ಮೈಸೂರು ರಂಗಾಯಣದ `ಮುಟ್ಟಿಸಿಕೊಂಡವನು’ ಹಾಗೂ ‘ಕಸಾಂದ್ರ ಮತ್ತು ಸತಿ’ ನಾಟಕಗಳು ನ. 6 ಹಾಗೂ ನ.7 ರಂದು ಪ್ರದರ್ಶನ
ಮೈಸೂರು ರಂಗಾಯಣವು ನವೆಂಬರ್ 06 ಸೋಮವಾರದಂದು `ಮುಟ್ಟಿಸಿಕೊಂಡವನು’ ಮತ್ತು ನವೆಂಬರ್ 07 ಮಂಗಳವಾರದಂದು ‘ಕಸಾಂದ್ರ ಮತ್ತು ಸತಿ’ ನಾಟಕ ಪ್ರದರ್ಶನವನ್ನು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಭವನದಲ್ಲಿ ನಾಟಕಗಳ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
ಧಾರವಾಡ, ಅ.27: ಮೈಸೂರು ರಂಗಾಯಣ(Mysore Rangayana) ವು ನವೆಂಬರ್ 06 ಸೋಮವಾರದಂದು `ಮುಟ್ಟಿಸಿಕೊಂಡವನು’ ಮತ್ತು ನವೆಂಬರ್ 07 ಮಂಗಳವಾರದಂದು ‘ಕಸಾಂದ್ರ ಮತ್ತು ಸತಿ’ ನಾಟಕ ಪ್ರದರ್ಶನವನ್ನು ಧಾರವಾಡ(Dharwad)ದ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಭವನದಲ್ಲಿ ನಾಟಕಗಳ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಕಳೆದ 34 ವರ್ಷಗಳಿಂದ ಅನೇಕ ವಿಶಿಷ್ಟ ರಂಗ ಪ್ರಯೋಗಗಳ ಮೂಲಕ ರಂಗಭೂಮಿಯ ಇತಿಹಾಸದಲ್ಲಿ ದಾಖಲೆ ಸೃಷ್ಠಿಸಿದೆ.
ರಾಜ್ಯಾದ್ಯಂತ ಹೊಸ ನಾಟಕಗಳ ಪ್ರದರ್ಶನ
ಪ್ರಸಕ್ತ ಸಾಲಿನಲ್ಲಿ ರಂಗಾಯಣ ಸಿದ್ದಪಡಿಸಿರುವ ಎರಡು ಹೊಸ ನಾಟಕಗಳನ್ನು ರಾಜ್ಯಾದ್ಯಂತ ಪ್ರದರ್ಶಿಸಲು ಯೋಜನೆ ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ನವೆಂಬರ್ 6 ರಂದು ಪ್ರದರ್ಶಿಸುವ ‘ಮುಟ್ಟಿಸಿಕೊಂಡವನು’ ನಾಟಕ ಪಿ. ಲಂಕೇಶ್ ಕಥೆಯಾಧಾರಿತವಾಗಿದ್ದು, ರಂಗಾಯಣದ ಹಿರಿಯ ಕಲಾವಿದರಾದ ನಂದಿನಿ ಕೆ.ಆರ್. ಅವರು ನಿರ್ದೇಶಿಸಿದ್ದಾರೆ. ಈ ನಾಟಕದಲ್ಲಿ ಹಳ್ಳಿಗಾಡಿನ ರೈತಾಪಿ ಜನರಲ್ಲಿ ಸಹಜವಾಗಿಯೇ ಇರುವ ಒಳ್ಳೆಯತನ ಮತ್ತು ಮುಗ್ಧತೆಗಳು ಹೇಗೆ ನಮ್ಮ ಜಾತಿ ವ್ಯವಸ್ಥೆಯ ಕ್ರೂರ ಅನಿಷ್ಟಗಳ ಕೈಯಲ್ಲಿ ಸಿಕ್ಕು ನಲುಗುತ್ತವೆ ಎಂಬುದರ ಮೇಲೆ ಈ ಕತೆ ಬೆಳಕು ಚೆಲ್ಲುತ್ತದೆ.
