ಟ್ರಾಫಿಕ್ ಫೈನ್ ಕಟ್ತೀವಿ ಅಂದ್ರೂ ಕಟ್ಟಿಸಿಕೊಳ್ಳದ ಮಷಿನ್: ಶೇ 50 ರಿಯಾಯಿತಿ ಎಡವಟ್ಟಿಗೆ ವಾಹನ ಮಾಲೀಕರು ಕಂಗಾಲ್

ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡಕ್ಕೆ 50% ರಿಯಾಯಿತಿ ಘೋಷಿಸಿದ್ದರೂ, ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿವೆ. ಕೆಲವು ಪ್ರಕರಣಗಳಿಗೆ ಮಾತ್ರ ರಿಯಾಯಿತಿ ಸಿಗುತ್ತಿದ್ದು, ಇದು ವಾಹನ ಸವಾರರು ಮತ್ತು ಪೊಲೀಸರಲ್ಲಿ ಗೊಂದಲ ಮೂಡಿಸಿದೆ. ಇನ್ನು ಜುಲೈ 10ರ ಗಡುವನ್ನು ವಿಸ್ತರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಟ್ರಾಫಿಕ್ ಫೈನ್ ಕಟ್ತೀವಿ ಅಂದ್ರೂ ಕಟ್ಟಿಸಿಕೊಳ್ಳದ ಮಷಿನ್: ಶೇ 50 ರಿಯಾಯಿತಿ ಎಡವಟ್ಟಿಗೆ ವಾಹನ ಮಾಲೀಕರು ಕಂಗಾಲ್
ಟ್ರಾಫಿಕ್ ಫೈನ್
Image Credit source: tv9 kannada
Edited By:

Updated on: Jul 03, 2026 | 10:18 PM

ಮುಖ್ಯಾಂಶಗಳು

  • ಟ್ರಾಫಿಕ್ ಫೈನ್ ಶೇ 50 ರಿಯಾಯಿತಿ
  • ಧಾರವಾಡಲ್ಲಿ ತಾಂತ್ರಿಕ ಸಮಸ್ಯೆ
  • ಗಡುವು ವಿಸ್ತರಣೆಗೆ ಆಗ್ರಹ

ಧಾರವಾಡ, ಜುಲೈ 03: ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೇ. 50 ರಷ್ಟು ರಿಯಾಯಿತಿ ನೀಡಿ (Traffic Fine Discount), ದಂಡವನ್ನು ತುಂಬಿಸಿಕೊಳ್ಳಲಾಗುತ್ತಿದೆ. ವಾಹನ ಸವಾರರು ಕೂಡ ತಮ್ಮ ಹಿಂದಿನ ಎಲ್ಲಾ ದಂಡವನ್ನು ಪಾವತಿಸುತ್ತಿದ್ದಾರೆ. ಆದರೆ ಕೆಲವು ತಾಂತ್ರಿಕ ಅಡಚಣೆಗಳು ಉಂಟಾಗಿದೆ. ಇದರಿಂದಾಗಿ ವಾಹನ ಚಾಲಕರು ಹಾಗೂ ಸಂಚಾರ ಪೊಲೀಸರಿಗೆ ತಲೆ ನೋವಾಗಿದೆ.

