
ದಾವಣಗೆರೆ, ಸೆಪ್ಟೆಂಬರ್ 8: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗಾಯಗೊಂಡು ನರಳುತ್ತಿದ್ದ ಚಿರತೆಯನ್ನು ರಕ್ಷಿಸಲು ಬಂದ ಅರಣ್ಯ ಇಲಾಖೆ ಸಿಬ್ಬಂದಿಯ ಮೇಲೆಯೇ ಅದು ಏಕಾಏಕಿ ದಾಳಿ ನಡೆಸಿದ ಘಟನೆ ದಾವಣಗೆರೆ ತಾಲೂಕಿನ ಆನಗೋಡು ಬಳಿ ನಡೆದಿದೆ. ಚಿರತೆ ರಕ್ಷಣಾ ಕಾರ್ಯಾಚರಣೆ ವೇಳೆ ನಡೆದ ಈ ಅನಿರೀಕ್ಷಿತ ದಾಳಿಯಿಂದ ಸ್ಥಳದಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಕೆಲಕಾಲ ಆತಂಕಕ್ಕೊಳಗಾದರು. ದಾವಣಗೆರೆ ತಾಲೂಕಿನ ಆನಗೋಡು ಬಳಿಯ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದ ಚರಂಡಿಯ ಹುಲ್ಲಿನಲ್ಲಿ ಚಿರತೆ ಗಾಯಗೊಂಡು ನರಳುತ್ತಿತ್ತು. ಮಧ್ಯರಾತ್ರಿ ಯಾವುದೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆಗೆ ಗಂಭೀರ ಗಾಯಗಳಾಗಿದ್ದವು ಎಂದು ಶಂಕಿಸಲಾಗಿದೆ. ಸ್ಥಳೀಯರು ಚಿರತೆಯನ್ನು ಗಮನಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಸುಮಾರು ರಾತ್ರಿ 12 ಗಂಟೆಯಿಂದ ಚಿರತೆ ಗಾಯಗೊಂಡ ಸ್ಥಿತಿಯಲ್ಲಿ ನರಳುತ್ತಿತ್ತು. ಅದರ ಎಡಗಣ್ಣಿಗೆ ಹಾಗೂ ಸೊಂಟದ ಮೂಳೆಗೆ ಗಾಯವಾಗಿತ್ತು. ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಗಮನಿಸಿದರು. ಚಿರತೆಗೆ ಚಿಕಿತ್ಸೆ ನೀಡಲು ಅರಿವಳಿಕೆ ತಜ್ಞರ ಅಗತ್ಯವಿದ್ದ ಹಿನ್ನೆಲೆಯಲ್ಲಿ ಹಂಪಿಯಿಂದ ತಜ್ಞರನ್ನು ಕರೆಸಲಾಯಿತು. ಬೆಳಗ್ಗೆ ಸುಮಾರು 8 ಗಂಟೆಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು.
ಈ ನಡುವೆ ಗಾಯಗೊಂಡಿದ್ದರೂ ಚಿರತೆ ಆಗಾಗ ಜನರತ್ತ ದಾಳಿ ಮಾಡಲು ಪ್ರಯತ್ನಿಸುತ್ತಿತ್ತು. ಸ್ಥಳದಲ್ಲಿ ನೂರಾರು ಜನರು ಸೇರಿದ್ದರಿಂದ ಪರಿಸ್ಥಿತಿ ಮತ್ತಷ್ಟು ಆತಂಕಕಾರಿಯಾಗಿತ್ತು.
