ಸರಕಾರದ ಯೋಜನೆಗಳಲ್ಲಿ ಭ್ರಷ್ಟಾಚಾರ, ಕಳಪೆ ಗುಣಮಟ್ಟ ಸಹಿಸಲ್ಲ -ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಪ್ರಲ್ಹಾದ್ ಜೋಶಿ
DISHA meeting: ಕೇಂದ್ರ ಹಾಗೂ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನ ಜನರಿಗೆ ತಲುಪಿಸುವ ಹೊಣೆ ಅಧಿಕಾರಿಗಳದ್ದು. ಕೇಂದ್ರ ಸರಕಾರದ ಯೋಜನೆಗಳ ಅನುಷ್ಠಾನ ವಿಚಾರವಾಗಿ ದಿಶಾ ಸಮಿತಿ ಸದಸ್ಯರು ಮಾಹಿತಿ ಕೇಳಿ ಕಚೇರಿಗೆ ಬಂದರೆ, ಅಗತ್ಯ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಜೋಶಿ ಸೂಚಿಸಿದರು.
ಧಾರವಾಡ: ಜನರ ಕಲ್ಯಾಣ ಹಾಗೂ ಜಿಲ್ಲೆಯ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ವಿಶೇಷ ಕಾಳಜಿಯಿಂದ ಧಾರವಾಡ ಜಿಲ್ಲೆಗೆ ತರಲಾಗಿದೆ. ಯೋಜನೆಗಳಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ, ಅವ್ಯವಹಾರ ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Union Minister Pralhad Joshi ) ಹೇಳಿದ್ದಾರೆ. ಅವರು ಇಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ದಿಶಾ ಸಭೆಯ (DISHA meeting) ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನ ಜನರಿಗೆ ತಲುಪಿಸುವ ಹೊಣೆ ಅಧಿಕಾರಿಗಳದ್ದು. ಕೇಂದ್ರ ಸರಕಾರದ ಯೋಜನೆಗಳ ಅನುಷ್ಠಾನ ವಿಚಾರವಾಗಿ ದಿಶಾ ಸಮಿತಿ ಸದಸ್ಯರು ಮಾಹಿತಿ ಕೇಳಿ ಕಚೇರಿಗೆ ಬಂದರೆ, ಅಗತ್ಯ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಜೋಶಿ ಸೂಚಿಸಿದರು. ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು ಮತ್ತು ಉದ್ದಿನ ಕಾಳು ಖರೀದಿ ಕಾರ್ಯ ನಡೆದಿದೆ. ರೈತರಿಗೆ ಅಧಿಕಾರಿಗಳು ಸರಿಯಾದ ಮಾಹಿತಿ ಮತ್ತು ಸಹಕಾರ ನೀಡಬೇಕೆಂದು ಆಗ್ರಹಿಸಿದರು.
ಪಿಎಂಜಿಎಸ್ ವೈ ಯೋಜನೆಯಡಿ ರಸ್ತೆ ನಿರ್ಮಾಣದಲ್ಲಿ ಕಳಪೆ ಗುಣಮಟ್ಟ ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು. ಜಲಶಕ್ತಿ, ಜಲಜೀವನ ಮಿಷನ್, ಹರ್ ಘರ್ ಜಲ್ ಯೋಜನೆಗಳು ಅತ್ಯಂತ ಉತ್ತಮವಾಗಿ ಜಿಲ್ಲೆಯಲ್ಲಿ ಜಾರಿಯಾಗುತ್ತಿದೆ. ಇದರ ಇಂಪ್ಯಾಕ್ಟ್ ಕುರಿತು ಅಧ್ಯಯನ ಮಾಡಿ ವರದಿ ಕಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇಂದು ನನ್ನ ಅಧ್ಯಕ್ಷತೆಯಲ್ಲಿ ಜಿಲ್ಲಾ ಆಡಳಿತ ಮತ್ತು ಧಾರವಾಡ ಜಿಲ್ಲಾ ಪಂಚಾಯತ ಇದರ "ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಪ್ರಗತಿ ಪರಿಶೀಲನಾ ಸಭೆ" ನಡೆಸಲಾಯಿತು. pic.twitter.com/G0b1YCm24B
— Pralhad Joshi (@JoshiPralhad) October 1, 2022
ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಅನುದಾನದಲ್ಲಿ ಸಮುದಾಯ ಭವನ ನಿರ್ಮಿಸಲು ರೂ.2 ಕೋಟಿ ಬಿಡುಗಡೆ ಆಗಿದ್ದರೂ ಇಲ್ಲಿವರೆಗೂ ಕಾಮಗಾರಿ ಆರಂಭಿಸದಿರುವ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಜುಬ್ಲಿ ಸರ್ಕಲ್ ನಿಂದ ನರೇಂದ್ರ ಕ್ರಾಸ್‍ವರೆಗಿನ ರಸ್ತೆ ಕಾಮಗಾರಿ, ಬೀದಿ ದೀಪ, ರಸ್ತೆ ವಿಭಜಕ ಮತ್ತು ರಸ್ತೆ ಬದಿ ಚರಂಡಿ ನಿರ್ಮಾಣ ಕಾಮಗಾರಿಯನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದರು.
