ಹುಬ್ಬಳ್ಳಿಯಲ್ಲಿ ಕೋಟ್ಯಾಂತರ ರೂ. ಬೆಲೆಬಾಳುವ ಸ್ಥಳಕ್ಕಾಗಿ 3 ಪಕ್ಷಗಳ ಗುದ್ದಾಟ: ಏನಿದು ವಿವಾದ?
ಸ್ಥಳೀಯ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗಿನ ಅಧಿಕಾರಕ್ಕಾಗಿ ರಾಜಕೀಯ ಪಕ್ಷಗಳ ನಡುವಿನ ಕಿತ್ತಾಟ ನೋಡಿದ್ದೇವೆ. ಆದ್ರೆ, ಈಗ ಜಾಗಕ್ಕಾಗಿ ಕಾಂಗ್ರೆಸ್, ಜೆಡಿಯು, ಜೆಡಿಎಸ್ ನಡುವೆ ಗುದ್ದಾಟ ಶುರುವಾಗಿದೆ. ಅದು ಬಹುದೊಡ್ಡ ಬೆಲೆ ಬಾಳುವ ಜಾಗೆ. ಆ ಜಾಗೆಯಲ್ಲಿ ರಾತ್ರಿ ಕಳೆಯುವುದರಲ್ಲಿಯೇ ಬಹುದೊಡ್ಡ ವಿವಾದ ಹುಟ್ಟಿಕೊಂಡಿದೆ. ಬಹುಕೋಟಿ ಬೆಲೆಯ ಜಾಗೆಯ ಮೇಲೆ ಬಹುತೇಕರ ಕಣ್ಣು ನೆಟ್ಟಿದ್ದು, ಮೂರು ರಾಜಕೀಯ ಪಕ್ಷಗಳು ಗುದ್ದಾಟ ನಡೆಸಿವೆ. ಅಷ್ಟಕ್ಕೂ ಯಾವುದು ಆ ಜಾಗ? ಏನಿದು ವಿವಾದ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಹುಬ್ಬಳ್ಳಿ, (ಫೆಬ್ರವರಿ 09): ವಾಣಿಜ್ಯನಗರಿ ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಲ್ಯಾಮಿಂಗ್ಟನ್ ರೋಡಿನ ಹಳೆಯ ಜನತಾದಳದ ಕಚೇರಿ ಇರುವ ಜಾಗದಲ್ಲಿ ಈಗ ದೊಡ್ಡ ವಿವಾದವೊಂದು ಹುಟ್ಟುಹಾಕಿದೆ. ಹೌದು..50 ಕೋಟಿ ರೂಪಾಯಿಗೂ ಅಧಿಕ ಬೆಲೆ ಬಾಳುವ ವಿವಾದಿತ ಜಾಗವನ್ನು ಕಾಂಗ್ರೆಸ್ ನಾಯಕರು ಪಕ್ಷದ ಕಛೇರಿಯಾಗಿ ಕಬ್ಜಾ ಮಾಡಿಕೊಂಡಿದ್ದಾರೆ. ಇಂದು (ಫೆಬ್ರವರಿ 09) ಬೆಳ್ಳಂಬೆಳಿಗ್ಗೆಯೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೋರ್ಡ್ ಹಾಕಿ ಕೈ ನಾಯಕರ ಪೋಟೋ ಇಟ್ಟು ಪೂಜೆ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಈ ವಿವಾದಿತ ಜಾಗ ಮೊದಲು 1959 ರಲ್ಲಿ ಕಾಂಗ್ರೆಸ್ ಪಕ್ಷದ ಹೆಸರಿಗೆ ಸೆಲ್ ಡಿಡ್ ಆಗಿತ್ತು. ನಂತರ ಎಸ್.ಆರ್.