ಧಾರವಾಡ ಜಿಲ್ಲೆಯಲ್ಲಿ ಅಸ್ಪ್ರಶ್ಯತೆ ಜೀವಂತ; ಟಿವಿ9 ವರದಿ ಬೆನ್ನಲ್ಲೇ ಸ್ಥಳಕ್ಕೆ ಅಧಿಕಾರಿಗಳ ಭೇಟಿ

ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ದಲಿತರಿಗೆ ಹೋಟೆಲ್‌, ಕಟಿಂಗ್ ಶಾಪ್‌ ಹಾಗೂ ದೇಗುಲಗಳಿಗೆ ಪ್ರವೇಶ ನೀಡುತ್ತಿರಲಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಟಿವಿ9 ನಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಧಾರವಾಡ ಜಿಲ್ಲಾಡಳಿತ, ಅಧಿಕಾರಿಗಳನ್ನು ಕಳುಹಿಸಿಕೊಟ್ಟಿದೆ.

ಧಾರವಾಡ ಜಿಲ್ಲೆಯಲ್ಲಿ ಅಸ್ಪ್ರಶ್ಯತೆ ಜೀವಂತ; ಟಿವಿ9 ವರದಿ ಬೆನ್ನಲ್ಲೇ ಸ್ಥಳಕ್ಕೆ ಅಧಿಕಾರಿಗಳ ಭೇಟಿ
ಧಾರವಾಡ ಜಿಲ್ಲೆಯಲ್ಲಿ ಅಸ್ಪ್ರಶ್ಯತೆ ಜೀವಂತ
Edited By:

Updated on: Dec 16, 2023 | 4:32 PM

ಧಾರವಾಡ , ಡಿ.16: ಜಿಲ್ಲೆಯ ಕುಂದಗೋಳ(Kundagola) ತಾಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದರೂ ಅಸ್ಪೃಶ್ಯತೆ(untouchability) ಮಾತ್ರ ಜೀವಂತವಾಗಿದೆ. ಹೋಟೆಲ್‌, ಕಟಿಂಗ್ ಶಾಪ್‌ ಹಾಗೂ ದೇಗುಲಗಳಿಗೆ ದಲಿತರಿಗೆ ಪ್ರವೇಶ ನೀಡುತ್ತಿರಲಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಟಿವಿ9 ನಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಧಾರವಾಡ ಜಿಲ್ಲಾಡಳಿತ, ರೊಟ್ಟಿಗವಾಡ ಗ್ರಾಮಕ್ಕೆ ತಹಶೀಲ್ದಾರ್‌ ಅಶೋಕ್ ಶಿಗ್ಗಾಂವಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮೀನಾಕ್ಷಿ ಮತ್ತು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಶಾಂತಿ ಸಭೆ ನಡೆಸಿದ್ದಾರೆ.

ಘಟನೆ ವಿವರ

ದೇಶದ ಬಹುತೇಕ ಕಡೆ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಕೆಳಜಾತಿ ಮೇಲ್ಜಾತಿ ಎನ್ನುವ ಪೆಂಡಭೂತ ನಮ್ಮ ಸಮಾಜದಲ್ಲಿದೆ. ಸದ್ಯ ಇದಕ್ಕೆ ಉದಾಹರಣೆ ಎನ್ನುವಂತಹ ಘಟನೆಯೊಂದು ವಿದ್ಯಾಕಾಶಿ ಧಾರವಾಡ ಜಿಲ್ಲೆಯ ರೊಟ್ಟಿಗವಾಡ ಗ್ರಾಮವೊಂದರಲ್ಲಿ ನಡೆದಿತ್ತು. ಗ್ರಾಮದ ಹೋಟೆಲ್, ಕಟಿಂಗ್, ದೇವಸ್ಥಾನಕ್ಕೆ ದಲಿತರಿಗೆ ಅಘೋಷಿತ‌ ಬಹಿಷ್ಕಾರ ಹಾಕಲಾಗಿತ್ತು. ಇದು ಆ ಗ್ರಾಮದ ಯುವಕರನ್ನ ಕೆರಳಿಸಿದ್ದು, ನಮಗೂ ಸಮಾನತೆ ಬೇಕು ಎನ್ನುತ್ತಿದ್ದರು.