ಜುಲೈ 10 ರವರೆಗೆ ಶೇ. 50 ರಷ್ಟು ರಿಯಾಯಿತಿಗೆ ಅವಕಾಶ

ಕಳೆದ ತಿಂಗಳು ಜೂನ್ 21 ರಿಂದ ಜುಲೈ 10 ರವರೆಗೆ ರಾಜ್ಯದಲ್ಲಿ ಸಂಚಾರ ಉಲ್ಲಂಘನೆಗಳ ಪ್ರಕರಣಕ್ಕೆ ಸಂಬಂಧಿಸಿದ ದಂಡವನ್ನು ಶೇ. 50 ರಷ್ಟು ಕಡಿತಗೊಳಿಸಿ ತುಂಬಲು ಅವಕಾಶ ಕಲ್ಪಿಸಲಾಗಿದೆ. ಈ ಮುಂಚೆ ಕೂಡ ಹಲವಾರು ಬಾರಿ ಈ ರೀತಿ ಅವಕಾಶವನ್ನು ನೀಡಲಾಗಿತ್ತು. ಇದರಿಂದಾಗಿ ಶೇ. 50 ರಷ್ಟು ದಂಡದ ಉಳಿತಾಯ ಸಾರ್ವಜನಿಕರಿಗೆ ಆಗಿತ್ತು. ಬಹುತೇಕರು ತಮ್ಮ ಹಿಂದಿನ ಎಲ್ಲಾ ದಂಡವನ್ನು ತುಂಬಿದ್ದರು. ಈ ಬಾರಿಯೂ ವಾಹನ ಮಾಲಿಕರು ದಂಡ ತುಂಬಲು ಮುಂದೆ ಬರುತ್ತಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ಫೈನ್ ಶೇ 50 ರಿಯಾಯಿತಿ: ಕೇವಲ 4 ದಿನದಲ್ಲಿ 6 ಕೋಟಿ ರೂ. ಸಂಗ್ರಹ!

ಇನ್ನು ಒಂದು ಬಾರಿ ಟ್ರಾಫಿಕ್ ಪೊಲೀಸರ ದಾಖಲೆಗಳಲ್ಲಿ ದಂಡ ನಮೂದಾದರೆ ಮತ್ತೆ ಅದನ್ನು ತೆಗೆಯಲು ಸಾಧ್ಯವೇ ಇಲ್ಲ. ಇಂದಲ್ಲ, ನಾಳೆ ಪಾವತಿಸಲೇಬೇಕು. ಇದೇ ಕಾರಣಕ್ಕೆ ಸರಕಾರ ನೀಡಿದ ಈ ಅವಕಾಶವನ್ನು ಬಹುತೇಕ ವಾಹನ ಸವಾರರು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇದೀಗ ತಾಂತ್ರಿಕ ಕಾರಣದಿಂದಾಗಿ ವಾಹನ ಮಾಲಿಕರು ಹಾಗೂ ಪೊಲೀಸರು ತೊಂದರೆಗೆ ಸಿಲುಕಿದ್ದಾರೆ. ಈ ಮುಂಚೆ ದಾಖಲಾಗಿರುವ ಪ್ರಕರಣದ ಪೈಕಿ ಕೆಲವು ಪ್ರಕರಣಗಳಿಗೆ ಶೇ. 50 ರಿಯಾಯತಿ ಅಂತಾ ತೋರಿಸುತ್ತಿದ್ದರೆ, ಅದೇ ವಾಹನದ ಮತ್ತೆ ಕೆಲವು ಪ್ರಕರಣಗಳಿಗೆ ಯಾವುದೇ ರಿಯಾಯಿತಿ ತೋರಿಸುತ್ತಿಲ್ಲ. ಇದರಿಂದಾಗಿ ಏನು ಮಾಡಬೇಕೆನ್ನೋದು ತಿಳಿಯದೇ ವಾಹನ ಮಾಲಿಕರು ಕಂಗಾಲಾಗಿದ್ದಾರೆ.

ಸಂಕಷ್ಟಕ್ಕೆ ಸಿಲುಕಿದ ಪೊಲೀಸರು 

ಉದಾಹರಣೆಗೆ ಹೇಳೋದಾದರೂ ಒಂದು ವಾಹನದ ಮೇಲೆ ಒಟ್ಟು ಎಂಟು ಪ್ರಕರಣಗಳಿವೆ. ಅವುಗಳ ಪೈಕಿ ನಾಲ್ಕು ಟ್ರಾಫಿಕ್ ಸಿಗ್ನಲ್ ಜಂಪ್ ಆಗಿರೋದಾಗಿದ್ದರೆ, ಇನ್ನುಳಿದ ನಾಲ್ಕು ಪ್ರಕರಣಗಳು ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ್ದು. ವಾಹನದ ನಂಬರ್ ಎಂಟ್ರಿ ಮಾಡಿದರೆ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿರುವ ನಾಲ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ಶೇ. 50 ರಷ್ಟು ರಿಯಾಯಿತಿ ತೋರಿಸುತ್ತಿದೆ. ಆದರೆ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ ನಾಲ್ಕು ಪ್ರಕರಣಗಳಿಗೆ ಶೇ. 50 ರ ರಿಯಾಯಿತಿಯನ್ನು ತೋರಿಸುತ್ತಿಲ್ಲ. ಇದರಿಂದಾಗಿ ವಾಹನ ಮಾಲಿಕ ಹಾಗೂ ಪೊಲೀಸರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ಫೈನ್ ರಿಯಾಯಿತಿ: ಬೆಂಗಳೂರಿನಲ್ಲಿ 12 ವಿಶೇಷ ಕೌಂಟರ್ ತೆರೆಯಲಿದೆ ಆರ್​ಟಿಒ! ಎಲ್ಲೆಲ್ಲಿ ಎಂಬ ಮಾಹಿತಿ ಇಲ್ಲಿದೆ

