ಧಾರವಾಡ, ಆಗಸ್ಟ್ 03: ಬಹುವರ್ಷಗಳಿಂದ ಬೇಡಿಕೆಯಲ್ಲಿರುವ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಹಳಿ ಯೋಜನೆಗೆ (hubballi ankola railway project) ಇತ್ತೀಚಿಗಷ್ಟೇ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಈ ಯೋಜನೆಗಾಗಿ ಇದೀಗ ಕೇಂದ್ರ ಸರಕಾರ ಹಣವನ್ನು ಕೂಡ ಮೀಸಲಿಟ್ಟಿದೆ. ಒಂದು ಕಡೆ ಡಬಲ್ ಇಂಜಿನ್ ಸರಕಾರ ಈ ಯೋಜನೆಯನ್ನು ಮಾಡಿಯೇ ತೀರುವುದಾಗಿ ಹೇಳುತ್ತಿದೆ. ಆದರೆ ಅದಕ್ಕೆ ಮತ್ತೊಂದು ವಿಘ್ನ ಎದುರಾಗಿದೆ.
ಹಲವಾರು ದಶಕಗಳ ಬೇಡಿಕೆಯಾಗಿರುವ ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗದ ಯೋಜನೆಗೆ ಪರಿಸರವಾದಿಗಳು ನಿರಂತರವಾಗಿ ವಿರೋಧ ಮಾಡುತ್ತಲೇ ಬಂದಿದ್ದಾರೆ. ಅತ್ತ ಈ ಯೋಜನೆ ಮಾಡಲೇಬೇಕು ಅಂತಾ ಅಂಕೋಲಾ ಜನರು ನಿರಂತರವಾಗಿ ಹೋರಾಟ ಮಾಡುತ್ತಲೇ ಇದ್ದಾರೆ. ಆದರೆ ಈ ಯೋಜನೆಗೆ ಸುಮಾರು 650 ಹೆಕ್ಟೇರ್ ದಟ್ಟ ಅರಣ್ಯ ನಾಶವಾಗುತ್ತದೆ.
ಪ್ರಪಂಚದಲ್ಲಿಯೇ ಪಶ್ಚಿಮ ಘಟ್ಟ ಪ್ರದೇಶ ಅತ್ಯಂತ ಸೂಕ್ಷ್ಮವಾಗಿದ್ದು ಅಂತಾ ವಿಜಾನಿಗಳು ಹೇಳುತ್ತಲೇ ಇದ್ದಾರೆ. ಇಂಥ ವೈವಿಧ್ಯಮಯ ಪ್ರದೇಶದಲ್ಲಿ ಈ ಯೋಜನೆ ಮಾಡಿದರೆ ಜೀವವೈವಿಧ್ಯಕ್ಕೆ ತೊಂದರೆ ಆಗುತ್ತೆ ಎನ್ನುವ ವಾದವಿದೆ. ಆದರೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇನ್ನೇನು ಕಾಮಗಾರಿ ಶುರುವಾಗಿಯೇ ಬಿಟ್ಟಿತು ಅನ್ನುವಂತೆ ಹೇಳಿದ್ದರು.
ಇದನ್ನೂ ಓದಿ: ಆಗಸ್ಟ್ 1 ರಿಂದ 7 ರವರೆಗೆ ಎದೆ ಹಾಲುಣಿಸುವ ಸಪ್ತಾಹ, ಧಾರವಾಡದ ಎಸ್.ಡಿ.ಎಂ. ಆಸ್ಪತ್ರೆಯಲ್ಲಿಯೂ ಇದೆ ಎದೆ ಹಾಲಿನ ಬ್ಯಾಂಕ್
ಧಾರವಾಡ ಐಐಟಿ ಉದ್ಘಾಟನೆ ವೇಳೆ ಪಿಎಂ ನರೇಂದ್ರ ಮೋದಿ ಎದುರೇ ರಾಜಾರೋಷವಾಗಿ ಈ ಯೋಜನೆಯ ಬಗ್ಗೆ ಮಾತಾಡಿದ್ದರು. ಈ ಯೋಜನೆಯನ್ನು ಇದೇ ವರ್ಷದಲ್ಲಿ ಮಾಡುವುದಾಗಿ ಹೇಳಿದ್ದರು. ಇದು ತಮ್ಮ ಡಬಲ್ ಇಂಜಿನ್ ಸರಕಾರದ ಸಾಧನೆ ಅಂತಾನೂ ಹೇಳಿದ್ದರು. ಆದರೆ ಕಾಮಗಾರಿ ಶುರುವಾಗುವುದು ಅಷ್ಟು ಸುಲಭದ ಮಾತಲ್ಲ ಅನ್ನೋದು ಕೇಂದ್ರ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಇಲಾಖೆ ವರದಿ ನೋಡಿದರೆ ಗೊತ್ತಾಗುತ್ತಿದೆ.
