AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​ನಲ್ಲಿ ಕಿಡಿಹೊತ್ತಿಸಿದ ಡಿಕೆ ಶಿವಕುಮಾರ್ ಆರ್​ಎಸ್​ಎಸ್ ಗೀತೆ: ರಾಜಣ್ಣ, ಪ್ರಿಯಾಂಕ್ ಖರ್ಗೆ ಬಹಿರಂಗ ಅಸಮಾಧಾನ

ಆರ್​ಎಸ್​​​ಎಸ್ ಹಾಗೂ ಕಾಂಗ್ರೆಸ್ ಸೈದ್ಧಾಂತಿಕವಾಗಿ ಬದ್ಧ ವೈರಿಗಳು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯಿಂದ ಹಿಡಿದು ಅನೇಕ ಕಾಂಗ್ರೆಸ್ ನಾಯಕರು ಅವಕಾಶ ಸಿಕ್ಕಾಗಲೆಲ್ಲ ಸಂಘ ಪರಿವಾರದ ವಿರುದ್ಧ ಬೆಂಕಿ ಉಗುಳುತ್ತಲೇ ಇರುತ್ತಾರೆ. ಆದರೆ ಈಗ ವಿಧಾನಸಭೆಯೊಳಗೇ ಡಿಸಿಎಂ ಡಿಕೆ ಶಿವಕುಮಾರ್ ಆರ್​ಎಸ್​​​ಎಸ್ ಪ್ರಾರ್ಥನೆ ಗೀತೆ ಹಾಡಿದ್ದು ಕಾಂಗ್ರೆಸ್ ಮನೆಯೊಳಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಏಳುವಂತೆ ಮಾಡಿದೆ.

ಕಾಂಗ್ರೆಸ್​ನಲ್ಲಿ ಕಿಡಿಹೊತ್ತಿಸಿದ ಡಿಕೆ ಶಿವಕುಮಾರ್ ಆರ್​ಎಸ್​ಎಸ್ ಗೀತೆ: ರಾಜಣ್ಣ, ಪ್ರಿಯಾಂಕ್ ಖರ್ಗೆ ಬಹಿರಂಗ ಅಸಮಾಧಾನ
ಡಿಕೆ ಶಿವಕುಮಾರ್
ಪ್ರಸನ್ನ ಗಾಂವ್ಕರ್​
| Updated By: Ganapathi Sharma|

Updated on:Aug 25, 2025 | 12:40 PM

Share

ಬೆಂಗಳೂರು, ಆಗಸ್ಟ್ 25: ಆರ್​​ಸಿಬಿ ವಿಜಯೋತ್ಸವ ಕಾಲ್ತುಳಿತ ಘಟನೆಯ ಕುರಿತು ವಿಧಾನಸಭೆ ಕಲಾಪದಲ್ಲಿ ಚರ್ಚೆ ನಡೆದ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ‘ನಮಸ್ತೇ ಸದಾ ವತ್ಸಲೇ’ ಎಂದು ಆರ್​​ಎಸ್​ಎಸ್ ಗೀತೆ (RSS Song) ಹಾಡಿರುವುದು ಈಗ ಕಾಂಗ್ರೆಸ್ ಆಂತರಿಕ ವಲಯದಲ್ಲಿ ತೀವ್ರ ಸಂಘರ್ಷಕ್ಕೆ ಕಾರಣವಾಗಿದೆ. ಡಿಕೆ ಶಿವಕುಮಾರ್ ಅವರ ಈ ನಡೆಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಸಿಡಿಮಿಡಿಗೊಂಡಿದ್ದಾರೆ. ಅವರು ಏನು ಬೇಕಾದರೂ ಮಾಡಬಹುದು ಎಂದಿದ್ದಾರೆ. ಈ ಮೂಲಕ ರಾಜಣ್ಣರ ಅಸಮಾಧಾನದ ಹೊಗೆ ಎದ್ದಿದೆ. ಇಷ್ಟಕ್ಕೆ ಸುಮ್ಮನಾಗದ ರಾಜಣ್ಣ, ಡಿಕೆಶಿಯ ಅನೇಕ ಕಾರ್ಯಕ್ರಮಗಳನ್ನು ನೆನಪಿಸಿದ್ದಾರೆ.

ಕೆಎನ್ ರಾಜಣ್ಣ ಹೇಳಿದ್ದೇನು?