ಅರಿವಳಿಕೆ ತಜ್ಞರು ಸ್ಥಳಕ್ಕೆ ಬಂದ ಬಳಿಕ ದೂರದಿಂದಲೇ ಬಂದೂಕಿನ ಮೂಲಕ ಚಿರತೆಗೆ ಅರಿವಳಿಕೆ ಮದ್ದು ನೀಡಲಾಯಿತು. ಚಿರತೆ ಪ್ರಜ್ಞೆ ತಪ್ಪಿದಂತೆ ಕಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ರಕ್ಷಿಸಲು ಮುಂದಾದರು. ಆದರೆ ಅಷ್ಟರಲ್ಲೇ ಅನಿರೀಕ್ಷಿತ ಘಟನೆ ನಡೆದಿದೆ. ಚಿರತೆ ಏಕಾಏಕಿ ಎದ್ದು ಅರಣ್ಯ ಇಲಾಖೆ ಸಿಬ್ಬಂದಿಯತ್ತ ನೇರವಾಗಿ ದಾಳಿ ಮಾಡಿದೆ. ಸ್ಥಳದಲ್ಲಿದ್ದವರು ಈ ದೃಶ್ಯ ಕಂಡು ಬೆಚ್ಚಿಬಿದ್ದರು. ಅರಣ್ಯ ಇಲಾಖೆ ವಾಚರ್ ಮರಳಸಿದ್ದಪ್ಪ ಅವರ ಮೇಲೆ ಚಿರತೆ ದಾಳಿ ನಡೆಸಿದೆ. ಆದರೆ ಚಿರತೆ ಕೂಡ ತೀವ್ರವಾಗಿ ಗಾಯಗೊಂಡಿದ್ದರಿಂದ ದಾಳಿಯನ್ನು ಮುಂದುವರಿಸಲು ಸಾಧ್ಯವಾಗದೆ ಮತ್ತೆ ತಾನು ಇದ್ದ ಸ್ಥಳಕ್ಕೆ ತೆರಳಿತು. ಗಾಯಗೊಂಡ ಸಿಬ್ಬಂದಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಚಿರತೆಗೆ ಪ್ರಜ್ಞೆ ಬಂದಿರುವುದು ಖಚಿತವಾದ ಬಳಿಕ ಅರಿವಳಿಕೆ ತಜ್ಞರು ಮತ್ತೊಮ್ಮೆ ಬಂದೂಕಿನ ಮೂಲಕ ಅರಿವಳಿಕೆ ನೀಡಿದರು. ಈ ಬಾರಿ ಚಿರತೆ ಪ್ರಜ್ಞೆ ತಪ್ಪಿತು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚರಿಕೆಯಿಂದ ಚಿರತೆಯನ್ನು ಹಿಡಿದು ವಾಹನಕ್ಕೆ ಸ್ಥಳಾಂತರಿಸಿದರು. ಬಳಿಕ ಗಾಯಗೊಂಡ ಚಿರತೆಯನ್ನು ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು.
ಇದಕ್ಕೂ ಮುನ್ನ ಬೆಳಗ್ಗೆ 4ರಿಂದ 5 ಗಂಟೆಯ ವೇಳೆಯಲ್ಲಿ ಗಾಯಗೊಂಡ ಚಿರತೆ ಜನರ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿದ್ದ ದೃಶ್ಯಗಳು ಸ್ಥಳೀಯರ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.
ಈ ಪ್ರದೇಶದಲ್ಲಿ ಈ ಹಿಂದೆ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಇರಲಿಲ್ಲ. ಅಲ್ಲದೆ, ಯಾರ ಮೇಲೂ ಚಿರತೆ ದಾಳಿ ನಡೆಸಿದ ಘಟನೆ ನಡೆದಿರಲಿಲ್ಲ. ಇದೀಗ ಏಕಾಏಕಿ ಗಾಯಗೊಂಡ ಚಿರತೆ ರಾಷ್ಟ್ರೀಯ ಹೆದ್ದಾರಿ ಬಳಿ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಚಿರತೆ ರಕ್ಷಣಾ ಕಾರ್ಯಾಚರಣೆಯ ವೇಳೆ ಸ್ಥಳದಲ್ಲಿ ನೂರಾರು ಜನರು ಸೇರಿದ್ದರು. 20ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಜನರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿ ಸಂಚಾರವನ್ನೂ ಸ್ಥಗಿತಗೊಳಿಸಲಾಗಿತ್ತು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿಯ ಮೇಲೂ ಕಾರ್ಯಾಚರಣೆಯ ಸಂದರ್ಭದಲ್ಲಿ ಒತ್ತಡ ಉಂಟಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