ಇತ್ತೀಚಿಗಷ್ಟೇ ಪರಿಸರ ಸಚಿವಾಲಯ ಕೂಡ ಈ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಈ ಯೋಜನೆಗೆ ಇದ್ದ ಎಲ್ಲ ವಿಘ್ನಗಳು ನಿವಾರಣೆಯಾಗಿದ್ದವು ಅಂದುಕೊಳ್ಳಲಾಗಿತ್ತು. ಈ ಯೋಜನೆ 161 ಕಿ.ಮೀ. ಉದ್ದವಿದೆ. ಇದರಲ್ಲಿ ಸುಮಾರು 108 ಕಿ.ಮೀ. ದಟ್ಟ ಹಾಗೂ ಜೀವವೈವಿಧ್ಯಮಯ ಅರಣ್ಯದ ಮಧ್ಯೆ ಹಾದು ಹೋಗುತ್ತದೆ. ಅಣಶಿ-ದಾಂಡೇಲಿ ಹಾಗೂ ಭದ್ರಾ ಹುಲಿ ಸಂರಕ್ಷಿತ ಪ್ರದೇಶಗಳ ಮಧ್ಯೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರದೇಶ ಇದಾಗಿದ್ದು, ಪ್ರಸ್ತಾವಿತ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗವು ಈ ಸಂಪರ್ಕವನ್ನು ತೀವ್ರವಾಗಿ ವಿಭಜಿಸಲಿದೆ.
ಅಷ್ಟೇ ಅಲ್ಲದೇ ಹುಲಿ ಸಂರಕ್ಷಣೆಯ ಉದ್ದೇಶದಿಂದ ರೈಲ್ವೆ ಮಾರ್ಗದ ಕಾರ್ಯಸಾಧ್ಯತೆ ಕುರಿತು ಮರುಪರಿಶೀಲಿಸುವುದು ಉತ್ತಮ ಅಂತ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಇಲಾಖೆ ವರದಿ ನೀಡಿದೆ. ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ಅಳವಡಿಕೆ ಯೋಜನೆಯಿಂದ ಕಾಡು ಹಾಗೂ ಕಾಡು ಪ್ರಾಣಿಗಳಿಗೆ ದೊಡ್ಡ ಅಪಾಯ ಉಂಟಾಗಲಿದೆ ಎಂದಿರುವ ಇಲಾಖೆ, ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಹುಲಿಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕೆಂಬ ಕಿವಿಮಾತನ್ನೂ ಹೇಳಿದೆ.
ಇದನ್ನೂ ಓದಿ: ಮುಕ್ತಾಯ ಪ್ರಮಾಣ ಪತ್ರ ಕೊಡಿಸಲು ಧಾರವಾಡ ಗ್ರಾಹಕರ ಆಯೋಗದಿಂದ ಬಿಲ್ಡರ್‌ಗೆ ಆದೇಶ
ಈ ವರದಿಯಿಂದಾಗಿ ಇದೀಗ ಮತ್ತೆ ಗೊಂದಲ ಉಂಟಾಗಿದೆ. ಅದಾಗಲೇ ಎಲ್ಲ ಅನುಮತಿ ಸಿಕ್ಕು, ಇನ್ನೇನು ಕಾಮಗಾರಿ ಶುರುವಾಗಿಯೇ ಬಿಡುತ್ತೆ ಅನ್ನುತ್ತಿದ್ದ ಜನಪ್ರತಿನಿಧಿಗಳ ವರ್ತನೆಯಿಂದ ಜನರು ಬೇಸತ್ತು ಹೋಗಿದ್ದಾರೆ. ಅಂಥ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ, ನೀವು ಜನರ ಮುಂದೆ ಹೇಳಿಕೆ ನೀಡಬೇಕು ಅನ್ನೋದು ಜನರ ಆಗ್ರಹವಾಗಿದೆ.
ಈ ಯೋಜನೆಯಲ್ಲಿ ಹಲವು ರೈಲ್ವೆ ಸುರಂಗ ಮಾರ್ಗಗಳೂ ಇರಲಿವೆ. ಹೀಗೆ ಮಾಡುವ ಮೂಲಕ ಪರಿಸರಕ್ಕೆ ತೊಂದರೆ ಆಗದಂತೆ ಎಚ್ಚರವಹಿಸೋದಾಗಿ ಸರಕಾರ ಹಾಗೂ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಬೇಸಿಗೆ ಸಂದರ್ಭದಲ್ಲಿ ಸುರಂಗ ಮಾರ್ಗದಲ್ಲಿ ತಣ್ಣನೆಯ ವಾತಾವರಣ ಇರುವುದರಿಂದ ಅಲ್ಲಿಗೆ ಹುಲಿ ಸೇರಿದಂತೆ ಅನೇಕ ವನ್ಯಮೃಗಗಳು ಬಂದು ಬಿಡಬಹುದು.
ಈ ವೇಳೆ ರೈಲಿಗೆ ಅವುಗಳು ಬಲಿಯಾಗುವ ಸಾಧ್ಯತೆ ಇರುತ್ತದೆ ಅನ್ನೋದು ಕೂಡ ಪರಿಸರ ಪ್ರೇಮಿಗಳ ವಾದ. ಒಂದು ಕಡೆ ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದರೆ ಮತ್ತೊಂದು ಕಡೆ ಈ ಯೋಜನೆ ಬೇಕೇ ಬೇಕು ಅನ್ನೋ ಆಗ್ರಹ ಕೇಳಿ ಬರುತ್ತಿದೆ. ಪರಿಸರಕ್ಕೆ ಧಕ್ಕೆಯಾಗದಂತೆ ಈ ಯೋಜನೆಯನ್ನು ಅನುಷ್ಠಾನ ಮಾಡುವ ಜವಾಬ್ದಾರಿ ಇದೀಗ ಸರಕಾರದ ಮೇಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.