ಡಿಕೆಶಿ ವಿರುದ್ಧದ ಆಸ್ತಿ ಕೇಸ್: ಯತ್ನಾಳ್‌ಗೆ ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಿಬಿಐ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ವೇಳೆ ಕೋರ್ಟ್​, ಯತ್ನಾಳ್​ ಮೇಲೆ ಗರಂ ಆಗಿದ್ದು, ರಾಜಕೀಯ ಮಾಡುವುದಾದರೆ ಫೀಲ್ಡ್ ನಲ್ಲಿ ಮಾಡಿ ತರಾಟೆಗೆ ತೆಗೆದುಕೊಂಡಿದೆ.

ಡಿಕೆಶಿ ವಿರುದ್ಧದ ಆಸ್ತಿ ಕೇಸ್: ಯತ್ನಾಳ್‌ಗೆ ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್
Yatnal And Dk Shivakumar
Edited By:

Updated on: Jan 29, 2025 | 6:44 PM

ನವದೆಹಲಿ, (ಜನವರಿ 29): ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಿಬಿಐ ಹಾಗೂ ಬಸನಗೌಡ ಪಾಟೀಲ್​ ಯತ್ನಾಳ್​ ಸಲ್ಲಿಸಿದ್ದ ಅರ್ಜಿಯನ್ನು ಇಂದು (ಜನವರಿ 29) ಸುಪ್ರೀಂಕೋರ್ಟ್​ ವಿಚಾರಣೆ ನಡೆಸಿದ್ದು, ಈ ವೇಳೆ ಅರ್ಜಿದಾರ ಯತ್ನಾಳ್​ಗೆ​ ನ್ಯಾಯಾಮೂರ್ತಿ ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲಿಟಿಕಲ್ ಅಡ್ವಾಂಟೆಜ್ ತೆಗೆದುಕೊಳ್ಳಲು ಇಂತಹ ಅರ್ಜಿ ಯಾಕೆ ಹಾಕುತ್ತೀರಿ. ರಾಜಕೀಯ ಮಾಡುವುದಾದರೆ ಫೀಲ್ಡ್ ನಲ್ಲಿ ಮಾಡಿ ಎಂದು ಯತ್ನಾಳ್​ಗೆ ಕ್ಲಾಸ್​ ತೆಗೆದುಕೊಂಡಿದ್ದು, ಮುಂದಿನ ವಿಚಾರಣೆಯನ್ನು ಮಾರ್ಚ್ 26ಕ್ಕೆ ಮುಂದೂಡಿದರು.

ಈ ಹಿಂದೆ ಬಿಜೆಪಿ ಸರ್ಕಾರವು ಡಿಕೆ ಶಿವಕುಮಾರ್‌ ಅವರ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಿತ್ತು. ಆದರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ರದ್ದು ಮಾಡಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​, ಹೈಕೋರ್ಟ್​ ಮೆಟ್ಟಿಲೇರಿದ್ದರು. ಆದ್ರೆ, ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್​ ವಜಾ ಮಾಡಿ ಆದೇಶ ಹೊರಡಿಸಿತ್ತು.

ಇದನ್ನೂ ಓದಿ: ಆದಾಯ ಮೀರಿ‌ ಆಸ್ತಿ ಗಳಿಕೆ ಪ್ರಕರಣ: ಡಿಕೆ ಶಿವಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಿಬಿಐ

ಬಳಿಕ ಯತ್ನಾಳ್​, ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​, ಯತ್ನಾಳ್​ಗೆ ತರಾಟೆಗೆ ತೆಗೆದುಕೊಂಡು ಮುಂದಿನ ವಿಚಾರಣೆಯನ್ನು ಮಾರ್ಚ್​ 26ಕ್ಕೆ ಮುಂದೂಡಿದೆ.

ಏನಿದು ಕೇಸ್‌?

2013 ರಿಂದ 2018 ರವರೆಗೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇತ್ತು. ಆಗ ಡಿ ಕೆ ಶಿವಕುಮಾರ್‌ ಇಂಧನ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಬರೋಬ್ಬರಿ 74 ಕೋಟಿ ರೂ. ಸಂಪತ್ತನ್ನು ಸಂಗ್ರಹಿಸಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಆ ಬಳಿಕ ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ಹಿಂದಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿತ್ತು. ಅದರಂತೆ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿತ್ತು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಸಿಬಿಐ ತನಿಖೆ ಆದೇಶ ವಾಪಸ್ ಪಡೆದುಕೊಂಡಿತ್ತು.

ಕರ್ನಾಟಕ ಕಾಂಗ್ರೆಸ್​ ಸರ್ಕಾರದ ನಿರ್ಧಾರ ಪ್ರಶ್ನಿಸಿ ಯತ್ನಾಳ್ ಹಾಗೂ ಸಿಬಿಐ ಹೈಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿತ್ತು.ಆದ್ರೆ, ಹೈಕೋರ್ಟ್ ಅರ್ಜಿಯನ್ನು ವಜಾ ಮಾಡಿತ್ತು. ಇಷ್ಟಕ್ಕೂ ಸುಮ್ಮನಾಗದ ಯತ್ನಾಳ್, ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದು, ಇದೀಗ ಇದು ವಿಚಾರಣೆ ಹಂತದಲ್ಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:38 pm, Wed, 29 January 25