ಬೊಮ್ಮಾಯಿ ಕಾಲದಲ್ಲಿ ಜೆಡಿಯು ಕಚೇರಿಯಾಗಿ ಮಾರ್ಪಾಡು ಆಗಿತ್ತು. ಇದೀಗ ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸಾಕಷ್ಟು ವಿವಾದವನ್ನು ಸೃಷ್ಟಿಸಿರುವ ಜಾಗೆಯ ಕಬ್ಜಾ ಪಡೆದಿರುವುದು ಸಾಕಷ್ಟು ಸುದ್ಧಿಯಾಗಿದೆ. ಇಷ್ಟು ದಿನಗಳ ಕಾಲ ತಣ್ಣಗಿದ್ದ ಆಸ್ತಿ ವಿವಾದ ಈಗ ತಾರಕಕ್ಕೆ ಏರಿದ್ದು, ಎಲ್ಲರ ದೃಷ್ಟಿಯೂ ತನ್ನತ ನಡುವಂತೆ ಮಾಡಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯ ಕೆಪಿಸಿಸಿ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ಏಕಾಏಕಿ ಕಬ್ಜಾ ತೆಗೆದುಕೊಂಡಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡಿದ್ದು, ನಮ್ಮದೇ ಕಚೇರಿಯಲ್ಲಿ ನಾವು ಪೂಜೆ ಮಾಡಿದ್ದೇವೆ.1956 ರಲ್ಲಿಯೇ ಚನ್ನಬಸಪ್ಪ ಅಂಬಲಿ ಅವರು ಈ ಸ್ಥಳ ಖರೀದಿಸಿದ್ದರು. ಕೆಪಿಸಿಸಿ ವತಿಯಿಂದ ಖರೀದಿ ಮಾಡಲಾಗಿತ್ತು. ಕಾಂಗ್ರೆಸ್ ಕಚೇರಿಯನ್ನು ನಿರ್ಮಾಣ ಮಾಡಲು ಇಂದು ಪೂಜೆ ಮಾಡಿದ್ದೇವೆ. ಹಿಂದೆ ಜೆಡಿಯು ನವರು ಅಕ್ರಮವಾಗಿ ಇಲ್ಲಿ ಪ್ರವೇಶ ಮಾಡಿದ್ದರು ಪಹಣಿಯಲ್ಲಿ ನಮ್ಮದೇ ಹೆಸರಿದೆ ಎಂದಿದ್ದಾರೆ.ಒಂದೇ ದಿನದಲ್ಲಿ ಜಾಗದ ದಿಕ್ಕು ಬದಲಿಸಿ ಕೈ ನಾಯಕರು ಕಂಪೌಂಡ್ ಕಟ್ಟಿದ್ದಾರೆ..ನಾವು ಇಲ್ಲಿ ಕಾಂಗ್ರೆಸ್ ಕಚೇರಿ ಕಟ್ಟತೀವಿ ಅಂತಾರೆ ಕೈ ಶಾಸಕರು..
ಇನ್ನೂ ಅನೇಕ ವರ್ಷಗಳಿಂದ ಇದೇ ಆಸ್ತಿ ಬಗ್ಗೆ ಹಿಂದಿನ ಜೆಡಿಯು ಮತ್ತು ಇಂದಿನ ಜೆಡಿಎಸ್ ನಡುವೆ ಕೋರ್ಟ್‌ನಲ್ಲಿ ವ್ಯಾಜ್ಯ ನಡೆದಿತ್ತು. 2017 ರಲ್ಲಿ ಈ ವ್ಯಾಜ್ಯ ಇತ್ಯರ್ಥಗೊಂಡಿತ್ತು. ಈಗ ಕಳೆದ ಮೂರು ತಿಂಗಳಿಂದ ಕಾಂಗ್ರೆಸ್ ಈ ಆಸ್ತಿ ನಮಗೆ ಸೇರಿದ್ದು ಎಂದು ಧಾರವಾಡದ ಭೂ ದಾಖಲೆಗಳ ಉಪ ನಿರ್ದೇಶಕರ ಮೊರೆ ಹೋಗಿದ್ದರು. ಕಳೆದ ಜನವರಿ 24 ರಂದು ಧಾರವಾಡದ ಭೂ ದಾಖಲೆಗಳ ಉಪ ನಿರ್ದೇಶಕರು ಈ ಆಸ್ತಿ ಜೆಡಿಯು ಆಸ್ತಿ ಅಲ್ಲ, ಕಾಂಗ್ರೆಸ್ಗೆ ಸೇರಿದ್ದು ಎಂದು ಆದೇಶ ಮಾಡಿದ್ದಾರೆ.
