ನೌಕರರ ಭವಿಷ್ಯ ನಿಧಿ: ಹೈಯರ್ ಪೆನ್ಷನ್ ಸಮಸ್ಯೆಗೆ ಶೀಘ್ರ ಪರಿಹಾರ, ಸಚಿವೆ ಶೋಭಾ ಕರಂದ್ಲಾಜೆ ಭರವಸೆ
ಕರ್ನಾಟಕದ ಪತ್ರಕರ್ತರು ಎದುರಿಸುತ್ತಿರುವ ಪಿಂಚಣಿ ಸಮಸ್ಯೆ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಶೀಘ್ರ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಅಲ್ಲದೆ, ಅರ್ಜಿಗಳನ್ನು ಶೀಘ್ರ ಇತ್ಯರ್ಥಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೆಲವು ಸಂಸ್ಥೆಗಳ ಭವಿಷ್ಯ ನಿಧಿ ಟ್ರಸ್ಟ್‌ಗಳ ತಾಂತ್ರಿಕ ಸಮಸ್ಯೆಗಳನ್ನು ಸಹ ಸರ್ಕಾರ ಪರಿಹರಿಸುವುದಾಗಿ ಅವರು ಆಶ್ವಾಸನೆ ನೀಡಿದ್ದಾರೆ.

ಬೆಂಗಳೂರು, ಜೂನ್ 28: ನೌಕರರ ಭವಿಷ್ಯ ನಿಧಿ ಯೋಜನೆ ಅಡಿ ಬರುವ ‘ಹೈಯರ್ ಪೆನ್ಷನ್ ಸ್ಕೀಮ್’ನಲ್ಲಿ ಉಂಟಾಗಿರುವ ಸಮಸ್ಯೆಯನ್ನು ಅತಿ ಶೀಘ್ರದಲ್ಲೇ ಪರಿಹಾರ ಮಾಡುವುದಾಗಿ ಕೇಂದ್ರ ಕಾರ್ಮಿಕ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಶನಿವಾರ ತಮ್ಮನ್ನು ಭೇಟಿ ಮಾಡಿದ ಹಿರಿಯ ಪತ್ರಕರ್ತರ ನಿಯೋಗಕ್ಕೆ (Journalists Delegation) ಭರವಸೆ ನೀಡಿದರು. ಕರ್ನಾಟಕದ ಅನೇಕ ಪತ್ರಕರ್ತರು ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಹೈಯರ್ ಪೆನ್ಷನ್ (Pension) ಪಡೆಯುವ ಬಗ್ಗೆ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಅವು ಅನೇಕ ತಿಂಗಳಿನಿಂದ ಇತ್ಯರ್ಥ ಕಾಣದೆ ಪತ್ರಕರ್ತರು, ಅದರಲ್ಲೂ ನಿವೃತ್ತ ನೌಕರರು ತೀವ್ರ ಆರ್ಥಿಕ ಸಮಸ್ಯೆಗೆ ತುತ್ತಾಗಿರುವ ಸಂಗತಿಯನ್ನು ನಿಯೋಗ ಸಚಿವರ ಗಮನಕ್ಕೆ ತಂದಿತು.
ಅನೇಕ ಪತ್ರಕರ್ತರು ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯಿಂದ ಬಂದ ಡಿಮ್ಯಾಂಡ್ ನೋಟ್ ಅನುಸಾರ ಹೆಚ್ಚುವರಿ ಮೊತ್ತವನ್ನು ಜನವರಿ ತಿಂಗಳಲ್ಲೇ ಪಾವತಿ ಮಾಡಿದ್ದಾರೆ, ಇದುವರೆಗೂ ಇದು ಇತ್ಯರ್ಥವಾಗಿಲ್ಲ. ಆರು ತಿಂಗಳಿನಿಂದ ಕಟ್ಟಿದ ದುಡ್ಡಿಗೆ ಬಡ್ಡಿಯೂ ಇಲ್ಲ, ಹೆಚ್ಚಿನ ಪೆನ್ಷನ್ನೂ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ನಿಯೋಗ ವಾಸ್ತವ ಚಿತ್ರಣವನ್ನು ಸಚಿವರ ಮುಂದೆ ತೆರೆದಿಟ್ಟಿತು.
ಈ ಸಮಸ್ಯೆಗೆ ಕೂಡಲೇ ಸ್ಪಂದಿಸಿದ ಸಚಿವೆ ಶೋಭಾ ಕರಂದ್ಲಾಜೆ, ಈಗಾಗಲೇ ಡಿಮಾಂಡ್ ನೋಟ್ ವಿತರಿಸಿ ಹಣ ಕಟ್ಟಿಸಿಕೊಂಡ ಉದ್ಯೋಗಿಗಳ ಅರ್ಜಿಯನ್ನು ಕೂಡಲೇ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇನ್ನು ಕೆಲವು ಸಂಸ್ಥೆಗಳ ಭವಿಷ್ಯ ನಿಧಿಯನ್ನು ಆಯಾ ಸಂಸ್ಥೆಗಳ ಟ್ರಸ್ಟ್ಗಳೇ ನಡೆಸುತ್ತಿದ್ದು ತಾಂತ್ರಿಕ ಕಾರಣದ ಮೇಲೆ ಇಂಥ ಅರ್ಜಿಗಳು ತಿರಸ್ಕಾರಗೊಂಡಿರುವ ಸಂಗತಿಯನ್ನು ಸಚಿವರ ಗಮನಕ್ಕೆ ತರಲಾಯಿತು. ಈ ವಿಷಯ ಸರ್ಕಾರದ ಮಟ್ಟದಲ್ಲಿ ಈಗಾಗಲೇ ಚರ್ಚೆಯಲ್ಲಿದ್ದು ಅತಿ ಶೀಘ್ರದಲ್ಲೇ ಪರಿಹಾರ ಹುಡುಕುವ ಭರವಸೆ ನೀಡಿದರು.
ಇದನ್ನೂ ಓದಿ: ಉಡುಪಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮಂಡಲ ಉತ್ಸವಕ್ಕೆ ಸಿದ್ದರಾಮಯ್ಯಗೆ ಆಹ್ವಾನ: ಹೋಗುತ್ತಾರಾ ಸಿಎಂ?
ನಿಯೋಗದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಹಿರಿಯ ಪತ್ರಕರ್ತರಾದ, ಶ್ರೀವತ್ಸ ನಾಡಿಗ್, ನೆತ್ತನಕೆರೆ ಉದಯಶಂಕರ, ಎಂ. ನಾಗರಾಜ, ಬಿಎನ್ ರಾಘವೇಂದ್ರ, ವಾದಿರಾಜ ದೇಸಾಯಿ, ಚಂದ್ರಶೇಖರ ಮತ್ತು ಹನುಮೇಶ್ ಕೆ ಯಾವಗಲ್ ಇದ್ದರು.








