ಹುಬ್ಬಳ್ಳಿಯ ಅಸಾರ ಓಣಿಯ ಪುಷ್ಕರಣಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದೇಕೆ? ಏನಿದರ ಹಿನ್ನೆಲೆ?

Hubballi Pushkarani Row: ಸಾವಿರ ವರ್ಷಗಳ ಇತಿಹಾಸವಿರುವ ಹುಬ್ಬಳ್ಳಿಯ ಪ್ರಸಿದ್ಧ ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಇದೀಗ ತೀವ್ರ ವಿವಾದದ ಕೇಂದ್ರಬಿಂದುವಾಗಿದೆ. ಪುಷ್ಕರಣಿ ಜಾಗವನ್ನು ಅಕ್ರಮವಾಗಿ ಕಬಳಿಸಿ, ರಸ್ತೆ ನಿರ್ಮಿಸಲಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಹುಬ್ಬಳ್ಳಿಯ ಅಸಾರ ಓಣಿಯ ಪುಷ್ಕರಣಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದೇಕೆ? ಏನಿದರ ಹಿನ್ನೆಲೆ?
ಪುಷ್ಕರಣಿ ವಿವಾದ
Image Credit source: tv9 kannada
Edited By:

Updated on: Aug 22, 2026 | 3:56 PM

ಹುಬ್ಬಳ್ಳಿ, ಆಗಸ್ಟ್​​ 22: ಹುಬ್ಬಳ್ಳಿ (Hubballi) ನಗರದಲ್ಲಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ಪುರಾತನ ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ವಿವಾದ (Pushkarani) ಸದ್ಯ ತೀವ್ರ ಸ್ವರೂಪ ಪಡೆದುಕೊಂಡಿದೆ. ಪುಷ್ಕರಣಿ ಜಾಗದಲ್ಲಿ ಪಾಲಿಕೆ ರಸ್ತೆ ನಿರ್ಮಿಸಿದ್ದು, ಅದನ್ನು ತೆರವುಗೊಳಿಸಬೇಕು ಎಂದ ಆಗ್ರಹ ಜೋರಾಗಿದೆ. ಈ ವಿಚಾರವಾಗಿ ಸಿಸಿ ರಸ್ತೆ ತೆರವುಗೊಳಿಸುವಂತೆ ಆಗ್ರಹಿಸಿ ಇಂದು ಹುಬ್ಬಳ್ಳಿಯಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ಮಾಡಿದರು. ಈ ವೇಳೆ ತಳ್ಳಾಟ ನೂಕಾಟ ನಡೆದಿದೆ.

ಏನಿದು ವಿವಾದ?

ಹುಬ್ಬಳ್ಳಿ ನಗರದ ಅಸಾರ್ ಓಣಿಯಲ್ಲಿ ಸಾವಿರ ವರ್ಷಗಳ ಪುರಾತನವಾದ ಭವಾನಿ ಶಂಕರ ದೇವಸ್ಥಾನವಿದೆ. ಚಾಲುಕ್ಯರ ಕಾಲದಲ್ಲೇ ಈ ದೇವಸ್ಥಾನ ನಿರ್ಮಿಸಲಾಗಿದ್ದು, ಪ್ರತಿನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಅನೇಕ ಭಕ್ತರು ಕೂಡ ಆಗಮಿಸುತ್ತಾರೆ. ರಾಜ್ಯ ಪುರಾತತ್ವ ಇಲಾಖೆಯ ಅಧೀನದಲ್ಲಿರುವ ಈ ದೇವಾಲಯದ ಸಮೀಪ ಪುಷ್ಕರಣಿ ಇತ್ತು. ದೇವಾಲಯದ ಪುಷ್ಕರಣಿ ಇದ್ದ ಬಗ್ಗೆ ಬಾಂಬೆ ಗೆಜೆಟಿಯರ್ ಸೇರಿದಂತೆ ಅನೇಕ ಕಡೆ ದಾಖಲೆಗಳಿವೆ. ಪುಷ್ಕರಣಿ ಜಾಗವನ್ನು ಪುರಾತತ್ವ ಇಲಾಖೆ ರಕ್ಷಣೆ ಮಾಡಬೇಕಿತ್ತು. ಆದರೆ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಇದೇ ಜಾಗದಲ್ಲಿ ಇದೀಗ ಪಾಲಿಕೆಯಿಂದ 25 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ರಸ್ತೆಯನ್ನು ತೆರವುಗೊಳಿಸುವಂತೆ ಹಿಂದೂಪರ ಸಂಘಟನೆಗಳು ಪ್ರತಿಭಟಿಸಿದರು.

ಇದನ್ನೂ ಓದಿ: ಹಳೇ ಹುಬ್ಬಳ್ಳಿ ಆಸಾರ ಓಣಿಯ ಪುಷ್ಕರಣಿ ವಿವಾದ: ಎಂಎಲ್​ಸಿ ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ

ಪುಷ್ಕರಣಿ ಇದ್ದ ಜಾಗದಲ್ಲಿ ಪಾಲಿಕೆಯಿಂದ ರಸ್ತೆ ನಿರ್ಮಾಣಕ್ಕೆ ನಾವು ಆಕ್ಷೇಪ ವ್ಯಕ್ತಪಡಿಸಿದ್ದೆವು. ಆದರೂ ಪೊಲೀಸ್ ಬಂದೋಬಸ್ತ್​​ನಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ ಪಾಲಿಕೆ ವತಿಯಿಂದ ರಸ್ತೆ ನಿರ್ಮಾಣ ಮಾಡಿರುವುದು ಪುಷ್ಕರಣಿ ಇದ್ದ ಜಾಗದಲ್ಲಿ. ಹೀಗಾಗಿ ರಸ್ತೆಯನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಹಿಂದೂಪರ ಸಂಘಟನೆಗಳಿಂದ ಇಂದು ಹೋರಾಟಕ್ಕೆ ಕರೆ ನೀಡಲಾಗಿತ್ತು. ವಿವಾದಿತ ಸ್ಥಳಕ್ಕೆ ನುಗ್ಗಿ ರಸ್ತೆ ಕಿತ್ತು ಹಾಕುತ್ತೇವೆ ಅಂತ ಹಿಂದೂಪರ ಸಂಘಟನೆ ಕಾರ್ಯಕರ್ತರು ಹೇಳಿದ್ದರು. ಹೀಗಾಗಿ ವಿವಾದಿತ ಜಾಗದ ಸುತ್ತಮುತ್ತ 500 ಮೀವರಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ದೇವಸ್ಥಾನದ ಸುತ್ತಮುತ್ತ ಸಾಕಷ್ಟು ಸಂಖ್ಯೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಇರುವ ಕಾರಣಕ್ಕೆ, ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಅನ್ನೋ ಉದ್ದೇಶದಿಂದ ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್ ಮಾಡಲಾಗಿತ್ತು.

200 ಹೆಚ್ಚು ಪ್ರತಿಭಟನಾಕಾರರು ಪೊಲೀಸ್​ ವಶಕ್ಕೆ

ಇನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಚನ್ನಪೇಟ ರಸ್ತೆಯಲ್ಲಿರುವ ಸಾರ್ವಜನಿಕ ಉದ್ಯಾನವನ ಬಳಿ ಸೇರಿದ ಹಿಂದೂಪರ ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಶಾಸಕ ಮಹೇಶ್ ಟೆಂಗಿನಕಾಯಿ, ಅರವಿಂದ್ ಬೆಲ್ಲದ, ಎಂಎಲ್​​ಸಿ ಪ್ರದೀಪ್ ಶೆಟ್ಟರ್, ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸೇರಿದಂತೆ ಸಾಕಷ್ಟು ಸಂಖ್ಯೆಯ ಹಿಂದೂಪರ ಕಾರ್ಯಕರ್ತರು ಭಾಗಿಯಾಗಿದ್ದರು. ಪ್ರತಿಭಟನೆ ನಂತರ ವಿವಾದಿತ ಸ್ಥಳಕ್ಕೆ ನುಗ್ಗಲು ಮುಂದಾದ 200 ಅಧಿಕ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ಬೇಡಿಕೆ ಈಡೇರುವವರೆಗೂ ಹೋರಾಟ ಎಂದ ಪ್ರತಿಭಟನಾಕಾರರು 

ಇಂದಿನ ಹೋರಾಟವನ್ನು ಕೂಡ ಹತ್ತಿಕ್ಕುವ ಕೆಲಸ ಮಾಡಿದ್ದಾರೆ ಅಂತ ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಪುಷ್ಕರಣಿ ಜಾಗವನ್ನು ಉತ್ಖನನ ಮಾಡಬೇಕು, ಅಲ್ಲಿವರಗೆ ಯಾವುದೇ ಕಾಮಗಾರಿ ನಡೆಸಬಾರದು ಅಂತ ಆಗ್ರಹಿಸಿದರು. ತಮ್ಮ ಬೇಡಿಕೆ ಈಡೇರುವವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಇದನ್ನೂ ಓದಿ: ತಾರಕಕ್ಕೇರಿದ ಹಳೇ ಹುಬ್ಬಳ್ಳಿ ಆಸಾರ ಓಣಿಯ ಪುಷ್ಕರಣಿ ವಿವಾದ: ಇಂದು ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ, ನಿಷೇಧಾಜ್ಞೆ ಜಾರಿ

ಭವಾನಿ ಶಂತರ ದೇವಸ್ಥಾನದ ಪುಷ್ಕರಣಿ ವಿವಾದ ಇದೀಗ ತಾರಕಕ್ಕೇರಿದೆ. ಈ ಬಗ್ಗೆ ಉಂಟಾಗಿರುವ ಗೊಂದಲಗಳನ್ನು ಪುರಾತತ್ವ ಇಲಾಖೆ ಬಗೆಹರಿಸುವ ಕೆಲಸ ಮಾಡಬೇಕಿದೆ. ಪುಷ್ಕರಣಿ ಇತ್ತಾ, ಇಲ್ಲವಾ ಎನ್ನುವುದನ್ನು ಸಮಗ್ರವಾಗಿ ಪರಿಶೀಲಿಸಬೇಕಿದೆ.

Hubballi: ಹುಬ್ಬಳ್ಳಿಯ ಆಸಾರ ಓಣಿಯ ಪುಷ್ಕರಣಿ ಜಾಗ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದೇಕೆ? |#TV9D

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us