AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಡವರಿಗಾಗಿ ನಿರ್ಮಾಣವಾಗಿರುವ 42 ಸಾವಿರ ಮನೆಗಳಿಗೆ ಸಿಗದ ಉದ್ಘಾಟನಾ ಭಾಗ್ಯ: ಸಿಎಂ, AICC ಅಧ್ಯಕ್ಷರು ಕಾರಣ!

ಕರ್ನಾಟಕದಲ್ಲಿ 42,000ಕ್ಕೂ ಹೆಚ್ಚು ಸ್ಲಂ ಬೋರ್ಡ್ ಮನೆಗಳು ಫಲಾನುಭವಿಗಳಿಗೆ ಹಂಚಿಕೆಯಾಗಿಲ್ಲ. ಹುಬ್ಬಳ್ಳಿಯಲ್ಲಿ 1500ಕ್ಕೂ ಹೆಚ್ಚು ಮನೆಗಳು ನಿರ್ಮಾಣಗೊಂಡಿದ್ದರೂ ಖಾಲಿ ಉಳಿದಿವೆ. ಮುಖ್ಯಮಂತ್ರಿ ಮತ್ತು ಎಐಸಿಸಿ ಅಧ್ಯಕ್ಷರ ಉದ್ಘಾಟನೆಗಾಗಿ ಕಾಯುತ್ತಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಬಡವರಿಗೆ ಮನೆಗಳನ್ನು ಒದಗಿಸುವಲ್ಲಿನ ವಿಳಂಬಕ್ಕೆ ಸರ್ಕಾರವನ್ನು ತೀವ್ರ ಟೀಕಿಸಲಾಗುತ್ತಿದೆ.

ಬಡವರಿಗಾಗಿ ನಿರ್ಮಾಣವಾಗಿರುವ 42 ಸಾವಿರ ಮನೆಗಳಿಗೆ ಸಿಗದ ಉದ್ಘಾಟನಾ ಭಾಗ್ಯ: ಸಿಎಂ, AICC ಅಧ್ಯಕ್ಷರು ಕಾರಣ!
ಸಿಎಂ ಸಿದ್ದರಾಮಯ್ಯ, ಸ್ಲಂ ಬೋರ್ಡ್​ ಮನೆಗಳು
ಸಂಜಯ್ಯಾ ಚಿಕ್ಕಮಠ
| Edited By: |

Updated on:Jun 28, 2025 | 7:05 PM

Share

ಹುಬ್ಬಳ್ಳಿ, ಜೂನ್​ 28: ಹಣ ಕೊಟ್ಟವರಿಗೆ ಮಾತ್ರ ಸರ್ಕಾರದಿಂದ ಮನೆ ದೊರೆಯುತ್ತದೆ ಎಂಬ ಆರೋಪ ರಾಜ್ಯದಲ್ಲಿ ಜೋರಾಗಿ ಚರ್ಚೆಯಾಗುತ್ತಿದೆ. ಶಾಸಕ ಬಿ.ಆರ್ ಪಾಟೀಲ್ (BR Patil) ಆಡಿರುವ ಹೇಳಿಕೆಯನ್ನಿಟ್ಟುಕೊಂಡು ಬಿಜೆಪಿ, ಜೆಡಿಎಸ್ ನಾಯಕರು ಕಾಂಗ್ರೆಸ್ ಸರ್ಕಾರದ ಮೇಲೆ ಮುಗಿಬೀಳುತ್ತಿದ್ದಾರೆ. ವಸತಿ ಇಲಾಖೆಯ ಸ್ಲಂ ಬೋರ್ಡ್​ನಿಂದ (Slum Board) ರಾಜ್ಯದಲ್ಲಿ 42 ಸಾವಿರ ಮನೆಗಳು (Houses) ನಿರ್ಮಾಣವಾಗಿವೆ. ಆದರೆ, ಅವುಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡುತ್ತಿಲ್ಲ. ಇದಕ್ಕೆ ಕಾರಣ ಮುಖ್ಯಮಂತ್ರಿಗಳು ಮತ್ತು ಎಐಸಿಸಿ ಅಧ್ಯಕ್ಷರು ಎಂಬ ಆರೋಪ ಕೇಳಿಬಂದಿದೆ.