ವಾಹನ ಮಾಲಿಕರಿಂದ ಎಷ್ಟು ದಂಡವನ್ನು ತುಂಬಿಸಿಕೊಳ್ಳಬೇಕು ಅನ್ನೋ ಗೊಂದಲದಲ್ಲಿ ಪೊಲೀಸರಿದ್ದರೆ, ಸರಕಾರ ಘೋಷಿಸಿದ ಶೇ. 50 ರಷ್ಟು ರಿಯಾಯಿತಿ ಇಲ್ಲದೇ ನಾವೇಕೆ ದಂಡವನ್ನು ಕಟ್ಟಬೇಕು ಅಂತಾ ಜನರು ಪ್ರಶ್ನಿಸುತ್ತಿದ್ದಾರೆ. ಇದರೊಂದಿಗೆ ಮತ್ತೊಂದು ಸಮಸ್ಯೆ ಎಂದರೆ, ಮೇ ತಿಂಗಳಲ್ಲೇ ಶೇ. 50 ರಷ್ಟು ರಿಯಾಯಿತಿ ನೀಡುವ ಬಗ್ಗೆ ಸರಕಾರ ನಿರ್ಧಾರ ಮಾಡಿತ್ತು. ಹೀಗಾಗಿ ಮೇ ತಿಂಗಳ ಬಳಿಕ ದಾಖಲಾದ ಕೇಸ್​ಗಳಿಗೆ ಸಂಬಂಧಿಸಿದಂತೆ ಶೇ. 50 ರಿಯಾಯಿತಿ ತೋರಿಸುತ್ತಿಲ್ಲ. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಮತ್ತಷ್ಟು ದಿನಗಳ ಕಾಲ ಗಡುವು ವಿಸ್ತರಣೆಗೆ ಆಗ್ರಹ

ಅವಳಿ ನಗರದಲ್ಲಿ ಈ ಬಾರಿ ಜನರು ಆದಷ್ಟು ಬೇಗನೇ ತಮ್ಮ ವಾಹನದ ದಂಡವನ್ನು ಕಟ್ಟಿ, ದಂಡ ಮುಕ್ತರಾಗಲು ಬಯಸುತ್ತಿದ್ದಾರೆ. ಆದರೆ ಕಳೆದ ವಾರದವರೆಗೆ ಇಂಟರ್ ನೆಟ್ ಸಮಸ್ಯೆಯಿಂದಾಗಿ ದಂಡ ತುಂಬಿಸಿಕೊಳ್ಳಲು ಕಷ್ಟಪಡುತ್ತಿದ್ದ ಪೊಲೀಸರು ಇದೀಗ ಮತ್ತೊಂದು ತಾಂತ್ರಿಕ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟವರು ಈ ತಾಂತ್ರಿಕ ತೊಂದರೆಯನ್ನು ನಿವಾರಿಸುವುದರ ಜೊತೆಗೆ ಸರಕಾರ ಜುಲೈ 10ರ ಗಡುವು ಮತ್ತಷ್ಟು ದಿನಗಳ ಕಾಲ ವಿಸ್ತರಿಸಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನರಸಿಂಹಮೂರ್ತಿ ಪ್ಯಾಟಿ, ಧಾರವಾಡ

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 20 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us