ಜಯಮೃತ್ಯುಂಜಯ ಸ್ವಾಮೀಜಿಗೆ ವಿಷ ಹಾಕಿ ಕೊಲೆ ಮಾಡುವ ಯತ್ನ ನಡೆದಿತ್ತಾ?
ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಪರ್ಯಾಯ ಸ್ವಾಮೀಜಿ ನೇಮಕಕ್ಕೆ ಟ್ರಸ್ಟ್ ಮುಂದಾಗಿದ್ದರೆ, ಇತ್ತ ಜಯಮೃುತ್ಯುಂಜಯ ಸ್ವಾಮೀಜಿಗೆ ವಿಷಪ್ರಾಶನ ಮಾಡಿಸಿ ಕೊಲ್ಲುವ ಯತ್ನ ನಡಿಯಿತಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದ್ದು, ಸ್ವತಃ ಸ್ವಾಮೀಜಿಯೇ ಇಂತಹದೊಂದು ಅನುಮಾನ ವ್ಯಕ್ತಪಡಿಸಿದ್ದಾರಂತೆ. ಇನ್ನೊಂದಡೆ ಪರ್ಯಾಯ ಪೀಠ ಆರಂಭದ ಚಿಂತನೆ ಜೊತೆಗೆ ಟ್ರಸ್ಟ್ ಅಧ್ಯಕ್ಷರಾಗಿರುವ ಕಾಂಗ್ರೆಸ್ ಶಾಸಕ ವಿಜಯಾನಂದ್ ಕಾಶಪ್ಪನವರ ನಡೆಗೆ ಬಿಜೆಪಿ ಪಂಚಮಸಾಲಿ ಮುಖಂಡರು ಆಕ್ರೋಶಗೊಂಡಿದ್ದಾರೆ.

ಹುಬ್ಬಳ್ಳಿ, (ಜುಲೈ 21): ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ (Jayamruthyunjaya Swamijiv) ಮತ್ತು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ, ಕಾಂಗ್ರೆಸ್ ಶಾಸಕರೂ ಆಗಿರುವ ವಿಜಯಾನಂದ್ ಕಾಶಪ್ಪನವರ್ (Vijayananda Kashappanavar) ನಡುವಿನ ಭಿನ್ನಾಭಿಪ್ರಾಯ ತೀವ್ರ ಸ್ವರೂಪ ಪಡೆದುಕೊಂಡಿದೆ. ಮೊನ್ನೇ ಅಷ್ಟೇ ವಿಜಯಾನಂದ್ ಕಾಶಪ್ಪನವರ್, ಕೂಡಲಸಂಗಮ ಪೀಠಕ್ಕೆ ಬೀಗ ಹಾಕಿಸಿದ್ದರು. ಇದಾದ ಬೆನ್ನಲ್ಲೇ ಜಯಮೃತ್ಯುಂಜಯ ಸ್ವಾಮೀಜಿ ಭಕ್ತ ಜತೆ ಸಭೆ ನಡೆಸಿ ಪೀಠಕ್ಕೆ ಪ್ರವೇಶ ಮಾಡಿದ್ದರು. ಇದಾದ ಬಳಿಕ ಸ್ವಾಮೀಜಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ರೆ, ಸ್ವಾಮೀಜಿ ಊಟದಲ್ಲಿ ವಿಷ ಹಾಕಿ ಕೊಲೆಗೆ ನಡೆದಿದೆ ಎನ್ನುವ ಆರೋಪಗಳು ಕೇಳಿಬಂದಿವೆ.