ಹುಬ್ಬಳ್ಳಿ ನಗರದ ಹೊರವಲಯದಲ್ಲಿರುವ ಮಂಟೂರು ರಸ್ತೆಯಲ್ಲಿ 1500ಕ್ಕೂ ಹೆಚ್ಚು ಮನೆಗಳನ್ನು ಜಿ ಪ್ಲಸ್ 3 ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಸ್ಲಂ ಬೋರ್ಡ್ ವತಿಯಿಂದ ಈ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಸದ್ಯ, ಸ್ಲಂ ಬೋರ್ಡ್ ಅಧ್ಯಕ್ಷರಾಗಿರುವ ಹುಬ್ಬಳ್ಳಿ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಅವರು ತಮ್ಮ ಸ್ವ ಕ್ಷೇತ್ರದಲ್ಲಿಯೇ ಬಡವರಿಗೆ ಅನಕೂಲವಾಗಲಿ ಅಂತ ಮುತುವರ್ಜಿ ವಹಿಸಿ ಮನೆಗಳನ್ನು ನಿರ್ಮಾಣ ಮಾಡಿಸಿದ್ದಾರೆ.

2013 ರಿಂದ 2018 ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ಕಾಲದಲ್ಲಿ ಈ ಮನೆಗಳು ಮಂಜೂರಾಗಿದ್ದವು. ಆದರೆ, ಆಮೆಗತಿಯಲ್ಲಿ ಕಾಮಗಾರಿ ನಡೆದಿದ್ದರಿಂದ ಮನೆಗಳ ನಿರ್ಮಾಣ ಕಾರ್ಯ ಮುಗಿದಿರಲಿಲ್ಲ. ಆದರೆ, ಇದೀಗ ಮನೆಗಳ ನಿರ್ಮಾಣ ಕಾರ್ಯ ಮುಗಿದರು ಕೂಡ, ಫಲಾನುಭವಿಗಳಿಗೆ ಹಂಚಿಕೆ ಆಗುತ್ತಿಲ್ಲ. ಇದಕ್ಕೆ ಕಾರಣ ಸಿಎಂ ಮತ್ತು ಎಐಸಿಸಿ ಅಧ್ಯಕ್ಷರಂತೆ.

ಇದನ್ನೂ ಓದಿ
Image
ಶಾಸಕ ರಾಜು ಕಾಗೆ ಹೊಸ ಬಾಂಬ್‌: ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ
Image
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
Image
ಮನೆ ಹಂಚಿಕೆಗೆ ಹಣ: ಬಿಆರ್ ಪಾಟೀಲ್ ಕ್ಷೇತ್ರದ ವಿಡಿಯೋ ವೈರಲ್
Image
ಕಾಂಗ್ರೆಸ್​​ನಲ್ಲಿ ಮಹತ್ವದ ಬೆಳವಣಿಗೆ: ಶಾಸಕ ಬಿಆರ್ ಪಾಟೀಲ್ ರಾಜೀನಾಮೆ

ಕೇವಲ ಹುಬ್ಬಳ್ಳಿ ಮಾತ್ರವಲ್ಲ, ರಾಜ್ಯದಲ್ಲಿ ವಿವಿಧಡೆ ಸ್ಲಂ ಬೋರ್ಡ್​ನಿಂದ 42,345 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಅಂದುಕೊಂಡತೆ ಎಲ್ಲವೂ ನಡೆದಿದ್ದರೇ, ಕಳೆದ ಎಪ್ರಿಲ್ ತಿಂಗಳಲ್ಲಿಯೇ ಈ ಮನೆಗಳ ಉದ್ಘಾಟನೆಯಾಗಿ, ಇಷ್ಟೊತ್ತಿಗಾಗಲೇ ಫಲಾನುಭವಿಗಳು ಈ ಮನೆಯಲ್ಲಿ ಇರುತ್ತಿದ್ದರು. ಆದರೆ, ಇನ್ನೂವರೆಗೂ ಈ ಮನೆಗಳಿಗೆ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.