ಎರಡು ನಾಟಕ ಸೇರಿಸಿ ಪ್ರದರ್ಶನ
ನವೆಂಬರ್ 07 ರಂದು ಪ್ರದರ್ಶಿಸುವ ‘ಕಸಾಂದ್ರ ಮತ್ತು ಸತಿ’ ನಾಟಕ ಹೆಚ್.ಎಸ್. ಶಿವಪ್ರಕಾಶ್ ಅವರು ರಚಿಸಿದ್ದು, ಮೊದಲ ಬಾರಿಗೆ ಎರಡು ನಾಟಕಗಳನ್ನು ಸೇರಿಸಿ ಪ್ರದರ್ಶಿಸುತ್ತಿರುವ ಹೊಸ ರಂಗಪ್ರಯೋಗ ಇದಾಗಿದೆ. ಈ ನಾಟಕವನ್ನು ಹೆಗ್ಗೋಡಿನ ಹಿರಿಯ ರಂಗ ನಿರ್ದೇಶಕರಾದ ಬಿ.ಆರ್. ವೆಂಕಟರಮಣ ಐತಾಳ ಅವರು ನಿರ್ದೇಶನ ಮಾಡಿದ್ದಾರೆ. ಹೆಚ್.ಎಸ್. ಶಿವಪ್ರಕಾಶರು ಗ್ರೀಕ್ ಪುರಾಣ ಹಾಗೂ ಈಸ್ಕಿಲಸ್ ನ ಅಗಮೆಮ್ನೋನ್ ನಾಟಕಗಳನ್ನು ಆಧರಿಸಿ `ಕಸಾಂದ್ರ’ ನಾಟಕವನ್ನು ಮತ್ತು ಶಿವಪುರಾಣಗಳು ಹಾಗೂ ದೇಸಿ ಜಾನಪದ ಪುರಾಣಗಳಲ್ಲಿ ಬರುವ ದಾಕ್ಷಾಯಣಿಯ ಕಥೆಯನ್ನು ಆಧರಿಸಿ `ಸತಿ’ ಎಂಬ ನಾಟಕವನ್ನೂ ಬರೆದಿದ್ದಾರೆ. ಈ ಎರಡೂ ದುರಂತ ಕಥೆಗಳು ಮಾನವಕುಲದ ಆದಿಮ ರೂಪಕಗಳು. ಇದು ಮನುಕುಲದ ಇತಿಹಾಸದಲ್ಲಿ ಇಂದಿಗೂ ಪ್ರಸ್ತುತವಾಗಿರುವ ಸರ್ವಾಧಿಕಾರ ದರ್ಪ ದಮನ ಹಿಂಸೆಯ ಸ್ವರೂಪಗಳನ್ನು ಪುರಾಣದ ಚೌಕಟ್ಟಿನಲ್ಲಿ ನೋಡುವ ಪ್ರಯತ್ನವಾಗಿದೆ.
ಈ ಎರಡು ನಾಟಕಗಳು ಭಿನ್ನ-ಭಿನ್ನ ರಂಗಪ್ರಯೋಗಗಳಾಗಿದ್ದು, ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ. ಅಪಾರ ಸಂಖ್ಯೆಯಲ್ಲಿ ರಂಗಾಸಕ್ತರು ಬಂದು ಈ ರಂಗಪ್ರಯೋಗಗಳನ್ನು ವೀಕ್ಷಿಸಿ, ನಾಟಕಗಳ ಪ್ರದರ್ಶನವನ್ನು ಯಶಸ್ವಿಗೊಳಿಸಬೇಕೆಂದು ಮೈಸೂರು ರಂಗಾಯಣದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