ಶಿಕ್ಷಕರನ್ನು ನೇಮಿಸಿರುವುದು ಪಾಠ ಮಾಡಲು, ಸಂಸಾರ ನೋಡಲಿಕ್ಕಲ್ಲ: ವರ್ಗಾವಣೆಯ ಕುರಿತು ಸಚಿವ ಬಿಸಿ ನಾಗೇಶ್ ಹೇಳಿಕೆ

BC Nagesh: ದಾವಣಗೆರೆಯಲ್ಲಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಶಿಕ್ಷಕರನ್ನು ಪಾಠ ಹೇಳಲು ನೇಮಿಸಿರುವುದು, ಸಂಸಾರ ನೋಡಲು ಅಲ್ಲ ಎಂದು ಹೇಳಿದ್ದಾರೆ. ಶಿಕ್ಷಕರ ವರ್ಗಾವಣೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಅವರು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಇದೀಗ ವಿವಾದವನ್ನು ಸೃಷ್ಟಿಸಿದೆ.

ಶಿಕ್ಷಕರನ್ನು ನೇಮಿಸಿರುವುದು ಪಾಠ ಮಾಡಲು, ಸಂಸಾರ ನೋಡಲಿಕ್ಕಲ್ಲ: ವರ್ಗಾವಣೆಯ ಕುರಿತು ಸಚಿವ ಬಿಸಿ ನಾಗೇಶ್ ಹೇಳಿಕೆ
ಸಚಿವ ಬಿ.ಸಿ.ನಾಗೇಶ್
Follow us
TV9 Web
| Updated By: shivaprasad.hs

Updated on: Oct 28, 2021 | 6:12 PM

ದಾವಣಗೆರೆ: ಶಿಕ್ಷಕರನ್ನು ನೇಮಕಾತಿ ಮಾಡಿದ್ದು ಮಕ್ಕಳಿಗೆ ಪಾಠ ಮಾಡಲು, ಸಂಸಾರ ನೋಡಿಕೊಳ್ಳಲು ಅಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಬಿ.ಸಿ. ನಾಗೇಶ್​ ಹೇಳಿಕೆ ನೀಡಿದ್ದಾರೆ. ದಾವಣಗೆರೆ ಜಿಲ್ಲೆ ಬೆಳಲಗೆರೆ ಗ್ರಾಮದಲ್ಲಿ ಅವರು ಮಾತನಾಡಿದರು. ಕಳೆದ 3 ವರ್ಷದಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಿಂತಿತ್ತು. 2 ದಿನದಿಂದ ವರ್ಗಾವಣೆ ಪ್ರಕ್ರಿಯೆ ಮತ್ತೆ ಶುರುವಾಗಿದೆ. ರಾಜ್ಯದ ಎಲ್ಲಾ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಕೆಲ ವೈಯಕ್ತಿಕ ಸಮಸ್ಯೆಯನ್ನು ಸಾಮೂಹಿಕ ಸಮಸ್ಯೆ ಎಂದು ಬಿಂಬಿಸಲಾಗದು. ಶಿಕ್ಷಕ ವೃತ್ತಿಗೆ ಸೇರುವಾಗ ಜಿಲ್ಲಾವಾರು ಆಯ್ಕೆ ಗೊತ್ತಿರಲಿಲ್ಲವೆ? ನಾವು ಶಿಕ್ಷಕರನ್ನು ನೇಮಕ ಮಾಡಿರುವುದು ಪಾಠ ಮಾಡಲಿಕ್ಕೆ. ಸಂಸಾರ ನೋಡಿಕೊಳ್ಳುವುದಕ್ಕಲ್ಲ ಎಂದು ಬಿ.ಸಿ.ನಾಗೇಶ್ ಖಾರವಾಗಿ ನುಡಿದಿದ್ದಾರೆ. ಶಿಕ್ಷಕರ ಸಮಸ್ಯೆಗಿಂತ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಬೇಕು. ನಂತರ ಜಿಲ್ಲಾವಾರು ಶಿಕ್ಷಕರ ಸಮಸ್ಯೆ ಬಗೆಹರಿಸುತ್ತೇವೆ. ಸದ್ಯದಲ್ಲೇ 5 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದು ನಾಗೇಶ್ ಹೇಳಿದ್ದಾರೆ. ಶಿಕ್ಷಣ ಸಚಿವರ ವರ್ಗಾವಣೆಯ ಕುರಿತ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.