ಎರಡು ದಿನಗಳ ಹಿಂದಷ್ಟೇ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿ ನಡೆಸಿದ್ದ ಟ್ರಸ್ಟ್ ನ ಅಧ್ಯಕ್ಷರು ಆಗಿರುವ ಶಾಸಕ ವಿಜಯಾನಂದ್ ಕಾಶಪ್ಪನವರ,ಜಯಮೃತ್ಯುಂಜಯ ಸ್ವಾಮೀಜಿ ವಿರುದ್ದ ಅನೇಕ ಆರೋಪ ಮಾಡಿದ್ದರು. ಜೊತೆಗೆ ಸ್ವಾಮೀಜಿ ಮಠದಲ್ಲಿ ಇರದೇ ಇರುವುದರಿಂದ ಪೀಠಕ್ಕೆ ಪರ್ಯಾಯ ವ್ಯವಸ್ ಮಾಡುವುದಾಗಿ ಹೇಳುವ ಮೂಲಕ ಪರೋಕ್ಷವಾಗಿ ಜಯಮೃತ್ಯುಂಜಯ ಸ್ವಾಮೀಜಿಯನ್ನು ಪೀಠದಿಂದ ಕೆಳಗಿಳಿಸುವ ಕೆಲಸ ಆರಂಭವಾಗಿರುವ ಬಗ್ಗೆ ಹೇಳಿದ್ದರು. ಅಂದೇ ಜಯಮೃತ್ಯುಂಜಯ ಸ್ವಾಮೀಜಿ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿನ್ನೆಲೆಯಲ್ಲಿ ಜಯಮೃುತ್ಯುಂಜಯ ಸ್ವಾಮೀಜಿಯನ್ನು ಕೊಲೆ ಮಾಡುವ ಯತ್ನ ನಡೆದಿದೆಯಾ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿದೆ.
ಇದನ್ನೂ ಓದಿ: ಕೂಡಲಸಂಗಮ ಪಂಚಮಸಾಲಿ ಪೀಠ ವಿವಾದ: ಶ್ರಾವಣದಲ್ಲಿ ಸಂಧಾನಕ್ಕೆ ಮುಹೂರ್ತ!
ಈ ಬಗ್ಗೆ ಪಂಚಮಸಾಲಿ ಸಮುದಾಯದ ಹಿರಿಯ ಮುಖಂಡ ಹಾಗೂ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಪ್ರತಿಕ್ರಿಯಿಸಿ, ಸ್ವತಃ ಜಯಮೃತ್ಯುಂಜಯ ಸ್ವಾಮೀಜಿ ಇಂತಹದೊಂದು ಶಂಕೆಯನ್ನು ತಮ್ಮ ಮುಂದೆ ವ್ಯಕ್ತಪಡಿಸಿರುವುದಾಗಿ ಹೇಳಿದ್ದಾರೆ. ಜುಲೈ 19ರಂದು ಮಠದಲ್ಲಿ ಸ್ವಾಮೀಜಿ ಅಸ್ವಸ್ಥರಾಗಿದ್ದರು. ಆದ್ರೆ ಅಂದು ಇಬ್ಬರು ಮುಸ್ಲಿಂ ಯುವಕರು ಅಡುಗೆ ಮನೆಗೆ ಹೋಗಿದ್ದರಂತೆ. ಅವರನ್ನು ಕೆಲಸಕ್ಕೆ ಇಟ್ಟಿರುವುದು ಇದೇ ವಿಜಯನಾಂದ್ ಕಾಶಪ್ಪನವರಂತೆ. ಅವರು ಅಡುಗೆ ಮನೆಗೆ ಹೋಗಿ ಬಂದ ನಂತರ ಸ್ವಾಮೀಜಿ ಪ್ರಸಾದ ಸ್ವೀಕರಿಸಿದ್ದಂತೆ. ಪ್ರಸಾದ ಸ್ವೀಕರಿಸಿದ ಕೆಲವೇ ಹೊತ್ತಲ್ಲಿ ಅವರಿಗೆ ವಾಂತಿಬೇಧಿ ಸೇರಿದಂತೆ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಹೀಗಾಗಿ ಸೇವಿಸಿರುವ ಆಹಾರದಲ್ಲಿ ಏನಾದ್ರು ವಿಷ ಬೆರೆಸಿರುವ ಅನುಮಾನವಿದೆಯಂತೆ. ಹೀಗಂತ ಸ್ವತಃ ಸ್ವಾಮೀಜಿ ತಮ್ಮ ಮುಂದೆ ಹೇಳಿದ್ದಾರೆ. ಈ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಮತ್ತೊಂದು ಪೀಠ ಸ್ಥಾಪನಗೆ ಚಿಂತನೆ
