Karnataka Assembly Election 2023: ನಿಜವಾಯಿತೆ ಮಣ್ಣಿನ ಗೊಂಬೆಗಳು ನುಡಿದ ಆ ಭವಿಷ್ಯ?
ಈ ಫಲ ಭವಿಷ್ಯದಲ್ಲಿಯೇ ರಾಜಕೀಯ ಭವಿಷ್ಯ ನೋಡಿಕೊಂಡು ಬರುವ ರೂಢಿಯೊಂದು ಇದೆ. ಇದೇ ಫಲ ಭವಿಷ್ಯದಲ್ಲಿನ ಗೊಂಬೆಗಳೇ ಒಂದೂವರೆ ತಿಂಗಳ ಹಿಂದೆ ರಾಜ್ಯದಲ್ಲಿ ಸರ್ಕಾರ ಬದಲಾಗುತ್ತೆ ಎನ್ನುವ ಭವಿಷ್ಯ ನುಡಿದಿದ್ದವು.
ಧಾರವಾಡ: ರಾಜ್ಯದಲ್ಲಿ ಬಿಜೆಪಿ (BJP) ಸರ್ಕಾರ ಹೋಗಿ ಕಾಂಗ್ರೆಸ್ (Congress) ಸರ್ಕಾರ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುತ್ತೆ ಅಂತಾ ಯಾರೂ ಊಹೆ ಸಹ ಮಾಡಿರಲಿಲ್ಲ. ಆದರೆ ಒಂದೂವರೆ ತಿಂಗಳ ಹಿಂದೆಯೇ ಈಗ ಇರೋ ಸರ್ಕಾರ ಬೀಳುವುದು ಖಚಿತ ಅನ್ನೋದರ ಮುನ್ಸೂಚನೆಯೊಂದು ಧಾರವಾಡದಲ್ಲಿ ಕಂಡು ಬಂದಿತ್ತು. ಅಷ್ಟಕ್ಕೂ ಅದನ್ನು ತೋರಿಸಿದ್ದು ಯಾರು ಗೊತ್ತೆ? ಮಣ್ಣಿನ ಗೊಂಬೆಗಳು. ಹೌದು ಮಣ್ಣಿನ ಗೊಂಬೆಯ ಭವಿಷ್ಯವೊಂದು ಈಗ ನಿಜವಾಗಿದೆ. ಹಾಗಾದ್ರೆ ಏನದು ಭವಿಷ್ಯ? ಇಲ್ಲಿದೆ ನೋಡಿ.
ಸಾಮಾನ್ಯವಾಗಿ ಯುಗಾದಿ ಅಂದ್ರೆ ಹಿಂದು ವರ್ಷದ ಆರಂಭ ಇದ್ದಂತೆ. ಈ ಸಮಯದಲ್ಲಿ ರೈತರು ವರ್ಷದ ಕೃಷಿ ಲೆಕ್ಕಾಚಾರಗಳನ್ನು ಹಾಕುವುದು ರೂಢಿ. ಆಯಾ ವರ್ಷ ಏನು ಬೆಳೆ ತೆಗೆಯಬೇಕು ಅನ್ನೋದನ್ನು ಅನೇಕ ಕಡೆ ಅನೇಕ ರೀತಿಯಲ್ಲಿ ನೋಡುತ್ತಾರೆ. ಅಂತಹುದೇ ಒಂದು ಪದ್ಧತಿ ಧಾರವಾಡ ತಾಲೂಕಿನ ಹನುಮನಕೊಪ್ಪ ಗ್ರಾಮದಲ್ಲಿದೆ. ಇಲ್ಲಿನ ತುಪ್ಪರಿಹಳ್ಳದಲ್ಲಿ ಗ್ರಾಮಸ್ಥರೆಲ್ಲ ಸೇರಿ ಯುಗಾದಿ ಅಮಾವಾಸ್ಯೆಯ ಸಂಜೆ ಹೊತ್ತು ಹೋಗಿ ಮಣ್ಣಿನಿಂದ ಗೊಂಬೆ ತಯಾರಿಸಿ, ಆಯಾ ಮಳೆಗಳ ಹೆಸರಿನಲ್ಲಿ ಎಕ್ಕೆ ಎಲೆಯಲ್ಲಿ ಕಾಳುಗಳನ್ನು ಹಾಕಿ ಮಳೆ ಬೆಳೆ ನೋಡುತ್ತಾರೆ.
