ನ್ಯೂ ಇಯರ್ಗೆ ಗೋವಾಕ್ಕೆ ಹೋಗುವವರಿಗೆ ಬಿಗ್ ಶಾಕ್: ತಿರುಪತಿ ಸೇರಿ ಡಿಸೆಂಬರ್ನಲ್ಲಿ 8 ಪ್ರಮುಖ ರೈಲುಗಳು ರದ್ದು
ಈ ನ್ಯೂ ಇಯರ್ಗೆ ಗೋವಾಕ್ಕೆ ಹೋಗಬೇಕು ಎಂದು ಪ್ಲಾನ್ ಮಾಡಿರುವವರು ಸ್ವಲ್ಪ ಇಲ್ಲಿ ಗಮನಿಸಬೇಕು. ಒಟ್ಟು ಎಂಟು ರೈಲುಗಳನ್ನು ರದ್ದು ಮಾಡಲಾಗಿದೆ. ಕ್ಯಾಸಲ್ ರಾಕ್-ಕುಲೆಮ್ ಮಾರ್ಗದಲ್ಲಿ ಹಳಿ ದುರಸ್ತಿಯಿಂದಾಗಿ ಗೋವಾಗೆ ತೆರಳುವ ಶಾಲೀಮಾರ್, ತಿರುಪತಿ ಸೇರಿ 8 ಪ್ರಮುಖ ರೈಲುಗಳನ್ನು ಹುಬ್ಬಳ್ಳಿಯಲ್ಲೇ ಸ್ಥಗಿತಗೊಳಿಸಿ ನೈಋತ್ಯ ರೈಲ್ವೆ ಆದೇಶಿಸಿದೆ. ಈ ಬಗ್ಗೆ ರೈಲ್ವೆ ಇಲಾಖೆ ಮಹತ್ವದ ಆದೇಶವನ್ನು ನೀಡಿದೆ.

ಹುಬ್ಬಳ್ಳಿ, ನ.6: ಗೋವಾದ ಕ್ಯಾಸಲ್ ರಾಕ್ ಮತ್ತು ಕುಲೆಮ್ ರೈಲ್ವೆ ವಿಭಾಗದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಹಳಿ ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ. ಈ ಮಾರ್ಗದಲ್ಲಿ ಚಲಿಸುವ ಡೆಮು (DEMU) ರೈಲು ಸೇವೆ ಸಂಪೂರ್ಣ ರದ್ದಾಗಲಿದ್ದು, ಶಾಲೀಮಾರ್, ತಿರುಪತಿ ಹಾಗೂ ಸಿಕಂದರಾಬಾದ್‌ನಿಂದ ಗೋವಾ (ವಾಸ್ಕೋ ಡ ಗಾಮ) ಕಡೆಗೆ ತೆರಳುವ 8 ಪ್ರಮುಖ ರೈಲುಗಳ ಸೇವೆಯನ್ನು ಭಾಗಶಃ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ವಾಸ್ಕೋ ಡ ಗಾಮ ಮತ್ತು ಕುಲೆಮ್ ನಡುವಿನ ಡೆಮು ರೈಲು ಸೇವೆ (56964/56963) ಡಿಸೆಂಬರ್ 1, 2026 ರಿಂದ ಜನವರಿ 20, 2027 ರವರೆಗೆ ಸಂಪೂರ್ಣವಾಗಿ ರದ್ದಾಗಲಿದೆ.
ಭಾಗಶಃ ರದ್ದಾಗುವ ಹಾಗೂ ಹುಬ್ಬಳ್ಳಿಯಲ್ಲೇ ಅಂತ್ಯಗೊಳ್ಳುವ ಪ್ರಮುಖ ರೈಲುಗಳು
ನೈಋತ್ಯ ರೈಲ್ವೆ ನೀಡಿರುವ ಮಾಹಿತಿಯಂತೆ ನವೆಂಬರ್ ಕೊನೆಯ వారದಿಂದ ಜನವರಿ ಮೂರನೇ ವಾರದವರೆಗೆ ಈ ಕೆಳಗಿನ ರೈಲುಗಳು ವಾಸ್ಕೋ ಡ ಗಾಮ ಬದಲಿಗೆ ಹುಬ್ಬಳ್ಳಿ ರೈಲು ನಿಲ್ದಾಣದಲ್ಲೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿವೆ ಹಾಗೂ ಅಲ್ಲಿಂದಲೇ ಮರಳಿ ಹೊರಡಲಿವೆ.
