ಸಾಲಬಾಧೆ: ಗ್ರಾ.ಪಂ ಮಾಜಿ ಸದಸ್ಯ, ಜೆಡಿಎಸ್ ಮುಖಂಡನಾಗಿದ್ದ ರೈತ ನೇಣಿಗೆ ಶರಣು
ಕೃಷಿಗಾಗಿ ರೈತ ಬ್ಯಾಕಿನಲ್ಲಿ ಸಾಲ ಮಾಡಿದ್ದ. 2 ವರ್ಷಗಳಿಂದ ತಂಬಾಕು ಬೆಳೆಯಲ್ಲಿ ಆದಾಯ ಸಿಗದೇ, ಸಾಲ ತೀರಿಸಲು ಕಷ್ಟ ಪಡುತ್ತಿದ್ದ. ಸಾಲಬಾಧೆಯಿಂದ ನೊಂದ ರೈತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೈಸೂರು: ಬೆಳೆ ವೈಫಲ್ಯದಿಂದಾಗಿ ಉಂಟಾದ ಸಾಲಬಾಧೆ ತಾಳಲಾರದೆ ರೈತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಭೋಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿ ಪುಟ್ಟರಾಜು(41) ಎಂದು ತಿಳಿದು ಬಂದಿದೆ.
ರೈತ ಪುಟ್ಟರಾಜು ಗ್ರಾ.ಪಂಚಾಯತಿ ಮಾಜಿ ಸದಸ್ಯ ಮತ್ತು ಜೆಡಿಎಸ್ ಮುಖಂಡರಾಗಿದ್ದವರು. 4 ಎಕರೆ ಜಮೀನು ಹೊಂದಿದ್ದು, ತಂಬಾಕು ಕೃಷಿಯಲ್ಲಿ ಜೀವನ ತೊಡಗಿಸಿಕೊಂಡಿದ್ದರು. ಕೃಷಿಗೆಂದು ಪಟ್ಟಣದ ಎಸ್.ಬಿ.ಐ ಬ್ಯಾಂಕ್ನಲ್ಲಿ 8 ಲಕ್ಷ ಬೆಳೆ ಸಾಲ ಮಾಡಿದ್ದರು. ಅದೊಂದೇ ಅಲ್ಲದೇ, ಇವರ ಹೆಸರಿನಲ್ಲಿ ಕೆ.ಆರ್ ನಗರದ ಖಾಸಗಿ ಬ್ಯಾಂಕ್ನಲ್ಲಿ 4 ಲಕ್ಷ ಬೆಳೆ ಸಾಲವಿತ್ತು. ಕಳೆದ 2 ವರ್ಷಗಳಿಂದ ತಂಬಾಕು ಬೆಳೆಗೆ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬಾರದ ಕಾರಣ ಆದಾಯದಲ್ಲಿ ನಷ್ಟ ಉಂಟಾಗಿದೆ.
ಮನೆಯಲ್ಲಿ ಯಾರೂ ಇಲ್ಲದಿರುವ ಸಮಯ ನೋಡಿ ಪುಟ್ಟರಾಜು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



