Sudan conflict: ಸುಡಾನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು; ಜೀವ ಕೈಯಲ್ಲಿ ಹಿಡಿದುಕೊಂಡು ಬದುಕು ಸಾಗಿಸುತ್ತಿರುವ ಹಕ್ಕಿ ಪಿಕ್ಕಿ ಬುಡಕಟ್ಟು ಜನ
ಅವರೆಲ್ಲ ಅಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುತ್ತಿದ್ದಾರೆ. ಮನೆಯಲ್ಲಿ ಕುಳಿತರೇ ಗುಂಡಿನ ಸದ್ದು. ಮೇಲಾಗಿ ಮನೆ ಗೋಡೆಗಳಿಗೂ ಗುಂಡು ಬಿದ್ದಿವೆ. ಯಾವ ಸಮಯದಲ್ಲಿ ಎನಾಗುತ್ತದೆ ಎಂದು ಹೇಳುವುದು ಕಷ್ಟ. ಗ್ರಾಮದಲ್ಲಿ ದುಡಿದು ಬದುಕಲು ಕೆಲಸ ಇಲ್ಲದೆ. ದೂರದ ಸುಡಾನ್‌ನಲ್ಲಿ ಗಿಡಮೂಲಿಕೆ ಔಷಧಿ ಮಾರಿ ಬದುಕಲು ಹೋದ ಕನ್ನಡಿಗರ ಸ್ಥಿತಿ ನಿಜಕ್ಕೂ ಘೋರವಾಗಿದೆ. ಬಳಸಲು ಇಟ್ಟ ನೀರಿನಲ್ಲಿಯೇ ಅನ್ನ ಮಾಡಿಕೊಂಡು ಊಟ ಮಾಡುತ್ತಿದ್ದಾರೆ. ಆದಷ್ಟು ಬೇಗ ಭಾರತ ಸರ್ಕಾರ ತಮ್ಮತ್ತ ಗಮನ ಹರಿಸಬೇಕು ಎನ್ನುತ್ತಿದ್ದಾರೆ.
ದಾವಣಗೆರೆ: ಮೂರು ದಿನಗಳ ಹಿಂದೆಯಷ್ಟೇ ಮನೆಯಲ್ಲಿನ ನೀರು ಖಾಲಿಯಾಯಿತು. ಕುಡಿಯಲು ನೀರಿಲ್ಲ. ನಿನ್ನೆ(ಏ20) ಅರ್ಧ ಗಂಟೆ ಅಂಗಡಿ ತೆರೆದಿದ್ದು, 2 ಕೆ.ಜಿ. ಅಕ್ಕಿ ತಂದು ತೊಟ್ಟಿ ನೀರಿನಲ್ಲಿ ಅಡುಗೆ ಮಾಡಿ ತಿಂದಿದ್ದೇವೆ ಎಂದು ಸುಡಾನ್ (Sudan) ರಾಜಧಾನಿ ಖಾರ್ಟೂಮ್(Khartoum)ನಲ್ಲಿ ಸಿಲುಕಿಕೊಂಡಿರುವ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಗೋಪನಾಳ ನಿವಾಸಿಗಳು ಹೇಳುತ್ತಿದ್ದಾರೆ. ‘ಸೇನೆ ಮತ್ತು ಅರೆಸೇನಾ ಪಡೆ ನಡುವಣ ಘರ್ಷಣೆ ನಡೆಯುತ್ತಿದ್ದು, ಮದ್ದು ಗುಂಡುಗಳು ನಮ್ಮ ಮನೆಯ ಮೇಲೆ ಹಾದು ಹೋಗುತ್ತಿವೆ. ಈ ಶಬ್ಧಕ್ಕೆ ನಮ್ಮೆಲ್ಲರ ಎದೆ ನಡುಗುತ್ತಿದೆ. ಒಂದು ಗುಂಡು ನಮ್ಮ ಹುಡುಗನ ತಲೆಯ ಮೇಲೆ 3 ಅಡಿ ಅಂತರದಲ್ಲಿ ಹಾದು ಹೋದಾಗ ನಮಗೆ ಆದ ಭಯ ಅಷ್ಟಿಷ್ಟಲ್ಲ. ಪ್ರತಿಯೊಬ್ಬರೂ ಇಲ್ಲಿ ಖಿನ್ನತೆಗೆ ಒಳಗಾಗಿದ್ದೇವೆ’ ಎಂದು ಖಾರ್ಟೂಮ್ ನಗರದಲ್ಲಿ ಸಿಲುಕಿಕೊಂಡಿರುವ ಚನ್ನಗಿರಿ ತಾಲ್ಲೂಕಿನ ಗೋಪನಾಳ್ ಗ್ರಾಮದ ಎಸ್. ಪ್ರಭು ಎಂಬುವವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