ಸಿಎಂ, ಎಐಸಿಸಿ ಅಧ್ಯಕ್ಷರಿಗಾಗಿ ಕಾಯುತ್ತಿರುವ ವಸತಿ ಇಲಾಖೆ

ಕಳೆದ ಎಪ್ರಿಲ್ ತಿಂಗಳಲ್ಲಿ ದೊಡ್ಡ ಕಾರ್ಯಕ್ರಮ ಮಾಡಲು ವಸತಿ ಸಚಿವ ಜಮೀರ್ ಅಹ್ಮದ್ ಮುಂದಾಗಿದ್ದರು. ಆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರೆಸಿ, ಅವರಿಂದ ಉದ್ಘಾಟನೆ ಮಾಡಿಸುವುದು ಸಚಿವ ಜಮೀರ್ ಅಹ್ಮದ್ ಅವರ ಆಶಯವಾಗಿತ್ತು. ಎಪ್ರಿಲ್ 27 ರಂದು ಸಿಎಂ ಸಮಯವನ್ನು ಕೂಡ ನೀಡಿದ್ದರಂತೆ. ಆದರೆ, ಎಐಸಿಸಿ ಅಧ್ಯಕ್ಷರ ಸಮಯ ಸಿಗದೇ ಇದ್ದಿದ್ದರಿಂದ ಅದು ಮುಂದಕ್ಕೆ ಹೋಗಿತ್ತು.

ಮೇ ಮೊದಲ ವಾರದಲ್ಲಿಯಾದರೂ ಕೂಡಾ ಕಾರ್ಯಕ್ರಮ ಮಾಡಲು ಜಮೀರ್ ಅಹ್ಮದ್ ಸಿದ್ದತೆ ಮಾಡಿಕೊಂಡಿದ್ದರು. ಆದರೆ, ಆಗ ಕೂಡಾ ಇಬ್ಬರ ನಾಯಕರ ಸಮಯ ಹೊಂದಾಣಿಕೆಯಾಗದೇ ಇದ್ದಿದ್ದರಿಂದ ಅದು ಮತ್ತೆ ಮುಂದಕ್ಕೆ ಹೋಗಿತ್ತು. ಇದೀಗ ಮಳೆಗಾಲ ಆರಂಭವಾಗಿದೆ. ಮಳೆಗಾಲದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಲು ಕಷ್ಟವಾಗುವುದರಿಂದ, ಮತ್ತೆ ಮನೆಗಳಿಗೆ ಉದ್ಘಾಟನೆ ಭಾಗ್ಯ ಸಿಗುತ್ತಿಲ್ಲ.

ಇದನ್ನೂ ಓದಿ: ಈವರೆಗೆ ಯಾರೂ ಮಾಡದ ದಾಖಲೆ ಬರೆಯಲು ಸಿಎಂ ಸಿದ್ದರಾಮಯ್ಯ ಸಿದ್ಧ!

ಈ ಬಗ್ಗೆ ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಪ್ರತಿಕ್ರಿಯೆ ನೀಡಿದ್ದು, ದೊಡ್ಡ ಕಾರ್ಯಕ್ರಮ ಮಾಡಿ, ಮನೆ ಹಂಚಿಕೆ ಮಾಡಲು ಚಿಂತಿಸಲಾಗಿತ್ತು. ಮಳೆಗಾಲ ಆರಂಭವಾಗಿದ್ದರಿಂದ ಸ್ವಲ್ಪ ತಡವಾಗಿದೆ. ಆದಷ್ಟು ಬೇಗನೆ ಮನೆಗಳನ್ನು ಉದ್ಘಾಟನೆ ಮಾಡಿ, ಫಲಾನುಭವಿಗಳಿಗೆ ಹಂಚಿಕೆ ಮಾಡುವುದಾಗಿ ಹೇಳಿದ್ದಾರೆ.

ರಾಜ್ಯದಲ್ಲಿ ಬಡವರಿಗಾಗಿಯೇ ಮನೆಗಳು ನಿರ್ಮಾಣವಾದರೂ, ವಾಸಿಸದಂತಾಗಿದೆ. ಆದಷ್ಟು ಬೇಗನೆ ಸಿಎಂ ಮತ್ತು ಎಐಸಿಸಿ ಅಧ್ಯಕ್ಷರು ಸಮಯವನ್ನು ನೀಡಿದರೇ, ಮನೆಗಳ ಉದ್ಘಾಟನೆಯಾಗುತ್ತವೆ. ಬಡವರಿಗೆ ಸೂರು ಸಿಗುತ್ತದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:03 pm, Sat, 28 June 25