ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹತ್ತು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಅಕ್ರಮ ನೇಮಕಾತಿ, ಅಂಕಪಟ್ಟಿ, ಕಾಮಗಾರಿ ಹಾಗೂ ಖರೀದಿ ಹಗರಣಕ್ಕೆ ಮರುಜೀವ ಬಂದಿದೆ. ಹಗರಣಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳ ಕುರಿತ ಕಾರ್ಯನಿರ್ವಹಣಾ ವರದಿ ಸಲ್ಲಿಸುವಂತೆ ರಾಜ್ಯಪಾಲರು ಸರ್ಕಾರಕ್ಕೆ ಸೂಚಿಸಿದ್ದಾರೆ. ಇದರಿಂದಾಗಿ ಈ ಹಗರಣದಲ್ಲಿ ಭಾಗಿಯಾದವರ ಎದೆಯಲ್ಲಿ ಢವಢವ ಶುರುವಾಗಿದೆ.
ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹತ್ತು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಅಕ್ರಮ ನೇಮಕಾತಿ, ಅಂಕಪಟ್ಟಿ, ಕಾಮಗಾರಿ ಹಾಗೂ ಖರೀದಿ ಹಗರಣಕ್ಕೆ ಮರುಜೀವ ಬಂದಿದೆ. 2014ರಲ್ಲಿ ಕುಲಪತಿಯಾಗಿದ್ದ ಪ್ರೊ. ಎಚ್.ಬಿ. ವಾಲೀಕಾರ, ಅಂದಿನ ಮೌಲ್ಯಮಾಪನ ಕುಲಸಚಿವ ಡಾ. ಎಚ್.ಟಿ. ಪೋತೆ ಸೇರಿ 7 ಜನರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್, ಸಿವಿಲ್ ಪ್ರಕರಣಗಳ ಕಾರ್ಯನಿರ್ವಹಣಾ ವರದಿ ಸಲ್ಲಿಸಬೇಕು ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ ಅವರು ಉನ್ನತ ಶಿಕ್ಷಣ ಇಲಾಖೆಯ ವಿಶೇಷ ಕಾರ್ಯದರ್ಶಿ ಶ್ರೀಕರ ಅವರಿಗೆ ಸೂಚಿಸಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಅಕ್ರಮ ನೇಮಕಾತಿ, ಅಂಕಪಟ್ಟಿ, ಕಾಮಗಾರಿ ಮತ್ತು ಖರೀದಿ ಹಗರಣಗಳ ಕುರಿತ ತನಿಖೆಗೆ ಸರ್ಕಾರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ಪದ್ಮರಾಜ ನೇತೃತ್ವದ ಆಯೋಗ ರಚಿಸಿತ್ತು. ಆಯೋಗದ ವರದಿಯನ್ವಯ ರಾಜ್ಯಪಾಲರ ಆದೇಶದಂತೆ ಧಾರವಾಡ ಲೋಕಾಯುಕ್ತ ಠಾಣೆಯಲ್ಲಿ ಕವಿವಿಯ ಅಂದಿನ ಕುಲಪತಿ ಪ್ರೊ. ವಾಲೀಕಾರ ವಿರುದ್ಧ 2014ರ ಅ. 7ರಂದು ಪ್ರಕರಣ ದಾಖಲಾಗಿತ್ತು. ಕುಲಪತಿ ಪ್ರೊ. ಅವರ ಸೇವಾವಧಿಯ ವಾಲೀಕಾರ ಕೆಲವೇ ದಿನಗಳು ಬಾಕಿ ಇದ್ದಾಗ ಅವರ ಕಚೇರಿಯಿಂದಲೇ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿ ನಂತರ ಕುಲಪತಿ ಹುದ್ದೆಯಿಂದ ಅಮಾನತುಗೊಂಡಿದ್ದರು.
Also Read: ನಿದ್ದೆ ಮಾಡುವುದಕ್ಕೆ ನೀವೇ ಬ್ರ್ಯಾಂಡ್ ಅಂಬಾಸಿಡರ್, ನಿದ್ದೆರಾಮಯ್ಯ ಎಂದೇ ನಿಮಗೆ ಹೆಸರಿದೆ: ಆರ್ ಅಶೋಕ್
ತಮ್ಮ ವಿರುದ್ಧದ ಕ್ರಮವನ್ನು ಪ್ರಶ್ನಿಸಿ ಪ್ರೊ. ಎಚ್.ಬಿ. ವಾಲೀಕಾರ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ ಅನ್ವಯ ತನಿಖಾ ಆಯೋಗದ ವರದಿಯನ್ವಯ ಸರ್ಕಾರ ಕ್ರಮ ವಹಿಸಲು ಆದೇಶಿಸಬೇಕಿತ್ತು. ಆದರೆ, ಕುಲಾಧಿಪತಿಗಳೇ ನೇರವಾಗಿ ಕ್ರಮಕ್ಕೆ ಆದೇಶ ಹೊರಡಿಸಿದ್ದು ತಾಂತ್ರಿಕವಾಗಿ ಸಿಂಧುವಲ್ಲ ಎಂಬ ಕಾರಣಕ್ಕೆ ಕುಲಾಧಿಪತಿಗಳ ಆದೇಶ ಮತ್ತು ಎಫ್‌ಐಆರ್ ರದ್ದುಗೊಳಿಸಿ ನ್ಯಾಯಾಲಯ ಆದೇಶಿಸಿತ್ತು.
ಆದರೆ, ಹಗರಣಗಳ ಬಗ್ಗೆ ರಾಜ್ಯ ಸರ್ಕಾರ ನಿಯಮಾನುಸಾರ ಪ್ರಕ್ರಿಯೆ ಅನುಸರಿಸಿ ಕಾನೂನು ಕ್ರಮ ಜರುಗಿಸಬಹುದು ಎಂದು ತೀರ್ಪಿನಲ್ಲಿ ತಿಳಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದ ಪ್ರೊ. ವಾಲೀಕಾರ ಅವರು, ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಪ್ರೊ. ವಾಲೀಕಾರ ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಜರುಗಿಸಲು ಯಾವುದೇ ಅಡೆತಡೆ ಇಲ್ಲ ಎಂದು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಆದೇಶಿಸಿತ್ತು.
ಇದೀಗ ರಾಜ್ಯಪಾಲರು ಕರ್ನಾಟಕ ವಿಶ್ವವಿದ್ಯಾಲಯದ ಪ್ರಕರಣಗಳಿಗೆ ಸಂಬಂಧಿಸಿ ಕಾರ್ಯನಿರ್ವಹಣಾ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದಾರೆ. ಆದರೆ, ಅದೇ ಕಾಲಘಟ್ಟದಲ್ಲಿ ಜರುಗಿದ್ದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 14 ಗಂಭೀರ ಹಗರಣಗಳ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ. ಭಕ್ತವತ್ಸಲ ನೇತೃತ್ವದ ಆಯೋಗ ಸಲ್ಲಿಸಿದ್ದ ವರದಿಗಳ ಕುರಿತು ವರದಿ ಕೇಳದಿರುವುದು ಕುತೂಹಲ ಮೂಡಿಸಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