ರಾಜ್ಯದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ; ಬಿರುಗಾಳಿಯಲ್ಲಿ ಸಿಲುಕಿ ಪರದಾಡಿದ ವಿದ್ಯಾರ್ಥಿನಿಯರ ವಿಡಿಯೋ ವೈರಲ್
ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ಸ್ಕೂಟಿಯಲ್ಲಿ ಪ್ರಯಾಣ ಮಾಡುತ್ತಿದ್ದ ವಿದ್ಯಾರ್ಥಿನಿಯರು ಬಿದ್ದು ಬಿರುಗಾಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಸಿಲುಕಿಕೊಂಡು ಪರದಾಡಿದ ಘಟನೆ ವಿದ್ಯಾನಗರದಲ್ಲಿ ನಡೆದಿದೆ. ಹುಬ್ಬಳ್ಳಿಯಲ್ಲಿ ಮಳೆ ಒಂದಿಲ್ಲೊಂದು ರೀತಿಯಲ್ಲಿ ಅವಾಂತರ ಸೃಷ್ಟಿಸುತ್ತಿದೆ.
ಹುಬ್ಬಳ್ಳಿ: ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ(Karnataka Rain) ಭಾರಿ ಸಮಸ್ಯೆಗಳು ಎದುರಾಗಿವೆ. ಕರ್ನಾಟಕದ ಹಲವೆಡೆ ಇನ್ನೂ 4 ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಆದ್ರೆ ಹುಬ್ಬಳ್ಳಿಯಲ್ಲಿ ನಿನ್ನೆ ಸುರಿದ ಮಳೆ ನಿಜಕ್ಕೂ ಜನರಲ್ಲಿ ಆತಂಕ ಸೃಷ್ಟಿಸಿದೆ. ಬಿರುಗಾಳಿಯಲ್ಲಿ ಸಿಕ್ಕಿ ವಿದ್ಯಾರ್ಥಿನಿಯರು ಒದ್ದಾಡಿದ ವಿಡಿಯೋ ವೈರಲ್ ಆಗಿದೆ.
ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ಸ್ಕೂಟಿಯಲ್ಲಿ ಪ್ರಯಾಣ ಮಾಡುತ್ತಿದ್ದ ವಿದ್ಯಾರ್ಥಿನಿಯರು ಬಿದ್ದು ಬಿರುಗಾಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಸಿಲುಕಿಕೊಂಡು ಪರದಾಡಿದ ಘಟನೆ ವಿದ್ಯಾನಗರದಲ್ಲಿ ನಡೆದಿದೆ. ಹುಬ್ಬಳ್ಳಿಯಲ್ಲಿ ಮಳೆ ಒಂದಿಲ್ಲೊಂದು ರೀತಿಯಲ್ಲಿ ಅವಾಂತರ ಸೃಷ್ಟಿಸುತ್ತಿದೆ. ಈಗಾಗಲೇ ಹಲವು ಕಡೆಗಳಲ್ಲಿ ಅವಾಂತರ ಸೃಷ್ಟಿಸಿದ ಮಳೆ ಮತ್ತಷ್ಟು ಭಯಪಡಿಸಿದೆ. ಅಲ್ಲದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲೂ ಮಳೆಯ ಅವಾಂತರದಿಂದ ರೋಗಿಗಳು, ವೈದ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಾಳಿಯ ರಭಸಕ್ಕೆ ಆಸ್ಪತ್ರೆಯಲ್ಲಿ ಹಾಕಿದ್ದ ಮೇಲ್ಚಾವಣಿ ಥರ್ಮಾಕೋಲ್ ಶೀಟ್ ಕಿತ್ತು ಹೋಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಕಿಟಕಿ ಗಾಜುಗಳಿಗೂ ಹಾನಿಯಾಗಿದೆ. ಬಿರುಗಾಳಿಯಿಂದ ರೋಗಿಗಳು ಮತ್ತು ಸಿಬ್ಬಂದಿ ಕಂಗಾಲಾಗಿದ್ದಾರೆ.
