ಆಡಿಯೋ ವೈರಲ್ ಪ್ರಕರಣ: ತನಿಖೆ ಆರಂಭಿಸಿದ ಲೋಕಾಯುಕ್ತ, ಸಚಿವ ಭೈರತಿ ಬಸವರಾಜ್​ಗೆ ನೋಟಿಸ್ ಭೀತಿ

ದಾವಣಗೆರೆ ಮಹಾನಗರ ಪಾಲಿಕೆ ಮೇಲೆ ಲೋಕಾಯುಕ್ತ ದಾಳಿ ನಡೆದ ನಂತರ ಸಚಿವ ಭೈರತಿ ಬಸವರಾಜ ಅವರಿಗೆ ಭೀತಿ ಶುರುವಾಗಿದೆ. ಪಾಲಿಕೆಯ ಆಯುಕ್ತ ಹಾಗೂ ಗುತ್ತಿಗೆದಾರ ಅವರ ಆಡಿಯೋ ವೈರಲ್ ಬಗ್ಗೆ ತನಿಖೆ ಆರಂಭಿಸಿದ ನಂತರ ಸಚಿವರಿಗೆ ನೋಟಿಸ್ ಭೀತಿ ಎದುರಾಗಿದೆ.

ಆಡಿಯೋ ವೈರಲ್ ಪ್ರಕರಣ: ತನಿಖೆ ಆರಂಭಿಸಿದ ಲೋಕಾಯುಕ್ತ, ಸಚಿವ ಭೈರತಿ ಬಸವರಾಜ್​ಗೆ ನೋಟಿಸ್ ಭೀತಿ
ಸಚಿವ ಭೈರತಿ ಬಸವರಾಜ್​ಗೆ ಲೋಕಾಯುಕ್ತದಿಂದ ನೋಟಿಸ್ ಜಾರಿಯಾಗುವ ಭೀತಿ
Follow us
TV9 Web
| Updated By: Rakesh Nayak Manchi

Updated on:Nov 14, 2022 | 11:50 AM

ದಾವಣಗೆರೆ: ಮಹಾನಗರ ಪಾಲಿಕೆಯಲ್ಲಿ ಇದ್ದ ಭ್ರಷ್ಟಾಚಾರಿಗಳನ್ನು ಲೋಕಾಯುಕ್ತ ಪೊಲೀಸರು (Lokayukta Police) ದಾಳಿ ನಡೆಸಿ ಬಂಧಿಸಿದ್ದರು. ಇದರ ಬಳಿಕ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಹಾಗೂ ಗುತ್ತಿಗೆದಾರ ಕೃಷ್ಣಪ್ಪ ಅವರ ನಡುವಿನ ದೂರವಾಣಿ ಸಂಭಾಷಣೆ ವೈರಲ್ ಆಗಿತ್ತು. ಇದು ನೇರವಾಗಿ ಸಚಿವ ಭೈರತಿ ಬಸವರಾಜ್ (Byrathi Basavaraj) ಕಡೆಗೆ ಬೊಟ್ಟು ಮಾಡಿ ತೊರಿಸುತ್ತಿದೆ. ಹೀಗಾಗಿ ಸಚಿವರಿಗೂ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡುವ ಭೀತಿ ಎದುರಾಗಿದೆ. ನ.6ರಂದು ಭಾನುವಾರ ರಜಾ ದಿನದಂದು ಗುತ್ತಿಗೆದಾರ ಕೃಷ್ಣಪ್ಪ ಎಂಬವರಿಂದ ಪಾಲಿಕೆಯ ಕಚೇರಿ ವ್ಯವಸ್ಥಾಪಕ ವೆಂಕಟೇಶ್ ಎಂಬಾತ ಬರೋಬರಿ ಮೂರು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪುರೆ, ಇನ್ಸಪೆಕ್ಟರ್​ಗಳಾದ ಆಂಜನೇಯ ಮತ್ತು ತಂಡ ದಾಳಿ ಮಾಡಿ ಹಣದ ಸಹಿತ ವೆಂಕಟೇಶ್​ನನ್ನ ಬಂಧಿಸಿದ್ದರು.

