂ ದಾಳಿ ನಡೆಸುತ್ತೇವೆ ಅಂತ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: ಅನೈತಿಕ ಚಟುವಟಿಕೆ ಆರೋಪ: ಮಂಗಳೂರಿನಲ್ಲಿ ಮಸಾಜ್ ಸೆಂಟರ್ ಮೇಲೆ ರಾಮಸೇನೆ ದಾಳಿ
ಮಸಾಜ್ ಸೆಂಟರ್ನಲ್ಲಿ ಡ್ರಗ್ಸ್ ನೀಡಿ 6 ರಿಂದ 17 ವರ್ಷದ ಯುವತಿಯರನ್ನ ಬಳಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ನಮ್ಮ ಕಾರ್ಯಕರ್ತನ ಸಂಬಂಧಿ ಯುವತಿ ಇದರಲ್ಲಿ ಸಿಲುಕಿದ್ದಾಳೆ. ಹೀಗಾಗಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದೇವೆ ಎಂದು ಪ್ರಸಾದ್ ಅತ್ತಾವರ ಹೇಳಿದ್ದರು. ಇನ್ನು ಇಡೀ ಘಟನೆ ನಡೆಯುವ ಹೊತ್ತಿಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಪಕ್ಕದ ಜಿಲ್ಲೆ ಉಡುಪಿಯಲ್ಲಿದ್ದರು. ಘಟನೆ ಹಿನ್ನೆಲೆ ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು.
ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.