ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ: ಎರಡು ವರ್ಷಗಳಲ್ಲಿ 70ಕ್ಕೂ ಹೆಚ್ಚು ‘ಸ್ಕಲ್ ಬೇಸ್ ಆಸ್ಟಿಯೋಮೈಲೈಟಿಸ್’ ರೋಗಿಗಳಿಗೆ ಯಶಸ್ವಿ ಟ್ರೀಟ್​​ಮೆಂಟ್​

ಹುಬ್ಬಳ್ಳಿಯ ಕೆಎಂಸಿಆರ್‌ಐ (KIMS) ಆಸ್ಪತ್ರೆಯ ವೈದ್ಯರು ಕಳೆದ ಎರಡು ವರ್ಷಗಳಲ್ಲಿ 70ಕ್ಕೂ ಹೆಚ್ಚು ರೋಗಿಗಳಿಗೆ ಅಪರೂಪದ 'ಸ್ಕಲ್ ಬೇಸ್ ಆಸ್ಟಿಯೋಮೈಲೈಟಿಸ್' ತಲೆಬುರುಡೆ ಸೋಂಕಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿ ಸಾಧನೆ ಮಾಡಿದ್ದಾರೆ. ಆದರೆ ಆರಂಭದಲ್ಲೇ ಚಿಕಿತ್ಸೆ ಪಡೆದರೆ ಔಷಧಿ ಹಾಗೂ ಇಂಜೆಕ್ಷನ್‌ಗಳ ಮೂಲಕವೇ ಕಾಯಿಲೆಯನ್ನು ನಿಯಂತ್ರಿಸಿ ಶಸ್ತ್ರಚಿಕಿತ್ಸೆಯನ್ನು ತಪ್ಪಿಸಬಹುದು ಎಂದು ವೈದ್ಯರು ತಿಳಿಸಿದ್ದು, ಉತ್ತರ ಕರ್ನಾಟಕದಲ್ಲಿ ಅತ್ಯಾಧುನಿಕ ಲ್ಯಾಟರಲ್ ಸ್ಕಲ್ ಬೇಸ್ ಶಸ್ತ್ರಚಿಕಿತ್ಸಾ ಪರಿಣತಿ ಲಭ್ಯವಿರುವುದರಿಂದ ರೋಗಿಗಳು ಚಿಕಿತ್ಸೆಗಾಗಿ ಬೇರೆ ರಾಜ್ಯಗಳ ತೃತೀಯ ಹಂತದ ಆಸ್ಪತ್ರೆಗಳಿಗೆ ಹೋಗುವ ಅವಶ್ಯಕತೆ ತಪ್ಪಿದೆ.

ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ: ಎರಡು ವರ್ಷಗಳಲ್ಲಿ 70ಕ್ಕೂ ಹೆಚ್ಚು ಸ್ಕಲ್ ಬೇಸ್ ಆಸ್ಟಿಯೋಮೈಲೈಟಿಸ್ ರೋಗಿಗಳಿಗೆ ಯಶಸ್ವಿ ಟ್ರೀಟ್​​ಮೆಂಟ್​
ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ
Image Credit source: Arvind Canchi X Account

Updated on: Jul 07, 2026 | 11:51 AM

ಮುಖ್ಯಾಂಶಗಳು

  • KMCRIನಲ್ಲಿ 'ಸ್ಕಲ್ ಬೇಸ್ ಆಸ್ಟಿಯೋಮೈಲೈಟಿಸ್' ರೋಗಿಗಳಿಗೆ ಯಶಸ್ವಿ ಚಿಕಿತ್ಸೆ
  • 70ಕ್ಕೂ ಹೆಚ್ಚು ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡುವ ಮೂಲಕ ಸಾಧನೆ
  • ಆರಂಭದಲ್ಲೇ ಚಿಕಿತ್ಸೆ ಪಡೆದರೆ ಶಸ್ತ್ರಚಿಕಿತ್ಸೆಯನ್ನು ತಪ್ಪಿಸಬಹುದು ಎಂದ ವೈದ್ಯರು

