ದಾವಣಗೆರೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ನಾಯಕರ ಬಹಿರಂಗ ಕಿತ್ತಾಟ

ದಾವಣೆಗರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್​ಗಾಗಿ ನಡೆದಿದ್ದ ಬಣ ರಾಜಕೀಯ ಇದೀಗ ಲೋಕಸಭಾ ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾದರೂ ಮುಂದುವರೆದಿದೆ. ದಾವಣಗೆರೆ ಬಿಜೆಪಿಯಲ್ಲಿ ಭಿನಮತ ಸ್ಫೋಟಗೊಂಡಿದ್ದು, ನಾಯಕರು ಒಬ್ಬರಿಗೊಬ್ಬರು ಬಹಿರಂಗವಾಗಿಯೇ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ.

ದಾವಣಗೆರೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ನಾಯಕರ ಬಹಿರಂಗ ಕಿತ್ತಾಟ
ಶಾಸಕ ಹರೀಶ್, ರೇಣುಕಾಚಾರ್ಯ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ರಮೇಶ್ ಬಿ. ಜವಳಗೇರಾ

Updated on: Jun 17, 2024 | 6:26 PM

ದಾವಣಗೆರೆ, (ಜೂನ್ 17): ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕೀಯ ಬಗ್ಗೆ ಸ್ವಪಕ್ಷದ ನಾಯಕರು ಹರಿಹರ ಬಿಜೆಪಿ ಶಾಸಕ ಹರೀಶ್ ಗಂಭೀರ ಆರೋಪ ಮಾಡಿದ್ದಾರೆ. ಬಿಎಸ್​ ಯಡಿಯೂರಪ್ಪ, ವಿಜಯೇಂದ್ರ, ರೇಣುಕಾಚಾರ್ಯ ಸೇರಿದಂತೆ ಸ್ವಪಕ್ಷದ ನಾಯಕರ ವಿರುದ್ಧ ಆರೋಪಿಸಿದ್ದಾರೆ. ಇದೀಗ ಇದಕ್ಕೆ ಯಡಿಯೂರಪ್ಪ ಆಪ್ತರು ಹರೀಶ್​ಗೆ ತಿರುಗೇಟು ನೀಡಿದ್ದಾರೆ. ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಬಗ್ಗೆ ಮಾತಾಡಿದ್ರೆ ಸರಿ ಇರಲ್ಲ ಎಂದು ಖಡಕ್​ ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಲೋಕಸಭೆ ಚುನಾವಣೆಯಲ್ಲಿ ನಾವು ಪಕ್ಷಕ್ಕಾಗಿ ಕೆಲಸ ಮಾಡಿದ್ದೇವೆ. ಆದರೆ ಬಿ.ಪಿ.ಹರೀಶ್ ಕ್ಷೇತ್ರದಲ್ಲೇ ‌ಕಾಂಗ್ರೆಸ್​ಗೆ ಹೆಚ್ಚು ಮತ ಬಂದಿದೆ. ಜೊತೆಗೆ ಇವರಿಗೆ ಸಾಥ್ ನೀಡಲು ಹೆಚ್​.ಎಸ್​.ಶಿವಶಂಕರ್ ಇದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಮತ ಪಡೆದಿದ್ರು. ಆದರೆ ಲೋಕಸಭೆ ಚುನಾವಣೆಯಲ್ಲಿ ಕೇವಲ 70 ಸಾವಿರ ಮತ ಬಂದಿದೆ. ತನ್ನ ಕ್ಷೇತ್ರದಲ್ಲೇ ಶಾಸಕ ಬಿ.ಪಿ.ಹರೀಶ್ ಬಿಜೆಪಿಗೆ‌ ಲೀಡ್ ಕೊಟ್ಟಿಲ್ಲ. ಹರಿಹರ ಶಾಸಕ ಹರೀಶ್ ನಮ್ಮ‌ ವಿರುದ್ಧ ಆರೋಪಿಸಿದ್ರೆ ಸುಮ್ಮನಿರಲ್ಲ. ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಬಗ್ಗೆ ಮಾತಾಡಿದ್ರೆ ಸರಿ ಇರಲ್ಲ ಎಂದು ಶಾಸಕ ಹರೀಶ್​ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಜೂನ್ 28ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರಗೆ ರವೀಂದ್ರನಾಥ ಸಲಹೆ

