ದಾವಣಗೆರೆ ದಂಗಲ್​, ಕಾಂಗ್ರೆಸ್ ಕಂಗಾಲು: ‘ಕೈ’ಕೊಡ್ತಾ ಉಪಚುನಾವಣೆ ರಿಸಲ್ಟ್?

ದಾವಣಗೆರೆ ದಕ್ಷಿಣದ ಉಪಚುನಾವಣೆಯ ಬೇಗುದಿ ಈಗ ಕಾಂಗ್ರೆಸ್​ನಲ್ಲಿ ಕಿಚ್ಚು ಹಚ್ಚಿದೆ. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ ಬೆನ್ನಲ್ಲೇ ಇದೀಗ ನಸೀರ್​ ಅಹ್ಮದ್​ರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ. ಈ ಎಲ್ಲ ಬೆಳವಣಿಗೆಗಳು ದಾವಣಗೆರೆಯಲ್ಲಿ ಕಾಂಗ್ರೆಸ್​ಗೆ ಫಲಿತಾಂಶ ‘ಕೈ’ಕೊಡುತ್ತಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.

ದಾವಣಗೆರೆ ದಂಗಲ್​, ಕಾಂಗ್ರೆಸ್ ಕಂಗಾಲು: ‘ಕೈ’ಕೊಡ್ತಾ ಉಪಚುನಾವಣೆ ರಿಸಲ್ಟ್?
ಕರ್ನಾಟಕ ಕಾಂಗ್ರೆಸ್ ಬಿಕ್ಕಟ್ಟು (ಸಾಂದರ್ಭಿಕ ಚಿತ್ರ)
Image Credit source: tv9

Updated on: Apr 14, 2026 | 1:59 PM

ಬೆಂಗಳೂರು, ಏಪ್ರಿಲ್ 14: ದಾವಣಗೆರೆ (Davanagere) ದಕ್ಷಿಣದ ಉಪಚುನಾವಣೆಯಲ್ಲಿನ ಒಳಪೆಟ್ಟು ಈಗ ಕರ್ನಾಟಕ ಕಾಂಗ್ರೆಸ್​ನ (Congress) ಕೆಲ ನಾಯಕರಿಗೆ ಸಂಕಷ್ಟ ತಂದಿಡುತ್ತಿದೆ. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್​ ರಾಜೀನಾಮೆ ಬೆನ್ನಲ್ಲೇ ನಸೀರ್​ ಅಹ್ಮದ್​ಗೆ ಹೈಕಮಾಂಡ್ ಶಾಕ್ ಕೊಟ್ಟಿದೆ. ಸ್ವತಃ ಹೈಕಮಾಂಡ್​ ಸೂಚನೆ ನೀಡಿದರೂ ರಾಜೀನಾಮೆ ನೀಡಲು ಹಿಂದೇಟು ಹಾಕಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್​​ರನ್ನು ಹುದ್ದೆಯಿಂದ ಬಿಡುಗಡೆಗೊಳಿಸುವ ಮೂಲಕ ಹೈಕಮಾಂಡ್ ತಲೆದಂಡದ ರುಚಿ ತೋರಿಸಿದೆ.

ಅಲ್ಪಸಂಖ್ಯಾತ ಮತಗಳು ಏನಿದ್ದರೂ ಕಾಂಗ್ರೆಸ್​ಗೇ ಸಿಗುತ್ತವೆ ಎಂಬ ಮಾತು ರಾಜಕೀಯ ವಲಯದಲ್ಲಿ ಜನಜನಿತ. ಆದರೆ, ಉಪಚುನಾವಣೆಯ ನಂತರ ಫಲಿತಾಂಶ ಬರುವುದಕ್ಕೂ ಮುನ್ನವೇ ಆಡಳಿತಾರೂಢ ಕಾಂಗ್ರೆಸ್​ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಕುತೂಹಲಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಉಪಚುನಾವಣೆ ಘೋಷಣೆಯಾದ ನಂತರ ಏನೇನಾಯ್ತು ಎಂಬ ಸಮಗ್ರ ವಿವರ ಇಲ್ಲಿದೆ.