ಇತ್ತ ಸ್ವಾಮೀಜಿ ಸೇವಿಸೋ ಆಹಾರಕ್ಕೆ ವಿಷ ಹಾಕಿ ಅವರ ಕೊಲೆಗೆ ಯತ್ನ ನಡೆದಿರುವ ಅನುಮಾನಗಳು ಹುಟ್ಟಿಕೊಂಡಿರುವ ನಡುವೆಯೇ ಇದೀಗ ನಾಲ್ಕನೆ ಪೀಠವನ್ನು ಹುಟ್ಟುಹಾಕುವ ಬಗ್ಗೆ ಕೂಡಾ ಚರ್ಚೆ ನಡೆದಿವೆ. ಗದಗ, ಧಾರವಾಡ ಜಿಲ್ಲೆಯ ಒಂದು ಕಡೆ ಸ್ವಾಮೀಜಿಗೆ ಪ್ರತ್ಯೇಕ ಮಠವನ್ನು ಕಟ್ಟಿಕೊಡುವ ಇಂಗಿತವನ್ನು ಸಮುಧಾಯದ ಕೆಲವರು ಮಾಡಿದ್ದಾರಂತೆ. ಈ ಬಗ್ಗೆ ಜಯಮೃತ್ಯುಂಜಯ ಸ್ವಾಮೀಜಿಗೆ ಕೂಡಾ ಹೇಳಿದ್ದಾರಂತೆ. ಆದ್ರೆ ಸ್ವಾಮೀಜಿ ಇನ್ನು ಒಲವು ವ್ಯಕ್ತಪಡಿಸದೇ ಇರುವುದರಿಂದ ಮತ್ತು ಕೂಡಲಸಂಗಮ ಪೀಠದ ಟ್ರಸ್ಟ್ ಮುಂದಿನ ನಡೆ ನೋಡಿ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ.
ಇದನ್ನೂ ಓದಿ: ಪಂಚಮಸಾಲಿ ಪೀಠಕ್ಕೆ ಬೀಗ ವಿವಾದ ಬೆನ್ನಲ್ಲೇ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆರೋಗ್ಯದಲ್ಲಿ ಏರುಪೇರು
ಬಿಜೆಪಿ ಪಂಚಮಸಾಲಿ ಮುಖಂಡರ ಆಕ್ರೋಶ
ಇನ್ನು ಸ್ವಾಮೀಜಿ ವಿರುದ್ದ ಮುಗಿಬಿದ್ದಿರೋ ಶಾಸಕ ಹಾಗೂ ಟ್ರಸ್ಟ್ ನ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ನಡೆ ವಿರುದ್ದ ಇದೀಗ ಬಿಜೆಪಿಯ ಪಂಚಮಸಾಲಿ ಸಮುದಾಯದ ಶಾಸಕರು, ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದಲ್ಲಿ 2 ಎ ಹೋರಾಟ ಮಾಡುವುದನ್ನು ತಡೆಯುವುದು ಇದರ ಹಿಂದಿನ ಉದ್ದೇಶವಾಗಿದೆ. ಜೊತೆಗೆ ಯಾರನ್ನೋ ಮೆಚ್ಚಿಸಲು ಕಾಶಪ್ಪನವರ್ ಈ ರೀತಿ ಸ್ವಾಮೀಜಿ ವಿರುದ್ದ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿ ಸಿ ಪಾಟೀಲ್, ಕಾಶಪ್ಪನವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಟ್ರಸ್ಟ್ ನಿಂದ ಸ್ವಾಮೀಜಿಯಲ್ಲಾ, ಬದಲಾಗಿ ಸ್ವಾಮೀಜಿಯಿಂದ ಟ್ರಸ್ಟ್ ಅನ್ನೋದನ್ನು ಕಾಶಪ್ಪನವರ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹರಿಹಾಯ್ದಿದ್ದಾರೆ.
ಒಟ್ಟಿನಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠ ವಿವಾದ ಇದೀಗ ತೀರ್ವ ಸ್ವರೂಪ ಪಡೆದಿದೆ. ಇದರ ನಡುವೆ ಎರಡು ಕಡೆಯವರನ್ನು ಕರೆಸಿ ಸಂದಾನ ಮಾಡೋ ಬಗ್ಗೆ ಕೂಡಾ ಸಮುದಾಯದ ಕೆಲವರು ಚಿಂತನೆ ನಡೆಸಿದ್ದಾರೆ. ಆದ್ರೆ ಇದೇ ಸಮಯದಲ್ಲಿ ವಿಷಪ್ರಾಶನದ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ತನಿಖೆಯಾದ್ರೆ ಸತ್ಯಾಂಶ ಗೊತ್ತಾಗಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:46 pm, Mon, 21 July 25