ಈ ಫಲ ಭವಿಷ್ಯದಲ್ಲಿಯೇ ರಾಜಕೀಯ ಭವಿಷ್ಯ ನೋಡಿಕೊಂಡು ಬರುವ ರೂಢಿಯೊಂದು ಇದೆ. ಇದೇ ಫಲ ಭವಿಷ್ಯದಲ್ಲಿನ ಗೊಂಬೆಗಳೇ ಒಂದೂವರೆ ತಿಂಗಳ ಹಿಂದೆ ರಾಜ್ಯದಲ್ಲಿ ಸರ್ಕಾರ ಬದಲಾಗುತ್ತೆ ಅನ್ನೋದನ್ನು ತೋರಿಸಿಕೊಟ್ಟಿದ್ದವು. ಹೌದು ಆಯಾ ರಾಜ್ಯದ ದಿಕ್ಕಿಗೆ ಸೇನಾಧಿಪತಿ ಗೊಂಬೆಗಳನ್ನು ಮಾಡಿಡುತ್ತಾರೆ. ಯಾವ ಗೊಂಬೆಗೆ ಏನು ಧಕ್ಕೆ ಆಗಿರುತ್ತದೆಯೋ ಅದರ ಮೇಲೆ ಆಯಾ ರಾಜ್ಯದ ಪರಿಸ್ಥಿತಿ ನೋಡುತ್ತಾರೆ.
ಇದನ್ನೂ ಓದಿ: ಬಿಎಸ್ ಯಡಿಯೂರಪ್ಪ ಕಣ್ಣೀರಿನಲ್ಲಿ ಬಿಜೆಪಿ ಸರ್ಕಾರ ಕೊಚ್ಚಿ ಹೋಗಿದೆ: ದಿಂಗಾಲೇಶ್ವರ ಸ್ವಾಮೀಜಿ
ಈ ವರ್ಷ ಕರ್ನಾಟಕದ ಗೊಂಬೆಯ ಕಾಲು ಮುರಿದಿತ್ತು. ಮಾತ್ರವಲ್ಲ ತಲೆಯ ಮೇಲಿನ ಟೋಪಿ ಹಿಂದಕ್ಕೆ ಸರಿದಿತ್ತು. ಆ ವೇಳೆಯಲ್ಲಿಯೇ ಹನುಮನಕೊಪ್ಪದ ಹಿರಿಯರು ಈ ಸಲ ರಾಜ್ಯದಲ್ಲಿ ಸರ್ಕಾರ ಬದಲಾಗುವುದು ಶತಸಿದ್ಧ ಎಂದು ಹೇಳಿದ್ದರು. ಅದು ಈಗ ಸತ್ಯವೇ ಆಗಿದೆ.
ಹೀಗೆ ಹನುಮನಕೊಪ್ಪದ ಗೊಂಬೆಗಳು ರಾಜಕೀಯ ಭವಿಷ್ಯ ನುಡಿದಿದ್ದು ಸತ್ಯವಾಗಿದ್ದು ಇದೇ ಮೊದಲೇನೂ ಅಲ್ಲ. ಎರಡು ವರ್ಷದ ಹಿಂದೆ ಯುಗಾದಿ ಸಮಯದಲ್ಲಿಯೂ ಕರ್ನಾಟಕದ ಗೊಂಬೆಗೆ ಸ್ವಲ್ಪ ಧಕ್ಕೆ ಆಗಿತ್ತು. ಆಗ ಸಿಎಂ ಅಧಿಕಾರ ಹೋಗುವುದು ಖಚಿತ ಎಂದಿದ್ದರು. ಅದರಂತೆಯೇ ಬಿಎಸ್ ಯಡಿಯೂರಪ್ಪ ಅಧಿಕಾರ ಆ ವರ್ಷ ಹೋಯ್ತು.