ಟಿಕೆಟ್​ಗಾಗಿ ಪೈಪೋಟಿ, ಅಲ್ಪಸಂಖ್ಯಾತರ ಕೈತಪ್ಪಿದ ಚಾನ್ಸ್

ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಗೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ್ ಶಾಮನೂರು ಹಾಗೂ ಅಲ್ಪಸಂಖ್ಯಾತ ನಾಯಕ ಸಾಧಿಕ್ ಪೈಲ್ವಾನ್ ಮಧ್ಯೆ ಜಿದ್ದಾಜಿದ್ದಿ ಮೂಡಿತ್ತು. ಕೊನೆಯ ಕ್ಷಣದಲ್ಲಿ ಟಿಕೆಟ್ ಸಮರ್ಥ್ ಪಾಲಾಯಿತು. ಇದರಿಂದ ಅಲ್ಪಸಂಖ್ಯಾತ ಮುಖಂಡರು ರೊಚ್ಚಿಗೆದ್ದಿದ್ದರು. ಸಾಧಿಕ್ ಪೈಲ್ವಾನ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯುವ ದಿನ ಮುಕ್ತಾಯವಾದ ನಂತರ ಸಿಎಂ ಸಿದ್ದರಾಮಯ್ಯ ಮತ್ತು ಇತರ ಮುಖಂಡರು ಯಶಸ್ವಿಯಾಗಿದ್ದರು. ಆದರೂ ಅಲ್ಪಸಂಖ್ಯಾತರ ಆಕ್ರೋಶವನ್ನು ಸಂಪೂರ್ಣ ತಣ್ಣಗಾಗಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿಲ್ಲವೇ ಎಂಬ ಅನುಮಾನ ಚುನಾವಣಾ ಪ್ರಚಾರದ ವೇಳೆ ಬಲವಾಗಿತ್ತು.

ಪ್ರಚಾರದಲ್ಲಿ ನಿರಾಸಕ್ತಿ?

ಈ ಬಾರಿ ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರು ಪಾಠ ಕಲಿಸಲಿದ್ದಾರೆ ಎಂಬ ಮಾತು ಸಾಮಾಜಿಕ ಜಾಲತಾಣ ಸೇರಿದಂತೆ ಚುನಾವಣಾ ಕಣದಲ್ಲೂ ಕೇಳಿಬಂದಿತ್ತು. ಕೊನೆಯ ಕ್ಷಣದಲ್ಲಿ ಸಚಿವ ಜಮೀರ್ ಅಹ್ಮದ್ ಪ್ರಚಾರಕ್ಕೆ ತೆರಳಿದ್ದರು.

ಮತದಾನ ಮುಗಿಯುತ್ತಿದ್ದಂತೆಯೇ ಬೇಗುದಿ ಸ್ಫೋಟ

ಉಪಚುನಾವಣೆಯ ಮತದಾನ ಮುಗಿದ ನಂತರ ಅಲ್ಪಸಂಖ್ಯಾತ ನಾಯಕರ ಬೇಗುದಿ ಸ್ಪೋಟಗೊಂಡಿತು. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದರು. ಇದನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಂಗೀಕರಿಸಿದ್ದು, ಅದರ ಬೆನ್ನಲ್ಲೇ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ರಾಜೀನಾಮೆಗೆ ಖುದ್ದು ಹೈಕಮಾಂಡ್ ಸೂಚಿಸಿತ್ತು. ಆದರೂ ಅವರು ರಾಜೀನಾಮೆ ನೀಡಿರಲಿಲ್ಲ. ಇದೀಗ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ.

ಜಬ್ಬಾರ್ ಪ್ರಚಾರಕ್ಕೆ ಹೋಗದ್ದೇಕೆ? ಜಮೀರ್ ಹೇಳಿದ್ದೇನು?

