AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮಸ್ಥಳ ಕೇಸ್​​: RSS ಎಳೆದುತಂದ ಪ್ರಿಯಾಂಕ್ ಖರ್ಗೆಗೆ ತಿರುಗೇಟು ಕೊಟ್ಟ ಸುರೇಶ್ ಕುಮಾರ್

ಧರ್ಮಸ್ಥಳ ಪ್ರಕರಣ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ರಾಜ್ಯ ಬಿಜೆಪಿ ನಾಯಕರು ಧರ್ಮಸ್ಥಳ ಚಲೋ ನಡೆಸಿ ಕಾಂಗ್ರೆಸ್ ಸರ್ಕಾರದವ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಈ ಪ್ರಕರಣವನ್ನು ಸಿಬಿಐ ಅಥವಾ ಎನ್​ಐಎಗೆ ನೀಡುವಂತೆ ಒತ್ತಾಯಿಸಿದ್ದಾರೆ. ಇದರ ನಡುವೆ ವಿಪಕ್ಷ ಬಿಜೆಪಿ ಹಾಗೂ ಆಡಳಿತರೂ ಕಾಂಗ್ರೆಸ್ ನಾಯಕರ ಆರೋಪ ಪ್ರತ್ಯಾರೋಪ ಜೋರಾಗಿದ್ದು, ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಶಾಸಕ ಸುರೇಶ್ ಕುಮಾರ್ ಟಾಂಗ್ ಕೊಟ್ಟಿದ್ದಾರೆ.

ಧರ್ಮಸ್ಥಳ ಕೇಸ್​​: RSS ಎಳೆದುತಂದ ಪ್ರಿಯಾಂಕ್ ಖರ್ಗೆಗೆ ತಿರುಗೇಟು ಕೊಟ್ಟ ಸುರೇಶ್ ಕುಮಾರ್
Priyank Kharge And Suresh Kumar
ರಮೇಶ್ ಬಿ. ಜವಳಗೇರಾ
|

Updated on: Sep 02, 2025 | 9:22 PM

Share

ಬೆಂಗಳೂರು, (ಸೆಪ್ಟೆಂಬರ್ 01): ಧರ್ಮಸ್ಥಳ ಪ್ರಕರಣದಲ್ಲಿ (Dharmasthala Case) ಭಾಗಿಯಾಗಿರುವ ಗಿರೀಶ್ ಮಟ್ಟಣ್ಣವರ್ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಎಂಬ ಇಬ್ಬರು ಹೋರಾಟಗಾರರು ಆರ್‌ಎಸ್‌ಎಸ್ ಮತ್ತು ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಸುರೇಶ್ ಕುಮಾರ್(Suresh Kumar) , ಸಚಿವ ಪ್ರಿಯಾಂಕ ಖರ್ಗೆಯವರು “ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಉದ್ದೇಶದಿಂದ ಧರ್ಮಸ್ಥಳ ಚಲೋ, ಚಾಮುಂಡೇಶ್ವರಿ ಚಲೋ ಮಾಡುತ್ತಿದೆ” ಎಂದು ʻಗಂಭೀರʼವಾದ ಆರೋಪ ಮಾಡಿದ್ದಾರೆ. ಮತ್ತು ಎರಡು ಬಣಗಳ ನಡುವಿನ ಸಂಘರ್ಷವೇ ಇದಕ್ಕೆ ಕಾರಣ ಎಂದೂ ಸಹ ವಿಶ್ಲೇಷಿಸಿದ್ದಾರೆ. ಹೀಗೆ ವಿಶ್ಲೇಷಿಸುವ ಭರದಲ್ಲಿ ಇಬ್ಬರು ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಿ ಅವರು RSS/ಬಿಜೆಪಿ ನಂಟು ಹೊಂದಿದ್ದರೆಂದು ಬೆಳಕು ಚೆಲ್ಲಿದ್ದಾರೆ. ಈಗ ರಾಜ್ಯ ಸರ್ಕಾರದ ಉದ್ದೇಶವೆಂದರೆ ಇವರಿಬ್ಬರ ಪೂರ್ವ ಪರಿಚಯವನ್ನು ಹೇಳಿ, ಬೇರೆಯವರ ಮೇಲೆ ಗೂಬೆ ಕೂರಿಸಿ, ಕೈ ತೊಳೆದುಕೊಳ್ಳುವುದೋ? ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದ್ದಾರೆ.

