ಹು-ಧಾ ಪಾಲಿಕೆಗೆ ಕೋಟಿ ಕೋಟಿ ನಷ್ಟ: ಕಲಾವಿದರ ನಿವೇಶನ ಅಕ್ರಮ ಮಾರಾಟ ಬಯಲು

ಒಂದೆಡೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರೆ, ಮತ್ತೊಂದೆಡೆ ಪಾಲಿಕೆಗೆ ಕೋಟ್ಯಂತರ ರೂಪಾಯಿ ಆದಾಯ ಬರುವ ಮೂಲಗಳಲ್ಲೇ ಅಕ್ರಮಗಳು ನಡೆಯುತ್ತಿವೆ. ಭೂ ಮಾಫಿಯಾ ಸಕ್ರಿಯವಾಗಿದೆ. ಇನ್ನು ಅಕ್ರಮದಲ್ಲಿ ಪಾಲಿಕೆಯ ಅಧಿಕಾರಿಗಳು ಮತ್ತು ಕೆಲ ಜನಪ್ರತಿನಿಧಿಗಳು ಸಾಥ್ ನೀಡಿರುವ ಆರೋಪಗಳೂ ಕೇಳಿಬರುತ್ತಿವೆ.

ಹು-ಧಾ ಪಾಲಿಕೆಗೆ ಕೋಟಿ ಕೋಟಿ ನಷ್ಟ: ಕಲಾವಿದರ ನಿವೇಶನ ಅಕ್ರಮ ಮಾರಾಟ ಬಯಲು
ನಿವೇಶನಗಳ ಅಕ್ರಮ ಮಾರಾಟ
Image Credit source: tv9 kannada
Edited By:

Updated on: May 15, 2026 | 3:07 PM

ಹುಬ್ಬಳ್ಳಿ, ಮೇ 15: ಒಂದಡೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (Hubballi-Dharwad Corporation) ಆದಾಯ ಕೊರತೆಯಿಂದ ಬಳಲುತ್ತಿದೆ. ಮತ್ತೊಂದಡೆ ಪಾಲಿಕೆಗೆ ಆದಾಯ ಬರುವ ಮೂಲಗಳಲ್ಲಿ ಅಕ್ರಮಗಳು ನಡೆದಿದ್ದರೂ ಪಾಲಿಕೆ ಯಾವುದೇ ಕ್ರಮಕೈಗೊಳ್ಳದೆ ಕಣ್ಣುಮುಚ್ಚಿಕೊಂಡಿದೆ. ಕಲಾವಿದರ ಕಾಲೋನಿಯಲ್ಲಿ ಭೂ ಮಾಫಿಯಾ ದಲ್ಲಾಳಿಗಳು, ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಸೈಟ್​​ಗಳನ್ನು ಅಕ್ರಮವಾಗಿ ಪರಬಾರೆ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಕ್ರಮಕೈಗೊಳ್ಳಬೇಕಿದ್ದ ಪಾಲಿಕೆ ಮೌನಕ್ಕೆ ಶರಣಾಗಿದ್ದು, ಅಕ್ರಮದಲ್ಲಿ ಪಾಲಿಕೆಯ ಅಧಿಕಾರಿಗಳು ಮತ್ತು ಕೆಲ ಜನಪ್ರತಿನಿಧಿಗಳು ಸಾಥ್ ನೀಡಿರುವ ಆರೋಪಗಳು ಕೇಳಿಬರುತ್ತಿವೆ.

ಮುಖ್ಯಾಂಶಗಳು

  • ಹುಬ್ಬಳ್ಳಿ-ಧಾರವಾಡ ಪಾಲಿಕೆ ನಿವೇಶನಗಳು ಅಕ್ರಮ ಮಾರಾಟ
  • ಸಕ್ರಿಯಗೊಂಡ ಭೂ ಮಾಫಿಯಾ; ನಕಲಿ ದಾಖಲೆ ಸೃಷ್ಟಿಸಿ ಮಾರಾಟ
  • ಪಾಲಿಕೆಯ ಆದಾಯಕ್ಕೂ ಕತ್ತರಿ