ಸಂವಹನದ ಕೊರತೆ, ಬೇಸರದಿಂದ ಮನನೊಂದು ಜಬ್ಬಾರ್ ಮನೆಯಲ್ಲೇ ಉಳಿದಿದ್ದರು ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದ್ದಾರೆ. ಅಲ್ಲದೆ, ಅನಾರೋಗ್ಯವೂ ಇದಕ್ಕೆ ಕಾರಣ ಎಂದಿದ್ದಾರೆ. ಪಕ್ಷದ ಅಭ್ಯರ್ಥಿಯ ಗೆಲುವು ಮುಖ್ಯ ಎಂದು ಜಬ್ಬಾರ್‌ಗೆ ಮನವಿ ಮಾಡಿದ್ದರೂ, ಅಭ್ಯರ್ಥಿ ಸಮರ್ಥ್ ತಂದೆ ಎಸ್​ಎಸ್ ಮಲ್ಲಿಕಾರ್ಜುನ ಪಕ್ಕದ ಮನೆಗೇ ಬಂದು ತಮ್ಮ ಮನೆಗೆ ಭೇಟಿ ನೀಡಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಜಮೀರ್ ತಿಳಿಸಿದ್ದಾರೆ.

ನಸೀರ್​ಗೆ ಬಾಗಲಕೋಟೆ ಜವಾಬ್ದಾರಿ ವಹಿಸಿದ್ದ ಸಿಎಂ

ನಸೀರ್ ಅಹ್ಮದ್​ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಲಕೋಟೆ ಉಪಚುನಾವಣೆಯ ಜವಾಬ್ದಾರಿ ವಹಿಸಿದ್ದರು. ನಸೀರ್ ಅಹ್ಮದ್ ಹತ್ತು ದಿನಗಳ ಕಾಲ ಬಾಗಲಕೋಟೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ದಾವಣಗೆರೆಗೆ ಬಂದು ಹೋಗಲು ಅನುಮತಿ ಕೇಳಿದಾಗ, ಅಲ್ಲಿಯೇ ಉಳಿದು ಕೆಲಸ ಮಾಡಲು ಮುಖ್ಯಮಂತ್ರಿಗಳು ಸೂಚಿಸಿದ್ದರು. ಹೀಗಾಗಿ ಅವರು ದಾವಣಗೆರೆ ಪ್ರಚಾರಕ್ಕೆ ಹೋಗಲು ಸಾಧ್ಯವಿರಲಿಲ್ಲ ಎಂದು ಜಮೀರ್ ಹೇಳಿದ್ದಾರೆ.

ಬೆಂಗಳೂರಿನ ನಸೀರ್ ಅಹ್ಮದ್ ನಿವಾಸದಲ್ಲಿ ಸೋಮವಾರ ರಾತ್ರಿ ಬೆಂಬಲಿಗರು ಸೇರಿ ಚರ್ಚೆ ನಡೆಸಿದ್ದರು. ಅದಾದ ಬೆನ್ನಲ್ಲೇ ಮಂಗಳವಾರ ಬೆಳಗ್ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್​ರನ್ನು ಬಿಡುಗಡೆ ಮಾಡಲಾಗಿದೆ.

ಸಚಿವ ಜಮೀರ್​ಗೆ ಸಿಎಂ ಸಿದ್ದರಾಮಯ್ಯ ತುರ್ತು ಬುಲಾವ್

ಒಂದೆಡೆ ನಸೀರ್​ ತಲೆದಂಡವಾಗುತ್ತಿದ್ದಂತೆಯೇ ಸಿಎಂ ನಿವಾಸ ಕಾವೇರಿಗೆ ಆಪ್ತ ಸಚಿವರು ದೌಡಾಯಿಸಿದ್ದಾರೆ. ಹೆಚ್.ಸಿ.ಮಹದೇವಪ್ಪ, ಭೈರತಿ ಸುರೇಶ್ ಹಾಗೂ ಪ್ರಿಯಾಂಕ್ ಖರ್ಗೆ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಭಾರೀ ಕುತೂಹಲ ಹುಟ್ಟಿಸಿದೆ. ಈ ಮಧ್ಯೆ ಸಿಎಂ ತುರ್ತು ಬುಲಾವ್ ನೀಡಿದ್ದಕ್ಕೆ ಜಮೀರ್​ ಕೂಡ ಸಿಎಂ ನಿವಾಸಕ್ಕೆ ಭೇಟಿ ನೀಡಿ ಕೆಲಹೊತ್ತು ಚರ್ಚಿಸಿದ್ದಾರೆ. ಅಲ್ಲದೆ, ಸಂಜೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವ ಸಾಧ್ಯತೆಯಿದೆ.

