ನೇಹಾ ಮತಾಂತರಕ್ಕೆ ಯತ್ನಿಸಿದ್ದ ಫಯಾಜ್: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪ
ನೇಹಾ ಹಿರೇಮಠ ಕೊಲೆ ಪ್ರಕರಣವಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಪಕ್ಷದ್ದು ದ್ವಂದ್ವ ನಿಲುವು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ ಎಂದು ಹೇಳಿದ್ದಾರೆ. ಅಲ್ಲದೆ ಮುಸ್ಲಿಮರಿಗೆ ಧರ್ಮಧಾರಿತ ಮೀಸಲಾತಿ ಕೊಡುತ್ತಿರುವ ವಿಚಾರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಹುಬ್ಬಳ್ಳಿ, ಏಪ್ರಿಲ್ 25: ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಕೊಲೆಯಾಗಿರುವ ನೇಹಾ ಹಿರೇಮಠ (Neha Murder Case) ಅವರನ್ನು ಮತಾಂತರ ಮಾಡಲು ಕೊಲೆ ಆರೋಪಿ ಫಯಾಜ್ ಯತ್ನಿಸಿದ್ದ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆರೋಪಿಸಿದ್ದು, ಹಿಗಾಗಿ ಆ ಆಯಾಮದಿಂದಲೇ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ನೇಹಾ ಮತಾಂತರ ಮಾಡಲು ಫಯಾಜ್ ಯತ್ನಿಸಿದ್ದ. ಈ ಬಗ್ಗೆ ನೇಹಾ ತಂದೆ ನಿರಂಜನ ಹಿರೇಮಠ ಕೂಡ ಆರೋಪ ಮಾಡಿದ್ದಾರೆ. ನೇಹಾ ಕೊಲೆ ಕೇಸ್ ಲವ್ ಅ್ಯಂಗಲ್ನಲ್ಲಿಯೇ ತನಿಖೆಯಾಗಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ್ದು ದ್ವಂದ್ವ ನಿಲುವು ಅನ್ನೋದಕ್ಕೆ ನೇಹಾ ಹಿರೇಮಠ ಪ್ರಕರಣವೂ ಒಂದು. ನೇಹಾ ತಂದೆ ನಿರಂಜನ ನೀವೇ ನ್ಯಾಯ ಕೊಡಿಸಬೇಕು ಅಂದಿದ್ದರು. ಹೀಗಾಗಿ ನಾವು ಸಂವೇದಾನಶೀಲದಿಂದ ಹೋರಾಟ ಮಾಡಿದೆವು. ಕಾಂಗ್ರೆಸ್ ಪಕ್ಷದವರು ಅಸಭ್ಯ, ಅಸಡ್ಡೆಯಿಂದ ಮಾತನಾಡಿದರು. ‘ಹೇ ಅದೇನ್ ಬಿಡ್ರೀ’ ಎಂದು ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಜನರ ಜೀವದ ಜೊತೆ ಚೆಲ್ಲಾಟ ಆಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳೋದು ಇವರ ಡಬಲ್ ಸ್ಟ್ಯಾಂಡರ್ಡ್ ಎಂದು ಜೋಶಿ ಕಿಡಿಕಾರಿದರು.
ಕರ್ನಾಟಕದಲ್ಲಿ ಮುಸ್ಲಿಮರಿಗೆ ಯಾಕೆ ಧರ್ಮಾಧಾರಿತ ಮೀಸಲಾತಿ ಕೊಟ್ಟಿದೀರಿ ಎಂದು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದ ಅವರು, ಕರ್ನಾಟಕದಲ್ಲಿ ಹಿಂದುಳಿದ ದಲಿತರ, ಮೀಸಲಾತಿಯನ್ನು ಮುಸ್ಲಿಮರಿಗೆ ಕೊಟ್ಟಿದ್ದಾರೆ ಎಂದು ಆರೋಪಿಸಿದರು. ಕರ್ನಾಟಕಕ್ಕೆ ಕೊಟ್ಟವರು ನೀವೇ, ಕರ್ನಾಟಕಕ್ಕೆ ನೀವು ವಸೂಲಿಗೆ ಬರುತ್ತೀರಿ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ವಿರುದ್ಧ ಜೋಶಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ನೇಹಾಳ ಹತ್ಯೆ ಕೋಪದಲ್ಲಿ ಮಾಡಿದ್ದಲ್ಲ! ಸ್ಪಾಟ್ ಇನ್ಸ್ಪೆಕ್ಷನ್ ಮಾಡಿ, ವಾರದಿಂದ ಪೂರ್ವ ತಯಾರಿ ನಡೆಸಿದ್ದ ಫಯಾಜ್
ಈ ಮಧ್ಯೆ ನೇಹಾ ಹತ್ಯೆಗೆ ಆರೋಪಿ ಫಯಾಜ್ ಒಂದು ವಾರದಿಂದ ಸಂಚು ಹೂಡಿದ್ದ ಮತ್ತು ಸಿದ್ಧತೆ ನಡೆಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಕೊಲೆ ಮಾಡುವ ಕೆಲವು ದಿನಗಳ ಮುನ್ನ ನೇಹಾ ಹಿರೇಮಠ ಮನೆ ಬಳಿಯೇ ಫಯಾಜ್ ಓಡಾಡಿದ್ದಾನೆ. ಹತ್ಯೆ ಮಾಡುವ ಐದು ದಿನಗಳ ಮೊದಲೇ ಚಾಕುವೊಂದನ್ನು ಖರೀದಿ ಮಾಡಿದ್ದ ಎಂಬ ವಿಚಾರವೂ ಬೆಳಕಿಗೆ ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:33 am, Thu, 25 April 24