ಶಾಲೀಮಾರ್-ವಾಸ್ಕೋ ಡ ಗಾಮ ಅಮರಾವತಿ ಎಕ್ಸ್‌ಪ್ರೆಸ್ (18047/18048):
ರೈಲು ಸಂಖ್ಯೆ 18047: 2026ರ ನವೆಂಬರ್ 28 ರಿಂದ 2027ರ ಜನವರಿ 18 ರವರೆಗೆ ವಾಸ್ಕೋ ಬದಲಿಗೆ ಹುಬ್ಬಳ್ಳಿಯಲ್ಲೇ ಪ್ರಯಾಣ ಮುಕ್ತಾಯಗೊಳಿಸಲಿದೆ.
ರೈಲು ಸಂಖ್ಯೆ 18048 (ಮರುಪ್ರಯಾಣ): ವಾಸ್ಕೋ ಬದಲಿಗೆ ಹುಬ್ಬಳ್ಳಿ ನಿಲ್ದಾಣದಿಂದಲೇ ನಿಗದಿತ ಸಮಯಕ್ಕೆ ಹೊರಡಲಿದೆ. 2026ರ ಡಿಸೆಂಬರ್ 1 ರಿಂದ 2027ರ ಜನವರಿ 21 ರವರೆಗೆ ಹುಬ್ಬಳ್ಳಿ-ವಾಸ್ಕೋ ಡ ಗಾಮ ನಡುವಿನ ಸೇವೆ ರದ್ದಾಗಲಿದೆ.
ತಿರುಪತಿ-ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್ (17419/17021 ಮತ್ತು 17420/17022):
2026ರ ಡಿಸೆಂಬರ್ 3 ರಿಂದ 2027ರ ಜನವರಿ 14 ರವರೆಗೆ ಈ ರೈಲು ವಾಸ್ಕೋ ಬದಲಿಗೆ ಹುಬ್ಬಳ್ಳಿಯಲ್ಲೇ ಕೊನೆಗೊಳ್ಳಲಿದೆ. ಹುಬ್ಬಳ್ಳಿ ಮತ್ತು ವಾಸ್ಕೋ ನಡುವಿನ ಸೇವೆ ರದ್ದಾಗಿದ್ದು, ಮರಳಿ ಹೊರಡುವ ರೈಲು (17420/17022) ಹುಬ್ಬಳ್ಳಿಯಿಂದಲೇ ಪ್ರಯಾಣ ಆರಂಭಿಸಲಿದೆ.
ಸಿಕಂದರಾಬಾದ್-ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್ (17039/17040):
ರೈಲು ಸಂಖ್ಯೆ 17039: 2026ರ ಡಿಸೆಂಬರ್ 2 ರಿಂದ 2027ರ ಜನವರಿ 15 ರವರೆಗೆ ಹುಬ್ಬಳ್ಳಿಯವರೆಗೆ ಮಾತ್ರ ಸಂಚರಿಸಲಿದೆ. ಹುಬ್ಬಳ್ಳಿ-ವಾಸ್ಕೋ ಭಾಗದ ಸೇವೆ ರದ್ದಾಗಲಿದ್ದು, ಮರಳಿ ಹೊರಡುವ ರೈಲು (17040) ಹುಬ್ಬಳ್ಳಿಯಿಂದಲೇ ಆರಂಭವಾಗಲಿದೆ.
ಇದನ್ನೂ ಓದಿ: ಬೆಂಗಳೂರು ಏರ್ಪೋರ್ಟ್ ಪ್ರಯಾಣಿಕರೇ ಗಮನಿಸಿ: ಈ ರಸ್ತೆ 18 ತಿಂಗಳು ಬಂದ್, ಸವಾರರಿಗೆ ಬದಲಿ ಮಾರ್ಗ
ಜಾಸಿಡಿಹ್-ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್ (19322/17321):
ರೈಲು ಸಂಖ್ಯೆ 19322: 2026ರ ನವೆಂಬರ್ 30 ರಿಂದ 2027ರ ಜನವರಿ 18 ರವರೆಗೆ ಹುಬ್ಬಳ್ಳಿಯವರೆಗೆ ಮಾತ್ರ ಚಲಿಸಲಿದೆ. ಮರಳಿ ಹೊರಡುವ ರೈಲು (17321) ವಾಸ್ಕೋ ಬದಲಿಗೆ ಹುಬ್ಬಳ್ಳಿಯಿಂದಲೇ ಪ್ರಯಾಣ ಬೆಳೆಸಲಿದೆ.
ರೈಲು ಸಂಚಾರದ ಸಮಯ ಮತ್ತು ಮಾರ್ಗ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರು ತಮ್ಮ ಗೋವಾ ಪ್ರವಾಸದ ಯೋಜನೆಯನ್ನು ರೂಪಿಸಿಕೊಳ್ಳುವಂತೆ ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ವಿನಂತಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