ಇದಾದ ಮರುದಿನ ಅಂದರೆ ನವೆಂಬರ್ 7ರಂದು ಬೆಳಿಗ್ಗೆ ಪಾಲಿಕೆಯ ಆಯುಕ್ತ ವಿಶ್ವನಾಥ ಮುದಜ್ಜಿ ಹಾಗೂ ಗುತ್ತಿಗೆದಾರ ಕೃಷ್ಣಪ್ಪ ನಡುವಿನ ಕಾಲ್ ರೆಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಬಸವರಾಜ್, ದಾವಣಗೆರೆ ಬಂದರೆ ಸಾಕು ಹತ್ತರಿಂದ 15 ಲಕ್ಷ ರೂಪಾಯಿ ಕೊಡಬೇಕು ಎಂದು ಪಾಲಿಕೆ ಆಯುಕ್ತರು ಹೇಳುವುದನ್ನು ಕೇಳಬಹುದು. ಇನ್ನೊಂದೆಡೆ, ಗುತ್ತಿಗೆದಾರನಿಂದ ಮೂರು ಲಕ್ಷ ರೂಪಾಯಿ ಸ್ವೀಕರಿಸಿದ ವೆಂಕಟೇಶ್ ಅವರು ಆ ಲಂಚದಲ್ಲಿ ಪಾಲಿಕೆಯ ವಿಶ್ವನಾಥ ಮುದಜ್ಜಿಗೆ ಪಾಲಿದೆ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

ಬೀದಿ ಬದಿ ವ್ಯಾಪಾರಿಗಳಿಂದ 49 ಲಕ್ಷ ರೂಪಾಯಿ ಟೆಂಡರ್ ಮುಂದೂವರೆಸಲು ಗುತ್ತಿಗೆದಾರನಿಗೆ ಎಳು ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಡಲಾಗಿತ್ತು. 7 ಲಕ್ಷ ಡೀಲ್​ನಲ್ಲಿ ಆರಂಭದಲ್ಲಿ 2 ಲಕ್ಷ ರೂಪಾಯಿಯನ್ನು ಅಡ್ವಾನ್ಸ್ ಆಗಿ ಪಡೆಯಲಾಗಿತ್ತು. ಉಳಿದ ಹಣದಲ್ಲಿ ಮೂರು ಲಕ್ಷ ಸ್ವೀಕರಿಸುವಾಗ ವೆಂಕಟೇಶ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ. ಲಂಚ ಸ್ವೀಕಾರದಲ್ಲಿ ಪಾಲಿಕೆಯ ವ್ಯವಸ್ಥಾಪಕ ವೆಂಕಟೇಶ್ ಹಾಗೂ ಪಾಲಿಕೆಯ ಆಯುಕ್ತ ವಿಶ್ವನಾಥ ಮುದಜ್ಜಿ ಅವರು ನೇರ ಆರೋಪ ಎದುರಿಸುತ್ತಿದ್ದಾರೆ. ಇದರ ಬೆನ್ನಲ್ಲೆ ವೈರಲ್ ಆದ ಆಯುಕ್ತರ ಆಡಿಯೋ ವೈರಲ್​ ಬಗ್ಗೆ ತನಿಖೆ ಆರಂಭಗೊಂಡಿದೆ. ಲೋಕಾಯುಕ್ತರು ಸಚಿವ ಭೈರತಿ ಬಸವರಾಜ್​ಗೂ ನೋಟಿಸ್ ಕೊಟ್ಟರು ಅಚ್ಚರಿ ಪಡಬೇಕಿಲ್ಲ.

ಹೀಗೆ ಪಾಲಿಕೆಯಲ್ಲಿ ಸದ್ದು ಮಾಡಿದ ಆಡಿಯೋ ರಾಜ್ಯದ ಗಮನ ಸೆಳೆದಿದೆ. ಬಿಜೆಪಿಯ ಕೆಲವರು ನಮ್ಮ ಸಚಿವರು ಆರ್ಥಿಕವಾಗಿ ಸ್ಥಿತಿವಂತರು ಇಂತಹ ಚಿಲ್ಲರೆ ಕಾಸ್​ಗೆ ಕೈಯೊಡ್ಡಲ್ಲ ಎನ್ನುತ್ತಿದ್ದಾರೆ. ಆದರೆ ಇದಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ, ಸಚಿವ ಭೈರತಿ ಬಸವರಾಜ್ ಭ್ರಷ್ಟಾಚಾರದ ಮೂಲ ಬೇರುಗಳು ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಅದೇನೇ ಇರಲಿ ಲೋಕಾಯುಕ್ತ ನಡೆಯ ಮೇಲೆ ಎಲ್ಲವೂ ನಿರ್ಧಾರವಾಗಲಿದೆ. ಸಚಿವ ಭೈರತಿ ಬಸವರಾಜ್​ಗೂ ಪ್ರಕರಣದಲ್ಲಿ ನಡುಕ ಉಂಟಾಗಿದೆ ಎಂದರೆ ತಪ್ಪಾಗಲಾರದು.

ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:46 am, Mon, 14 November 22