4 ಬಾರಿ ಗೆದ್ದು ಒಂದು ಬಾರಿ ಸೋತಿದ್ದಕ್ಕೆ ಆತಂಕಪಡುವ ಅಗತ್ಯವಿಲ್ಲ. ಒಂದಿಷ್ಟು ದಿನ ಯಾವುದಾದ್ರು ಆಲದ‌ಮರ‌ ಕೆಳಗೆ ಶಾಂತವಾಗಿ‌ ಕುಳಿತುಕೊಳ್ಳಿ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿಗೆ ಸೋಲಾಗಿದೆ. ನಾನು ಕೂಡಾ ಐದು ಸಲ ಚುನಾವಣೆಯಲ್ಲಿ ಗೆದ್ದು, 5 ಸಲ ಸೋತಿದ್ದೇನೆ. ಹಾಗಂತ ಸಿಕ್ಕ ಸಿಕ್ಕವರ ಮೇಲೆ ಆರೋಪ ಮಾಡುತ್ತಾ ಸುತ್ತಾಡುತ್ತಿಲ್ಲ. ಈ ಹಿಂದೆ ಪ್ರಚಾರಕ್ಕೆ ಹೋದಾಗ ಕಲ್ಲಿನಿಂದ ಹೊಡೆಯಲು ಬರುತ್ತಿದ್ದರು. ಆದರೆ ಈಗ ಆ ವಾತಾವಣ ಇಲ್ಲ. ಮತ್ತೆ ಕಾರ್ಯಕರ್ತರ ಬಳಿ ಹೋಗಿ ನಿಮ್ಮ ಮಕ್ಕಳನ್ನಾದ್ರು ಜನ ಗೆಲ್ಲಿಸ್ತಾರೆ. ಹೊಸದುರ್ಗದಲ್ಲಿ ಎಸ್.ನಿಜಲಿಂಗಪ್ಪರನ್ನ ಸೊಸೈಟಿ ಅಧ್ಯಕ್ಷ ಸೋಲಿಸಿದ್ದ. ಹರಿಹರ ಹಿರಿಯ ರಾಜಕಾರಣಿ ಸಿದ್ದವೀರಪ್ಪರನ್ನ ಯುವಕ ಸೋಲಿಸಿದ್ದ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ನಮ್ಮ ಮನೆಗೆ ‘ಕೈ’ ಅಭ್ಯರ್ಥಿ ಡಾ.‌ಪ್ರಭಾ ‌ಮಲ್ಲಿಕಾರ್ಜುನ ಬಂದಿದ್ದು ನಿಜ‌. ಹಾಗಂತ ಕಾಂಗ್ರೆಸ್ ಜತೆ ಒಳಒಪ್ಪಂದ ಮಾಡಿಕೊಂಡಿದ್ದೇವೆ ಅಂದ್ರೆ ಏನರ್ಥ ಎಂದು ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಅವರು ಮಾಜಿ ಸಂಸದ ಜಿಎಂ ಸಿದ್ದೇಶ್ವರಗೆ ಪ್ರಶ್ನಿಸಿದರು. ಅಲ್ಲದೇ ತಮ್ಮ ಮೇಲಿನ ಒಳ ಒಪ್ಪಂದ ಆರೋಪವನ್ನು ಅಲ್ಲಗಳೆದರು.