ಹುಬ್ಬಳ್ಳಿ, ಜುಲೈ 07: ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (KMCRI) ವೈದ್ಯರು ಕಳೆದ ಎರಡು ವರ್ಷಗಳಲ್ಲಿ ‘ಸ್ಕಲ್ ಬೇಸ್ ಆಸ್ಟಿಯೋಮೈಲೈಟಿಸ್’ (Skull Base Osteomyelitis – SBO) ಎಂಬ ಅಪರೂಪದ ಹಾಗೂ ಜೀವಕ್ಕೆ ಅಪಾಯ ಉಂಟುಮಾಡುವ ಸೋಂಕಿನಿಂದ ಬಳಲುತ್ತಿದ್ದ 70ಕ್ಕೂ ಹೆಚ್ಚು ರೋಗಿಗಳಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಹಾಗೂ ಚಿಕಿತ್ಸೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಸೋಂಕು ಸಾಮಾನ್ಯವಾಗಿ ವಯೋವೃದ್ಧರು, ನಿಯಂತ್ರಣದಲ್ಲಿಲ್ಲದ ಮಧುಮೇಹ (ಡಯಾಬಿಟಿಸ್) ಇರುವವರು ಹಾಗೂ ತೀವ್ರ ಕಿವಿ ಸೋಂಕಿನಿಂದ ಬಳಲುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕಿವಿಯಿಂದ ಸೋಂಕು ತಲೆಬುರುಡೆಯ ತಳಭಾಗಕ್ಕೆ (Skull Base) ಹಾಗೂ ಅದರ ಸುತ್ತಲಿನ ಪ್ರಮುಖ ಅಂಗಗಳಿಗೆ ಹರಡಿದರೆ ತೀವ್ರ ಕಿವಿನೋವು, ಅಸಹನೀಯ ತಲೆನೋವು, ಮುಖದ ನರಗಳ ಪಾರ್ಶ್ವವಾಯು, ನುಂಗಲು ತೊಂದರೆ ಮತ್ತು ಮುಂದುವರಿದ ಹಂತದಲ್ಲಿ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆಯಿದೆ.

ಕೆಎಂಸಿಆರ್‌ಐಯ ಕಿವಿ-ಮೂಗು-ಗಂಟಲು (ENT) ಮತ್ತು ಲ್ಯಾಟರಲ್ ಸ್ಕಲ್ ಬೇಸ್ ಶಸ್ತ್ರಚಿಕಿತ್ಸಕರಾದ ಡಾ. ಮಂಜುನಾಥ ದಂಡಿ, ಹಿರಿಯ ಇಎನ್‌ಟಿ ತಜ್ಞ ಡಾ. ರವೀಂದ್ರ ಗದಗ ಹಾಗೂ ಇಎನ್‌ಟಿ ಮತ್ತು ಹೆಡ್-ನೆಕ್ ಸರ್ಜರಿ ವಿಭಾಗದ ತಂಡ ಈ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಅನೇಕ ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡಿದ್ದಾರೆ.  ಡಾ. ಮಂಜುನಾಥ ದಂಡಿ ಅವರ ಪ್ರಕಾರ, ಈ ಕಾಯಿಲೆಯಿಂದ ಬಳಲುವವರು ವಿಶೇಷವಾಗಿ ರಾತ್ರಿ ವೇಳೆ ತೀವ್ರವಾದ ನೋವಿನಿಂದ ನಿದ್ರೆಯಿಲ್ಲದೆ ಬಳಲುತ್ತಾರೆ. ಇದರಿಂದ ಅವರ ಜೀವನದ ಗುಣಮಟ್ಟವೇ ಹದಗೆಡುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಕಾಯಿಲೆಗೆ ಸಾಮಾನ್ಯವಾಗಿ ಇಂಟ್ರಾವೆನಸ್ ಆಂಟಿಬಯೋಟಿಕ್‌ಗಳು ಹಾಗೂ ಕಿವಿಯ ಶಸ್ತ್ರಚಿಕಿತ್ಸೆಯೇ ಪ್ರಮುಖ ಚಿಕಿತ್ಸೆಯಾಗಿದ್ದರೂ, ಕೆಲವರಲ್ಲಿ ದೀರ್ಘಕಾಲ ಚಿಕಿತ್ಸೆ ಪಡೆದ ಬಳಿಕವೂ ಸೋಂಕು ಮತ್ತು ನೋವು ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ. ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೋಗಿಗಳು ಸಾಮಾನ್ಯವಾಗಿ ಕಾಯಿಲೆ ಮುಂದುವರಿದ ಹಂತದಲ್ಲಿ ಕೆಎಂಸಿಆರ್‌ಐಗೆ ಬರುತ್ತಾರೆ. ಆದರೆ ಆರಂಭದಲ್ಲೇ ಚಿಕಿತ್ಸೆ ಪಡೆದರೆ ಔಷಧಿ ಹಾಗೂ ಇಂಜೆಕ್ಷನ್‌ಗಳ ಮೂಲಕವೇ ಕಾಯಿಲೆಯನ್ನು ನಿಯಂತ್ರಿಸಿ ಶಸ್ತ್ರಚಿಕಿತ್ಸೆಯನ್ನು ತಪ್ಪಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಸರ್ಕಾರದ ಕ್ರಮಕ್ಕೆ ಕಂಗಾಲಾದ ವಯೋವೃದ್ಧ ಪಿಂಚಣಿದಾರರು; ಕಚೇರಿಗೆ ಅಲೆದಾಟ