ಅವರು (ಡಿಕೆ ಶಿವಕುಮಾರ್) ಆರ್​​ಎಸ್​​ಎಸ್ ಗೀತೆ ಹಾಡಬಹುದು. ಖಾಸಗಿ ಕಾರ್ಯಕ್ರಮದಲ್ಲಿ ಅಮಿತ್ ಶಾ ಜತೆ ವೇದಿಕೆ ಹಂಚಿಕೊಳ್ಳಬಹುದು. ಆದರೆ, ನಾವು ಮಾತ್ರ ಏನೂ ಮಾಡುವಂತಿಲ್ಲ ಎಂದು ರಾಜಣ್ಣ ಕಿಡಿಕಾರಿದ್ದಾರೆ.

ಕುಂಭಮೇಳದಲ್ಲಿ ಗಂಗಾ ಸ್ನಾನ ಮಾಡಿದ ಕೂಡಲೇ ಬಡತನ ನಿವಾರಣೆಯಾಗುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಅದಾದ ನಂತರ ಡಿಕೆ ಶಿವಕುಮಾರ್ ಅಲ್ಲಿ ಹೋಗಿ ಪುಣ್ಯ ಸ್ನಾನ ಮಾಡಿದರು. ರಾಹುಲ್ ಗಾಂಧಿ ಆಹ್ವಾನವನ್ನೂ ಸ್ವೀಕರಿಸಿದ ಅಂಬಾನಿ ಮಗನ ಮದುವೆಗೆ ಡಿಕೆಶಿ ಹೋಗಿದ್ದರು ಎಂದು ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರ್​​ಎಸ್​​ಎಸ್​​ಗೆ ತಾಕಿದ ಗಾಳಿಯೂ ನಮಗೆ ಸೋಕಬಾರದು: ಪ್ರಿಯಾಂಕ್ ಖರ್ಗೆ

ಸಚಿವ ಪ್ರಿಯಾಂಕ್ ಖರ್ಗೆ ಕೂಡ ಟ್ವೀಟ್ ಮಾಡಿದ್ದು, ಆರ್​​ಎಸ್​​ಎಸ್​​ಗೆ ತಾಕಿದ ಗಾಳಿಯೂ ನಮಗೆ ಸೋಕಬಾರದು ಎಂದು ಬರೆದುಕೊಂಡಿದ್ದಾರೆ.

ಪ್ರಬುದ್ಧ ಮತ್ತು ಸಮೃದ್ಧ ಭಾರತ ನಿರ್ಮಾಣವಾಗಬೇಕೆಂದರೆ ಭಾರತದ ಪ್ರತಿ ಪ್ರಜೆಯೂ ‘‘ಆರ್​ಎಸ್​ಎಸ್​​ಗೆ ತಾಕಿದ ಗಾಳಿಯೂ ನಮಗೆ ಸೋಕಬಾರದು’’ ಎಂಬ ಪ್ರತಿಜ್ಞೆ ಕೈಗೊಳ್ಳಬೇಕು. ಜನಾಂಗೀಯ ದ್ವೇಷ, ವರ್ಣಾಶ್ರಮದ ಕ್ರೌರ್ಯಗಳನ್ನು ಒಳಗೊಂಡ ನಾಜಿವಾದ, ಮನುವಾದಗಳನ್ನೇ ನರ ನಾಡಿ, ರಕ್ತಗಳಲ್ಲಿ ಪ್ರವಾಹಿಸಿಕೊಂಡಿರುವ RSS ಎಂಬ ವಿಷಕಾರಿ ಸಂಘಟನೆಯನ್ನು ಕಾಂಗ್ರೆಸ್ ಪಕ್ಷವು ಎಂದಿಗೂ ಶತ್ರುವಾಗಿಯೇ ನೋಡುತ್ತದೆ. ಏಕೆಂದರೆ, ಆರ್​ಎಸ್​​ಎಸ್ ಸಂವಿಧಾನಕ್ಕೆ ಶತ್ರು, ಆರ್​ಎಸ್​​ಎಸ್ ಐಕ್ಯತೆಗೆ ಶತ್ರು, ಆರ್​ಎಸ್​​ಎಸ್ ರಾಷ್ಟ್ರಧ್ವಜಕ್ಕೆ ಶತ್ರು, ಆರ್​ಎಸ್​​ಎಸ್ ರಾಷ್ಟ್ರಗೀತೆಗೆ ಶತ್ರು, ಆರ್ಎಸ್ಎಸ್ ಏಕತೆಗೆ, ಸಾರ್ವಭೌಮತೆಗೆ ಶತ್ರು ಎಂದು ಪ್ರಿಯಾಂಕ್ ಖರ್ಗೆ ಬರೆದುಕೊಂಡಿದ್ದಾರೆ.