‘ಗುಂಡಿನ ಸಪ್ಪಳ ನಾವು ಸಿನಿಮಾದಲ್ಲಷ್ಟೇ ನೋಡಿದ್ದೆವು. ಈಗ ಅದನ್ನ ಕಣ್ಣಾರೆ ನೋಡುತ್ತಿದ್ದೇವೆ. ಗುಂಡಿನ ಶಬ್ಧಕ್ಕೆ ನಾವು ಇರುವ ಮನೆ ಅಲುಗಾಡುತ್ತಿದೆ. ಬೆಂಕಿಯ ಮಧ್ಯೆ ನಾವು ಬದುಕುತ್ತಿದ್ದೇವೆ. ಪ್ರತಿ ಎರಡು ಇಲ್ಲವೇ ಮೂರು ಗಂಟೆಗಳಿಗೊಮ್ಮೆ ಬರುವ ಗುಂಡಿನ ಶಬ್ಧಗಳು ನಮ್ಮ ಜೀವವನ್ನೇ ಅಲುಗಾಡಿಸುತ್ತಿವೆ. ಯಾವುದೇ ರೀತಿಯ ಊಟದ ಸಾಮಗ್ರಿಗಳು, ನೀರು ಸಿಗುತ್ತಿಲ್ಲ. ಬಹಳ ತೊಂದರೆಯಲ್ಲಿದ್ದೇವೆ. ನಮ್ಮ ರಕ್ಷಣೆಗೆ ಸಹಾಯ ಮಾಡಿ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ. ಮನೋಜ್ ರಾಜನ್ ಅವರಿಗೆ ಮನವಿ ಮಾಡಿದ್ದು, ದೆಹಲಿಯ ರಾಯಭಾರ ಕಚೇರಿಗೆ ಈ ಕುರಿತು ವರದಿ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ಸಂಘರ್ಷ ಪೀಡಿತ ಸುಡಾನ್ನಲ್ಲಿರುವ ಭಾರತೀಯರನ್ನು ಸ್ಥಳಾಂತರಿಸುವ ಯೋಜನೆಗೆ ಸಿದ್ಧತೆ ನಡೆಸಿ: ಮೋದಿ
ಹಕ್ಕಿಪಿಕ್ಕಿ ಜನರ ಕುಟುಂಬದವರ ವಿಚಾರ ತಿಳಿದು ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ
ಆಫ್ರಿಕಾದ ಸೂಡಾನ್‍ನಲ್ಲಿರುವ ಜಿಲ್ಲೆಯ ಹಕ್ಕಿಪಿಕ್ಕಿ ಜನರ ಕುಟುಂಬದವರ ವಿಚಾರ ತಿಳಿದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಗ್ರಾಮಗಳಿಗೆ ಭೇಟಿ ನೀಡಿದರು. ಈ ವೇಳೆ ಆಫ್ರಿಕಾದ ಸೂಡಾನ್ ದೇಶದಲ್ಲಿ ಸೇನೆ ಮತ್ತು ಅರೆ ಸೇನೆ ನಡುವೆ ಘರ್ಷಣೆ ನಡೆಯುತ್ತಿದ್ದು ಅಲ್ಪ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಸೂಡಾನ್ ರಾಜಧಾನಿ ಖಾರ್ಟೂಮ್‍ಗೆ ಉದ್ಯೋಗಕ್ಕಾಗಿ ತೆರಳಿದವರು ಸೇನೆ ಮತ್ತು ಅರೆ ಸೇನಾ ಘರ್ಷಣೆಯಿಂದ ಭಯಭೀತರಾಗಿ ಕುಟುಂಬದವರಿಗೆ ಕರೆ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಅಸ್ತಾಪನಹಳ್ಳಿಯಿಂದ ಸುಮಾರು 10 ಮತ್ತು ಗೋಪನಾಳ್ ಗ್ರಾಮದಿಂದ 29 ಜನರು ಉದ್ಯೋಗಕ್ಕಾಗಿ ಸೂಡಾನ್ಗೆ ತೆರಳಿದ್ದು, ಇವರೆಲ್ಲರೂ ಒಟ್ಟಿಗೆ ಇರುತ್ತಾರೆ. ಸೂಡಾನ್‍ನಲ್ಲಿರುವವರ ಜೊತೆಗೆ ನೇರವಾಗಿ ದೂರವಾಣಿ ಮೂಲಕ ಸಂಪರ್ಕ ಮಾಡಿ ಯಾವುದೇ ಆತಂಕಪಡುವ ಅಗತ್ಯವಿರುವುದಿಲ್ಲ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದ್ದು, ಭಾರತೀಯ ರಾಯಭಾರ ಕಚೇರಿಯು ನಿಮ್ಮೊಂದಿಗೆ ಇರಲಿದೆ. ರಾಯಭಾರ ಕಚೇರಿಯಿಂದ ತಮ್ಮ ಕ್ಯಾಂಪ್ ಸಂಪರ್ಕಿಸಿದಾಗ ಸಮರ್ಪಕ ಮಾಹಿತಿಯನ್ನು ನೀಡಲು ತಿಳಿಸಿದ್ದಾರೆ. ಮತ್ತು ಅನಗತ್ಯವಾಗಿ ಯಾವುದೇ ಬೇರೆ ಕರೆಗಳಿಗೆ ಉತ್ತರಿಸದಂತೆ ಎಚ್ಚರವಹಿಸಲು ಮತ್ತು ಜಿಲ್ಲಾ ಅಡಳಿತದಿಂದ ಸರ್ಕಾರಕ್ಕೆ ಈ ಬಗ್ಗೆ ವರದಿಯನ್ನು ಸಹ ನೀಡಲಾಗುತ್ತದೆ ಎಂದು ಸಾಂತ್ವಾನ ಹೇಳಿ ಕುಟುಂಬದವರಿಗೂ ಧೈರ್ಯ ತುಂಬಿದರು.
ಹೀಗೆ ಸಂಕಷ್ಟದಲ್ಲಿರುವ ಈ ಬುಡಕಟ್ಟು ಜನರನ್ನ ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್ಸು ಕರೆದುಕೊಂಡು ಬರುವ ಪ್ರಯತ್ನ ಶುರುವಾಗಿದೆ. ಈ ಹಿಂದೆ ಕೂಡ ಕೊರೊನಾ ಸಂಕಷ್ಟದ ಕಾಲದಲ್ಲಿ ಇವರು ವಿವಿಧ ದೇಶಗಳಲ್ಲಿ ಸಿಲುಕಿದ್ದರು. ಆಗಲು ಸಹ ವಿದೇಶಾಂಗ ಇಲಾಖೆ ಸೂಕ್ತ ಕ್ರಮ ಕೈಗೊಂಡು ಇವರನ್ನ ಸ್ವದೇಶಕ್ಕೆ ಕರೆದುಕೊಂಡು ಬರಲಾಗಿತ್ತು. ಈಗ ಮತ್ತೆ ಸೂಡಾನ್ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ಇವರ ಸಂಕಷ್ಟಕ್ಕೆ ಸ್ಪಂಧಿಸಬೇಕಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:36 pm, Sat, 22 April 23