ಸಿಲಿಂಡರಿಂದಲೇ ಗ್ಯಾಸ್‌ ಕಳ್ಳತನ: ಅವರಿಗೆ ದುಡ್ಡಿನ ದಾಹ, ಇವರಿಗೆ ಪ್ರಾಣಕ್ಕೇ ಕುತ್ತು

ಸಿಲಿಂಡರಿಂದಲೇ ಗ್ಯಾಸ್‌ ಕಳ್ಳತನ: ಅವರಿಗೆ ದುಡ್ಡಿನ ದಾಹ, ಇವರಿಗೆ ಪ್ರಾಣಕ್ಕೇ ಕುತ್ತು

ದಾವಣಗೆರೆ: ಈಗ ಕಾಲ ಬದಲಾಗಿದೆ. ಅಡುಗೆ ಮಾಡೋಕೆ ಗ್ಯಾಸ್ ಇಲ್ಲ ಅಂದ್ರೆ ಕೆಲವರು ಮನೆಯಲ್ಲಿ ಅಡುಗೆನೇ ಮಾಡಲ್ಲ. ಅಷ್ಟರಮಟ್ಟಿಗೆ ಗ್ಯಾಸ್‌ಗೆ ಜನ ಅವಲಂಬಿತರಾಗಿದ್ದಾರೆ. ಆದ್ರೆ ಇದನ್ನೇ ಕೆಲವರು ಬಂಡವಾಳ ಮಾಡ್ಕೊಂಡಿದ್ದಾರೆ. ಕೆಲವರ ದುಡ್ಡಿನ ದಾಹ ಅಮಾಯಕರ ಪ್ರಾಣಕ್ಕೆ ಕುತ್ತು ತರುತ್ತಿದೆ.

ಗ್ಯಾಸ್ ಸಿಲಿಂಡರ್ ಎಂಬ ಸಾಧನ ಗೃಹಿಣಿಯರ ಜೀವಾಳ. ಹೊಗೆ ತುಂಬಿದ ಒಲೆಯಲ್ಲಿ ಅಡುಗೆ ಮಾಡುತ್ತಿದ್ದವರಿಗೆ ಬ್ರೇಕ್‌ ಹಾಕಿದ್ದೇ ಈ ಗ್ಯಾಸ್‌. ಈ ಗ್ಯಾಸ್‌ನಿಂದಲೇ ಅದೆಷ್ಟೋ ಜನ ಪಟ್ ಅಂತ ಅಡುಗೆ ಮಾಡ್ತಾರೆ. ಈ ಗ್ಯಾಸ್‌ನಿಂದ ಅದೆಷ್ಟೋ ವಾಯುಮಾಲಿನ್ಯ ಕಮ್ಮಿಯಾಗಿದೆ. ಅದರಲ್ಲೂ ಈಗ ಪ್ರತಿ ಮನೆಗಳಲ್ಲೂ ಗ್ಯಾಸ್ ಇದೆ. ಆದ್ರೆ ಕೆಲ ದಂಧೆಕೋರರು ಇದನ್ನೇ ಬಂಡವಾಳ‌ಮಾಡಿಕೊಂಡಿದ್ದಾರೆ.

ಬೆಣ್ಣೆ ನಗರಿಯಲ್ಲಿ ಹೆಚ್ಚುತ್ತಿದೆ ಗ್ಯಾಸ್ ಕದಿಯುವ ದಂಧೆ..!
ಹೌದು, ದಾವಣಗೆರೆಯಲ್ಲಿ ಇತ್ತೀಚೆಗೆ ಸಿಲಿಂಡರ್ ಸ್ಫೋಟ ಪ್ರಕರಣಗಳು ಹೆಚ್ಚಾಗುತ್ತಿವೆ. ಒಂದೇ ವಾರದಲ್ಲಿ ನಾಲ್ಕೈದು ಪ್ರಕರಣಗಳು ನಡೆದಿದ್ದು, ಮೂರ್ನಾಲ್ಕು ಜನ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗೆ ಗ್ಯಾಸ್ ಸ್ಫೋಟ ಆಗುವುದಕ್ಕೆ ಕಾರಣ ಗ್ಯಾಸ್ ಕಳ್ಳರ ಹಾವಳಿ.

ವಾಷರ್ ಡ್ಯಾಮೇಜ್ ಆಗಿ ಗ್ಯಾಸ್ ಲೀಕ್:
 ಕೆಲ‌ ದಂಧೆಕೋರರು ಗ್ಯಾಸ್ ಸಿಲಿಂಡರ್ ನಲ್ಲಿ ಗ್ಯಾಸ್ ಕದಿಯುವುದರಿಂದ ಸ್ಫೋಟಗಳು ಹೆಚ್ಚುತ್ತಿವೆ. ಒಂದು ಸಿಲಿಂಡರ್ ನಿಂದ ಮತ್ತೊಂದು ಗ್ಯಾಸ್ ಸಿಲಿಂಡರ್‌ಗೆ ಗ್ಯಾಸ್‌ ಡಂಪ್ ಮಾಡಿ ಗ್ಯಾಸ್ ಕಳ್ಳತನ ಮಾಡುತ್ತಿದ್ದಾರೆ. ಹೀಗೆ ಗ್ಯಾಸ್‌ ಡಂಪ್ ಮಾಡುವಾಗ ವಾಷರ್ ಡ್ಯಾಮೇಜ್ ಆಗಿ ಗ್ಯಾಸ್ ಲೀಕ್ ಆಗಿ ಬ್ಲಾಸ್ಟ್ ಆಗುವ ಪ್ರಕರಣಗಳು ಹೆಚ್ಚಾಗುತ್ತಿವೆ.

ಈ ಬಗ್ಗೆ ಇನ್ನು ಸಾರ್ವಜನಿಕರಿಗೆ ಅಗ್ನಿಶಾಮಕ ಸಿಬ್ಬಂದಿ ಹಲವು ಬಾರಿ ಜಾಗೃತಿ ಮೂಡಿಸಿದರೂ ಪ್ರಯೋಜನ ಆಗುತ್ತಿಲ್ಲ. ಜನರು ಗ್ಯಾಸ್ ಸಿಲಿಂಡರ್ ಬಗ್ಗೆ ಜಾಗೃತರಾಗಿರಬೇಕು. ಡೀಲರ್ ಮನೆಗೆ ತಂದು ಗ್ಯಾಸ್ ಸಿಲಿಂಡರ್ ಕೊಡುವಾಗ ಅದರ ತೂಕ, ಸಿಲಿಂಡರ್ ಬಳಕೆಯ ಅವಧಿ ಬಗ್ಗೆ ಗಮನಹರಿಸಬೇಕು ಅಂತಾ ಅಗ್ನಿಶಾಮಕ ಅಧಿಕಾರಿಗಳು ಅರಿವು ಮೂಡಿಸುತ್ತಿದ್ದಾರೆ.

ಒಟ್ಟಾರೆಯಾಗಿ ಅಕ್ರಮವಾಗಿ ಹಣ ಮಾಡಲು ಹೊರಟ ಗ್ಯಾಂಗ್ ನಿಂದ ಅಮಾಯಕರು ಬಲಿಯಾಗುತ್ತಿದ್ದು, ಇಂತಹ ದಂಧೆಗಳ ವಿರುದ್ಧ ಸಂಬಂಧ ಪಟ್ಟವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

Click on your DTH Provider to Add TV9 Kannada