ಶಿಕ್ಷಣ ಸಚಿವರು ಹೊಸ ಶಿಕ್ಷಣ ನೀತಿಯ ಬಗ್ಗೆಯೂ ಮಾತನಾಡಿದ್ದಾರೆ. ಹೊಸ ಶಿಕ್ಷಣ ನೀತಿಯ ಬಗ್ಗೆ ಇಲ್ಲ ಸಲ್ಲದ ಆರೋಪ ಬೇಡ. ಶಿಕ್ಷಣ ನೀತಿ ಬಗ್ಗೆ ಓದಿಕೊಂಡು ಬನ್ನಿ ಚರ್ಚೆ ಮಾಡೋಣ. ಹಿಂದಿ ಭಾಷೆಗೂ ಎನ್​ಇಪಿಗೂ ಯಾವುದೇ ಸಂಬಂಧ ಇಲ್ಲ. ಒಂದು ವರ್ಗವನ್ನ ದೂರ ಇಡಲಾಗುತ್ತದೆ ಅನ್ನೋದು ಸುಳ್ಳು. ಮಾತೃ ಭಾಷೆಗೆ ಆದ್ಯತೆ ಹೊಸ ಶಿಕ್ಷಣ ನೀತಿಯಲ್ಲಿದೆ ಎಂದು ನಾಗೇಶ್ ಸ್ಪಷ್ಟಪಡಿಸಿದ್ದಾರೆ. ಖ್ಯಾತ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದಲ್ಲಿ ಹೊಸ ಶಿಕ್ಷಣ ನೀತಿ ಮಾಡಲಾಗಿದೆ. ಅವರು ರಾಜೀವ್ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರಿಗೂ ಸಲಹೆ ಗಾರರಾಗಿದ್ದರು. ಅನಗತ್ಯವಾಗಿ ಆರೋಪ ಸರಿಯಲ್ಲ ಎಂದು ನಾಗೇಶ್ ಹೇಳಿದ್ದಾರೆ.

ಈಗ ರಾಜ್ಯದ ಕೆಲ ಶಾಲೆಗಳಲ್ಲಿ ಮಕ್ಕಳಿಗೆ ಕೋವಿಡ್ ಸೋಂಕು ತಗುಲಿದೆ. ಸೂಕ್ತ ಪರೀಕ್ಷೆ ಹಾಗೂ ಮುಂಜಾಗ್ರತಾ ಕ್ರಮಕ್ಕೆ ಸೂಚಿಸಲಾಗಿದೆ. ದೇಶದಲ್ಲಿ ಕೋವಿಡ್ ಲಸಿಕೆ ದಾಖಲೆ ಪ್ರಮಾಣದಲ್ಲಿ ಆಗಿದೆ. ಇದೇ ಕಾರಣಕ್ಕೆ ಕೋವಿಡ್ ಸಂಕಷ್ಟ ಬರುವುದು ಕಡಿಮೆ. ಮುಂದೆ ಮಕ್ಕಳಲ್ಲಿ ಕೋವಿಡ್ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡರೇ ಕ್ರಮ ಕೈಗೊಳ್ಳಲಾಗುವುದು. ಅದಕ್ಕೂ ಮೊದಲೇ ಯಾವುದೇ ನಿರ್ಧಾರ ಇಲ್ಲ ಎಂದು ಸಚಿವರು ನುಡಿದಿದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಳಲಗೆರೆಯಲ್ಲಿ ಬೆಲ್ ಹೊಡೆಯುವ ಮೂಲಕ ನೂತನ ಶಾಲಾ ಕಟ್ಟಡವನ್ನು ಬಿಸಿ ನಾಗೇಶ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಪ್ರೋ, ಲಿಂಗಣ್ಣ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ:

ನವೆಂಬರ್ 1ರಿಂದ ಅನಕ್ಷರಸ್ಥ ಖೈದಿಗಳಿಗೆ ಶಿಕ್ಷಣ; ಜೈಲಿನೊಳಗಿನ ಅಕ್ಷರಸ್ಥರಿಂದಲೇ ಪಾಠ: ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಳಗಾವಿ: ನಿಯಂತ್ರಣ ತಪ್ಪಿ ಪಾದಚಾರಿಗೆ ಡಿಕ್ಕಿಯಾದ ಬೈಕ್; ಆಕ್ರೋಶಗೊಂಡು ಕಾಲಿನಿಂದ ಒದ್ದು ಬೈಕ್ ಸವಾರನ ಹತ್ಯೆ