ಘಟನೆ ಹಿನ್ನೆಲೆ 

ಹುಬ್ಬಳ್ಳಿಯ ಆನಂದ ನಗರದಲ್ಲಿ ಕಲಾವಿದರು ಸೇರಿದಂತೆ ಅನೇಕ ಹಿಂದುಳಿದ ವರ್ಗಗಳ ಜನರಿಗಾಗಿ 1980 ರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಿವೇಶನಗಳನ್ನು ನೀಡಿತ್ತು. ಪಾಲಿಕೆಯ ಒಡೆತನದ ಆಸ್ತಿಯನ್ನು ನಿವೇಶನಗಳನ್ನಾಗಿ ಮಾಡಿ, ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ನೀಡಲಾಗಿತ್ತು. ಸರಿಸುಮಾರು ಮೂರುವರೆ ಸಾವಿರ ಫಲಾನುಭವಿಗಳಿಗೆ ಆ ಸಮಯದಲ್ಲಿ ಹಕ್ಕುಪತ್ರ ನೀಡಿತ್ತು. ಹಕ್ಕುಪತ್ರ ನೀಡುವ ಸಮಯದಲ್ಲಿ, 20 ವರ್ಷಗಳ ಕಾಲ ನಿವೇಶನಗಳನ್ನು ಮಾರಾಟ ಮಾಡಬಾರದು. ಆ ಬಳಿಕ ಮಾರಾಟ ಮಾಡಿದರೆ ನಿವೇಶನದ ಅಂದಿನ ಮಾರ್ಕೆಟ್ ಬೆಲೆಯ ಶೇಕಡ 25ರಿಂದ 50ರಷ್ಟು ಹಣವನ್ನು ಪಾಲಿಕೆಗೆ ಸಂದಾಯ ಮಾಡಬೇಕು. ಪಾಲಿಕೆಯಿಂದ ಮಾರಾಟ ಪರವಾನಗಿ ಪತ್ರವನ್ನು ಪಡೆದ ನಂತರವೇ ಮಾರಾಟ ಮಾಡಬೇಕು ಎಂಬ ನಿಯಮಗಳನ್ನು ವಿಧಿಸಲಾಗಿತ್ತು.

ಇದನ್ನೂ ಓದಿ: ಜಗದ್ಗುರುಗಳ ಸಮ್ಮುಖದಲ್ಲಿ ಸ್ವಾಮೀಜಿ-ಭಕ್ತರ ಸಂಧಾನ: ಏನಿದು ಕುಂದಗೋಳ ಮಠದ ವಿವಾದ?

ನಿವೇಶನಗಳನ್ನು ಪಡೆದವರ ಪೈಕಿ ಕೆಲವರು, 20 ವರ್ಷಗಳ ನಂತರ ತಮ್ಮ ನಿವೇಶನಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಪಾಲಿಕೆ ವಿಧಿಸಿದ್ದ ಷರತ್ತುಗಳನ್ನು ಮಾತ್ರ ಬಹುತೇಕರು ಪಾಲಿಸುತ್ತಿಲ್ಲ. ಪಾಲಿಕೆಗೆ ಸದ್ಯದ ನಿವೇಶನದ ಮಾರ್ಕೆಟ್​ ಬೆಲೆಯ ಶೇಕಡ 50ರಷ್ಟು ಹಣವನ್ನು ಕಟ್ಟುತ್ತಿಲ್ಲ. ಇನ್ನು ಮಾರಾಟ ಪರವಾನಗಿ ಪತ್ರಗಳನ್ನೇ ನಕಲು ಮಾಡಿ ಮಾರಾಟ ಮಾಡುತ್ತಿದ್ದಾರಂತೆ ಎಂದು ಸ್ವತಃ ಪಾಲಿಕೆಯ ಸದಸ್ಯ ಆರೀಪ್ ಭದ್ರಾಪುರ ಗಂಭೀರ ಆರೋಪ ಮಾಡಿದ್ದಾರೆ.

