ಹುಬ್ಬಳ್ಳಿ ಏರ್‌ಪೋರ್ಟ್‌ಗೆ ಬಂತು ಹೈಟೆಕ್ ‘ಮೂವಿಂಗ್ ಆಫೀಸ್’: ನೆಟ್‌ವರ್ಕ್ ಇಲ್ಲದಿದ್ದರೂ ಕೆಲಸ ಮಾಡುತ್ತೆ ಈ ಸ್ಯಾಟಲೈಟ್ ವಾಹನ!

ತುರ್ತು ಪರಿಸ್ಥಿತಿ ಹಾಗೂ ಹೈಜಾಕ್‌ನಂತಹ ಬಿಕ್ಕಟ್ಟುಗಳನ್ನು ನಿರ್ವಹಿಸಲು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ 87 ಲಕ್ಷ ರೂ. ವೆಚ್ಚದ ಅತ್ಯಾಧುನಿಕ ‘ಮೊಬೈಲ್ ಕಮಾಂಡ್ ಪೋಸ್ಟ್ (MCP)’ ವಾಹನವನ್ನು ನಿಯೋಜಿಸಲಾಗಿದೆ. ಈ ಸೌಲಭ್ಯ ಪಡೆದ ಕರ್ನಾಟಕದ ಮೊದಲ ಎಎಐ (ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ) ವಿಮಾನ ನಿಲ್ದಾಣ ಹುಬ್ಬಳ್ಳಿಯಾಗಿದೆ.

ಹುಬ್ಬಳ್ಳಿ ಏರ್‌ಪೋರ್ಟ್‌ಗೆ ಬಂತು ಹೈಟೆಕ್ ‘ಮೂವಿಂಗ್ ಆಫೀಸ್’: ನೆಟ್‌ವರ್ಕ್ ಇಲ್ಲದಿದ್ದರೂ ಕೆಲಸ ಮಾಡುತ್ತೆ ಈ ಸ್ಯಾಟಲೈಟ್ ವಾಹನ!
'ಮೊಬೈಲ್ ಕಮಾಂಡ್ ಪೋಸ್ಟ್' ವಾಹನ
Image Credit source: Times of India

Updated on: May 19, 2026 | 11:53 AM

ಹುಬ್ಬಳ್ಳಿ, ಮೇ 19: ವಿಮಾನ ನಿಲ್ದಾಣಗಳಲ್ಲಿ ಸಂಭವಿಸಬಹುದಾದ ತುರ್ತು ಪರಿಸ್ಥಿತಿಗಳು ಹಾಗೂ ಬಿಕ್ಕಟ್ಟುಗಳನ್ನು ಕ್ಷಿಪ್ರವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಹುಬ್ಬಳ್ಳಿ (Hubballi) ವಿಮಾನ ನಿಲ್ದಾಣವು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ತುರ್ತು ರಕ್ಷಣಾ ಕಾರ್ಯಾಚರಣೆ ಹಾಗೂ ಭದ್ರತಾ ಸವಾಲುಗಳನ್ನು ಎದುರಿಸಲು ಸಹಕಾರಿಯಾಗುವ ಅತ್ಯಾಧುನಿಕ ‘ಮೊಬೈಲ್ ಕಮಾಂಡ್ ಪೋಸ್ಟ್’ (MCP) ಅಥವಾ ಮೊಬೈಲ್ ಕ್ರಿಸಿಸ್ ಕಮಾಂಡ್ ವಾಹನವನ್ನು ಹುಬ್ಬಳ್ಳಿ ಏರ್‌ಪೋರ್ಟ್‌ನಲ್ಲಿ ನಿಯೋಜಿಸಲಾಗಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (AAI) ವ್ಯಾಪ್ತಿಗೆ ಒಳಪಡುವ ಕರ್ನಾಟಕದ ವಿಮಾನ ನಿಲ್ದಾಣಗಳ ಪೈಕಿ ಈ ಅತ್ಯಾಧುನಿಕ ಸೌಲಭ್ಯ ಪಡೆದ ಮೊದಲ ಏರ್​ಪೋರ್ಟ್ ಎಂಬ ಹೆಗ್ಗಳಿಕೆಗೆ ಹುಬ್ಬಳ್ಳಿ ಪಾತ್ರವಾಗಿದೆ.

ಮುಖ್ಯಾಂಶಗಳು

  • ರಾಜ್ಯದಲ್ಲೇ AAI ನಿರ್ವಹಿಸುವ ವಿಮಾನ ನಿಲ್ದಾಣಗಳಲ್ಲಿ ಇದೇ ಮೊದಲು.
  • ₹87 ಲಕ್ಷ ವೆಚ್ಚದ ಹೈಟೆಕ್ ವಾಹನ.
  • ಅಡ್ವಾನ್ಸ್ಡ್ ಕಮ್ಯುನಿಕೇಶನ್ ಸಿಸ್ಟಮ್.

ಮೊಬೈಲ್ ಕಮಾಂಡ್ ಪೋಸ್ಟ್ ವೆಹಿಕಲ್ ಎಂದರೇನು?