ಉತ್ತರ ಕರ್ನಾಟಕದಲ್ಲೇ ಅತ್ಯಾಧುನಿಕ ಚಿಕಿತ್ಸೆ

ಉತ್ತರ ಕರ್ನಾಟಕದಲ್ಲಿ ಅತ್ಯಾಧುನಿಕ ಲ್ಯಾಟರಲ್ ಸ್ಕಲ್ ಬೇಸ್ ಶಸ್ತ್ರಚಿಕಿತ್ಸಾ ಪರಿಣತಿ ಲಭ್ಯವಿರುವುದರಿಂದ ರೋಗಿಗಳು ಚಿಕಿತ್ಸೆಗಾಗಿ ಬೇರೆ ರಾಜ್ಯಗಳ ತೃತೀಯ ಹಂತದ ಆಸ್ಪತ್ರೆಗಳಿಗೆ ಹೋಗುವ ಅವಶ್ಯಕತೆ ತಪ್ಪಿದೆ. ಮಧುಮೇಹ ಹೊಂದಿರುವವರು ನಿರಂತರ ಕಿವಿನೋವು, ತಲೆನೋವು ಅಥವಾ ಕಿವಿ ಸೋಂಕಿನಂತಹ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ರೋಗಿಗಳಲ್ಲೂ ಹಾಗೂ ಆರೋಗ್ಯ ಸಿಬ್ಬಂದಿಯಲ್ಲೂ ಜಾಗೃತಿ ಮೂಡಿದರೆ ಆರಂಭದಲ್ಲೇ ರೋಗ ಪತ್ತೆಹಚ್ಚಿ ಗಂಭೀರ ಸಮಸ್ಯೆಗಳನ್ನು ತಡೆಯಬಹುದು ಎಂದು ಚಿಕಿತ್ಸಾ ತಂಡ ತಿಳಿಸಿದೆ.

ಇಂತಹ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಹೆಚ್ಚಿನ ಸರ್ಕಾರಿ ಆಸ್ಪತ್ರೆಗಳು ಕೈಗೆತ್ತಿಕೊಳ್ಳುವುದಿಲ್ಲ. ಅನೇಕ ಆಸ್ಪತ್ರೆಗಳು ರೋಗಿಗಳನ್ನು ಚಿಕಿತ್ಸೆಗಾಗಿ ಕೆಎಂಸಿಆರ್‌ಐಗೆ ಕಳುಹಿಸುತ್ತವೆ. ಈ ಶಸ್ತ್ರಚಿಕಿತ್ಸೆಗೆ ಪರಿಣಿತ ವೈದ್ಯರು, ಶಸ್ತ್ರಚಿಕಿತ್ಸೆಯ ನಂತರದ ವಿಶೇಷ ಆರೈಕೆ ಹಾಗೂ ಐಸಿಯು ಸೌಲಭ್ಯ ಅಗತ್ಯವಿದ್ದು, ಇವೆಲ್ಲವೂ ಕೆಎಂಸಿಆರ್‌ಐನಲ್ಲಿ ಲಭ್ಯವಿದೆ ಎಂದು ಹಿರಿಯ ಇಎನ್‌ಟಿ ಶಸ್ತ್ರಚಿಕಿತ್ಸಕರಾದ ಡಾ. ರವೀಂದ್ರ ಗದಗ ತಿಳಿಸಿರೋದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:46 am, Tue, 7 July 26

Follow Us