AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಡ ಬಿತ್ತನೆ ಮಾಡಲು ಹೊರಟ ಸರ್ಕಾರದ ನಡೆ ವಿರುದ್ಧ ಸಿಡಿದೆದ್ದ ಉತ್ತರ ಕರ್ನಾಟಕದ ರೈತರು: ಕಾರಣವೇನು?

Cloud Seeding: ರಾಜ್ಯದಲ್ಲಿ ಮುಂಗಾರು ಮಳೆ ವೈಫಲ್ಯದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಮೋಡ ಬಿತ್ತನೆಗೆ ಮುಂದಾಗಿದ್ದು, ಇದಕ್ಕೆ ಉತ್ತರ ಕರ್ನಾಟಕ ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜೂನ್-ಜುಲೈನಲ್ಲಿ ಮನವಿ ಮಾಡಿದಾಗ ನಿರ್ಲಕ್ಷಿಸಿ, ಬೆಳೆ ಹಾಳಾದ ನಂತರ ಮೋಡ ಬಿತ್ತನೆಗೆ ಮುಂದಾಗಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ಮೋಡ ಬಿತ್ತನೆ ಮಾಡಲು ಹೊರಟ ಸರ್ಕಾರದ ನಡೆ ವಿರುದ್ಧ ಸಿಡಿದೆದ್ದ ಉತ್ತರ ಕರ್ನಾಟಕದ ರೈತರು: ಕಾರಣವೇನು?
ಮೋಡ ಬಿತ್ತನೆImage Credit source: tv9 kannada
ಸಂಜಯ್ಯಾ ಚಿಕ್ಕಮಠ
| Edited By: |

Updated on: Aug 26, 2026 | 5:00 PM

Share

ಹುಬ್ಬಳ್ಳಿ, ಆಗಸ್ಟ್​​ 26: ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ (Rain) ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. ಇದೀಗ ರಾಜ್ಯ ಸರ್ಕಾರ ಮೋಡ ಬಿತ್ತನೆಗೆ (Cloud seeding) ಮುಂದಾಗಿದೆ. ಆದರೆ ಸರ್ಕಾರ ಇದೀಗ ಮೋಡ ಬಿತ್ತನೆಗೆ ಮುಂದಾಗಿರುವುದಕ್ಕೆ ಉತ್ತರ ಕರ್ನಾಟಕ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಜೂನ್, ಜುಲೈ, ಆಗಸ್ಟ್ ಮೊದಲ ವಾರದಲ್ಲಿ ಮೋಡ ಬಿತ್ತನೆ ಮಾಡುವಂತೆ ಹತ್ತಾರು ಬಾರಿ ಮನವಿ ಮಾಡಿದರು ಡೋಂಟ್ ಕೇರ್ ಅಂದಿದ್ದ ಸರ್ಕಾರ ಇದೀಗ ಬೆಳೆ ಹಾಳಾದ ಮೇಲೆ ಮೋಡ ಬಿತ್ತನೆಗೆ ಮುಂದಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬರೋಬ್ಬರಿ 28 ಕೋಟಿ ರೂ ವೆಚ್ಚದಲ್ಲಿ ಮೋಡ ಬಿತ್ತನೆ

ಈ ಬಾರಿ ಎಲ್​ ನಿನೋ ಪ್ರಭಾವದಿಂದ ನಿರೀಕ್ಷಿತ ಮಳೆಯಾಗಿಲ್ಲ. ಹೀಗಾಗಿ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ರೈತರ ನೆರವಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಮೋಡ ಬಿತ್ತನೆಗೆ ಮುಂದಾಗಿದೆ. ಮುಂದಿನ 60 ದಿನಗಳ ಕಾಲ ಬರೋಬ್ಬರಿ 28 ಕೋಟಿ ರೂ ವೆಚ್ಚದಲ್ಲಿ ಮೋಡ ಬಿತ್ತನೆಗೆ ಮುಂದಾಗಿದೆ. ರಾಜ್ಯದ 27 ಜಿಲ್ಲೆಗಳು, 178 ತಾಲೂಕಿನಲ್ಲಿ ಬರಗಾಲವಿದ್ದು, ಎಲ್ಲೆಲ್ಲಿ ಮೋಡಗಳು ಇರುತ್ತವೆಯೋ ಅಲ್ಲಿ ಮುಂದಿನ 60 ದಿನಗಳ ಕಾಲ 200 ಗಂಟೆ ಮೋಡ ಬಿತ್ತನೆಗೆ ಮುಂದಾಗಿದೆ. ಆ ಮೂಲಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಿದೆ. ಆದರೆ ರಾಜ್ಯ ಸರ್ಕಾರದ ಈ ನಿರ್ಧಾರ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಮತ್ತೆ ಮೋಡ ಬಿತ್ತನೆಗೆ ಮುಂದಾದ ಸರ್ಕಾರ: ರೈತರು ಆಕ್ರೋಶ