ಸೋಷಿಯಲ್ ಮೀಡಿಯಾ ಮೂಲಕ ತಿರುಗೇಟು ನೀಡಿರುವ ಸುರೇಶ್ ಕುಮಾರ್, ಮಹೇಶ್ ತಿಮರೊಡಿ ಸಂಘದ ಸಂಪರ್ಕ ಇಟ್ಟುಕೊಂಡಿದ್ದರೆಂಬುದು ನಿಜ. ಗಿರೀಶ್ ಮಟ್ಟಣ್ಣನವರ್ ಬಿಜೆಪಿಯ ಕಾರ್ಯಕರ್ತರಾಗಿ, @ ಬಿಜೆಪಿಯ ಚಿಹ್ನೆಯ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಎಂಬುದೂ ನಿಜ. ಆದರೆ ಅವರು ನಮ್ಮ ಪರಿವಾರದಿಂದ ದೂರ ಸರಿದು ಬಹಳ ಕಾಲವಾಗಿದೆ ಎಂಬುದೂ ಅಷ್ಟೇ ಸತ್ಯ. ನಮ್ಮಿಂದ ದೂರವಾದ ಮೇಲೆ ಅವರಿಗೆ ಆಡಳಿತ ಪಕ್ಷದ @ಯಾರ‍್ಯಾರ ಮಾರ್ಗದರ್ಶನ, ಕುಮ್ಮಕ್ಕು ಸಿಕ್ಕಿದೆ ಎಂಬುದೂ ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ರಾಜ್ಯ ಸರ್ಕಾರದ ಉದ್ದೇಶವೆಂದರೆ ಇವರಿಬ್ಬರ ಪೂರ್ವ ಪರಿಚಯವನ್ನು ಹೇಳಿ, ಬೇರೆಯವರ ಮೇಲೆ ಗೂಬೆ ಕೂರಿಸಿ, ಕೈ ತೊಳೆದುಕೊಳ್ಳುವುದೋ? ಅಥವಾ ಇವರ ನಿಜವಾದ ಮಾರ್ಗದರ್ಶಕರಾಗಿ ಹಿಂದೆ ಇರುವ ಆಡಳಿತ ಪಕ್ಷದ Think Tankನ ಅಪಾಯಕಾರಿ ಮೇಧಾವಿಗಳನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳುವುದೋ? ಎನ್ನುವುದು ಮುಖ್ಯ ಎಂದು ಪ್ರಿಯಾಂಕ್ ಖರ್ಗೆಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಏಕೆಂದರೆ ರಾಜ್ಯದ ಉಪ ಮುಖ್ಯಮಂತ್ರಿಗಳೇ ಹೇಳಿರುವ ಈ ಒಟ್ಟು ವಿದ್ಯಮಾನದ ಹಿಂದೆ ಇರುವ “ಷಡ್ಯಂತ್ರ”ದಲ್ಲಿ ಪ್ರಿಯಾಂಕ ಖರ್ಗೆ ರವರ ಪಕ್ಷದ ಪಡಸಾಲೆಯ ಚಿಂತಕರು ಇದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. “ಅರ್ಧ ಸತ್ಯ ಎನ್ನುವುದು ಪೂರ್ತಿ ಸುಳ್ಳಿಗಿಂತ ಮಹಾಘಾತುಕ” ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ತಿರುಗೇಟು ನೀಡಿದ್ದಾರೆ.

ಪ್ರಿಯಾಂಕ್ ಖರ್ಗೆ ಆರೋಪಿಸಿದ್ದೇನು?

ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿಯವರು ಯಾರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಗಿರೀಶ್ ಮಟ್ಟಣ್ಣನವರ್, ಬಿಜೆಪಿಯ ಸಕ್ರಿಯ ಕಾರ್ಯಕರ್ತ, ಯುವಮೋರ್ಚಾದ ಅಧ್ಯಕ್ಷರಾಗಿದ್ದವರು. 2013ರಲ್ಲಿ ಗುರ್ಮಿಟ್ಕಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದವರು. ಇನ್ನು ಮಹೇಶ್ ಶೆಟ್ಟಿ ತಿಮರೋಡಿ, ಸಂಘಪರಿವಾರದ ನಾಯಕರು. ಸದಾ ಸಾವರ್ಕರ್, ಗೋಲ್ವಾಲ್ಕರ್ ಫೋಟೋ ಇಟ್ಟುಕೊಂಡಿರುವವರು, ಕೇಸರಿ ಶಾಲು ಹಾಕಿಕೊಂಡಿರುವವರು. ಇದು ಪಕ್ಕಾ ಆರ್‌ಎಸ್‌ಎಸ್ ವಿರುದ್ಧ ಆರ್‌ಎಸ್‌ಎಸ್ ಹೋರಾಟ. ಬಿಜೆಪಿಯವರಿಗೆ ಯಾವ ಆರ್‌ಎಸ್‌ಎಸ್‌ನವರಿಗೆ ತಲೆ ಬಾಗಬೇಕು ಎಂದು ಗೊತ್ತಾಗುತ್ತಿಲ್ಲ. ಆರ್‌ಎಸ್‌ಎಸ್ ಬಣಗಳಿಗೆ ಖುಷಿ ಪಡಿಸಲು ಬಿಜೆಪಿಯವರು ಇದೆಲ್ಲ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದರು.

ಅಲ್ಲದೇ ಬಿಜೆಪಿಯವರು ಧರ್ಮಸ್ಥಳ ಚಲೋ, ಚಾಮುಂಡಿ ಚಲೋ ಬಿಟ್ಟು ಕನ್ನಡಿಗರ ಪರ ದೆಹಲಿ ಚಲೋ ಮಾಡಲಿ, ಹೋಗಿ ನ್ಯಾಯ ಕೇಳಲಿ. ರಾಜ್ಯಕ್ಕೆ ಸಿಗಬೇಕಾದ ಅನುದಾನದ ಬಗ್ಗೆ ಹೋಗಿ ಕೇಳಲಿ. ಧರ್ಮಸ್ಥಳ ಚಲೋ ಮಾತ್ರ ಮಾಡೋದಲ್ಲ, ದೆಹಲಿ ಚಲೋ ಕೂಡಾ ಮಾಡಲಿ. ಬಿಜೆಪಿಯವರದ್ದು ಎಲ್ಲಾ ನಾಟಕ. ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಈ ರೀತಿ ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.