ಪ್ರಿಯಾಂಕ್ ಖರ್ಗೆ ಟ್ವೀಟ್

ಹೀಗೆ ಕಾಂಗ್ರೆಸ್ ನಾಯಕರು ಆರ್​ಎಸ್​​ಎಸ್​ ವಿರುದ್ಧ ಖಂಡತುಂಡವಾಗಿ ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಡಿಕೆ ಶಿವಕುಮಾರ್ ಆರ್​ಎಸ್​​ಎಸ್ ಗೀತೆ ಉಲ್ಲೇಖಿಸಿದ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿರುವುದು ಚರ್ಚೆ ಹುಟ್ಟುಹಾಕಿದೆ. ‘‘ಬಿಜೆಪಿಗೆ ಹೋಗ್ತಾರಂತಲ್ಲ’’ ಎಂದು ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದರೆ, ಡಿಕೆ ಸಂಸ್ಕೃತ ಪಂಡಿತರು ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಆರ್​ಎಸ್​ಎಸ್ ಎಂಬುದು ಬಿಜೆಪಿಯ ಸಂಸ್ಥೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಏತನ್ಮಧ್ಯೆ, ಉಪ ಮುಖ್ಯಮಂತ್ರಿಗಳಾಗಿ ಡಿಕೆ ಶಿವಕುಮಾರ್ ಆರ್​​ಎಸ್​ಎಸ್ ಗೀತೆ ಹಾಡಿದ್ದರೆ ಆಕ್ಷೇಪಿಸುವುದಿಲ್ಲ. ಯಾಕೆಂದರೆ ಸರ್ಕಾರ ಎಂಬುದು ಒಂದು ಪಕ್ಷದ್ದಲ್ಲ. ಆದರೆ, ಕೆಪಿಸಿ ಅಧ್ಯಕ್ಷರಾಗಿ ಆರ್​​ಎಸ್​ಎಸ್ ಗೀತೆ ಹಾಡಿದ್ದರೆ ಕ್ಷಮೆ ಕೇಳಬೇಕು ಎಂದು ಬಿಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ.

ಬಿಕೆ ಹರಿಪ್ರಸಾದ್ ಮಾತಿನ ವಿಡಿಯೋ: ಕೆಪಿಸಿಸಿ ಅಧ್ಯಕ್ಷರಾಗಿ ಆರ್​ಎಸ್​ಎಸ್ ಗೀತೆ ಹಾಡಿದ್ದರೆ ಡಿಕೆ ಶಿವಕುಮಾರ್ ಕ್ಷಮೆ ಕೇಳಬೇಕು: ಬಿಕೆ ಹರಿಪ್ರಸಾದ್ ಆಗ್ರಹ

ಮತ್ತೊಂದೆಡೆ, ಕೆಲವು ಮಂದಿ ಕಾಂಗ್ರೆಸ್ ನಾಯಕರು ಡಿಕೆಶಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಅನ್ಯಥಾ ಭಾವಿಸಬಾರದು ಎಂದಿದ್ದಾರೆ.

ಪ್ರತಿಪಕ್ಷ ಬಿಜೆಪಿ ಡಿಕೆ ಶಿವಕುಮಾರ್ ನಡೆಯನ್ನು ಸ್ವಾಗತಿಸಿದೆ. ಈ ಬಗ್ಗೆ ಮಾತನಾಡಿರುವ ಶಾಸಕ ಅಶ್ವತ್ಥ್ ನಾರಾಯಣ್, ಅವರ ಪಕ್ಷಕ್ಕೆ ತಿಳಿಸಿದಂತಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ವಿಧಾನಸಭೆಯಲ್ಲಿ ಆರ್​ಎಸ್​ಎಸ್ ಗೀತೆ ಹಾಡಿದ್ದೇಕೆ? ಡಿಕೆ ಶಿವಕುಮಾರ್ ಅಚ್ಚರಿಯ ಹೇಳಿಕೆ

ಒಟ್ಟಿನಲ್ಲಿ, ಡಿಕೆ ಶಿವಕುಮಾರ್ ಸಂಘ ಗೀತೆ ಹಾಡಿದ್ದನ್ನು ಬಿಜೆಪಿಯವರೇನೋ ಸ್ವಾಗತ ಮಾಡುತ್ತಿದ್ದಾರೆ. ಆದರೆ, ಹಗಲೂ ರಾತ್ರಿ ಸಂಘದ ಸಿದ್ಧಾಂತಗಳನ್ನು‌ ಕಿತ್ತು ಎಸೆಯಬೇಕು ಎಂದು ಬಯಸುವ ಕಾಂಗ್ರೆಸ್ ನಾಯಕರಿಗೆ ಡಿಕೆ ಪ್ರಾರ್ಥನೆಯ ವೈಖರಿ ಬಿಸಿ ತುಪ್ಪದಂತಾಗಿರುವುದು ನಿಜ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:08 am, Mon, 25 August 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