ಉತ್ತರ ಕರ್ನಾಟಕ ಭಾಗದಲ್ಲಿ ಜೂನ್, ಜುಲೈ ತಿಂಗಳಲ್ಲಿ ಬಿತ್ತನೆ ಮಾಡುತ್ತಾರೆ. ಅದರಲ್ಲೂ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು, ಬೆಳೆಗಳನ್ನು ಜುಲೈ ತಿಂಗಳ ಆರಂಭದಲ್ಲಿಯೇ ಬಿತ್ತನೆ ಮಾಡುತ್ತಾರೆ. ಈ ವರ್ಷ ಕೂಡ ಹೆಚ್ಚಿನ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದರು. ಆದರೆ ಈ ಬಾರಿ ನಿರೀಕ್ಷಿತ ಮಳೆಯಾಗಲಿಲ್ಲ. ಹೀಗಾಗಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದ ರೈತರು, ಜುಲೈ ತಿಂಗಳಲ್ಲಿ ಮೋಡ ಬಿತ್ತನೆಗೆ ಆಗ್ರಹಿಸಿದ್ದರು. ಸ್ವತಃ ಈ ಭಾಗದ ಶಾಸಕರು ಕೂಡ ಮೋಡ ಬಿತ್ತನೆಗೆ ಆಗ್ರಹಿಸಿದ್ದರು. ಆದರೆ ಸರ್ಕಾರ ಆಗ ಮೋಡ ಬಿತ್ತನೆ ಮಾಡುವುದರಿಂದ ಹೆಚ್ಚು ಪ್ರಯೋಜನವಾಗುವುದಿಲ್ಲ. ಹಣ ಹಾಳಾಗುತ್ತೆ ಅಂತ ಹೇಳಿ ಮೋಡ ಬಿತ್ತನೆ ಮಾಡಿರಲಿಲ್ಲ. ಹೀಗಾಗಿ ಹಾವೇರಿ ಜಿಲ್ಲೆಯಲ್ಲಿ ಶಾಸಕರೇ ಸೇರಿ ಮೋಡ ಬಿತ್ತನೆ ಮಾಡಿಸಿದ್ದರು. ಆದರೆ ಆಗ ಮೋಡ ಬಿತ್ತನೆಗೆ ಹಿಂದೇಟು ಹಾಕಿದ್ದ ಸರ್ಕಾರ ಇದೀಗ ಮೋಡ ಬಿತ್ತನೆಗೆ ಮುಂದಾಗಿರುವುದು ಈ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಮೋಡ ಬಿತ್ತನೆಗೆ ಚಾಲನೆ ಬೆನ್ನಲ್ಲೇ ಸುರಿದ ಮಳೆ: ಪ್ರಯತ್ನ ಫಲ ನೀಡಿದೆ ಎಂದ ಶಾಸಕ; ರೈತರೂ ಖುಷ್​

ಉತ್ತರ ಕರ್ನಾಟಕ ಭಾಗದಲ್ಲಿ ಬೆಳೆದಿದ್ದ ಹೆಸರು, ಉದ್ದು ಇದೀಗ ಮಳೆ ಕೊರತೆಯಿಂದ ಸಂಪೂರ್ಣವಾಗಿ ಹಾಳಾಗಿದೆ. ರೈತರು ಟ್ರ್ಯಾಕ್ಟರ್ ಹೊಡೆದು ತಾವು ಬೆಳೆದ ಬೆಳೆಯನ್ನು ತಾವೇ ಹಾಳು ಮಾಡಿದ್ದಾರೆ. ಹೀಗಾಗಿ ಇದೀಗ ಮೋಡ ಬಿತ್ತನೆ ಮಾಡುವುದರಿಂದ ನಮಗೆ ಯಾವುದೇ ಪ್ರಯೋಜನವಾಗಲಾರದು. ಹಿಂಗಾರು ಬಿತ್ತನೆ ಇನ್ನು ಆರಭವಾಗದೇ ಇರುವುದರಿಂದ ಅದಕ್ಕೂ ಕೂಡ ನಮಗೆ ಅನುಕೂಲವಾಗಲ್ಲ ಅಂತಿದ್ದಾರೆ.

ಉತ್ತರ ಕರ್ನಾಟಕದ ರೈತರಿಗೆ ಪ್ರಯೋಜನವಿಲ್ಲ: ರೈತ ಶಂಕರಗೌಡ

‘ನಾವು ಮೋಡ ಬಿತ್ತನೆಗೆ ಆಗ್ರಹಿಸಿದಾಗ, ಮೋಡ ಬಿತ್ತನೆ ಮಾಡಿವುದರಿಂದ ಹೆಚ್ಚು ಪ್ರಯೋಜನವಾಗಲ್ಲ ಎಂದಿದ್ದರು. ಇದೀಗ ಅದು ಹೇಗೆ ಪ್ರಯೋಜನವಾಗುತ್ತೆ ಅಂತ ಪ್ರಶ್ನಿಸುತ್ತಿದ್ದಾರೆ. ಇದು ಮೈಸೂರು ಭಾಗದ ರೈತರಿಗೆ ಅನಕೂಲವಾಗುತ್ತದೆ ಹೊರತು ಉತ್ತರ ಕರ್ನಾಟಕದ ರೈತರಿಗೆ ಮೋಡ ಬಿತ್ತನೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ’ ಎಂದು ರೈತ ಶಂಕರಗೌಡ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಮಳೆ ಕೊರತೆಯಾಗಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಈ ಸಮಯದಲ್ಲಿ ಮೋಡ ಬಿತ್ತನೆಗೆ ಸರ್ಕಾರ ಮುಂದಾಗಿರುವು ಉತ್ತಮ ನಿರ್ಧಾರ. ಆದರೆ ಉತ್ತರ ಕರ್ನಾಟಕ ಭಾಗದ ರೈತರು, ಶಾಸಕರು ಆಗ್ರಹಿಸಿದಾಗ ಮೋಡ ಬಿತ್ತನೆ ಮಾಡದ ಸರ್ಕಾರ, ಇದೀಗ ಸಂಪೂರ್ಣ ಬೆಳೆ ಹಾಳಾದ ಮೇಲೆ ಮೋಡ ಬಿತ್ತನೆ ಮಾಡಲು ಮುಂದಾಗಿರುವುದು ಉತ್ತರ ಕರ್ನಾಟಕದ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us