ಹುಬ್ಬಳ್ಳಿ ಜೋಧಪುರ್ ನಡುವೆ ನೇರ ರೈಲು: ಟಿಕೆಟ್ ಬುಕಿಂಗ್ ಶುರು, ವೇಳಾಪಟ್ಟಿ ಇಲ್ಲಿದೆ
Hubballi Jodhpur direct train; ಹುಬ್ಬಳ್ಳಿ-ಜೋಧಪುರ್ ನಡುವೆ ನೇರ ರೈಲು ಸಂಚಾರಕ್ಕೆ ಕೇಂದ್ರ ಹಸಿರುನಿಶಾನೆ ತೋರಿದ್ದು, ಸೆಪ್ಟೆಂಬರ್ 28 ರಿಂದ ಶುರುವಾಗಲಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಒತ್ತಾಸೆಯಿಂದ ಈ ಯೋಜನೆ ಸಾಧ್ಯವಾಗಿದೆ. ಸದ್ಯ ಪ್ರತಿ ಭಾನುವಾರ ಸಂಚರಿಸಲಿದ್ದು, ಭವಿಷ್ಯದಲ್ಲಿ ಇದನ್ನು ದಿನನಿತ್ಯದ ರೈಲಾಗಿ ಪರಿವರ್ತಿಸುವ ಭರವಸೆಯನ್ನು ರೈಲ್ವೆ ಸಚಿರು ನೀಡಿದ್ದಾರೆ. ಟಿಕೆಟ್ ಬುಕಿಂಗ್ ಪ್ರಾರಂಭವಾಗಿದ್ದು, ವೇಳಾಪಟ್ಟಿ ಸಹಿತ ವಿವರ ಇಲ್ಲಿದೆ.

ನವದೆಹಲಿ, ಆಗಸ್ಟ್ 29: ಕರ್ನಾಟಕಕ್ಕೆ ರೈಲ್ವೆ ಇಲಾಖೆ (Indian Railways) ಗಣೇಶ ಹಬ್ಬದ ಉಡುಗೊರೆ ನೀಡಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಒತ್ತಾಸೆಯಂತೆ ಹುಬ್ಬಳ್ಳಿ – ಜೋಧಪುರ್ ಮಧ್ಯೆ ನೇರ ರೈಲು (Hubli Jodhpur Specail Train) ಸಂಚಾರ ಘೋಷಣೆ ಮಾಡಿದೆ. ಹುಬ್ಬಳ್ಳಿ ಜೋಧಪುರ್ ವಿಶೇಷ ರೈಲು ಸೆಪ್ಟೆಂಬರ್ ತಿಂಗಳಿನಿಂದಲೇ ಸಂಚಾರ ಆರಂಭಿಸಲಿದೆ. ಪ್ರಸ್ತುತ ವಿಶೇಷ ರೈಲಾಗಿರುವ ಇದನ್ನು ಮುಂದಿನ ದಿನಗಳಲ್ಲಿ ನಿತ್ಯ ಸಂಚಾರದ ರೈಲನ್ನಾಗಿ ಪರಿವರ್ತನೆಗೊಳಿಸುವ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಭರವಸೆ ನೀಡಿದ್ದಾರೆಂದು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಹುಬ್ಬಳ್ಳಿ-ಜೋಧಪುರ್ ವಿಶೇಷ ರೈಲಿನ ವೇಳಾಪಟ್ಟಿ
ಹುಬ್ಬಳ್ಳಿ-ಜೋಧಪುರ್ ನೂತನ ರೈಲು (ರೈಲು ಸಂಖ್ಯೆ: 07359) ಹುಬ್ಬಳ್ಳಿಯಿಂದ 7:30ಕ್ಕೆ ತೆರಳಿ BGKT (ಭಗತ ಕಿ ಕೋಟಿ)ಗೆ ಬೆಳಗ್ಗೆ 5:30ಕ್ಕೆ ತಲುಪಲಿದೆ. ಸದ್ಯ ಪ್ರತಿ ರವಿವಾರ ಈ ರೈಲು ಸಂಚಾರವಿರಲಿದೆ. ಸೆಪ್ಟೆಂಬರ್ 28ರಿಂದ ಸಂಚಾರ ಆರಂಭಿಸಲಿದೆ.
ಹುಬ್ಬಳ್ಳಿ-ಜೋಧಪುರ್ ವಿಶೇಷ ರೈಲು ಟಿಕೆಟ್ ಬುಕಿಂಗ್ ಶುರು
ನೂತನವಾಗಿ ಸಂಚಾರ ಆರಂಭಿಸಲಿರುವ ಹುಬ್ಬಳ್ಳಿ ಜೋಧಪುರ್ ರೈಲ್ವೆ ಸಂಚಾರಕ್ಕೆ ಟಿಕೆಟ್ ಬುಕಿಂಗ್ ಶುರುವಾಗಿದೆ. ರೈಲ್ವೆ ಇಲಾಖೆ ಸೆಪ್ಟೆಂಬರ್ 28, ಅಕ್ಟೋಬರ್ 5, ಅಕ್ಟೋಬರ್ 12, ಅಕ್ಟೋಬರ್ 19, ಅಕ್ಟೋಬರ್ 2 ರ ಪ್ರಯಾಣಕ್ಕೆ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಆರಂಭಿಸಿದೆ.
ಹುಬ್ಬಳ್ಳಿ ಜನರ ಬಹುದಿನದ ಬೇಡಿಕೆ ಈಡೇರಿಕೆ
ಹುಬ್ಬಳ್ಳಿ ಜೋಧಪುರ್ ನೇರ ರೈಲು ಸಂಚಾರಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಉತ್ತರ ಕರ್ನಾಟಕ ಭಾಗದವರಿಂದ ಅನೇಕ ದಿನಗಳಿಂದಲೂ ಬಹು ಬೇಡಿಕೆಯಿತ್ತು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸತತ ಪ್ರಯತ್ನದ ಫಲವಾಗಿ ಇದೀಗ ಸಾಕಾರಗೊಂಡಿದೆ.
ಕರ್ನಾಟಕಕ್ಕೆ ರೈಲ್ವೆ ಯೋಜನೆಗಳನ್ನು ಕೊಡಿಸುವಲ್ಲಿ ಪ್ರಲ್ಹಾದ್ ಜೋಶಿ ಸಫಲ

ಅಶ್ವಿನಿ ವೈಷ್ಣವ್ ಹಾಗೂ ಪ್ರಲ್ಹಾದ್ ಜೋಶಿ
ಬೆಂಗಳೂರು – ಬೆಳಗಾವಿ ವಂದೇ ಭಾರತ್ ರೈಲು ಸೇರಿದಂತೆ ರಾಜ್ಯಕ್ಕೆ ವಿವಿಧ ರೈಲ್ವೆ ಯೋಜನೆಗಳನ್ನು ತರುವಲ್ಲಿ ಯಶಸ್ವಿಯಾಗಿರುವ ಸಚಿವ ಜೋಶಿ ಅವರು, ಇದೀಗ ಹುಬ್ಬಳ್ಳಿ-ಜೋಧಪುರ್ ವಿಶೇಷ ರೈಲು ಸಂಚಾರ ಆರಂಭಿಸುವಲ್ಲಿ ಸಹ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಗಮನ ಸೆಳೆದು ರೈಲು ಸಂಚಾರವನ್ನು ಸಾಕಾರಗೊಳಿಸುವಲ್ಲಿ ಸಫಲರಾಗಿದ್ದಾರೆ.
ಇದನ್ನೂ ಓದಿ: ನೀವು ಮದುವೆ, ತೀರ್ಥಯಾತ್ರೆಗೆ ಬಸ್ನಂತೆ ಇಡೀ ರೈಲು ಬುಕ್ ಮಾಡಬಹುದು.. ಹೇಗೆ ಗೊತ್ತಾ?
ಬಹುಜನರ ಬೇಡಿಕೆಯಂತೆ ಸಂಸದ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹುಬ್ಬಳ್ಳಿ-ಜೋಧಪುರ್ ರೈಲು ಸಂಚಾರ ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿ, ನಿರಂತರವಾಗಿ ಗಮನ ಸೆಳೆಯುತ್ತಲೇ ಇದ್ದರು. ಜೋಶಿ ಅವರ ಒತ್ತಾಸೆ, ಮನವಿಗೆ ಸ್ಪಂದಿಸಿ ಸಚಿವ ಅಶ್ವಿನಿ ವೈಷ್ಣವ್ ಅವರು ಹುಬ್ಬಳ್ಳಿ-ಜೋಧ್‌ಪುರಕ್ಕೆ ನೇರ ರೈಲು ಸಂಚಾರಕ್ಕೆ ಅನುಮೋದನೆ ನೀಡಿದ್ದಾರೆ.
ರೈಲ್ವೆ ಸಚಿವರಿಗೆ ಜೋಶಿ ಧನ್ಯವಾದ
ಮನವಿ, ಒತ್ತಾಸೆಗೆ ಸ್ಪಂದಿಸಿ ಉತ್ತರ ಕರ್ನಾಟಕ ಭಾಗದ ಅದರಲ್ಲೂ ವಾಣಿಜ್ಯ ನಗರಿ ಹುಬ್ಬಳ್ಳಿ ರೈಲ್ವೆ ಯೋಜನೆ, ಸೌಲಭ್ಯಗಳಿಗೆ ವಿಶೇಷ ಆಸಕ್ತಿ ತೋರಿ ಅನುಮೋದಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಸಚಿವ ಪ್ರಲ್ಹಾದ್ ಜೋಶಿ ಧನ್ಯವಾದ ಅರ್ಪಿಸಿದ್ದಾರೆ.