ಇನ್ನು ದಾವಣಗೆರೆ ಟಿಕೆಟ್ ವಿಚಾರವಾಗಿ ಮಾತಾಡಿದ ಜಮೀರ್, ಮೊದಲು ಜಬ್ಬಾರ್​ಗೆ ಟಿಕೆಟ್ ಕೇಳಿದ್ದು ನಿಜ. ಆದರೆ ಅವರು ಎಂಎಲ್​ಸಿ ಆದ ಕಾರಣ ಕೈಬಿಟ್ಟು ಇನ್ನುಳಿದ ಏಳರಲ್ಲಿ ಒಬ್ಬರಿಗೆ ಟಿಕೆಟ್ ಕೇಳಿದ್ದೆವು. ಅದೂ ಆಗಿರಲಿಲ್ಲ. ಕೊನೆಗೆ ಬೇಸರ ಹಾಗೂ ನಿರ್ಲಕ್ಷ್ಯ, ಅನಾರೋಗ್ಯದ ಕಾರಣ ಜಬ್ಬಾರ್ ಪ್ರಚಾರಕ್ಕೆ ಹೋಗಿರಲಿಲ್ಲ ಎಂದು ಹೇಳಿದ್ದಾರೆ.

ಸಿಎಂ ಆಪ್ತವಲಯದವರ ತಲೆದಂಡ ಇದೇ ಮೊದಲಲ್ಲ!

ಈ ಹಿಂದೆ ಬೆಂಗಳೂರಿನಲ್ಲಿ ಆರ್​ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ್ದ ಕಾಲ್ತುಳಿತ ನಂತರ ಆಗ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದ ಗೋವಿಂದರಾಜು ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿತ್ತು. ಇದೀಗ ನಸೀರ್ ಅಹ್ಮದ್ ಸರದಿ. ಇದರೊಂದಿಗೆ ಪಕ್ಷಕ್ಕೆ, ಸರ್ಕಾರಕ್ಕೆ ದೊಡ್ಡಮಟ್ಟದ ತಲೆನೋವಾದ ಸಂದರ್ಭದಲ್ಲಿ ಅದು ಮತ್ತೆ ಸಿಎಂ ಬುಡಕ್ಕೇ ಬಂದಂತಾಗಿದೆ.

ಇದನ್ನೂ ಓದಿ: ಜಬ್ಬಾರ್, ನಸೀರ್ ಅಹ್ಮದ್​ ರಾಜೀನಾಮೆಗೆ ಹೈಕಮಾಂಡ್ ಸೂಚಿಸಿದ್ದೇಕೆ? ಕಾರಣ ತಿಳಿಸಿದ ಜಮೀರ್!

ಸದ್ಯ, ಕಾಂಗ್ರೆಸ್​​​ನ ಈ ಬೆಳವಣಿಗೆ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಜಬ್ಬಾರ್​ ರಾಜೀನಾಮೆ ಮತ್ತು ನಸೀರ್ ಅಹ್ಮದ್​ ತಲೆದಂಡ ಕೇವಲ ಆರಂಭ ಇರಬಹುದು. ಆದರೆ, ಇದು ಶೀಘ್ರದಲ್ಲೇ ನಡೆಯಲಿರುವ ಸಚಿವ ಸಂಪುಟದ ದೊಡ್ಡ ಮಟ್ಟದ ಬದಲಾವಣೆಗೆ ಹೈಕಮಾಂಡ್ ಹಾಕಿಕೊಟ್ಟ ಪೀಠಿಕೆಯಂತೆ ಕಾಣಿಸುತ್ತಿದೆ ಎಂಬ ಚರ್ಚೆಯೂ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:23 pm, Tue, 14 April 26

Follow Us