ಇದು ವಿಮಾನ ನಿಲ್ದಾಣದ ರನ್‌ವೇ ಅಥವಾ ಸುತ್ತಮುತ್ತಲಿನ ಪರಿಸರದಲ್ಲಿ ವಿಮಾನ ಅಪಘಾತ, ವಿಮಾನ ಹೈಜಾಕ್ (ಅಪಹರಣ) ನಂತಹ ತುರ್ತು ಪರಿಸ್ಥಿತಿಗಳು ಎದುರಾದಾಗ ಬಳಸಲಾಗುವ ಒಂದು ಸಂಚಾರಿ ನಿಯಂತ್ರಣ ಕೊಠಡಿಯಾಗಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಅಧಿಕಾರಿಗಳು ಕಚೇರಿಗಳಲ್ಲಿ ಕುಳಿತು ನಿರ್ಧಾರ ಕೈಗೊಳ್ಳುವುದು ಕಷ್ಟವಾಗುತ್ತದೆ. ಈ ವಾಹನವು ಘಟನಾ ಸ್ಥಳಕ್ಕೇ ಧಾವಿಸಿ, ಅಲ್ಲಿಯೇ ಹಿರಿಯ ಅಧಿಕಾರಿಗಳು ತುರ್ತು ಸಭೆ ನಡೆಸಿ ಕ್ಷಿಪ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಒಂದು ಅತ್ಯಾಧುನಿಕ ಮೀಟಿಂಗ್ ಕೊಠಡಿಯಾಗಿ ಮತ್ತು ತಾತ್ಕಾಲಿಕ ಕಚೇರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ವಿವಿಧ ರಕ್ಷಣಾ ಏಜೆನ್ಸಿಗಳ ನಡುವೆ ಸಮನ್ವಯ ಸಾಧಿಸಲು ಸಹಾಯ ಮಾಡುತ್ತದೆ.

ಮೊಬೈಲ್ ಕ್ರಿಸಿಸ್ ಕಮಾಂಡ್ ವೆಹಿಕಲ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಈ ವಾಹನವು ಒಳಗಿನಿಂದ ಸಂಪೂರ್ಣ ಡಿಜಿಟಲ್ ತಂತ್ರಜ್ಞಾನವನ್ನು ಹೊಂದಿದೆ. ವಿಮಾನ ನಿಲ್ದಾಣದ ಒಳಗೆ ಮತ್ತು ಸುತ್ತಮುತ್ತಲಿನ ಪರಿಸರದ ಮೇಲೆ ಹದ್ದಿನ ಕಣ್ಣಿಡಲು ಇದರಲ್ಲಿ 360-ಡಿಗ್ರಿ ವ್ಯೂವ್ (ವೀಕ್ಷಣೆ) ವ್ಯವಸ್ಥೆ ಇದೆ. ವಾಹನದ ಒಳಗಡೆ ದೊಡ್ಡ ವೀಡಿಯೊ ವಾಲ್‌ಗಳು (Screen) ಮತ್ತು ಮಲ್ಟಿಪಲ್ ಮಾನಿಟರ್‌ಗಳನ್ನು ಅಳವಡಿಸಲಾಗಿದ್ದು, ಇವುಗಳ ಮೂಲಕ ವಿಮಾನ ನಿಲ್ದಾಣದ ಸಿಸಿಟಿವಿ ಫೀಡ್‌ಗಳು ಮತ್ತು ಡ್ರೋನ್‌ಗಳು ಸೆರೆಹಿಡಿಯುವ ದೃಶ್ಯಗಳನ್ನು ಲೈವ್ ಆಗಿ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿಗೆ ಬಾಂಗ್ಲಾ ನುಸುಳುಕೋರರ ಲಗ್ಗೆ? ರೈಲ್ವೆ ಪೊಲೀಸರ ವಿರುದ್ಧ ಭುಗಿಲೆದ್ದ ಆಕ್ರೋಶ

ಅಲ್ಲದೆ, ಯಾವುದೇ ನೆಟ್‌ವರ್ಕ್ ಸಮಸ್ಯೆ ಎದುರಾಗದಂತೆ ತಡೆಯಲು ಈ ವಾಹನದಲ್ಲಿ ವೆರಿ ಹೈ ಫ್ರೀಕ್ವೆನ್ಸಿ (VHF) ಮತ್ತು ಅಲ್ಟ್ರಾ ಹೈ ಫ್ರೀಕ್ವೆನ್ಸಿ (UHF) ಕಮ್ಯುನಿಕೇಶನ್ ಸಿಸ್ಟಂ ಅಳವಡಿಸಲಾಗಿದೆ. ಇದು ಏರ್ ಟ್ರಾಫಿಕ್ ಕಂಟ್ರೋಲ್ (ATC), ಅಗ್ನಿಶಾಮಕ ದಳ ಮತ್ತು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯೊಂದಿಗೆ ನಿರಂತರ ಮತ್ತು ತಡೆರಹಿತ ಸಂಪರ್ಕ ಸಾಧಿಸಲು ನೆರವಾಗುತ್ತದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ್ ಕುಮಾರ್ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:42 am, Tue, 19 May 26

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us