
ದಾವಣಗೆರೆ, ಏಪ್ರಿಲ್ 01: ಉಪ ಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪಕ್ಷಗಳ ಪ್ರಚಾರವೂ ಭರದಿಂದ ಸಾಗಿದೆ. ಆದರೆ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಸಮುದಾಯದ ಅಸಮಾಧಾನವೇ ಈಗ ಬಿಸಿ ತುಪ್ಪವಾಗಿ ಮಾರ್ಪಟ್ಟಿದೆ. ಸಮುದಾಯಕ್ಕೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಅಸಮಾಧಾನಗೊಂಡಿದ್ದ ಕೆಲ ನಾಯಕರನ್ನು ಸ್ವತಃ ಸಿಎಂ ಮತ್ತು ಡಿಸಿಎಂ ಅವರೇ ಖುದ್ದು ಅಖಾಡಕ್ಕಿಳಿದು ಸಮಾಧಾನಪಡಿಸಿದ್ದರೂ, ಕೆಲ ಮುಖಂಡರ ಆಕ್ರೋಶದ ಕಿಚ್ಚು ಮಾತ್ರ ಇನ್ನೂ ಆರಿಲ್ಲ. ಹೀಗಾಗಿ ಮುಸ್ಲಿಂ ಮುಖಂಡರ ಮನೆಗಳಿಗೆ ಕಾಂಗ್ರೆಸ್ ನಾಯಕರ ಮಾರ್ಚ್ ಫಾಸ್ಟ್ ನಡೆಯುತ್ತಿದೆ.
ಹೌದು, ಉಪ ಚುನಾವಣೆಯ ಪ್ರಚಾರದ ಭರಾಟೆಯ ನಡುವೆಯೂ ಅಲ್ಪಸಂಖ್ಯಾತರ ಮುಖಂಡರನ್ನು ಸಮಾಧಾನ ಪಡಿಸುವ ಕೆಲಸಕ್ಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ದಾವಣಗೆರೆಗೆ ಪ್ರಚಾರಕ್ಕೆ ಬಂದ ನಾಯಕರೆಲ್ಲ ಅಲ್ಪಸಂಖ್ಯಾತರ ಮನೆಗೆ ತೆರಳಿ ಮಾತುಕತೆ ನಡೆಸುತ್ತಿದ್ದಾರೆ. ಒಂದೊಮ್ಮೆ ಮುಸ್ಲಿಂ ಸಮುದಾಯ ನಮಗೆ ಕೈಕೊಟ್ಟರೆ ಎಂಬ ಆತಂಕ ನಾಯಕರಿಗೆ ಶುರುವಾಗಿದ್ದು, ಸಚಿವ ಜಮೀರ್ ಕೂಡ ಇತ್ತ ಮುಖ ಮಾಡದಿರೋದು ಟೆನ್ಷನ್ ಹೆಚ್ಚಿಸಿದೆ. ಕ್ಷೇತ್ರಕ್ಕೆ ಜಮೀರ್ ಪ್ರಚಾರಕ್ಕೆ ಬರಬೇಕೆಂಬ ಬಗ್ಗೆ ಹೆಚ್ಚಿನ ಬೇಡಿಕೆ ಇದ್ದರೂ, ಸಚಿವರು ಮಾತ್ರ ಕೇರಳಕ್ಕೆ ಹೋಗಿ ಕುಳಿತಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೊಡಿಸುವ ಬಗ್ಗೆ ಜಮೀರ್ ಶಪಥ ಮಾಡಿದ್ದರು. ಆದರೆ ಕೊನೇ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದ ಕಾರಣ ಅವರು ಬೇಸರಗೊಂಡಿದ್ದಾರಾ ಎಂಬ ಅನುಮಾನವೂ ಮೂಡಿದೆ. ಇದೇ ಕಾರಣಕ್ಕೆ ಅವರು ದಾವಣಗೆರೆಯತ್ತ ಮುಖ ಮಾಡುತ್ತಿಲ್ಲ ಎಂಬ ಮಾತುಗಳೂ ಕೇಳಿಬಂದಿವೆ.
ಇದನ್ನೂ ಓದಿ: ದಾವಣಗರೆ ದಕ್ಷಿಣ ಬೈ ಎಲೆಕ್ಷನ್ನಿಂದ ಜಮೀರ್ ದೂರವಾಗಿದ್ಯಾಕೆ? ಅಸಲಿಗೆ ಆಗಿದ್ದೇನು?
ಕಾಂಗ್ರೆಸ್ಗೆ ಪ್ರತಿಷ್ಠೆಯ ಕಣವಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಮತಬೇಟೆ ನಡೆಸಲಿದ್ದಾರೆ. ಅಹಿಂದಾ ಮತಗಳೇ ಅಧಿಕವಾಗಿರುವ ಗ್ರಾಮೀಣ ಪ್ರದೇಶಗಳ ಮೇಲೆ ಸಿಎಂ ಕಣ್ಣಿಟ್ಟಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರದ ನಾಗನೂರು, ಶಿರಮ ಗೊಂಡನಹಳ್ಳಿ, ಆರನೇ ಮೈಲು ಕಲ್ಲು, ಹೊಸ ಬೆಳವನುರು, ತುರ್ಚಘಟ್ಟ, ಹೊಸ ನಾಯಕನಹಳ್ಳಿ ಗ್ರಾಮಗಳಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಮಧ್ಯಾಹ್ನ ಹದಡಿ ಗ್ರಾಮದಲ್ಲಿನ ಸಾರ್ವಜನಿಕ ಸಭೆಯಲ್ಲಿಯೂ ಅವರು ಭಾಗಿಯಾಗಿ, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರ ಪರ ಮತಯಾಚನೆ ಮಾಡಲಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:05 am, Wed, 1 April 26