ದೊಡ್ಡ ದಂಧೆ ಪತ್ತೆ: ಕೈಕಟ್ಟಿ ಕೂತ ಅಧಿಕಾರಿಗಳು

ಪಾಲಿಕೆಯ ಅಧಿಕಾರಿಗಳ ನಕಲಿ ಸಹಿ, ನಕಲಿ ಮಾರಾಟ ಪರವಾನಗಿ ಪತ್ರಗಳನ್ನು ಸೃಷ್ಟಿ ಮಾಡಿ, ಬೇರೆಯವರಿಗೆ ಪಾಲಿಕೆ ನೀಡಿದ್ದ ನಿವೇಶಗಳನ್ನು ಮಾರಾಟ ಮಾಡುವ ದೊಡ್ಡ ದಂಧೆಯೇ ಕಲಾವಿದರ ಕಾಲೋನಿ ಮತ್ತು ಆನಂದ ನಗರದಲ್ಲಿ ನಡೆದಿದೆ. ಆದರೆ ಇದೆಲ್ಲವು ಗೊತ್ತಿದ್ದರು ಕೂಡ ಪಾಲಿಕೆಯ ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲವಂತೆ. ಪಾಲಿಕೆಯ ಕಮಿಷನರ್ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ಇದ್ದರು ಕೈಕಟ್ಟಿ ಕೂತಿದ್ದಾರೆ ಅಂತ ಪಾಲಿಕೆ ಸದಸ್ಯ ಆರೀಪ್ ಭದ್ರಾಪುರ ಆರೋಪಿಸಿದ್ದಾರೆ.

ಇನ್ನು ಈ ಮಾಫಿಯಾದಲ್ಲಿ ಕೆಲ ಜನಪ್ರತಿನಿಧಿಗಳು, ಪಾಲಿಕೆಯ ಅಧಿಕಾರಿಗಳು, ಲ್ಯಾಂಡ್ ಮಾಫಿಯಾದವರ ಕೈವಾಡವಿದೆಯಂತೆ. ಸದ್ಯ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆದಾಯದ ಕೊರತೆಯಿಂದ ಬಳಲುತ್ತಿದೆ. ಯಾವುದೇ ಕಾಮಗಾರಿ ಮಾಡಿ ಅಂತ ಹೇಳಿದರು ಕೂಡ ಪಾಲಿಕೆಯಲ್ಲಿ ಹಣವಿಲ್ಲ ಅಂತ ಪಾಲಿಕೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ನಿವೇಶನಗಳ ಮಾರಾಟಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದರೆ ಪಾಲಿಕೆಯ ಬೊಕ್ಕಸಕ್ಕೆ ಹೆಚ್ಚಿನ ಹಣವು ಹರಿದು ಬರುತ್ತದೆ. ಆದರೆ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದ್ದರು ಕೂಡ ಪಾಲಿಕೆಯ ಅಧಿಕಾರಿಗಳು ಕೈಕಟ್ಟಿ ಕೂತಿರುವುದು ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಪಾಲಿಕೆ ವಿಭಜನೆಗೆ ಬಿಜೆಪಿಯಿಂದ ಹೊಸ ತಗಾದೆ: ಇಲ್ಲಿದೆ ಅಸಲಿ ಕಾರಣ

ಕಲಾವಿದರ ಕಾಲೋನಿ, ಆನಂದ ನಗರ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಈ ಹಿಂದೆ ಪಾಲಿಕೆ ನೀಡಿದ್ದ ನಿವೇಶನಗಳ ಅಕ್ರಮ ಮಾರಾಟಕ್ಕೆ ಪಾಲಿಕೆಯ ಅಧಿಕಾರಿಗಳು ಬ್ರೇಕ್ ಹಾಕಬೇಕಿದೆ. ನಿಯಮಾನುಸಾರ ಪಾಲಿಕೆಗೆ ಹಣ ಕಟ್ಟಿದವರಿಗೆ ಮಾತ್ರ ಮಾರಾಟ ಪರವಾನಗಿ ಪತ್ರಗಳನ್ನು ನೀಡಬೇಕಿದೆ. ಅಕ್ರಮಕ್ಕೆ ಬೆಂಬಲಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us