ಇದನ್ನೂ ಓದಿ: ಜಗದೀಶ್ ಶೆಟ್ಟರ್ ಗೆಲ್ಲುತ್ತಾರೆ ಎಂದು ರಕ್ತದಲ್ಲಿ ಪತ್ರ ಬರೆದಿದ್ದ ಯುವ ನಾಯಕ ಪ್ರಧಾನ ಕಾರ್ಯದರ್ಶಿ ಹುದ್ದಗೆ ರಾಜಿನಾಮೆ
ಇದಕ್ಕೂ ಮೊದಲು ಇಂದಿರಾ ಗಾಂಧಿ ಹತ್ಯೆಯಾದ ವರ್ಷ, ದೆಹಲಿ ದಿಕ್ಕಿನ ಗೊಂಬೆ ಸಂಪೂರ್ಣ ಹಾನಿಯಾಗಿತ್ತು. ಆಗ ದೆಹಲಿ ನಾಯಕರ ಜೀವಕ್ಕೆ ಆಪತ್ತು ಎಂದು ಊಹಿಸಲಾಗಿತ್ತು. ಇಂದಿರಾ ಗಾಂಧಿ ಹತ್ಯೆಯಾಗಿತ್ತು. ಹಾಗೆಯೇ ವೈ.ಎಸ್. ರಾಜಶೇಖರ ರೆಡ್ಡಿ ವಿಮಾನ ಅಪಘಾತದಲ್ಲಿ ಮೃತಪಟ್ಟ ವರ್ಷ ಆಂಧ್ರದ ದಿಕ್ಕಿನ ಗೊಂಬೆಗೆ ಹಾನಿಯಾಗಿತ್ತು. ಹೀಗಾಗಿ ಇಲ್ಲಿನ ಮಣ್ಣಿನ ಗೊಂಬೆಗಳು ಯುಗಾದಿ ದಿನ ಏನು ತೋರಿಸುತ್ತಾವೆಯೋ ಅದು ನಿಜ ಆಗುತ್ತಲೇ ಬಂದಿದೆ.
ಒಟ್ಟಾರೆ ಆಗಿ ಅನೇಕರು ಅನೇಕ ರೀತಿಯಲ್ಲಿ ರಾಜಕೀಯ ಭವಿಷ್ಯ ಹೇಳುತ್ತಾರೆ. ಆದರೆ ಎಲ್ಲಿಯೂ ದೊಡ್ಡ ಮಟ್ಟದ ಪ್ರಚಾರ ಇಲ್ಲದೇ ತನ್ನ ಗ್ರಾಮದ ವ್ಯಾಪ್ತಿಯಲ್ಲಿ ಮಳೆ ಬೆಳೆ ನೋಡುವುದಕ್ಕಾಗಿ 200 ವರ್ಷಗಳ ಹಿಂದೆ ಹಿರಿಯರೊಬ್ಬರು ಹಾಕಿಕೊಟ್ಟ ಸಂಪ್ರದಾಯವೊಂದನ್ನು ಈ ಗ್ರಾಮಸ್ಥರು ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದು, ಅದು ಈಗ ರಾಜ್ಯ, ದೇಶದ ರಾಜಕೀಯ ಭವಿಷ್ಯ ತೋರಿಸುವ ಮಟ್ಟಕ್ಕೆ ಬೆಳೆದಿರುವುದು ಅಚ್ಚರಿಯಾದರೂ ಸತ್ಯ.
ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9, ಧಾರವಾಡ
ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.