ಇದನ್ನೂ ಓದಿ:ಬಿಜೆಪಿಗೆ ವರವಾಗುತ್ತಾ ಮತಾಂತರ ನಿಷೇಧ ಕಾಯ್ದೆ? ಕಾಂಗ್ರೆಸ್​​ನ​ ಆರೋಪವೇನು? ಅಷ್ಟಕ್ಕೂ ಅದರಲ್ಲಿ ಅಡಕವಾಗಿರುವ ಅಂಶಗಳೇನು?

ಇನ್ನು ಈ ಗ್ರಾಮದಲ್ಲಿ ಸುಮಾರು 40 ದಲಿತ ಕುಟುಂಬಗಳಿದ್ದು, ಯಾರೂ ಕೂಡ ಸಾರ್ವಜನಿಕ ಪ್ರದೇಶದಲ್ಲಿ ಬರುವ ಹಾಗಿಲ್ಲ ಎನ್ನುವ ಅಲಿಖಿತ ನಿಯಮ ಜಾರಿ ಮಾಡಲಾಗಿದೆ. ಏನೇ ಕೆಲಸ ಇದ್ದರೂ, ಎಲ್ಲದರಲ್ಲೂ ಪ್ರತ್ಯೇಕವಾಗಿ‌ ದಲಿತರನ್ನು ಕಾಣಲಾಗುತ್ತಿದೆಯಂತೆ. ಗ್ರಾಮದಲ್ಲಿ ಸವರ್ಣೀಯರು, ದಲಿತರ ನಡುವೆ ದೊಡ್ಡ ಕಂದಕವಿದ್ದು, ಮೂಲಭೂತ ಸೌಲಭ್ಯವು ದಲಿತರಿಗೆ ಸಿಗುತ್ತಿಲ್ಲ ಎಂದು ಆರೋಪಿಸಲಾಗಿದೆ. ಆಕಸ್ಮಾತ್ ಗ್ರಾಮದಲ್ಲಿ ದಲಿತ ಸಮದಾಯದ ಜನ ತೀರಿ ಹೋದರೆ ಗ್ರಾಮದ ಬಹುತೇಕ ಅಂಗಡಿಗಳು ಅವತ್ತು ಬಂದ್ ಆಗತ್ತದೆ. ಇಂತಹ ಅಲಿಖಿತ ನಿಯಮವನ್ನು ಗ್ರಾಮಸ್ಥರು ಜಾರಿ ಮಾಡಿದ್ದಾರೆ. ಕೇವಲ ಹೋಟೆಲ್, ದೇವಸ್ಥಾನ, ಕಟಿಂಗ್ ಶಾಪ್ ಅಲ್ಲ ಸಾರ್ವಜನಿಕ ಪ್ರದೇಶದಲ್ಲೂ ದಲಿತರು ಬರುವ ಹಾಗಿಲ್ಲವಂತೆ. ಅಂಬೇಡ್ಕರ್ ಹೇಳಿದಂತೆ ನಮಗೆ ಸಮಾನತೆ ಬೇಕು. ಸ್ವಾತಂತ್ರ್ಯ ಸಿಕ್ಕು 75 ವರ್ಷ ಆದರೂ ನಮಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಎನ್ನುವುದು ದಲಿತ ಮುಖಂಡರ ಮಾತಾಗಿತ್ತು.

ಈ ಕುರಿತು ಯುವಕರು ವಿರೋಧ ಮಾಡಿದ್ದರು. ಬಳಿಕ ಟಿವಿ9 ಈ ಸುದ್ದಿಯನ್ನು ಬಿತ್ತರಿಸಿತ್ತು. ಅದರ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ, ಘಟನಾ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ಶಾಂತಿ ಸಭೆಗೆ ಮುಂದಾಗಿದೆ. ಇನ್ನಾದರೂ ರೊಟ್ಟಿಗವಾಡದ ಅನಿಷ್ಟ ಪದ್ದತಿಯನ್ನು ತೆಗದು, ದಲಿತ ಸಮುದಾಯಕ್ಕೆ ಸಮಾನತೆ ಸಿಗುವ ಹಾಗೆ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:19 pm, Sat, 16 December 23