ಇದೇ ಆದೇಶದ ಪ್ರಕಾರ ನಿನ್ನೆ ಭೂ ದಾಖಲೆಗಳಲ್ಲಿ ಕಾಂಗ್ರೆಸ್ ಹೆಸರು ಸೇರ್ಪಡೆಯಾಗಿದೆ. ಹೆಸರು ಸೇರ್ಪಡೆಯಾಗುತ್ತಿದಂತೆ ಕಾಂಗ್ರೆಸ್ ನಾಯಕರು ಕೋಟ್ಯಾಂತರ ಬೆಲೆಬಾಳುವ ಆಸ್ತಿಯನ್ನ ತಮ್ಮ ಸುರ್ಪದಿಗೆ ತೆಗೆದುಕೊಂಡಿದ್ದಾರೆ. ಇತ್ತ ಜೆಡಿಯು ನಾಯಕರು ಆಸ್ತಿ ನಮಗೆ ಸೇರಿದ್ದು. ನಾವು ಮುಂದೆ ಕಾನೂನು ಹೋರಾಟ ಮಾಡಿ ನಮ್ಮ ಆಸ್ತಿ ಉಳಿಸಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ..ಇದರ ಜೊತೆಗೆ ಜೆಡಿಎಸ್ ಕಾರ್ಯಕರ್ಯರು ಶಹರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕಾಂಗ್ರೆಸ್ ನಾಯಕರು ಸ್ಥಳ ಅತಿ ಕ್ರಮಣ ಮಾಡಿದ್ದಾರೆಂದು ದೂರು ನೀಡಿದ್ದಾರೆ.
ಪಹಣಿಯಲ್ಲಿ ಕಾಂಗ್ರೆಸ್ಸಿನ ಹೆಸರು ನಮೂದಾಗಿರುವುದು ಮತ್ತು ಈ ಹಿಂದೆ ಜನತಾದಳದ ಕಬ್ಜಾದಲ್ಲಿರುವುದು ನಿಜಕ್ಕೂ ಯಾರು ನಿಜವಾದ ಮಾಲೀಕರು ಎಂಬುವಂತ ಸಂಶಯ ಹುಟ್ಟಿಕೊಂಡಿದೆ. ಇನ್ನೂ ಆಯಕಟ್ಟಿನ ಜಾಗೆಯು ಸಂಯುಕ್ತ ಜನತಾದಳದ ಸ್ವತ್ತೋ..? ಕಾಂಗ್ರೆಸ್ಸಿನ ಸ್ವತ್ತೋ..? ಎನ್ನುವುದು ತಿಳಿಯದಂತಾಗಿದೆ.
ಈ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು?
ಇನ್ನು ಈ ಬಗ್ಗೆ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಮೂಲ ದಾಖಲೆಗಳನ್ನ ತೆಗೆಸುವ ಕುರಿತು ತಿಳಿಸಲಾಗಿದ್ದು, ಮುಂದೆ ಕಾದು ನೋಡೋಣ. ಕಾಂಗ್ರೆಸ್ ನವರು ಜಾಗ ಕಬ್ಜಾ ಮಾಡುವ ಮೂಲಕ ದಬ್ಬಾಳಿಕೆ ಮಾಡಿದ್ದಾರೆ. ಸೂಕ್ತ ದಾಖಲಾತಿಗಳ ಮೂಲಕ ಸತ್ಯಾ ಸತ್ಯತೆ ಏನಿದೆ ಎನ್ನುವುದನ್ನು ನೋಡಬೇಕು ಎಂದರು.