ಸರಕಾರದ ಯೋಜನೆಗಳ ಸಹಾಯಧನ, ಅನುದಾನ ಬಿಡುಗಡೆ ಮಾಡಲು ಬ್ಯಾಂಕ್ ನವರು ಸಿಬಿಲ್ ಸ್ಕೋರ್ ಕೇಳದಂತೆ ಕೇಂದ್ರ ಆರ್ಥಿಕ ಇಲಾಖೆ ಸುತ್ತೋಲೆ ಹೊರಡಿಸಿದೆ. ಆದ್ದರಿಂದ ಬ್ಯಾಂಕ್‍ಗಳು ಈ ಕುರಿತು ಜನರಿಗೆ ತಿಳುವಳಿಕೆ ನೀಡಿ, ಫಲಾನುಭವಿಗಳಿಗೆ ವಿಳಂಬ ಮಾಡದೆ ನಿಯಮಾನುಸಾರ ಸಾಲ ಮಂಜೂರು ಮಾಡಬೇಕೆಂದು ಜೋಶಿ ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಅಮೃತಸರೋವರ ಯೋಜನೆ ಅಡಿಯಲ್ಲಿ ಈಗಾಗಲೇ 26 ಕೆರೆ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಇನ್ನು 80 ಕೆರೆಗಳ ನಿರ್ಮಾಣ ಹಾಗೂ ಪುನರುಜ್ಜೀವನ ಕಾರ್ಯ ಆರಂಭಿಸಲು ಕ್ರಮವಹಿಸಲಾಗಿದೆ. ಇದು ಕೇಂದ್ರ ಸರಕಾರದ ಅತ್ಯಂತ ಮಹತ್ವದ ಯೋಜನೆಯಾಗಿದೆ. ಅತಿಯಾದ ಮಳೆಯಿಂದಾಗಿ ಅನೇಕ ಜನರ ಮನೆಗಳಿಗೆ ಹಾನಿಯಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮನೆಗಳ ದುರಸ್ತಿ ಹಾಗೂ ಪುನರ್ ನಿರ್ಮಾಣಕ್ಕೆ ಸರಕಾರದಿಂದ ಅನುಮೋದನೆ ಸಿಗುತ್ತಿಲ್ಲ ಎಂದು ಶಾಸಕರಿಂದ ಮತ್ತು ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಇದರ ಕುರಿತು ರಾಜ್ಯದ ವಸತಿ ಸಚಿವರ ಹಾಗೂ ರಾಜೀವ ಗಾಂಧಿ ಹೌಸಿಂಗ್ ಕಾರ್ಪೋರೇಷನ್, ಹಿರಿಯ ಅಧಿಕಾರಿಗಳ ಸಭೆಯನ್ನು ಬರುವ ನವೆಂಬರ್ 6 ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕಲಘಟಗಿ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಸಾರ್ವಜನಿಕರಿಂದ ಸಂಸದರ ಕಚೇರಿಗೆ ದೂರುಗಳು ಬರುತ್ತಿವೆ. ಭ್ರಷ್ಟಾಚಾರ ನಿಯಂತ್ರಿಸದಿದ್ದರೆ ತಹಶಿಲ್ದಾರರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಕಲಘಟಗಿ ತಹಶೀಲ್ದಾರ ಅವರಿಗೆ ಪ್ರಲ್ಹಾದ್ ಜೋಶಿ ವಾರ್ನಿಂಗ್ ಮಾಡಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 2016-17 ರಿಂದ 2022-23 ರ ವರೆಗೆ 4639 ಮನೆಗಳ ನಿರ್ಮಾಣ ಗುರಿ ಹೊಂದಲಾಗಿದ್ದು, 4344 ಮನೆ ನಿರ್ಮಿಸಲು ಅನುಮೊದನೆ ನೀಡಲಾಗಿದೆ. ಈಗ 3548 ಮನೆಗಳ ನಿರ್ಮಾಣವಾಗಿದ್ದು, ಶೇ.81.68 ಭೌತಿಕ ಪ್ರಗತಿಯಾಗಿದೆ. ಇನ್ನು 796 ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಪೂರ್ಣ ಗುರಿ ಸಾಧಿಸಲು ಅಧಿಕಾರಿಗಳು ಕ್ರಮವಹಿಸಬೇಕೆಂದು ಸಚಿವರು ತಿಳಿಸಿದರು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 1,65,547 ಉದ್ಯೋಗ ಚೀಟಿಗಳನ್ನು ನೀಡಲಾಗಿದೆ. ಸುಮಾರು 47,180 ಫಲಾನುಭವಿಗಳಿಂದ ಉದ್ಯೋಗ ಬೇಡಿಕೆ ಬಂದಿತ್ತು. 46,078 ಉದ್ಯೋಗ ಚೀಟಿದಾರರಿಗೆ ಉದ್ಯೋಗ ನೀಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಜನಾಂಗದ ಫಲಾನುಭವಿಗಳು ಉದ್ಯೋಗ ಅರಸಿ, ವಲಸೆ ಹೋಗುವ ಸಾಧ್ಯತೆ ಇದ್ದು, ಈ ಕುರಿತು ಅಧಿಕಾರಿಗಳು ಜಾಗೃತಿವಹಿಸಿ, ಎಸ್.ಸಿ.ಮತ್ತು ಎಸ್.ಟಿ. ಸಮುದಾಯದವರಿಗೆ ಸ್ಥಳದಲ್ಲಿ ಉದ್ಯೋಗ ದೊರೆಯುವಂತೆ ಮಾಡಬೇಕೆಂದು ಸಚಿವರು ಇದೇ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
Published On - 9:16 pm, Sat, 1 October 22