ಬಿರುಗಾಳಿ ಸಹಿತ ಭಾರಿ ಮಳೆಗೆ ಮನೆ ಮೇಲೆ ಬಿದ್ದ ಮರ ಮೈಸೂರು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಬಿರುಗಾಳಿ ಸಹಿತ ಭಾರಿ ಮಳೆಗೆ ಮನೆ ಮೇಲೆ ಮರ ಬಿದ್ದಿದೆ. ನಂಜನಗೂಡು ತಾಲೂಕಿನ ಬಂಚಹಳ್ಳಿ ಹುಂಡಿ ಗ್ರಾಮದ ಕೆಂಪಶೆಟ್ಟಿ ಎಂಬುವವರ ಮನೆ ಮೇಲೆ ಮರ ಬಿದ್ದಿದ್ದು ಅದೃಷ್ಟವಶಾತ್ ಮನೆಯಲ್ಲಿದ್ದವರು ಪಾರಾಗಿದ್ದಾರೆ. ಭಾರಿ ಅನಾಹುತ ತಪ್ಪಿದೆ. ಇನ್ನು ಬಿರುಗಾಳಿಗೆ ಮನೆಯ ಮೇಲ್ಚಾವಣಿಗಳು ಹಾರಿ ಹೋಗಿವೆ.
ಹಾರಿ ಹೋದ ಸಂತ್ರಸ್ತರ ತಾತ್ಕಾಲಿಕ ಶೆಡ್‌ಗಳು ಬಾಗಲಕೋಟೆ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಗಾಳಿಸಹಿತ ಭಾರಿ ಮಳೆಯಾಗಿದ್ದು ಬೀಳಗಿ ತಾಲೂಕಿನ ಕೊರ್ತಿಯಲ್ಲಿ ಸಂತ್ರಸ್ತರ ತಾತ್ಕಾಲಿಕ ಶೆಡ್‌ಗಳು ಹಾರಿ ಹೋಗಿವೆ. ಗ್ರಾಮದ ಬಳಿ ರಸ್ತೆಯ ಅಕ್ಕಪಕ್ಕದಲ್ಲಿ ಶೆಡ್‌ಗಳಲ್ಲಿ ವಾಸವಿದ್ದ ಪ್ರವಾಹ ಸಂತ್ರಸ್ತರ ನೂರಕ್ಕೂ ಹೆಚ್ಚು ಶೆಡ್ಗಳು ಹಾರಿ ಹೋಗಿವೆ. ಸಂತ್ರಸ್ತರ ಬಹುತೇಕ ಶೆಡ್‌ಗಳು ಧ್ವಂಸವಾಗಿದ್ದು ಆಹಾರ ಧಾನ್ಯ ಹಾಳಾಗಿದೆ.
ಇನ್ನಷ್ಟು ಮಳೆಯ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಕಣವೆಬಿಳಚಿ ಸುತ್ತಮುತ್ತಲಿನ ಹತ್ತಾರು ಗ್ರಾಮಸ್ಥರ ಪರದಾಟ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಣವೆಬಿಳಚಿ ಬಳಿ ಭಾರಿ ಮಳೆಗೆ ಸೇತುವೆ ಕುಸಿದು ಬಿದ್ದಿದೆ. ಇದರಿಂದಾಗಿ ಕಣವೆಬಿಳಚಿ ಸುತ್ತಮುತ್ತಲಿನ ಹತ್ತಾರು ಗ್ರಾಮಸ್ಥರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ರಾತ್ರಿ ಸುರಿದ ಮಳೆಗೆ ಭದ್ರಾ ಕಾಲುವೆಗೆ ಕಟ್ಟಲಾದ ಸೇತುವೆ ಕುಸಿದುಬಿದ್ದಿದೆ.
ಕಾರಿನ ಮೇಲೆ ಬಿದ್ದ ಬೃಹದಾಕಾರದ ಮರ, ವಿದ್ಯುತ್ ಕಂಬ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ನಿಡುವಾಳೆ ಸಮೀಪ ಕಾರಿನ ಮೇಲೆ ಮರ, ವಿದ್ಯುತ್ ಕಂಬ ಬಿದ್ದಿದ್ದು ಕೂದಲೆಳೆ ಅಂತರದಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಲಕಾಲ ಬಾಳೆಹೊನ್ನೂರು- ಕೊಟ್ಟಿಗೆಹಾರ ಮಾರ್ಗದ ಸಂಚಾರ ಸ್ಥಗಿತಗೊಂಡಿತ್ತು. ಕಾರಿನ ಮುಂಭಾಗ ಜಖಂ ಆಗಿದ್ದು ಮಂಜುನಾಥ್, ಕೃಷ್ಣ, ಸಚಿನ್ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನ ಮುಂಭಾಗಕ್ಕೆ ಮರ ಬಿದ್ದಿದ್ದರಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
Published On - 8:11 am, Thu, 5 May 22