
ಬೆಂಗಳೂರು, (ಜೂನ್ 03): ಸಚಿವ ಸ್ಥಾನ ಆಸೆ ಈಡೇರದಿದ್ದರೂ ಸಹ ಬಿಕೆ ಹರಿಪ್ರಸಾದ್ಗೆ (BK Hariprasad) ಎರಡೆರಡು ಹುದ್ದೆಗು ಒದಗಿ ಬಂದಿವೆ. ವಿಧಾನ ಪರಿಷತ್ಗೆ ಮತ್ತೊಮ್ಮೆ ಹರಿಪ್ರಸಾದ್ ಅವರಿಗೆ ಹೈಕಮಾಂಡ್ ಅವಕಾಶ ಮಾಡಿಕೊಟ್ಟಿದೆ. ಇದರ ಜೊತೆ ಕೆಪಿಸಿಸಿ (KPCC President) ಪಟ್ಟವನ್ನು ಕಟ್ಟಿದೆ. ಹೌದು….ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದೀಗ ಈ ಸ್ಥಾನಕ್ಕೆ ಬಿಕೆ ಹರಿಪ್ರಸಾದ್ ಅವರನ್ನು ನೇಮಕ ಮಾಡಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ರಾಷ್ಟ್ರೀಯ ಅಧ್ಯಕ್ಷರು ಈ ಆದೇಶ ಹೊರಡಿಸಿದ್ದು, ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಚಿವ ಸ್ಥಾನ ಹಾಗೂ ಪಕ್ಷದ ಅಧ್ಯಕ್ಷ ಹುದ್ದೆ ಎರಡರ ಮೇಲೂ ಕಣ್ಣಿಟ್ಟಿದ್ದ ಸತೀಶ್ ಜಾರಕಿಹೊಳಿಯವರಿಗೆ ಹೈಕಮಾಂಡ್ ಶಾಕ್ ನೀಡಿದ್ದು, ಸಚಿವ ಸ್ಥಾನಕ್ಕೆ ಸಿಮಿತಗೊಳಿಸಿದೆ. ಕೆಪಿಸಿಸಿ ಸಾರಥ್ಯವನ್ನು ಬಿ.ಕೆ. ಹರಿಪ್ರಸಾದ್ ಅವರ ಹೆಗಲಿಗೆ ಹೊರಿಸಿದೆ. ಇನ್ನು ಬಿಕೆ ಹರಿ ಪ್ರಸಾದ್ ಸಹ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದರು. ಹೀಗಾಗಿ ಅವರಿಗೆ ಡಿಕೆ ಸಂಪುಟದಲ್ಲಿ ಅವಕಾಶ ನೀಡಲಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಹೈಕಮಾಂಡ್ ನಿರ್ಧಾರ ಬದಲಿಸಿದ್ದು, ವಿಧಾನಪರಿಷತ್ ಜೊತೆಗೆ ಕೆಪಿಸಿಸಿ ಪಟ್ಟವನ್ನು ಕಟ್ಟಿದೆ.
ಕಳೆದ ಆರು ವರ್ಷಗಳಿಂದ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಿಕೆ ಶಿವಕುಮಾರ್ ಅವರು ಇದೀಗ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಇದರಿಂದ ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ಈಗ ಅನುಭವಿ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ತರಲಾಗಿದೆ.
ಬಿ.ಕೆ. ಹರಿಪ್ರಸಾದ್ ಪೂರ್ಣ ಹೆಸರು ಬೈಚನಹಳ್ಳಿ ಕೆಂಪಯ್ಯ ಹರಿಪ್ರಸಾದ್ 1954ರ ಜುಲೈ 29ರಂದು ಜನಿಸಿದ್ದು, ಹಿಂದುಳಿದ ವರ್ಗದ (OBC) ‘ಬಿಲ್ಲವ’ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಎನ್‌ಎಸ್‌ಯುಐ (NSUI) ಸಂಘಟನೆಯ ಮೂಲಕ ರಾಜಕೀಯ ಪ್ರವೇಶಿಸಿರುವ ಹರಿಪ್ರಸಾದ್, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) ಪ್ರಮುಖ ಹುದ್ದೆಗಳನ್ನು ನಿರ್ವಹಿಸಿರುವ ಅನುಭವ ಹೊಂದಿದ್ದಾರೆ. 1989-1990ರಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇನ್ನು ಹೈಕಮಾಂಡ್ ಮಟ್ಟದಲ್ಲೂ ತಮ್ಮದೇ ಹಿಡಿತ ಹೊಂದಿರುವ ಹರಿಪ್ರಾಸದ್, ಒಟ್ಟು 4 ಬಾರಿ (1990, 2004, 2013 ಮತ್ತು 2014) ಕರ್ನಾಟಕವನ್ನು ಪ್ರತಿನಿಧಿಸಿ ರಾಜ್ಯಸಭೆಯ ಸಂಸದರಾಗಿ ಆಯ್ಕೆಯಾಗಿದ್ದರು. ಹಾಗೇ ಹರಿಯಾಣ ರಾಜ್ಯದ ಎಐಸಿಸಿ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯರಾಗಿದ್ದಾರೆ.
Published On - 9:33 pm, Wed, 3 June 26