ಹರೀಶ್ ವಿರುದ್ಧ ಮಾಡಾಳ್ ಪುತ್ರ ಕಿಡಿ

ಇನ್ನು ಇದೇ ವೇಳೆ ಬಿಪಿ ಹರೀಶ್ ವಿರುದ್ಧ ಚನ್ನಗಿರಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷ ಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ ವಾಗ್ದಾಳಿ ನಡೆಸಿದ್ದಾರೆ. ಹರಿಹರ ಬಿಜೆಪಿ ಶಾಸಕ ಬಿಪಿ ‌ ಹರೀಶ್ ಒಂದು ಕ್ರಿಮಿ. ಮಾನಸಿಕ ಸ್ಥಿಮಿತ ಕಳೆದುಕೊಂಡು‌ ನಮ್ಮ ಹಾಗೂ ತಂದೆ ವಿರುದ್ಧ ಮಾತಾಡುತ್ತಿದ್ದಾರೆ. ಕೆಲ ದಿ‌ನಗಳ ಹಿಂದೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಮಾಡಿ ನಂತರ ದಾವಣಗೆರೆ ನಡೆದ ಕಾರ್ಯಕ್ರಮದಲ್ಲಿ ‌ನಮ್ಮ ತಂದೆ ಮಾಡಾಳ್ ವಿರೂಪಾಕ್ಷಪ್ಪ ಭ್ರಷ್ಟಾಚಾರ ಮಾಡಿದ್ದಾರೆಮ ಅದರಿಂದ ಕಳೆದ ಚುನಾವಣೆಯಲ್ಲಿ ಬಿಜೆಪಿ ಕಡಿಮೆ ಸ್ಥಾನ ಗೆದ್ದಿದೆ ಎಂದು ಹೇಳಿದ್ದರು. ನಮ್ಮ ತಂದೆ ವಿರುದ್ದ ಇದ್ದ ಕೇಸ್ ಸಹ‌ ಕೋರ್ಟನಲ್ಲಿ ರದ್ದಾಗಿದೆ. ಇದೇ ವಿಚಾರ ಹೇಳಿದೆ. ಇಲ್ಲವಾದ್ರೆ ಜನರೇ ನಮ್ಮ ಹುಚ್ಚು ಬಿಡಿಸುತ್ತಾರೆ ಎಂದಿದ್ದು‌ ನಿಜ. ನಮ್ಮ ತಂದೆಯ ವ್ಯಕ್ತಿತ್ವ ಏನು.‌‌? ನಮ್ಮ ಕುಟುಂಬದ ಬಗ್ಗೆ ಮಾತಾಡಲು ಹರೀಶ್ ಯಾರು? ಹರಿಹರದ ಜನ ಅವರಿಗೆ ಮತ ಹಾಕಿ ಗೆಲ್ಲಿಸಿದ್ದಾರೆ. ಆ ಕ್ಷೇತ್ರದ ಜನರ ಸೇವೆ ಮಾಡಲಿ. ಅದು ಬಿಟ್ಟು ನಮ್ಮ ಕುಟುಂಬದ ಬಗ್ಗೆ ಟೀಕೆ ಮಾಡಿದ್ರೆ ಚನ್ನಾಗಿರಲ್ಲ ಎಂದು ಸ್ವಪಕ್ಷದ ಶಾಸಕ ಬಿಪಿ ಹರೀಶ್​ಗೆ ವಾರ್ನ್ ಮಾಡಿದ್ದಾರೆ.

ಬಿಜೆಪಿ ಶಾಸಕ ಬಿಪಿ ಹರೀಶ್ ಆರೋಪಿಸಿದ್ದೇನು?

ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಬಿಎಸ್ ಯಡಿಯೂರಪ್ಪ, ಕಾಂಗ್ರೆಸ್​ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬ ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯ ಮಾಡುತ್ತಿದೆ ಎಂದು ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿಪಿ ಹರೀಶ್ ಗಂಭೀರ ಆರೋಪ ಮಾಡಿದ್ದರು.

ಲೋಕಸಭಾ ಚುನಾವಣೆಗೆ ಮುಂಚಿತವಾಗಿ ದಾವಣಗೆರೆಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ದಾವಣಗೆರೆ ಕ್ಷೇತ್ರವೊಂದರಲ್ಲಿ ಸೋತರೆ ಏನೂ ಆಗುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. ಶಾಸಕ ಶಾಮನೂರು ಶಿವಶಂಕರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿವೈ ರಾಘವೇಂದ್ರ ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕೆ ಎಂಬ ಹೇಳಿಕೆ ನೀಡಿದ್ದರು. ಇದನ್ನು ನಾವು ಹೊಂದಾಣಿಕೆ ರಾಜಕೀಯ ಅನ್ನದೇ ಏನನ್ನಬೇಕು. ಅಂದಿನಿಂದಲೇ ರಾಜ್ಯದಲ್ಲಿ ವೀರಶೈವ ನಾಯಕರ ಹೊಂದಾಣಿಕೆ ರಾಜಕೀಯ ಪ್ರಾರಂಭವಾಗಿದೆ ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.