10ನೇ ತರಗತಿ ಅರ್ಧವಾರ್ಷಿಕ ಪರೀಕ್ಷೆಗಳ ಮೌಲ್ಯಮಾಪನ; ಕರ್ನಾಟಕ ಸರ್ಕಾರದ ಮನವಿ ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ
Supreme court reject plea from Karnataka govt: ಹತ್ತನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯ ಮೌಲ್ಯಮಾಪನ ವಿಚಾರದಲ್ಲಿ ಅಕ್ಟೋಬರ್ 21ರಂದು ನೀಡಿದ್ದ ಆದೇಶವನ್ನು ಮಾರ್ಪಡಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಈ ಸಂಬಂಧ ಕರ್ನಾಟಕ ಸರ್ಕಾರದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ನ್ಯಾಯಪೀಠ ನಿರಾಕರಿಸಿದೆ.
ನವದೆಹಲಿ, ನವೆಂಬರ್ 27: ಹತ್ತನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯ ಮೌಲ್ಯಮಾಪನಕ್ಕೆ ಅವಕಾಶ ಪಡೆಯಲು ಕರ್ನಾಟಕ ಸರ್ಕಾರದ ಪ್ರಯತ್ನ ಮತ್ತೊಮ್ಮೆ ವಿಫಲವಾಗಿದೆ. ಈ ವಿಚಾರದಲ್ಲಿ ಅಕ್ಟೋಬರ್ 21ರಂದು ನೀಡಿದ್ದ ತನ್ನ ಆದೇಶವನ್ನು ಮಾರ್ಪಡಿಸುವಂತೆ ಕರ್ನಾಟಕ ಸರ್ಕಾರ ಮಾಡಿಕೊಂಡ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ನಿನ್ನೆ ಮಂಗಳವಾರ ತಿರಸ್ಕರಿಸಿದೆ. ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಸುಪ್ರೀಂ ನ್ಯಾಯಪೀಠ ಈ ತೀರ್ಮಾನ ಮಾಡಿದೆ.
2024-25ರ ಶೈಕ್ಷಣಿಕ ವರ್ಷದ 10ನೇ ತರಗತಿಗೆ ಅರ್ಧವಾರ್ಷಿಕ ಪರೀಕ್ಷೆ ಈಗಾಗಲೇ ನಡೆಸಲಾಗಿದೆ. ಅದರ ಮೌಲ್ಯಾಂಕಗಳನ್ನು ಪ್ರಕಟಿಸಲು ಸುಪ್ರೀಂಕೋರ್ಟ್ ತಡೆಹಿಡಿದಿದೆ. ಈ ಮೌಲ್ಯಾಂಕಗಳಿಂದ ಹತ್ತನೇ ತರಗತಿಯ ಒಟ್ಟಾರೆ ಫಲಿತಾಂಶದ ಮೇಲೆ ಏನೂ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದ್ದು, ಕರ್ನಾಟಕ ಸರ್ಕಾರದ ಅರ್ಜಿಯನ್ನು ಪರಿಗಣಿಸದೇ ಇರಲು ನಿರ್ಧರಿಸಿತು.
ಇದನ್ನೂ ಓದಿ: ಖಾಸಗಿ ವಿವಿಗಳ ಮಂಡಳಿಗಳಲ್ಲಿ ಸರ್ಕಾರಿ ಪ್ರತಿನಿಧಿ: ಕಾನೂನು ತಿದ್ದುಪಡಿಗೆ ರಾಜ್ಯ ಸರ್ಕಾರ ಮುಂದು
ರಾಜ್ಯ ಸರ್ಕಾರವು ಕಳೆದ ವರ್ಷದ ಅಕ್ಟೋಬ್ನಲ್ಲಿ 5, 8 ಮತ್ತು 9ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿತ್ತು. ಹೈಕೋರ್ಟ್ನ ಏಕಸದಸ್ಯ ನ್ಯಾಯಪೀಠವು 2024ರ ಮಾರ್ಚ್ 6ರಂದು ರಾಜ್ಯ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಿತು. ಇದಾದ ಬಳಿಕ ಹೈಕೋರ್ಟ್ ವಿಭಾಗೀಯ ಪೀಠವೊಂದು ಏಕಸದಸ್ಯ ಪೀಠದ ತೀರ್ಪಿಗೆ ತಡೆ ನೀಡಿ, ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಸರ್ಕಾರಕ್ಕೆ ಅನುಮತಿ ನೀಡಿ ಮಧ್ಯಂತರ ಆದೇಶ ಹೊರಡಿಸಿತು.
ಮಾನ್ಯತೆ ಪಡೆದ ಅನುದಾನರಹಿತ ಶಾಲೆಗಳು ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆಹೋಗಿದ್ದವು. ಅಕ್ಟೋಬರ್ 21ರಂದು ಸುಪ್ರೀಂಕೋರ್ಟ್ ನ್ಯಾಯಪೀಠವು ಮುಂದಿನ ಆದೇಶ ಬರುವವರೆಗೂ 8, 9 ಮತ್ತು 10ನೇ ತರಗತಿ ಅರ್ಧವಾರ್ಷಿಕ ಪರೀಕ್ಷೆ ನಡೆಸದಂತೆ ಮತ್ತು ಫಲಿತಾಂಶ ಪ್ರಕಟಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ಬಂಧಿಸಿತು. ಈ ವಿಚಾರದಲ್ಲಿ ಸರ್ಕಾರವನ್ನೂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.
ಇದನ್ನೂ ಓದಿ: ಎಂಜಿ ರಸ್ತೆಯ ಎಚ್ಎಸ್ಬಿಸಿ ಬ್ರ್ಯಾಂಚ್ಗೆ ಬಾಂಬ್ ಬೆದರಿಕೆಯ ಇಮೇಲ್
ಸದ್ಯ, ಅರ್ಧವಾರ್ಷಿಕ ಪರೀಕ್ಷೆಯ ಮೌಲ್ಯಮಾಪನ ಮಾಡುವ ಕರ್ನಾಟಕ ಸರ್ಕಾರದ ಅರ್ಜಿಯನ್ನು ಸದ್ಯಕ್ಕೆ ಪರಿಗಣಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆಯಾದರೂ ಜನವರಿಯಲ್ಲಿ ಇದನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